ಬಳುಕುತ ಕುಣಿಯುತ ವಯ್ಯಾರದಲಿ
ಗುಡ್ಡಬೆಟ್ಟ ಕೊರಕಲಲಿ ಬರುತಿಹಳು

ಹೆಜ್ಜೆ ಇಟ್ಟಡಿಯಲಿ ನೆಲವು ಅರಳುತಲಿ
ಹಸಿರ ಪೈರನುಟ್ಟಿಹಳು ಸಂಭ್ರಮದಲಿ

ವಿದ್ಯುತ್‌ ಯಂತ್ರಕೆ ನೀನಾದೆ ಮಂತ್ರ
ಕೈಗಾರಿಕೆಗೆ ನೀನಾದೆ ರಾಗ ತಾಳತಂತ್ರ

ಸಾಸಿರ-ಸಾಸಿರ ಕನಸುಗಳ ಕಥನವು
ಭಾವನೆಗಳ ಮನೆ-ಮಠ ಮಂದಿರ ತ್ಯಾಗವಾಗಿಹವು

ಲಿಂಗನಮಕ್ಕಿ ಅಣೆಕಟ್ಟುವಿನಂದು
ನೀ ಚೆಲ್ಲಿದೆ ಬೆಳಕ ಈ ಜಗಕ್ಕೆಂದು

ಅಂಬುತೀರ್ಥದೊಳು ಜನ್ಮತಾಳಿದೆ
ಸಹ್ಯಾದ್ರಿ ನಾಡೊಳು ತಂಪನ್ನೆರದೆ

ಜೋಗದ ಸಿರಿಯೊಂದಿಗೆ
ಶ್ರೀಗಂಧದ ಮೆರುಗು ತಂದೆ ಈ ನಾಡಿಗೆ

ನಮಿಪವು ಅಡಿಕೆ ತೆಂಗುಗಳು ನಿನ್ನಂಘ್ರಿಗೆ
ಹಕ್ಕಿ-ಪಕ್ಕಿ ಕಾಕ-ಪಿಕ ಬಯಸುತಿಹವು ನಿನ್ನೇಳಿಗೆ

ನಿನ್ನೊಲವಿನ ಸಿಂಗರದ ನಲಿವ ನೋಟ
ಈ ನಾಡಿನ ಜಗಕೆ ಹರುಷದ ನೋಟ

ನೀನಾದೆ ಕನ್ನಡಕೆ ಬತ್ತದ ಗಂಗೆ
ಭಾಗ್ಯದ ನಿಧಿ ತಂದೆ ಈ ನಾಡಿಗೆ

ಕರ್ನಾಟಕಕೆ ನೀ ಮುಕುಟವಾದೆ
ಕನ್ನಡ ತಾಯ್ಗೊರಳ ಸರದಲ್ಲಿ ಪದಕವಾದ
*****