ನಮ್ಮವರ ಬಣ್ಣ
ರೊಕ್ಕ ಇದ್ದ ಧಣಿಗಳ ತಾಕ
ಜೀತಕ್ಕಿಟ್ಟೈತಿ

ಮಹಡಿ ಮನೆಗಳ ಮಂದಿಗೆ
ಮೆಟ್ಟಿಲಾಗೈತಿ

ದೊಡ್ಡದೊಡ್ಡ ಅಧಿಕಾರಸ್ಥರ
ಕಾಲ ಕಸವಾಗೈತಿ

ನಮ್ಮವರ ಬಣ್ಣ
ಸೋಗಲಾಡಿ ರಾಜಕಾರಣಿಗಳ
ಸೊಂಟದ ಲಂಗೋಟಿಯಾಗೈತಿ

ನೀತಿ ಹೇಳೋ ಜಾತ್ಯಸ್ತರತಾಕ
ಸುತ್ತಿಗೊಂಡು ಬಿದ್ದೈತಿ

ಸೂಳೆ ಬಜಾರದಾಗ
ಮಾರಾಟಕಿಟ್ಟೈತಿ

ನಮ್ಮವರ ಬಣ್ಣ
ಹುಡಕಬ್ಯಾಡ್ರೋಽಽಽ

ಹುಟ್ಟಿದಾಗಿಂದ
ಜಾತಿ ಒಲಿಯಾಗ
ಬಡತನದ ಬೆಂಕ್ಯಾಗ
ಸುಟ್ಟು ಕರಕಲಾಗೈತಿ
ಸಾಯೋಗಂಟ
ಅದೇ ನಿಜ ಆಗೈತಿ

ನಮ್ಮವರ ಬಣ್ಣ
ಬಾಲ ಸೂರ್ಯನಂಗ
ಕೆಂಪಗ
ಪೂರ್ಣಚಂದ್ರನಂಗ
ಬೆಳ್ಳಗ
ತಿರುಗಿ ಬರೋದ್ಯಾವಾಗ?
*****