ಈ ದೇಶದ ಸಂಸ್ಕೃತಿಯ
ಅನ್ಯ ದೇಶದ ಭಾಷೆ ಸಂಸ್ಕೃತಿಯ ಜೊತೆಗೆ|
ಅಲ್ಪಾಯುಗಾಯುಷ್ಯ ದೇಶದ ಮುಂದೆ
ದೀರ್‍ಘಾ, ಸುದೀರ್‍ಘಾ ಯುಗಾಂತರದ
ನಮ್ಮದೇಶವನೆಂದೂ ಹೋಲಿಸದಿರಿ||

ನೂರಾರು ಭಾಷೆ ಸಾವಿರಾರು ಜಾತಿ
ಕೋಟಿ ದೇವರುಗಳ ನಾಡು ನುಡಿಯ
ಅಂತರಂಗವ ತಿಳಿಯದೆ|
ಕೇವಲ ಹೊಟ್ಟೆಹೊರಿಯುವ ಅಪರ
ವಿದ್ಯೆಯ ಕಲಿತು
ಅತೀ ಬುದ್ದಿವಂತರೆಂಬಂತೆ ವರ್‍ತಿಸಿ
ಅನ್ಯದೇಶಿಗರ ಮೆಚ್ಚಿಸೆ ಈ ನಾಡ
ಸಂಸ್ಕೃತಿಯ ಬಾಹ್ಯ ನೋಟವ
ನೋಡಿ ತಿರುಚದಿರಿ ಇತಿಹಾಸವನು||

ನಮ್ಮ ದೇಶದ ಜನರ ಬುದ್ದಿವಂತಿಕೆ
ಬಿಡಿಕಾಸಿಗೆ ಕೊಂಡು, ಬರಿಯ ವಿಜ್ಞಾನ
ತಂತ್ರಜ್ಞಾನದಿ ಮುಂದುವರೆದ ಮಾತ್ರಕ್ಕೆ
ಈ ನಾಡ ಶ್ರೀಮಂತ ಸಂಸ್ಕೃತಿಯ
ಕಡೆಗಣಿಸಲು ಯಾರಿಗೂ ಹಕ್ಕಿಲ್ಲ||

ಅನ್ಯರಿಗೆ ಅಳತೆಗೋಲು ನಮ್ಮ ಸುಪ್ರಸಿದ್ದ
ಸಂಸ್ಕೃತಿ, ಇದನ್ನಳೆಯಲು ಸಾಧ್ಯವೇನು?
ಅನ್ಯರ ಮಾನದಂಡ ಈ ನಮ್ಮ ಇತಿಹಾಸ|
ಯುಗ, ಪರ್‍ವ, ಪುಷ್ಪಕ ವಿಮಾನ ಕಂಡುಹಿಡಿದ
ಸಾಗರೋಲ್ಲಂಘನ ಮಾಡಿದ ಹನುಮನ
ಪರಾಕ್ರಮದ ಮುಂದೆ ಕ್ಷಿಪಣಿ ಹಾರಿಸಿ ಖುಶಿಪಟ್ಟಂತೆ|

ದೇವರ ಪ್ರಥಮ ಪುರುಷರ ನಾಡಿದು
ದೇವರ ಭಾಷೆಯ ಬೀಡಿದು|
ದಶಕಗಟ್ಟಲೆ ಉಪವಾಸ, ಧ್ಯಾನ, ತಪಸ್ಸಮಾಡಿ
ದೇವರ ರೂಪವ, ಸತ್ಯವ ಕಂಡುಹಿಡಿದರ ಮುಂದೆ
ಈ ನಿಮ್ಮ ಸಾಕಾರ, ನಿರಾಕಾರದ
ಬರಿಯ ಒಣಚರ್‍ಚೆ ವಿಪರ್‍ಯಾಸವಲ್ಲದೆ
ಅಂತರಾಷ್ಟ್ರಿಯ ಧರ್‍ಮಾಚರಣೇಯ ನಾಟಕವೇ ಸರಿ||
*****