ಮಿರಿ ಮಿರಿ ಮಿಂಚುತಿದೆ
ನಾಕು ಹೆಡೆಯ ನಾಗರದಂತಿದೆ

ಕೆಂಪು ಹಸಿರು ಹಳದಿ
ಹೆಡೆ ಮಣಿಗಳು ಮಿನುಗುತ್ತಿವೆ

ಬಾಗಿದೆ ಬಳುಕಿದೆ
ವಿಷದ ಹೊಳೆ ಹರಿದಂತಿದೆ
ಎಲ್ಲವ ನುಂಗಲು ಕಾದಂತಿದೆ

ಗರಿ ಗರಿ ನೋಟಿನದೇ ಮಾಟ
ಭಾರೀ ಮಷೀನುಗಳದೇ ಆಟ

ಮಿತಿಯಿಲ್ಲದೆ ಮತಿಯಿಲ್ಲದೆ
ವಾಹನಗಳು ದಿಕ್ಕೆಟ್ಟು ಓಡುತಿವೆ

ಗಾಲಿಗಳ ಮೇಲೆ ಸರಕಿನ
ಸಾಮ್ರಾಜ್ಯವೇ ಉರುಳುತಿದೆ

ಬರಿಗಾಲುಗಳು ಇದನು ಮೆಟ್ಟುವಂತಿಲ್ಲ
ಸುಂಕ ನೀಡದೆ ದಾಟುವಂತಿಲ್ಲ

ಇಲ್ಲೊಂದು ಕಾಲುದಾರಿಯಿತ್ತು
ಅದು ಕರೆದೊಯ್ಯುತ್ತಿತ್ತು ನನ್ನೂರಿಗೆ

ಈಗ…. ಅದಿಲ್ಲ….
ಇಲ್ಲ…… ಇದು ನನ್ನೂರೇ ಅಲ್ಲ!
*****