ಢಣಢಣ ಗಂಟೆ ಬಾರಿಸಿತು
ಎಲ್ಲರೂ ಸಾಲಾಗಿ ಕುಳಿತರು
ಬಣ್ಣ ಬಣ್ಣದ ಕವಿತೆಗಳು
ಒಂದೊಂದಾಗಿ ವೇದಿಕೆಗೆ ಬಂದವು.

ಕೆಲವು ಕವಿತೆಗಳು
ಹೂಗಳಂತೆ ಅರಳಿದರೆ
ಮತ್ತೆ ಕೆಲವು
ನದಿಗಳಂತೆ ಹರಿದವು.

ಕೆಲವು ಕವಿತೆಗಳು
ನಕ್ಷತ್ರಗಳಂತೆ ಮಿನುಗಿದರೆ
ಮತ್ತೆ ಕೆಲವು
ಉಲ್ಕೆಗಳಂತೆ ಉರಿದು
ಬೂದಿಯಾದವು.

ಕೆಲವು ಕವಿತೆಗಳು
ಕಲ್ಲುಸಕ್ಕರೆ ತಿನ್ನಿಸಿದರೆ
ಮತ್ತೆ ಕೆಲವು
ಕಷಾಯ ಕುಡಿಸಿದವು.

ಕೆಲವು ಕವಿತೆಗಳು
ಬೆಂಕಿ ಉಗುಳಿದರೆ
ಮತ್ತೆ ಕೆಲವು
ರಕ್ತ ಕಾರಿದವು.
ಕೆಲವು ಕವಿತೆಗಳು
ಬಿಕ್ಕಳಿಸಿ ಅತ್ತರೆ
ಮತ್ತೆ ಕೆಲವು
ಮುಕ್ಕಳಿಸಿ ನಕ್ಕವು

ಕೆಲವು ಕವಿತೆಗಳು
ತೊಂಡು ದನಗಳಂತೆ
ಕಂಡದ್ದನ್ನೆಲ್ಲ ಹೊಸಕಿಹಾಕಿದರೆ
ಮತ್ತೆ ಕೆಲವು ತಾಯಿಯಂತೆ
ಅವನ್ನೆತ್ತಿಕೊಂಡು ಸಂತೈಸಿದವು.

ಕೊನೆಗೆ ಬಂದದ್ದು
ಪ್ರೇಮಿಯಂತಹ ಕವಿತೆ
ನೆಲ ನೀರು ಆಕಾಶದಂತ ಕವಿತೆ
ಅದು ಕಡಲಿನ ಹಾಗೆ ಮೊರೆಯುತ್ತಿತ್ತು
ನೆಲದ ಹಾಗೆ ಪರಿಮಳಿಸುತ್ತಿತ್ತು.
ಅದು ಆಕಾಶದಂತೆ
ಎಲ್ಲವನ್ನೂ ತಬ್ಬಿಕೊಂಡು
ಮೈ ಮರೆಯಿತು, ಮೈ ಮರೆಸಿತು.

(ಕವಿಗೋಷ್ಠಿಯೊಂದರಲ್ಲಿ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಯನ್ನು ಕೇಳಿ)