ನನಗೋ ಇಂಥ ಹೆಳವು…

ಅಯ್ಯೋ…ನೋಡಲ್ಲಿ ಕಂದನನ್ನು
ಅದೇನು ಹೀಗೆ ಏರುತ್ತಿದೆ ಮೆಟ್ಟಿಲಿನಂತೆ?
ಮರಕ್ಕಾತು ಜಡವಾಗಿ ಕೂತಿದ್ದಕ್ಕೇ
ಅವನನ್ನೇನು ಕೊರಡೆಂದುಕೊಂಡಿದೆಯೋ?

ಕಾಲುಚಕ್ರ ಸೋತ ಹೊತ್ತಲ್ಲಿ
ಮರಕ್ಕೊರಗುತ್ತಾನೆ ಕುಸಿದು
ಅವನೊಂದಿಗೇ ಮರಕ್ಕೂ
ಅದರ ಮೇಲಿನ
ಸಕಲೆಂಟು ಜೀವಜಂತುಗಳಿಗೂ
ಗಾಢ ಮೈಮರೆವಿನ ವಿಸ್ಮೃತಿ.

ಕಂದನಿಗೇನು ಗೊತ್ತು ಪಾಪ?
ಅವನೋ ಎದ್ದರೆ
ತಿರುಗಾಲ ತಿಪ್ಪನಂತಾ ಅಲೆಮಾರಿ
ಕೂತರೆ ಹೆಬ್ಬಂಡೆಯಂತಾ ಸೋಮಾರಿ

ಇದಕ್ಕದೆಂಥಾ ಹುಚ್ಚು ಉಮೇದೋ?
ಮರವೋ
ಗಾಢ ನಿದ್ದೆ ಹೋದ ಅವನೋ
ಮೂಲೆ ಹಿಡಿದ
ಮುರುಕು ಕುರ್ಚಿಯೋ
ಯಾವುದಾದರೂ ಸರಿ
ಅದರ ಮೈಮೇಲೆ ಏರಿ
ಹಿಪ್ ಹಿಪ್ ಹುರ್ರೇ ಸಡಗರ.

ನೀನಾದರೂ ಹೇಳಬಾರದೇ
ಅದವನ ದೇಹವೆಂದು?
ಅದನ್ನೇ ಮೆಟ್ಟಿಲಾಗಿಸಿ
ಪುಟ್ಟ ಪುಟಾಣಿ
ಅಂಬೆಗಾಲಿಕ್ಕುತ್ತಾ
ಮೆಲ್ಲಗೆ ತೊಡೆಯೇರಿ ಕುಳಿತು
ಅದೋ ನೋಡು
ನಗು ಮುಕ್ಕಳಿಸುತಿದೆ ಮೊಗ,
ಥೇಟ್ ಪೀಠಾಧಿಪತಿಯ ಠೀವಿ!

ಮತ್ತೆ ನೋಡಿಗ
ಹುಮ್ಮಸ್ಸಿನಲಿ ಮೇಲೇರಿ
ಪಕ್ಕೆಲುಬಿನ ಮೆಟ್ಟಿಲಿಗೆ
ಗುಲಾಬಿ ಕಾಲಿನ ಪಾದವೂರಿದೆ
ಅವನಿಗೋ ಕಚಗುಳಿಯಾದರೂ ಆಗಬಾರದೇ?
ಮಿಸುಕಿದರೆ ಕೇಳು!

ಅಲೆಲೆ…ನೋಡು
ಹೊಟ್ಟೆಯುಬ್ಬಿಗೆ
ಇನ್ನೊಂದು ಪಾದ!
ಬಿಗಿ ಹಿಡಿತಕ್ಕೆ ಅವನದೇ ಜುಟ್ಟು!
ಹುರುಪಿನ ಏರು
ದಿಗ್ವಿಜಯದ ನಗೆ
ಅವಿರತ ಚಾರಣ
ಆಯಾಸವೇ ಆಗದಲ್ಲಾ ಕಂದನಿಗೆ?
ಅವನಿಗೋ ಎಚ್ಚರವಿಲ್ಲಾ
ಇದಕ್ಕೋ ಸುಸ್ತೆಂಬುದೇ ಇಲ್ಲಾ!

ಈಗವನ ಎದೆಯೂ
ಕಂದನಿನ್ನೊಂದು
ಪಾದಕ್ಕೆ ಸೋಪಾನವಾಯ್ತೇ?
ನೇರ ಮೂಗಿನುಬ್ಬಿಗೆ ಬಾಯಿ!
ನೆಕ್ಕಿ ಚೀಪಿ ರುಚಿ ನೋಡಿ….
ಮುಂದುವರೆದಿದೆ ದಿಗ್ವಿಜಯ ಯಾತ್ರೆ!

ಈಗ ನೋಡು,
ಏರುತ್ತಾ ಏರುತ್ತಾ
ಅವನ ಕತ್ತಿನ ಬಲಕ್ಕೊಂದು ಪಾದ
ಎಡಕ್ಕೊಂದು ಪಾದ
ಕುತ್ತಿಗೆಯ ಕುಳಿಯೇ
ಮತ್ತೊಂದು ಮಜಲು.

ಅವನ ಜುಟ್ಟು ಹಿಡಿದೇ
ಹಿಂದೆ ಮುಂದಾಗುವ ಸರ್ಕಸ್ಸು
ಅಯ್ಯೋ ಕಂದ ಬಿದ್ದಾತು ಎಚ್ಚರ…
ನೋಡವನ ತಲೆಯ ಮೇಲೆಯೇ ಕೂತು
ಮರಕ್ಕೊರಗಿದ ಭಂಗಿ!
ಥೇಟ್ ಕಳಸವಿಟ್ಟಂತೆ ತಲೆ ಮೇಲೆ…
ಪುಟಾಣಿ ಪುಟ್ಟ ಕೈ ಬಡಿಯುತ್ತಾ
ಕೇಕೆ… ಚಪ್ಪಾಳೇ…
ವಿಜಯೋತ್ಸವ…

ಕಂಡೋರ ದಿಟ್ಟಿ ತಾಕೀತು ಕಂದಮ್ಮಗೆ
ಮೂಲೆ ಕಸಬರಿಕೆ
ನಾಲ್ಕು ಕಡ್ಡಿಯ ಸುಟ್ಟು
ನೀವಳಿಸಿ ಒಗೆಯಬಾರದೇ ಆಚೆಗೆ?

ಇಷ್ಟೆಲ್ಲವಾದರೂ
ಅವನಿಗೋ ಮೈಮೇಲೆ ಖಬರಿಲ್ಲ.
ಕುಂಭಕರ್ಣನ ನಿದ್ದೆ
ಈ ಕಂದಮ್ಮನಿಗೋ
ಎಲ್ಲವೂ ಆಡಿದ್ದೇ ಆಟ.

ಅವನು ದಯಾಳು
ತಲೆಯೇರಿದ ಕಂದನನು
ಖಂಡಿತಾ ಬೇಕೆಂದೇ
ಕೊಡವಿ ಕೆಡವಲಾರ….

ಆದರವನಿಗೆ ಪಾಪ…
ಮೈಮೇಲಿನೆಚ್ಚರವೇ ಇಲ್ಲದೇ
ಧಡಕ್ಕನೆದ್ದು ಮೈ ಕೊಡವಿದರೆ….

ಕೊಡವಿದರೆ….
ಗತಿಯೇನು ಕಂದನದು?

ನನಗೋ ಇಂಥ ಹೆಳವು…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಜಕೀಯ ಶಕ್ತಿಯಾಗಿ ಕನ್ನಡ
Next post ಧೂಮಪಾನ

ಸಣ್ಣ ಕತೆ

 • ಯಾರು ಹೊಣೆ?

  "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

 • ಆಮಿಷ

  ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

 • ಸ್ನೇಹಲತಾ

  ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

 • ಪ್ರಥಮ ದರ್ಶನದ ಪ್ರೇಮ

  ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…