ತಾರನೆ ಶ್ರೀರಾಮ
ಸೀತೆಯು ಬಯಸಿದ ಮಾಯಾಮೃಗವ
ತಂದೀಯನೆ ಆ ರಾಮ

ಪರ್‍ಣಕುಟಿಯ ಸುತ್ತಲು ಕುಣಿಯುವುದಿದು
ಜಿಂಕೆಯ ಹಾಗಿರುವುದು ಆದರು ಎಂಥಾ ಜಿಂಕೆಯಿದು
ಬಂಗಾರದ ಜಿಂಕೆಯಿದು
ಕಿನ್ನರ ಲೋಕದ ಜಿಂಕೆಯಿದು
ಇಂದ್ರ ಲೋಕದ ಜಿಂಕೆಯಿದು
ಸೂರ್ಯ ಚಂದ್ರರೆ ಮೋಹಿಸುವ ಜಿಂಕೆಯಿದು
ಬೇಕೇಬೇಕಿದು ತನಗೆನುವಳು ಸೀತೆ
ಪರಿಪರಿಯಲಿ ಪತಿಯ ಬೇಡುವಳು
ಕಾಡಿ ಹಟ ಮಾಡುವಳು

ಬೇಡವೀ ಮೃಗದ ಗೊಡವೆಯೆಂದರೂ ಶ್ರೀರಾಮ
ಇದು ಮಾಯಾ ಜಿಂಕೆ ನೋಡು
ನೆಲ ಮುಟ್ಟದೆ ನೆಗೆವುದು ನೋಡು
ಬಿಸಿಲಲ್ಲೂ ನೆರಳಿಲ್ಲದ ಮೈ ನೋಡು
ಕಂಡೂ ಕಾಣಿಸದೆ ಕೆಣಕುವುದು ನೋಡು
ಈ ಇಂಥ ಜಿಂಕೆ ನಿಜವಲ್ಲ ನೋಡು
ನೋಡೆಂದನು ಶ್ರೀರಾಮ

ಬೇಕೇಬೇಕಿದು ತನಗೆನುವಳು ಸೀತೆ
ಪರಿಪರಿಯಲಿ ಪತಿಯ ಬೇಡುವಳು
ಕಾಡಿ ಹಟ ಮಾಡುವಳು

ಅಲ್ಲಿಂದಲೆ ರಾಮಾಯಣ
ಅಲ್ಲಿಂದಲೆ ಇನ್ನೆಂದೂ ಮುಗಿಯದ ಯಾನ
ಅಲ್ಲಿಂದಲೆ ಲಂಕಾದಹನ
ಅಲ್ಲಿಂದಲೆ ಎಲ್ಲ ಕಥೆಗಳ ಜನನ

ಹಾ ಲಕ್ಷ್ಮಣ! ಹಾ ಸೀತೆ!
ಕಂಡಿದ್ದಳೆ ಆ ಮಹಾಮಾತೆ
ತನ್ನ ಮುಂದಿನ ಕಥೆಯ
ದಿವ್ಯ ದೃಷ್ಟಿಯೊಳಗೆ
ಪಾತ್ರವಾಗದೆ ಇರುವುದು ಹೇಗೆ
ಮಾನವ ಜನ್ಮ ತಳೆದ ಮೇಲೆ!

ಹೇ ಭೂಮಿ ತಾಯೆ
ನೀ ಕರೆಯುವ ವರೆಗೆ!
*****