ನಿಶ್ಯಬ್ದ ಸಂತೆ ಅಲ್ಲ,
ಆಂತರ್ಯ ಜೀರುಂಡೆಗಳ ಸಾಲು.
ಕೊಂಕು ನೋಟದ ಕಣ್ಣು ಬಾಲ್ಯಕ್ಕಿಲ್ಲ
ಬರಿಗಾಲಲ್ಲಿ ಕೊಳೆಗದ್ದೆಯ ನಡಿಗೆ
ಭತ್ತದ ಅರಿ ಮಾಡುವಾಗಿನ ಹುರುಪು
ಮತ್ತದೋ ಗುಡ್ಡದ ಬಯಲಿನ ಸ್ಪಷ್ಟ ಲೇಖನ
ದನದೊಂದಿಗೆ ಜಾಣೆಯರು
ಮತ್ತೆ ಬರದು ಎಂಬುದಷ್ಟೇ ಚಿಂತೆ

ಮರೆತಿಲ್ಲ, ಮರೆಯುವುದು ಇಲ್ಲ,
ಮರೆತಂತೆ ನಟಿಸುವುದು ಮಾತ್ರ
ತಾರುಣ್ಯದ ಕನಸು ಕೊಂದ ದಿನಗಳ

ಪ್ರೌಢತೆಯ ಮಜಲುಗಳ ದಾಟಲು
ಬದಲಿಸಿ ಮೇಲಿಂದ ಮೇಲೆ ಮುಖವಾಡ
ಗೀರಕಿ ಹೊಡೆಯುತ್ತ ಮತ್ತದೇ ವಿಪ್ಲವ.

ನೊಗ ಹೊತ್ತ ಎತ್ತು ಚೆಂಗೋಲು ಹಾಕಲಾಗದು
ಮೋಡ ಬರಿದಾದ ಗಗನ
ಮರುಕ ಮಸೆಯುವ ಮನೆ,
ಹಸಿರ ಬಲೆಯೂ ಕೂಡ ಶಿಶಿರ ಶನಿಗೆ
ಇಳಿ ಮುಪ್ಪ ಹೊದ್ದು
ತರಗಲೆಯ ಗುಪ್ಪೆ

ಎಲ್ಲ ಏನೆಲ್ಲ ಅಲ್ಲ,
ಮಾಸಿದ ನೆನಪುಗಳ ಸುತ್ತ ಲಾಗಾ ಹೊಡೆಯುತ್ತ,
ಅತಂತ್ರತೆ ನಡುವೆ ತಂತ್ರಗಾರಿಕೆ ಹೂಡುತ್ತ,
ಕೊನೆಗೊಮ್ಮೆ ಒಂಟಿ ಒಣಕೊರಡು
ಭವದಿ ಪಾರಾಗಿ ಚಿತಾಭಸ್ಮ.

ಆದರೂ ಮರಳಿ ಮರಳಿ
ಅದೇ ಸಾಲು
ಅದೇ ಸಂತೆ
ಅದೇ ಸದ್ದು.
*****