ಬೀದಿಗೆ ಬಂದ ಭ್ರಷ್ಟಾಚಾರ

ಬೀದಿಗೆ ಬಂದ ಭ್ರಷ್ಟಾಚಾರ

ಭ್ರಷ್ಟಾಚಾರದ ಬಹುಮುಖಿ ನೆಲೆಗಳನ್ನು ಕಂಡುಕೊಳ್ಳುವ ಜರೂರಿನಲ್ಲಿ ನಾವಿದ್ದೇವೆ; ಯಾಕೆಂದರೆ ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಭ್ರಷ್ಟಾಚಾರ ವಿರೋಧಿ ಕೂಗು ಮತ್ತು ಕ್ರಿಯೆಗಳನ್ನು ನಾವು ಕಾಣುತ್ತಿದ್ದೇವೆ. ಭ್ರಷ್ಟಾಚಾರ ವಿರೋಧ ಎನ್ನುವುದು ಯಾವ ಹಂತಕ್ಕೆ ಹೋಗಿದೆಯೆಂದರೆ ರಾಜಕಾರಣಿ ಮತ್ತು ರಾಜಕಾರಣದ ವಿರುದ್ಧವಾಗಿ ಏನು ಮಾತಾಡಿದರೂ ಸರಿ, ಏನು ಮಾಡಿದರೂ ಸರಿ ಎಂಬಂತಾಗಿದೆ. ಇಂತಹ ಸನ್ನಿವೇಶಕ್ಕೆ ಸ್ವತಃ ರಾಜಕಾರಣಿಗಳ ಕೊಡುಗೆ ಬಹುದೊಡ್ಡದು. ಶ್ರೀರಾಮನನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ರಾಜಕಾರಣಿಗಳು ಸಿಂಹಾಸನದ ಮೇಲೆ ಕೂತುಕೊಳ್ಳದೆಯೇ ಆಡಳಿತ ನಡೆಸಿದ ಭರತನ ರಾಜಕೀಯ ಸೂಕ್ಷ್ಮವನ್ನು ಅಳವಡಿಸಿಕೊಳ್ಳಲಿಲ್ಲ. ಆಮ್‌ಆದ್ಮಿಯನ್ನು ಆರಾಧಿಸುತ್ತೇವೆನ್ನುವ ರಾಜಕಾರಣಿಗಳು ಬೃಹತ್ ಬಂಡವಾಳಗಾರರಿಗೆ ನೆರವಾಗುವ ಆರ್ಥಿಕ ನೀತಿಯನ್ನು ಕೈಬಿಡಲಿಲ್ಲ. ನಮ್ಮದು ಪ್ರಾದೇಶಿಕ ಪಕ್ಷವೆಂದು ಹೇಳಿಕೊಳ್ಳುವವರು ಭೂ ಪ್ರದೇಶದ ವ್ಯಾಮೋಹ ಬಿಡಲಿಲ್ಲ. ಧರ್ಮಾಧಾರಿತ ರಾಜಕೀಯ ಮಾಡುವವರಿಗೆ ಸ್ವಾರ್ಥವೇ ಧರ್ಮವಾಯಿತು. ಅನೇಕ ಧರ್ಮಗುರುಗಳು ಜಾತಿ ವ್ಯಾಮೋಹವನ್ನೇ ಧರ್ಮವೆಂದು ಭಾವಿಸಿ, ಬಳಸಿ, ಬೆಳಸಿ ಬಯಲಾಗಿದ್ದಾಯಿತು. ಜಾತ್ಯತೀತ ಎಂದು ಹೇಳುವವರು ಅದನ್ನು ಸ್ವಜಾತಿ ಪ್ರಾಬಲ್ಯಕ್ಕೆ ಅನ್ವಯಿಸಿಕೊಳ್ಳದೆ ಅನಾವರಣಗೊಂಡಿದ್ದಾಯಿತು. ಬೇರೆಯವರ ಭ್ರಷ್ಟಾಚಾರದ ಬಗ್ಗೆ ದನಿ ಎತ್ತುವವರು ತಮಗೆ ಎದುರಾಗುವ ಭ್ರಷ್ಟಾಚಾರದ ಆರೋಪಗಳ ವಿಷಯದಲ್ಲಿ ಕ್ರೀಡಾ ಮನೋಧರ್ಮವನ್ನು ಬಿಟ್ಟಿದ್ದಾಯಿತು. ಇಂತಹ ಸನ್ನಿವೇಶದಲ್ಲಿ ಭ್ರಷ್ಟಾಚಾರ ವಿರೋಧಕ್ಕೂ ‘ಸನ್ನಿ’ ಬಡಿಯುವ ಅಪಾಯವೂ ಎದುರಾಗುತ್ತದೆ. ಮೂಗಿನ ನೇರಕ್ಕೆ ಬರುವ ಮಾತುಗಳಿಗೆ ಇನ್ನಿಲ್ಲದ ಮೌಲ್ಯ ಸಿಕ್ಕುತ್ತದೆ. ರಾಜಕಾರಣಿಗಳೆಲ್ಲ ದುಷ್ಟರು ಭ್ರಷ್ಟರು ಎಂಬ ಭಾವನೆಯ ಜೊತೆಗೆ ರಾಜಕಾರಣದ ಬಗ್ಗೆಯೇ ಹೇಸಿಗೆ ಬರುವಂತೆ ಮಾಡಲಾಗುತ್ತದೆ. ಅಂತಿಮವಾಗಿ ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಶಂಕಿಸುವಂತೆ ಮಾಡುತ್ತದೆ.

ಆದ್ದರಿಂದ ಭ್ರಷ್ಟಾಚಾರದ ವಿರುದ್ಧವಾಗಿ ಏಕಮುಖಿ ಒತ್ತಡ ಮತ್ತು ಹೋರಾಟಕ್ಕೆ ಆದ್ಯತೆ ಸಿಗುತ್ತಿರುವ ಸನ್ನಿವೇಶದಲ್ಲಿ ಬಹುಮುಖ ನೆಲೆಗಳನ್ನು ಅರಿಯುವ, ಅನಾವರಣಗೊಳಿಸುವ ಕ್ರಿಯೆ ಬಹುಮುಖ್ಯವೆಂದು ನಾನು ಭಾವಿಸುತ್ತೇನೆ. ಈ ಮೂಲಕ ಸಮೂಹ ಸನ್ನಿಗೆ ಅವಕಾಶ ಕೊಡದ ಸಮೂಹ ಪ್ರಜ್ಞೆ ಮತ್ತು ರಾಜಕಾರಣವನ್ನು ಇಡಿಯಾಗಿ ನಿರಾಕರಿಸದ ಪ್ರಜಾಪ್ರಭುತ್ವ ಪ್ರಜ್ಞೆಯು ನಮ್ಮ ಅರಿವಿನ ಆತ್ಮವಾಗಬೇಕೆಂದು ತಿಳಿಯುತ್ತೇನೆ.

ಈ ಮಾತುಗಳನ್ನು ನಾನು ಮಂಡಿಸುವಾಗ ಅಣ್ಣಾ ಹಜಾರೆ ತಂಡದ ಹೋರಾಟವೂ ನನ್ನೆದುರಿಗಿದೆ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟವು ಅಣ್ಣಾ ತಂಡ ತಿಳಿದಿರುವಷ್ಟು ಸರಳವೂ ಏಕಮುಖಿಯೂ ಅಲ್ಲ ಎಂಬ ತಿಳುವಳಿಕೆ ನನ್ನದಾಗಿದೆ. ಅಣ್ಣಾ ತಂಡವು ಭ್ರಷ್ಟಾಚಾರ ವಿರೋಧಿ ವಲಯವನ್ನು ವಿಸ್ತರಿಸಿದ್ದು ಸಾಮಾನ್ಯ ಸಂಗತಿಯಲ್ಲ ಎಂಬ ಸತ್ಯವನ್ನು ಅಭಿನಂದಿಸುತಲೇ ಈ ಮಾತು ಹೇಳುತ್ತಿದ್ದೇನೆ. ಅಣ್ಣಾ ತಂಡದ ತಿಳುವಳಿಕೆಯಾಚೆಯೂ ಭ್ರಷ್ಟಾಚಾರ ವಿರೋಧಿ ವಲಯಗಳಿವೆಯೆಂಬುದನ್ನು ನಾವು ಮರೆಯಬಾರದು. ಮರೆತರೆ ಸತ್ಯದ ಬಹುಮುಖಿ ಸತ್ವವನ್ನು ಮರೆಮಾಚಿದಂತಾಗುತ್ತದೆ.

ಈಗ ಭ್ರಷ್ಟಾಚಾರದ ವಿರುದ್ಧವಾಗಿರುವ ವಲಯಗಳನ್ನು ಮುಂದಿನಂತೆ ವಿಂಗಡಿಸ ಬಹುದೆಂದು ಕಾಣುತ್ತದೆ :
(೧) ಕೇಂದ್ರ ಸರ್ಕಾರದ ಭ್ರಷ್ಟಾಚಾರವನ್ನು ಗುರಿಯಾಗಿಟ್ಟುಕೊಂಡ ಬಿ.ಜೆ.ಪಿ. ಪ್ರಧಾನ ವಲಯ
(೨) ಬಿ.ಜೆ.ಪಿ. ಭ್ರಷ್ಟಾಚಾರವನ್ನು ಗುರಿಯಾಗಿಟ್ಟುಕೊಂಡ ಕಾಂಗೈ ಪ್ರಧಾನ ವಲಯ
(೩) ಮಾಧ್ಯಮ ಗೋಷ್ಠಿಗಳಲ್ಲಿ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡುವ ವ್ಯಕ್ತಿಗತ ವಲಯ
(೪) ನ್ಯಾಯಾಲಯಗಳಲ್ಲಿ ಕಾನೂನು ಸಮರ ನಡೆಸುವ ಸಾರ್ವಜನಿಕ ಹಿತಾಸಕ್ತಿ ವಲಯ
(೫) ಲೋಕಾಯುಕ್ತ, ಸಿ.ಬಿ.ಐ. ಮುಂತಾದ ಸಂಸ್ಥೆಗಳ ಕ್ರಿಯಾವಲಯ.

ಸ್ಥೂಲವಾಗಿ ವಿಂಗಡಿತವಾದ ಈ ವಲಯಗಳು ಒಂದೊಂದು ಮಾದರಿಯನ್ನು ಪ್ರತಿನಿಧಿಸುತ್ತವೆ.

ಈಗ ನೋಡಿ; ಬಿ.ಜೆ.ಪಿ.ಯವರು ಬಾಯಿಬಿಟ್ಟರೆ ಕೇಂದ್ರ ಸರ್ಕಾರದ ೨-ಜಿ ಹಗರಣದ ಬಗ್ಗೆ ಮಾತಾಡುತ್ತಾರೆ. ಅದು ತಪ್ಪೇನಲ್ಲ. ಆದರೆ ೨-ಜಿ ಹಗರಣ, ಮಹಾರಾಷ್ಟ್ರದ ಆದರ್ಶ ಅಪಾರ್ಟ್‌ಮೆಂಟ್ ಹಗರಣ, ಐ.ಪಿ.ಎಲ್. ಮತ್ತು ಕಾಮನ್ ವೆಲ್ತ್ ಹಗರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳ ರಾಜೀನಾಮೆಯನ್ನು ಬೇಗ ಪಡೆಯಲಾಯಿತು. ಸಿ.ಬಿ.ಐ. ತನಿಖೆಯಿಂದ, ಕೆಲವರು ಜೈಲು ಸೇರಿ ಜಾಮೀನಿಗಾಗಿ ಪರಿತಪಿಸುವ ಪರ್ವವೂ ಸೃಷ್ಟಿಯಾಯಿತು. ಹಾಗೆಂದು ಕೇಂದ್ರ ಸರ್ಕಾರ ಪೂರ್ಣ ಪರಿಶುದ್ಧವಾಯಿತು ಎಂದೇನೂ ಅಲ್ಲ. ಆದರೆ ಬಿ.ಜೆ.ಪಿ.ಯು ಕೇಂದ್ರ ಸರ್ಕಾರದ ಭ್ರಷ್ಟಾಚಾರವನ್ನು – ವಿಶೇಷವಾಗಿ ಕಾಂಗೈ ವಲಯವನ್ನು ಹಿಗ್ಗಾಮುಗ್ಗ ಜಗ್ಗುತ್ತಲೇ ಕರ್ನಾಟಕದ ಯಡಿಯೂರಪ್ಪನವರಿಗೆ ಬಗ್ಗುತ್ತಾ ಬಂದದ್ದು ಈಗ ಇತಿಹಾಸ. ಕರ್ನಾಟಕ ಲೋಕಾಯುಕ್ತ ವರದಿ ಬರುವವರೆಗೂ ಯಡಿಯೂರಪ್ಪನವರ ರಾಜೀನಾಮೆ ಪಡೆಯುವ ನೈತಿಕ ಸ್ಥೆರ್ಯವನ್ನು ಬಿ.ಜೆ.ಪಿ. ತೋರಿಸಲಿಲ್ಲ. ಈ ಮಧ್ಯೆ ಹಿರಿಯ ನಾಯಕರಾದ ಎಲ್.ಕೆ. ಅದ್ವಾನಿಯವರ ರಥಯಾತ್ರೆ ಬೇರೆ. ಈ ಉದ್ದೇಶಿತ ವೈರುಧ್ಯವೇ ಬಿ.ಜೆ.ಪಿ. ಮಾದರಿ.

ಇನ್ನು ಕಾಂಗ್ರೆಸ್‌ ಮಾದರಿಯೂ ತೀರಾ ವಿಭಿನ್ನವಲ್ಲ. ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಇವರು ಮಾತಾಡುವುದಿಲ್ಲ ಅಥವಾ ಮಾತಾಡುವಂತಿಲ್ಲ. ಕೆಲವರನ್ನು ಜೈಲಿಗೆ ಕಳಿಸಿದ ಉದಾಹರಣೆ ಇವರಿಗೊಂದು ಶ್ರೀರಕ್ಷೆಯಾಗಿದೆ. ಬಿ.ಜೆ.ಪಿ.ಯವರ ಭ್ರಷ್ಟಾಚಾರವನ್ನು ವಿರೋಧಿಸುವ ಉತ್ಸಾಹ ಹೆಚ್ಚಾಗಿಯೇ ಇದೆ. ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ನಡೆಸುವ ರಚನಾತ್ಮಕ ಪ್ರತಿಭಟನೆಯನ್ನು ನಡೆಸಿದ ಕಾಂಗ್ರೆಸ್ ಕ್ರಮ ಮೆಚ್ಚುವಂಥದು. ಆದರೆ ಇದನ್ನು ಹೊರತುಪಡಿಸಿ ತನ್ನದೇ ಮೂಲಗಳ ಮೂಲಕ ಹೆಚ್ಚು ಭ್ರಷ್ಟಾಚಾರಗಳನ್ನು ಬಯಲಿಗೆಳೆಯದಿದ್ದರೂ ಒಟ್ಟಾರೆ ಬಿ.ಜೆ.ಪಿ. ಸರ್ಕಾರದ ವೈಫಲ್ಯಗಳನ್ನೂ ಹೇಗೊ ಬಯಲಾದ ಭ್ರಷ್ಟಾಚಾರದ ಹಗರಣಗಳನ್ನೂ ಪುನರುಚ್ಚರಿಸುತ್ತ ತನ್ನ ಅಸ್ತಿತ್ವವನ್ನು ಸಾಬೀತುಪಡಿಸುತ್ತಿದೆ. ತಮ್ಮ ಪಕ್ಷದವರು ಅಪರಾಧಿಗಳಾಗಿದ್ದರೆ ಶಿಕ್ಷೆಯಾಗಲಿ ಎನ್ನುತ್ತಿದೆ. ಏನೇ ಆದರೂ ಕಾಂಗ್ರೆಸ್‌ದು, ಬಿ.ಜೆ.ಪಿ. ಭ್ರಷ್ಟಾಚಾರ ವಿರೋಧಿ ಮಾದರಿ ಮಾತ್ರ.

ಆದರೆ ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಪಕ್ಷಗಳ ಕಷ್ಟ ಇರುವುದು ಪಕ್ಷನಿಷ್ಠ ರಾಜಕೀಯದಲ್ಲಿ ತಂತಮ್ಮ ಪಕ್ಷಗಳ ಚೌಕಟ್ಟಿನಲ್ಲಿಯೇ ಕ್ರಿಯಾಶೀಲವಾಗುವ ಅನಿವಾರ್ಯತೆ ಅವರದು. ಜೊತೆಗೆ ಭ್ರಷ್ಟಾಚಾರ ವಿರೋಧಿ ಕ್ರಿಯೆಯಿಂದ ಮುಂದಿನ ಚುನಾವಣೆಯಲ್ಲಿ ಆಗಬಹುದಾದ ಅನುಕೂಲದ ಲೆಕ್ಕಾಚಾರ; ಓಟಿನ ಮೌಲ್ಯದ ಎದುರು ನೈತಿಕ ಮೌಲ್ಯ ನೆಲಕಚ್ಚುತ್ತದೆ. ಭ್ರಷ್ಟಾಚಾರದಲ್ಲಿ ನೈತಿಕ ಮೌಲ್ಯ, ಓಟಿನ ಮೌಲ್ಯಗಳನ್ನು ದಾಟಿದ ನೋಟಿನ ಮೌಲ್ಯ ವಿಜೃಂಭಿಸುತ್ತದೆ. ಈ ಮಧ್ಯೆ ಕೆಲವರಾದರೂ ಆತ್ಮಾವಲೋಕನದ ಧರ್ಮ ಸಂಕಟದಲ್ಲಿ ಕೊರಗುವವರು ಇದ್ದಾರೆನ್ನುವುದು ನಿಜ. ಧರ್ಮಾಧಾರಿತ ರಾಜಕೀಯ ಮಾಡುವ ಬಿ.ಜೆ.ಪಿ. ಧುರೀಣರಿಗೆ ಈ ಧರ್ಮ ಸಂಕಟ ದೊಡ್ಡದಾಗಿ ಕಾಡಿದ್ದರೆ ಚೆನ್ನಾಗಿತ್ತು. ಆದರೆ ಹಾಗಾಗಲಿಲ್ಲ.

ಪಕ್ಷನಿಷ್ಠೆಯ ನೆಲೆಯಲ್ಲಿ ಭ್ರಷ್ಟಾಚಾರವನ್ನು ವಿರೋಧಿಸುವ ಮಿತಿಗಳಿಗೆ ಬಿ.ಜೆ.ಪಿ. ಮತ್ತು ಕಾಂಗೈಗಳು ಸಾಂಕೇತಿಕ ಮಾದರಿಗಳಾಗಿವೆ. ಅಣ್ಣಾ ಡಿ.ಎಂ.ಕೆ., ಜೆ.ಡಿ.ಎಸ್., ಡಿ.ಎಂ.ಕೆ. ಮುಂತಾದ ಪಕ್ಷಗಳೂ ಇದೇ ಮಾದರಿಯೊಳಗಿದ್ದು ಪಕ್ಷಕ್ಕಷ್ಟೇ ಅಲ್ಲ ಕಾಂಗ್ರೆಸ್‌ನಷ್ಟೇ ಅಥವಾ ಅದಕ್ಕೂ ಮೀರಿದ ನಾಯಕನಿಷ್ಠೆಯಲ್ಲಿ ಭ್ರಷ್ಟಾಚಾರ ವಿರೋಧಿ ನೆಲೆಯನ್ನು ರೂಪಿಸಿಕೊಳ್ಳುತ್ತ ಬಂದಿವೆ. ಹಾಗೆಂದು ಪಕ್ಷಾತೀತ ಅರಾಜಕ ಸ್ಥಿತಿಯೂ ಆದರ್ಶಪ್ರಾಯವಾದುದಲ್ಲ.

ನಿರ್ದಿಷ್ಟ ಪಕ್ಷದೊಳಗಿದ್ದೂ ಪಕ್ಷವನ್ನು ಮೀರಿದ ರಾಜಕಾರಣ, ನಿರ್ದಿಷ್ಟ ಧರ್ಮ ದೊಳಗಿದ್ದೂ ಆ ಧರ್ಮವನ್ನು ಮೀರಿದ ಧಾರ್ಮಿಕತೆ, ನಿರ್ದಿಷ್ಟ ಜಾತಿಯೊಳಗಿದ್ದೂ ಜಾತಿವಾದಿಯಾಗದ ಜಾತ್ಯತೀತತೆ – ಇವುಗಳು ಇಂದಿನ ಸನ್ನಿವೇಶದಲ್ಲಿ ಆದರ್ಶದ ಮಾದರಿಗಳಾಗಬಹುದು. ಯಾಕೆಂದರೆ ಈ ಮಾದರಿಯಲ್ಲಿ ಆತ್ಮಾವಲೋಕನ ಸಾಧ್ಯ.

ಈಗ ಪಕ್ಷದಾಚೆಗಿನ ವ್ಯಕ್ತಿಗತವಲಯಕ್ಕೆ ಬರೋಣ. ಮಾಧ್ಯಮ ಗೋಷ್ಠಿಗಳಲ್ಲಿ ಹಗರಣಗಳನ್ನು ಬಯಲು ಮಾಡುವ ಪರಿಪಾಠಕ್ಕೆ ಪ್ರಸಿದ್ದಿಯನ್ನು ತಂದುಕೊಟ್ಟವರು ಶ್ರೀ ಎಚ್.ಡಿ. ಕುಮಾರಸ್ವಾಮಿಯವರು. ಇವರು ಬಯಲು ಮಾಡಿದ ಹಗರಣಗಳ ರೀತಿರಿವಾಜುಗಳನ್ನು ನೋಡಿದರೆ – ಬಿ.ಜೆ.ಪಿ. ವಿರೋಧಕ್ಕಿಂತ ಹೆಚ್ಚಾಗಿ ಶ್ರೀ ಯಡಿಯೂರಪ್ಪನವರನ್ನೇ ಗುರಿಯಾಗಿಟ್ಟು ಕೊಳ್ಳಲಾಗಿತ್ತು. ಯಡಿಯೂರಪ್ಪನವರ ತಂಡವೂ ಅಷ್ಟೆ; ಕುಮಾರಸ್ವಾಮಿಯವರು ಪ್ರತಿನಿಧಿಸುವ ಜೆ.ಡಿ.ಎಸ್. ಪಕ್ಷಕ್ಕಿಂತ ಶ್ರೀ ದೇವೇಗೌಡರ ಕುಟುಂಬವನ್ನೇ ಗುರಿಯಾಗಿಟ್ಟುಕೊಂಡಿತ್ತು. ಹೀಗಾಗಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ಗಳು ಪಕ್ಷದ ನೆಲೆಯಲ್ಲಿ ಎದುರಾದಂತೆ ಇಲ್ಲಿ ಜೆ.ಡಿ.ಎಸ್. ಮತ್ತು ಬಿ.ಜೆ.ಪಿ.ಗಳು ಎದುರಾಗಲಿಲ್ಲ. ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಎದುರಾದರು. ಇದರ ಫಲವಾಗಿ ಪಕ್ಷಗಳ ಪ್ರಜಾಪ್ರಭುತ್ವದ ನೆಲೆಗಳು ಹಿಂದೆ ಸರಿದು ಪ್ಯೂಡಲ್ ಗುಣಗಳು ಮುಂದೆ ಬಂದು ನಿಂತವು, ಭ್ರಷ್ಟಾಚಾರ ವಿರೋಧವೆನ್ನುವುದು ವ್ಯಕ್ತಿಗತ ವಲಯಕ್ಕೆ ಸೀಮಿತವಾಯಿತು. ಕುಮಾರಸ್ವಾಮಿಯವರು ದಾಖಲೆ ಸಮೇತ ಹಗರಣಗಳನ್ನು ಬಯಲು ಮಾಡಿದ್ದು ಶ್ಲಾಘನೀಯವಾದರೂ ವ್ಯಕ್ತಿಗತ ಹೋರಾಟದ ಮಿತಿಗಳು ಸನ್ನಿವೇಶವನ್ನು ಸಂಕುಚಿತಗೊಳಿಸಿದವು. ಬಯಲು ಮಾಡಿದ ಹಗರಣಗಳನ್ನೇ ಮುಂದಿಟ್ಟುಕೊಂಡು ಜನತೆಯ ಹೋರಾಟವನ್ನು ಕಟ್ಟಲಿಲ್ಲ ಎಂಬ ಮಿತಿಯನ್ನೂ ಇಲ್ಲಿ ಗಮನಿಸಬೇಕು. ಎರಡೂ ಕಡೆಯಿಂದ ನಡೆದದ್ದು ‘ಮಾಧ್ಯಮಗೋಷ್ಠಿ ಹೋರಾಟ’ ಇಷ್ಟಾದರೂ ಹಗರಣಗಳನ್ನು ಬಯಲು ಮಾಡಿದ್ದು ಸಣ್ಣ ಸಂಗತಿಯಲ್ಲ.

ಭ್ರಷ್ಟಾಚಾರದ ಹಗರಣಗಳನ್ನು ಮಾಧ್ಯಮಗಳ ಮೂಲಕವಷ್ಟೇ ಬಯಲು ಮಾಡದೆ ನ್ಯಾಯಾಲಯಕ್ಕೆ ಕೊಂಡೊಯ್ದು ಕಾನೂನು ಸಮರಕ್ಕೆ ಸಜ್ಜಾದ ಸಾಹಸದ ಮಾದರಿಯೂ ನಮ್ಮ ಕಣ್ಣು ಮುಂದಿದೆ. ಸಿರಾಜುದ್ದೀನ್ ಬಾಷ ಮತ್ತು – ಬಾಲರಾಜ್ ಅವರು ಯಡಿಯೂರಪ್ಪ ಮತ್ತು ಕುಟುಂಬದ ಭೂಹಗರಣಗಳನ್ನು ನ್ಯಾಯಾಲಯಕ್ಕೆ ಕೊಂಡೊಯ್ದು ಮುನ್ನಡೆಸುತ್ತಿರುವ ಮಾದರಿಯನ್ನು ಇಲ್ಲಿ ಉಲ್ಲೇಖಿಸಬಹುದು. ಅಲ್ಲದೆ ಸಮಾಜ ಪರಿವರ್ತನಾ ಸಮಿತಿಯ ಹಿರೇಮಠ ಅವರು ಅಕ್ರಮ ಗಣಿಗಾರಿಕೆಯ ವಿರುದ್ಧವಾಗಿ ಸುಪ್ರೀಂ ಕೋರ್ಟ್‌ವರೆಗೆ ಹೋಗಿದ್ದು ದೊಡ್ಡ ಕಾನೂನು ಸಮರವೆ ಆಗಿದೆ; ಅದು ಫಲವನ್ನೂ ನೀಡುತ್ತಿದೆ. ವೈ.ಎಸ್.ವಿ. ದತ್ತ ಅವರು ಲೋಕಾಯುಕ್ತಕ್ಕೆ ಕೊಟ್ಟಿರುವ ದೂರನ್ನೂ ಇಲ್ಲಿ ನೆನೆಯಬಹುದು. ಯಡಿಯೂರಪ್ಪನವರ ವಿರೋಧಿ ವಲಯದ ವಿರುದ್ಧವೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಬಂದದ್ದೂ ಉಂಟು. ಒಟ್ಟಿನಲ್ಲಿ ಹೇಳುವುದಾದರೆ ಕಾನೂನು ಸಮರಗಳು ಸುದ್ದಿ ಸ್ಫೋಟದ ಮಟ್ಟದಲ್ಲಿ ಮಾತ್ರ ನಿಲ್ಲದೆ ಭ್ರಷ್ಟಾಚಾರದ ಹಗರಣಗಳಿಗೆ ತಾರ್ಕಿಕ ಕೊನೆ ಮುಟ್ಟಿಸುತ್ತವೆ ಎನ್ನುವುದು ಮಹತ್ವದ ಸಂಗತಿಯಾಗಿದೆ.

ಇನ್ನು ಲೋಕಾಯುಕ್ತ, ಸಿ.ಬಿ.ಐ. ಮುಂತಾದ ಸಂಸ್ಥೆಗಳ ವಿಷಯ. ಸಿ.ಬಿ.ಐ. ಮಾದರಿಯ ಸಂಸ್ಥೆಗಳು ಸರ್ಕಾರವು ವಹಿಸಿದ ಹಗರಣ ಅಥವಾ ಯಾವುದೇ ವಿಷಯದ ತನಿಖೆ ನಡೆಸುವ ಸ್ವತಂತ್ರ ಸಂಸ್ಥೆಗಳು, ಲೋಕಾಯುಕ್ತವು ಸರ್ಕಾರದ ನಿರ್ದೇಶನವಿಲ್ಲದೆ ಸ್ವಯಂ ದಾಳಿ ಮಾಡುವ ಹಾಗೂ ಮೊಕದ್ದಮೆ ದಾಖಲಿಸುವ ಸಂಸ್ಥೆ. ಈ ಸಂಸ್ಥೆಗಳೂ ತಮ್ಮದೇ ಇತಿಮಿತಿಯಲ್ಲಿ ಭ್ರಷ್ಟಾಚಾರ ವಿರೋಧಿ ಕ್ರಿಯೆಯಲ್ಲಿ ತೊಡಗಿವೆ. ಆದರೆ ಭ್ರಷ್ಟಾಚಾರದ ಪ್ರಕರಣಗಳು ಹೆಚ್ಚುತ್ತಲೇ ಇವೆ!

ಈಗ ದೇಶಾದ್ಯಂತ ಸುದ್ದಿ ಮಾಡಿದ ಅಣ್ಣಾ ಹಜಾರೆ ತಂಡದ ಭ್ರಷ್ಟಾಚಾರ ವಿರೋಧಿ ಮಾದರಿಯನ್ನು ಪರಿಶೀಲಿಸೋಣ. ಅಣ್ಣಾ ಹಜಾರೆಯವರು ಜಂತರ್‌ ಮಂತರ್‌ ಮತ್ತು ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದು, ತಮ್ಮ ತಂಡ ಸಿದ್ಧಪಡಿಸಿದ ಜನಲೋಕಪಾಲ್ ಮಸೂದೆಯ ಕರಡನ್ನೂ ಕೇಂದ್ರ ಸರ್ಕಾರವು ಒಪ್ಪಬೇಕೆಂದೇ ಹೊರತು ಸಮಗ್ರ ಭ್ರಷ್ಟಾಚಾರ ನಿರ್ಮೂಲನೆಯ ಅಜೆಂಡಾ ಮುಂದಿಟ್ಟು ಅಲ್ಲ – ಎಂಬುದನ್ನು ಮೊದಲೇ ಸ್ಪಷ್ಟಪಡಿಸಿಕೊಳ್ಳಬೇಕು. ಈ ಕ್ಷಣದಲ್ಲೂ ಅಣ್ಣಾ ತಂಡದ ಮಂತ್ರವೆಂದರೆ – ತಮ್ಮ ಜನಲೋಕಪಾಲ ಮಸೂದೆ ಕೂಡಲೇ ಅಂಗೀಕೃತವಾಗಬೇಕು – ಎಂಬುದೇ ಆಗಿದೆ. ಆದರೆ ಅಣ್ಣಾ ಹಜಾರೆ ಸತ್ಯಾಗ್ರಹಕ್ಕೆ ಬೆಂಬಲವಾಗಿ ನಿಂತ ಬಹುಪಾಲು ಜನರು ಜನಲೋಕಪಾಲ್ ಗಿಂತ ಒಟ್ಟು ಭ್ರಷ್ಟಾಚಾರ ವಿರೋಧಿ ಹೋರಾಟವಿದು ಎಂದು ಭಾವಿಸಿ ಬೀದಿಗೆ ಬಂದರು. ರಾಜಕಾರಣಿಗಳ ಭ್ರಷ್ಟತೆಯಿಂದ ಜನಸಮುದಾಯ ಎಷ್ಟು ರೋಸಿಹೋಗಿತ್ತೆಂದರೆ, ತನ್ನ ರೋಷವನ್ನು ವ್ಯಕ್ತ ಪಡಿಸಲೂ ಒಂದು ಸಾಧನಕ್ಕಾಗಿ ಕಾಯುತ್ತಿತ್ತು. ಯಾರು ಆಂದೋಲನ ಮಾಡಿದರೂ ಗುರುತಿಸಿ ಕೊಳ್ಳಲು ಸಿದ್ಧವಿತ್ತು. ಸತ್ಯಾಗ್ರಹವು ಗಾಂಧಿ ಮೂಲದಿಂದ ಬಂದದ್ದರಿಂದ ಮತ್ತು ಅಣ್ಣಾ ಹಜಾರೆಯವರು ಗಾಂಧಿವಾದಿಯೆಂದು ಬಿಂಬಿತವಾದ್ದರಿಂದ ಮತ್ತಷ್ಟು ಸಜ್ಜನರು ಸತ್ಯಾಗ್ರಹಕ್ಕೆ ಬೆಂಬಲವಾದರು. ಈ ಎಲ್ಲದರ ನಡುವೆ ಸಂಘ ಪರಿವಾರ ಮತ್ತು ಬಿ.ಜೆ.ಪಿ.ಯವರ ಬೆಂಬಲ ಇತ್ತು. ಅಣ್ಣಾ ಹಜಾರೆಯವರು ಇವರ ಬೆಂಬಲವನ್ನು ಕೇಳಿಲ್ಲದೆ ಇರಬಹುದು. ಆದರೆ ಕಾಂಗ್ರೆಸ್ ವಿರೋಧಕ್ಕಾಗಿ ಸಂಘ ಪರಿವಾರ ಮತ್ತು ಬಿ.ಜೆ.ಪಿ. ಈ ಅವಕಾಶವನ್ನು ಬಳಸಿಕೊಂಡದ್ದಂತೂ ನಿಜ. (೫-೫-೨೦೧೧ ರಂದು ಆರ್‌.ಎಸ್‌.ಎಸ್‌. ನೇತಾರ ರಾಂ ಯಾದವ್ ಹೇಳಿದಂತೆ ಆರ್.ಎಸ್.ಎಸ್. ಅಣ್ಣಾ ಹಜಾರೆ ಹೋರಾಟದಲ್ಲಿ ಸಂಪೂರ್ಣ ಭಾಗಿಯಾಗಿತ್ತು. ೧೬-೮-೨೦೧೧ ರಂದು ಜನಲೋಕಪಾಲವನ್ನು ಒಪ್ಪದ ಗಡ್ಕರಿ ೨೫-೮-೨೦೧೧ ರಂದು ಬೆಂಬಲ ಘೋಷಿಸಿದರು.) ಈ ಅರವಿಂದ ಕೇಜರಿವಾಲ, ಕಿರಣ್ ಬೇಡಿ ಮುಂತಾದ ಸ್ವಯಂ ಸೇವಾ ಸಂಸ್ಥೆಗಳ ನೇತಾರರಿಂದ ಜಿ.ಓ. ವಲಯದ ಬೆಂಬಲವಿತ್ತು. ಕಾರ್ಪೊರೇಟ್ ವಲಯದ ಉದ್ಯೋಗಿಗಳ ಜೊತೆ ಕೆಲ ಮಾಲೀಕರ ಸಹಕಾರವೂ ಇತ್ತು. ಇಲ್ಲದಿದ್ದರೆ ಈ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಇಲ್ಲೀವರೆಗೆ ೨.೯೪ ಕೋಟಿ ರೂಪಾಯಿಗಳು ಸಂಗ್ರಹವಾಗಲು ಹೇಗೆ ಸಾಧ್ಯ? (ಹಿಂದೂ ಪತ್ರಿಕೆ ೧-೧೧-೨೦೧೧) ಎಲ್ಲಕ್ಕೂ ಕಳಶವಿಟ್ಟಂತೆ ಕಾರ್ಪೊರೇಟ್ ಎಲೆಕ್ಟ್ರಾನಿಕ್ ಮಾಧ್ಯಮಗಳು ‘ಭಾರತವೇ ಸಿಡಿದೆದ್ದಿದೆ’ ಎಂಬಂತೆ ಸುದ್ದಿ ಮಾಡಿದವು. ಮುದ್ರಣ ಮಾಧ್ಯಮಗಳೂ ಹಿಂದೆ ಬೀಳಲಿಲ್ಲ: ಹಿಂದೆ ಬೀಳುವಂತಿರಲಿಲ್ಲ. ಅಸ್ತಿತ್ವದ ಸ್ಪರ್ಧಾತ್ಮಕ ಸಂದರ್ಭ, ಒಟ್ಟಿನಲ್ಲಿ ಭ್ರಷ್ಟಾಚಾರಕ್ಕೆ ಕೊನೆಗಾಲ ಬಂತು ಎಂಬಂತೆ ಸುದ್ದಿ ಮಾಡಲಾಯಿತು. ಸತ್ಯಾಗ್ರಹ ನಿರತರು ಮತ್ತು ಸುದ್ದಿ ನಿರತರು ಸೇರಿ ಭ್ರಮೆ ಮತ್ತು ವಾಸ್ತವಗಳನ್ನು ಒಟ್ಟಿಗೇ ಬಿತ್ತಿದ ವೈರುಧ್ಯ ಏಕಮುಖವಾದದ್ದು ಒಂದು ವಿಪರ್ಯಾಸ. ಅದೇನೇ ಇರಲಿ, ಅಣ್ಣಾ ಹಜಾರೆ ಸತ್ಯಾಗ್ರಹವು ಭ್ರಷ್ಟಾಚಾರ ವಿರೋಧಿ ಅಲೆಯನ್ನು ಎಬ್ಬಿಸುವ ಅಭಿನಂದನಾರ್ಹ ಕೆಲಸ ಮಾಡಿದ್ದನ್ನು ಅಲ್ಲಗಳೆಯುವಂತಿಲ್ಲ. ಅದೇ ಸಂದರ್ಭದಲ್ಲಿ ಇವರ ಹೋರಾಟದ ಶಕ್ತಿ ಮತ್ತು ಮಿತಿ ಎರಡನ್ನೂ ಒಟ್ಟಿಗೇ ಗ್ರಹಿಸುವುದನ್ನು ಮರೆಯುವಂತಿಲ್ಲ; ಮರೆಯಬಾರದು.

ಹಾಗಾದರೆ ಅಣ್ಣಾ. ತಂಡದ ‘ಜನಲೋಕಪಾಲ ಕರಡು’ ಏನನ್ನು ಒಳಗೊಂಡಿದೆ? ಅದರ ವ್ಯಾಪ್ತಿ ಏನು? ಅದರ ಅನುಷ್ಠಾನದಿಂದ ಭ್ರಷ್ಟಾಚಾರ ಕೊನೆಗೊಳ್ಳುವುದೆ? ಈ ಪ್ರಶ್ನೆಗಳು ಮುಖ್ಯವಾಗುತ್ತವೆ. ಅಣ್ಣಾ ತಂಡದ ಜನಲೋಕಪಾಲ್ ಪ್ರಕಾರ ಪ್ರಧಾನಿಯನ್ನೂ ಒಳ ಗೊಂಡಂತೆ ಕೇಂದ್ರ ಸಚಿವರು, ಕೇಂದ್ರ ಸರ್ಕಾರದ ಎಲ್ಲಾ ನೌಕರರು ಮತ್ತು ನ್ಯಾಯಾಂಗವು ಲೋಕಪಾಲ್ ವ್ಯಾಪ್ತಿಗೆ ಬರಬೇಕು; ಸರ್ಕಾರದ ಮತ್ತು ಸಂಸತ್ ಅಧ್ಯಕ್ಷರುಗಳ ಅನುಮತಿಯಿಲ್ಲದೆ ಮೊಕದ್ದಮೆ ಹೂಡುವ ಅಧಿಕಾರವಿರಬೇಕು; ಯಾವುದೇ ದೂರು ಬರದಿದ್ದರೂ ಸ್ವಯಂಪ್ರೇರಿತವಾಗಿಯೇ ತನಿಖೆ ಮತ್ತು ಮೊಕದ್ದಮೆಗೆ ಮುಂದಾಗಬೇಕು, ಒಬ್ಬರು ಮುಖ್ಯಸ್ಥರ ಜೊತೆಗೆ ಹತ್ತು ಜನರಿರುವ ಲೋಕಪಾಲ್ ಆಯ್ಕೆ ಸಮಿತಿಯಲ್ಲಿ ತಲಾ ಇಬ್ಬರು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಾಧೀಶರು, ಚುನಾವಣಾ ಆಯೋಗದ ಆಯುಕ್ತರು, ಆಡಿಟರ್‌ ಜನರಲ್, ಭಾರತ ಮೂಲದ ಎಲ್ಲಾ ನೊಬೆಲ್ ಪುರಸ್ಕೃತರು, ಇತ್ತೀಚಿನ ಮೂವರು ಮಾಗ್ಸೆಸೆ ಪುರಸ್ಕೃತರು ಇರಬೇಕು – ಇತ್ಯಾದಿ ಅಂಶಗಳಿವೆ. ಜೊತೆಗೆ ಸಿ.ಬಿ.ಐ. ಮುಂತಾದ ತನಿಖಾ ಸಂಸ್ಥೆಗಳು ಲೋಕಪಾಲ್‌ನಲ್ಲಿ ವಿಲೀನವಾಗಬೇಕೆಂದು ಹೇಳಲಾಗಿದೆ.

ಪ್ರಧಾನಿ ಮತ್ತು ನ್ಯಾಯಾಂಗವು ಲೋಕಪಾಲ್ ವ್ಯಾಪ್ತಿಗೆ ಬರಬಾರದೆಂದು ಅನೇಕರು ಪ್ರತಿಪಾದಿಸಿದ್ದಾರೆ. ನನ್ನ ದೃಷ್ಟಿಯಲ್ಲಿ ಪ್ರಧಾನಿ ಲೋಕಪಾಲ್ ವ್ಯಾಪ್ತಿಗೆ ಬರಬಹುದು. ಆದರೆ ನ್ಯಾಯಾಂಗಕ್ಕೆ ತನ್ನದೇ ಆದ ಪ್ರತ್ಯೇಕ ಸ್ವಾಯತ್ತ ವ್ಯವಸ್ಥೆಯಿದೆಯಾದ್ದರಿಂದ ಅದರ ಭ್ರಷ್ಟಾಚಾರ ಪ್ರಕರಣಗಳ ತಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕೇ ಹೊರತು ಲೋಕಪಾಲ್ ವ್ಯಾಪ್ತಿಗೆ ತರಬಾರದು. ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ಕೊಟ್ಟಿರುವ ಸ್ವಾಯತ್ತ ಸ್ಥಾನಮಾನವನ್ನು ಉಲ್ಲಂಘಿಸಬಾರದು. ಇನ್ನು ಸಿ.ಬಿ.ಐ. ಮುಂತಾದ ತನಿಖಾ ಸಂಸ್ಥೆಗಳೆಲ್ಲ ಲೋಕಪಾಲ್ ವ್ಯಾಪ್ತಿಗೆ ಬರುವುದು ಸೂಕ್ತವಲ್ಲ. ಅದು ಕೇವಲ ಭ್ರಷ್ಟಾಚಾರದ ತನಿಖಾ ಸಂಸ್ಥೆಯಲ್ಲ. ಸರ್ಕಾರ ವಹಿಸುವ ಎಲ್ಲ ಪ್ರಕರಣಗಳ ತನಿಖೆಯನ್ನು ಅದು ನಿರ್ವಹಿಸುತ್ತದೆ. ಲೋಕಪಾಲರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಸರ್ಕಾರದ ಪ್ರತಿನಿಧಿಗಳು ಇರಲೇಬಾರದೆಂದು ಜನಲೋಕಪಾಲ್ ನಿಲುವಾಗಿದೆ. ಒಳ್ಳೆಯ ಸರ್ಕಾರವೊ ಕೆಟ್ಟ ಸರ್ಕಾರವೊ ಅದು ಬೇರೆ ವಿಷಯ, ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರದ ಪಾತ್ರವೇ ಇರಬಾರದೆಂದು ಭಾವಿಸುವುದು ಪ್ರಜಾಸತ್ತಾತ್ಮಕವಲ್ಲ. ಪ್ರಶಸ್ತಿ ಪುರಸ್ಕೃತರಾಗಿದ್ದರೆ ಆಯ್ಕೆ ಸಮಿತಿಯಲ್ಲಿರಬಹುದೆಂಬ ಅಂಶವೂ ಚರ್ಚಾರ್ಹವಾದುದು. ಅದರಲ್ಲೂ ಮಾಗ್ಸೆಸೆ ಪ್ರಶಸ್ತಿ ಪುರಸ್ಕೃತರೇ ಯಾಕೆ? ಅಣ್ಣಾ ತಂಡದಲ್ಲಿ ಮೂರ್‍ನಾಲ್ಕು ಜನ ಮಾಗ್ಸೆಸೆ ಪುರಸ್ಕೃತರಿದ್ದಾರೆಂಬುದನ್ನು ಮರೆತು ಬಿಡೋಣ; ನಮ್ಮ ದೇಶದ ಪದ್ಮಭೂಷಣ, ವಿಭೂಷಣರು ಯಾಕೆ ಬೇಡ? ಒಂದು ಮಾಹಿತಿಯ ಪ್ರಕಾರ ಫಿಲಿಪೀನ್ಸ್‌ನಲ್ಲಿ ಹತ್ಯಾಕಾಂಡಕ್ಕೆ ಕಾರಣವಾದ ವ್ಯಕ್ತಿ ಈ ಮಾಗ್ಸೆಸೆ. ಆತನ ಹೆಸರಲ್ಲಿ ಸಾಮಾಜಿಕ ಕಾರ್ಯಕರ್ತರಿಗೆ ಪ್ರಶಸ್ತಿ ನೀಡುವುದೇ ಒಂದು ವ್ಯಂಗ್ಯ; ಅದೇ ಬೇರೆ ಚರ್ಚೆ ಬಿಡಿ.

ಕೆಲವು ಕೊರತೆಗಳಿದ್ದರೂ ಅಣ್ಣಾ ತಂಡದ ಜನಲೋಕಪಾಲ್ ಮಸೂದೆಯು ಸರ್ಕಾರದ ಮಸೂದೆಗಿಂತ ಶಕ್ತಿಯುತವಾಗಿದೆ. ಆದರೆ ಅದರ ಎಲ್ಲ ಅಂಶಗಳನ್ನೂ ಇದ್ದ ಹಾಗೆಯೇ ಒಪ್ಪಬೇಕೆಂಬ ಹಟ ಮಾತ್ರ ಆರೋಗ್ಯಕರವಲ್ಲ. ಹಾಗೆ ನೋಡಿದರೆ, ಅರುಣಾರಾಯ್ ಹಾಗೂ ಆಂಧ್ರದ ಜಯಪ್ರಕಾಶ್ ನಾರಾಯಣ ಅವರು ರೂಪಿಸಿದ ಎರಡು ಕರಡುಗಳೂ ಕಣ್ಣೆದುರಿಗಿವೆ. ಅವನ್ನೂ ಪರಿಶೀಲಿಸಿ ಶಕ್ತಿಯುತ ಲೋಕಪಾಲ್ ತರುವುದು ಪ್ರಜಾಸತ್ತಾತ್ಮಕವಲ್ಲವೆ? ಅಷ್ಟೇಕೆ, ಮೊದಲು ನಿಸ್ತೇಜ ಮಸೂದೆಯನ್ನು ಮಂಡಿಸಿದ ಕೇಂದ್ರ ಸರ್ಕಾರವು, ಅಣ್ಣಾ ತಂಡದ ಚಳವಳಿ ತೀವ್ರಗೊಂಡ ನಂತರ ಬಲಿಷ್ಠ ಲೋಕಪಾಲ್‌ಗಾಗಿ ಅದಕ್ಕೆ ಸಂವಿಧಾನಾತ್ಮಕ ಸ್ಥಾನಮಾನ ಕೊಡುವ ಪ್ರಸ್ತಾಪ ಮಾಡಿದ್ದು ಉತ್ತಮ ಬೆಳವಣಿಗೆಯಲ್ಲವೆ? ಆದರೆ ಈ ಪ್ರಸ್ತಾಪವನ್ನು ಅಣ್ಣಾ ತಂಡ (ವಿಶೇಷವಾಗಿ ಕಿರಣ್ ಬೇಡಿ) ‘ವಿಳಂಬ ನೀತಿ’ ಎಂದು ತಿರಸ್ಕರಿಸಿತು. ಜನ ಲೋಕಪಾಲ್‌ನಲ್ಲಿ ಪ್ರತಿಪಾದಿಸದೆ ಇರುವ ಯಾವ ಶಕ್ತಿಯುತ ಅಂಶವೂ ಮಸೂದೆಗೆ ಸೇರ ಬಾರದೆ? ಲೋಕಪಾಲಕ್ಕೆ ಸಂವಿಧಾನಾತ್ಮಕ ಸ್ಥಾನಮಾನ ಸಿಗಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿ ಯಾಗಬೇಕು; ಅದಕ್ಕೆ ಪಾರ್ಲಿಮೆಂಟಿನ ಜೊತೆಗೆ ರಾಜ್ಯಗಳ ಶಾಸನ ಸಭೆಗಳ ಒಪ್ಪಿಗೆಯೂ ಬೇಕು. ನಿಜ, ಆದರೆ ಹೀಗೆ ಸಂವಿಧಾನದ ಶಕ್ತಿ ಬರುವುದು ಭ್ರಷ್ಟಾಚಾರ ನಿರ್ಮೂಲನೆಗೆ ಮತ್ತಷ್ಟು ಪೂರಕವಲ್ಲವೆ? ಇದ್ಯಾವುದನ್ನೂ ಪರಿಭಾವಿಸದಷ್ಟು ಹಟ ಮತ್ತು ಆತ್ಮರತಿಗಳು ಯಾವುದೇ ಹೋರಾಟಕ್ಕೆ ಆರೋಗ್ಯಕರವಲ್ಲ. ಸರ್ಕಾರವನ್ನು ಬಗ್ಗಿಸಿದ ಅಣ್ಣಾ ತಂಡಕ್ಕೆ ಹಟ, ಮತ್ತು ಆತ್ಮರತಿಯ ಅಂಶಗಳು ಸೇರಿಕೊಂಡರೆ, ಸೇರಿಕೊಂಡದ್ದನ್ನು ಗುರುತಿಸಿ ಹೇಳುವ ವಿವೇಕವನ್ನು ನಮ್ಮ ಸಮಾಜ ಕಳೆದುಕೊಂಡರೆ ಅದು ಸಮೂಹ ಸನ್ನಿಯಾಗುವ ಅಪಾಯವಿದೆ.

ತಮ್ಮ ಜನಲೋಕಪಾಲ್ ಮಸೂದೆಯ ಕರಡನ್ನು ಕೇಂದ್ರವಾಗಿಟ್ಟುಕೊಂಡು ಅದನ್ನು ಮತ್ತಷ್ಟು ಬಲಗೊಳಿಸುವ ಯಾವುದೇ ಪ್ರಕ್ರಿಯೆಗೆ ಪೂರಕವಾಗಿದ್ದರೆ ಹಟ ಮತ್ತು ಆತ್ಮರತಿಯ ಪ್ರಶ್ನೆ ಏಳುವುದೇ ಇಲ್ಲ. ಆದರೆ ಅಂತಹ ಸನ್ನಿವೇಶ ನಿರ್ಮಾಣವಾಗಲಿಲ್ಲ ಎಂಬುದೇ ವಿಷಾದದ ಸಂಗತಿ. ಈಗ ನೋಡಿ; ಅಣ್ಣಾ ಹಜಾರೆಯವರ ಮೊದಲ ಉಪವಾಸ ಸತ್ಯಾಗ್ರಹವು ಜಂತರ್‌ ಮಂತರ್‌ನಲ್ಲಿ ಆರಂಭವಾದ ಸಂದರ್ಭದಲ್ಲಿ ‘ಮಹಾತ್ಮ ಅಣ್ಣಾ ಹಜಾರೆ’ ಎಂಬ ಶೀರ್ಷಿಕೆಯ ಕರಪತ್ರಗಳು ಬಂದವು. ಗಾಂಧೀಜಿಯವರನ್ನು ‘ಮಹಾತ್ಮ’ ಎಂದು ಕರೆಯುವ ವೇಳೆಗೆ ಅವರು ಅದೆಷ್ಟು ವರ್ಷಗಳ ಕಾಲ ಪರಿಶುದ್ಧ ಪರಿಶ್ರಮದಲ್ಲಿ ತೊಡಗಿಸಿಕೊಂಡಿದ್ದರೆಂಬುದು ಸೂರ್ಯ ಸ್ಪಷ್ಟ ಸಂಗತಿಯಾಗಿದೆ. ರಾಮಲೀಲಾ ಮೈದಾನದಲ್ಲಿ ಅಣ್ಣಾ ಹಜಾರೆಯವರು ಸತ್ಯಾಗ್ರಹ ಮಾಡಿದಾಗ ಅನೇಕರ ತಲೆಗೆ ‘ನಾನೇ ಅಣ್ಣ’ ಎಂದು ಬರೆದ ಟೋಪಿಗಳು ಬಂದವು; ಟೀಷರಟುಗಳು ಬಂದವು. ಗಾಂಧೀಜಿಯವರು ‘ನಾನೇ ಗಾಂಧೀ’ ಎಂದು ಬರೆದು ಮೆರೆಸಲು ಎಂದೂ ಅವಕಾಶ ಕೊಟ್ಟಿರಲಿಲ್ಲವೆಂಬ ಅಂಶ ನೆನಪಾದರೆ ಸಾಕು.

ಈ ಮಧ್ಯೆ ಹರಿಯಾಣದ ಹಿಸ್ಸಾರ್‌ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿ ಪ್ರಚಾರಕ್ಕೆ ಮುಂದಾದ ಅಣ್ಣಾ ತಂಡದ ಕ್ರಮದಿಂದ ಸ್ವಯಂ ಒಡಕನ್ನು ಆಹ್ವಾನಿಸಿತು. ಕಾಂಗ್ರೆಸ್ ಗೆಲ್ಲಲು ಸಾಧ್ಯವೇ ಇಲ್ಲದಿದ್ದ ಹಿಸ್ಸಾರ್‌ನಲ್ಲಿ ಕಾಂಗ್ರೆಸ್ ವಿರೋಧ! ಇದರಿಂದ ಸೀಮಿತ ಮತಗಳಾದರೂ ಬಿ.ಜೆ.ಪಿ.ಯ ಪಾಲಾಗುವಂತೆ ಮಾಡಿದ ಕ್ರಮ! ಜನಲೋಕಪಾಲ್ ಗಾಗಿ ಈ ಕ್ರಮ ಎಂದು ಹೇಳುವುದು ರಾಜಕೀಯ ಮುತ್ಸದ್ದಿತನವಲ್ಲ. ಆಳುವ ಪಕ್ಷ (ಕಾಂಗ್ರೆಸ್) ಇಂತಹ ದೌರ್ಬಲ್ಯಗಳಿಗಾಗಿಯೇ ಕಾಯುತ್ತದೆಯೆಂದು ಇವರಿಗೇಕೆ ಹೊಳೆಯಲಿಲ್ಲ. ಅಣ್ಣಾ ಹಜಾರೆಯವರನ್ನು ಬಂಧಿಸಿ ತಿಹಾರ್ ಜೈಲಿಗೆ ಕಳಿಸಿ ಕಾಂಗ್ರೆಸ್ ಸರ್ಕಾರ ದೊಡ್ಡ ತಪ್ಪು ಮಾಡಿತ್ತು. ಅಣ್ಣಾ ತಂಡದ ಸಣ್ಣಪುಟ್ಟ ತಪ್ಪುಗಳಿಗಾಗಿ ಹೊಂಚು ಹಾಕುತ್ತಾ ಕಾಯುತ್ತಿತ್ತು. ಅಣ್ಣಾ ತಂಡದ ವಕ್ತಾರರು ಕಾಂಗ್ರೆಸ್ಸಿನವರನ್ನು ಹೆಚ್ಚು ಕಾಲ ಕಾಯಿಸಲಿಲ್ಲ. ಚರ್ಚೆಯ ಹಂತದಲ್ಲೇ ಅನುಚಿತ ಆರೋಪಗಳನ್ನು ಮಾಡಿದರು. ಸಂಸದರು ಮತ್ತು ಕೆಲಸಚಿವರ ಬಗ್ಗೆ ಅವಹೇಳನ ಕಾರಿ ಭಾಷೆ ಬಳಸಿದರು. ತಾವು ಹೇಳಿದಂತೆ ಪಾರ್ಲಿಮೆಂಟು ಕೇಳಬೇಕು ಎಂದು ಹಟ ಮಾಡಿದರು. ಆರು ದಶಕದ ರಾಜಕೀಯ ರಾಡಿಯಲ್ಲಿ ಮುಳುಗೆದ್ದು ಬಂದ ಕಾಂಗ್ರೆಸ್ಸಿಗರು ತಿರುಗೇಟು ನೀಡತೊಡಗಿದರು. ಎರಡೂ ಕಡೆಯ ಬಾಯಿ ದೊಡ್ಡದಾಗುತ್ತ ಭ್ರಷ್ಟಾಚಾರದ ವಿಷಯ ಪ್ರತಿಷ್ಠೆಯ ಪ್ರಶ್ನೆಯಾಯಿತು. ಪಾರ್ಲಿಮೆಂಟಿನ ಸಹಜ ಪ್ರತಿಷ್ಠೆಯನ್ನು ಒತ್ತೆಯಿಡಲು ಯಾವ ರಾಜಕೀಯ ಪಕ್ಷದವರೂ ಸಿದ್ಧರಿರಲಿಲ್ಲ. ಸಂವಿಧಾನಕ್ಕೆ ಅದು ಅಪಚಾರವೆಂದು ತಜ್ಞರು ಪ್ರತಿಪಾದಿಸಿದ್ದೂ ಸೇರಿಕೊಂಡು ಕೇಂದ್ರ ಸರ್ಕಾರದ ಕಾರ್ಯತಂತ್ರಕ್ಕೆ ತಾನಾಗಿಯೇ ಕುಮ್ಮಕ್ಕು ಸಿಕ್ಕಿಬಿಟ್ಟಿತು. ಪಾರ್ಲಿಮೆಂಟ್ ಪ್ರಕ್ರಿಯೆಯಿಲ್ಲದೆ ಯಾವ ಮಸೂದೆಗೂ ಮೊದಲೇ ಒಪ್ಪಿಗೆ ಕೊಡಲಾಗದೆಂದೂ, ತನ್ನ ಮಸೂದೆಯು ಸಂಸತ್ತಿನ ಸ್ಥಾಯಿ ಸಮಿತಿಯ ಮುಂದಿರುವುದರಿಂದ ಎಲ್ಲ ಸಲಹೆಗಳೂ ಆ ಸಮಿತಿಗೆ ಹೋಗಬೇಕೆಂದೂ ಸರ್ಕಾರ ಹಟ ಮಾಡಿತು. ತಾತ್ವಿಕವಾಗಿ ಹಾಗೂ ತಾರ್ಕಿಕವಾಗಿ ಇದು ಸರಿಯಿದ್ದರೂ ಅಣ್ಣಾ ಹಜಾರೆಯವರ ಸತ್ಯಾಗ್ರಹವನ್ನು ನಿಲ್ಲಿಸಿ ಅವರ ಅಮೂಲ್ಯ ಜೀವವನ್ನು ಉಳಿಸಬೇಕಾದ್ದರಿಂದ ಪಾರ್ಲಿಮೆಂಟು ‘Sense of the house’ ಎಂಬ ಪರಿಭಾಷೆಯ ಮೂಲಕ ಅಣ್ಣಾ ತಂಡ ಒತ್ತಾಯಿಸಿದ ಅಂಶಗಳನ್ನು ಅನುಮೋದಿಸಿ ಸ್ಥಾಯಿ ಸಮಿತಿಗೆ ಕಳಿಸಿತು. ಈ ಅನುಮೋದನೆಯನ್ನು ಅಣ್ಣಾ ತಂಡದ ಅಪೂರ್ವ ವಿಜಯ ಎಂಬಂತೆ ಬಣ್ಣಿಸಲಾಯಿತು. ಆದರೆ ತಾನು ಹಟಹಿಡಿದ ಪಾರ್ಲಿಮೆಂಟ್ ಪ್ರಕ್ರಿಯೆ ನಡೆದದ್ದರಿಂದ ಕಾಂಗ್ರೆಸ್ ಮುಸಿ ಮುಸಿ ನಗುತ್ತಿತ್ತು.

ಈಗ ಬಲಿಷ್ಠ ಲೋಕಪಾಲ್ ಕಾಯಿದೆ ಮಾಡದೆ ಬೇರೆ ದಾರಿಯಿಲ್ಲವೆಂಬ ಸ್ಥಿತಿ ನಿರ್ಮಾಣವಾಗಿದೆ. ಅಣ್ಣಾ ತಂಡದ ಹೋರಾಟ, ಮಾಧ್ಯಮಗಳ ಸುದ್ದಿವೈಭವಗಳ ಪಾತ್ರ ಕೆಲಸ ಮಾಡಿದೆ. ಆದರೆ ಸರ್ಕಾರ ಮತ್ತು ಅಣ್ಣಾ ತಂಡ – ಎರಡೂ ನಿರ್ಲಕ್ಷಿಸಿದ ಮುಖ್ಯ ವಿಷಯಗಳನ್ನು ಗಮನಿಸಬೇಕು; ಅಣ್ಣಾ ತಂಡದ ಜನಲೋಕಪಾಲ್ ಮಸೂದೆಯ ಕರಡು ಅಪ್ಪಿ ತಪ್ಪಿಯೂ ಖಾಸಗಿವಲಯದ ಭ್ರಷ್ಟಾಚಾರವನ್ನು ಪ್ರಸ್ತಾಪಿಸುವುದಿಲ್ಲ. ಕೇಂದ್ರ ಸರ್ಕಾರದಿಂದ ಇಂಥ ಪ್ರಸ್ತಾಪವನ್ನು ನಿರೀಕ್ಷಿಸುವಂತಿಲ್ಲ. ಈ ದೇಶದಲ್ಲಿ ಜಾಗತೀಕರಣದ ಹೆಸರಿನಲ್ಲಿ ಖಾಸಗಿ ಆರ್ಥಿಕ ಪ್ರಭುತ್ವಕ್ಕೆ ಬುನಾದಿ ಹಾಕಿ ಜನ ಪ್ರಭುತ್ವವನ್ನು ಅಣಕಿಸುವಂತೆ ಮಾಡಿದ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿರುವಾಗ ಖಾಸಗಿ ವಲಯದ ವಿರುದ್ಧವಾದ ಕ್ರಮಗಳನ್ನು ಹೇಗೆ ನಿರೀಕ್ಷಿಸಲಾದೀತು? ಒಂದು ಮಾಹಿತಿಯ ಪ್ರಕಾರ ೨೦೦೫ ರಿಂದ ೨೦೧೦ರೊಳಗೆ ಬಹು ರಾಷ್ಟ್ರೀಯ ಕಂಪನಿಗಳಿಗೆ ೨೧ ಲಕ್ಷ ಕೋಟಿ ರೂಪಾಯಿಗಳ ತೆರಿಗೆ ವಿನಾಯಿತಿ ನೀಡಲಾಗಿದೆ. ಇಷ್ಟೆಲ್ಲ ರಿಯಾಯಿತಿ ಪಡೆದ ಬಂಡವಾಳಶಾಹಿಯ ಭ್ರಷ್ಟಾಚಾರಗಳಿದ್ದರೆ ಅದಕ್ಕೂ ಕಡಿವಾಣ ಹಾಕಬೇಕಲ್ಲವೆ? ಮನಮೋಹನ ಸಿಂಗ್ ಸರ್ಕಾರಕ್ಕೆ ಮನಸ್ಸಿಲ್ಲದಿದ್ದರೆ, ಅಣ್ಣಾ ತಂಡಕ್ಕಾದರೂ ಇಂಥ ಮನಸ್ಸು ಬೇಕಲ್ಲವೆ? ಇಂದು ಸಾರ್ವಜನಿಕ (ಸರ್ಕಾರಿ) ವಲಯಕ್ಕಿಂತ ಖಾಸಗಿ ವಲಯವೇ ವ್ಯಾಪಕವಾಗುತ್ತಿರುವುದರಿಂದ ಲೋಕಪಾಲ್ ವ್ಯಾಪ್ತಿಯಿಂದ ಅದನ್ನು ಹೇಗೆ ಬಿಡುತ್ತೀರಿ? ಉದಾಹರಣೆಗೆ ಕೇಳುವುದಾದರೆ, ೨ಜಿ ಹಗರಣದಲ್ಲಿ ಖಾಸಗಿ ವಲಯದ ಹುನ್ನಾರವಿಲ್ಲವೆ? ಬೃಹತ್ ಕಂಪನಿಗಳ ಮಾಲೀಕರು ಎಷ್ಟು ಜನ ಜೈಲಲ್ಲಿದ್ದಾರೆ. ಸಿ.ಬಿ.ಐ. ತನಿಖೆಗೆ ಒಳಗಾಗುವುದು ಒಂದು ವಿಷಯ. ಆದರೆ ಜನಲೋಕಪಾಲ್ ಮತ್ತು ಸರ್ಕಾರಿ ಲೋಕಪಾಲ್ ಈ ಬಗ್ಗೆ ಯಾಕೆ ಮೌನವಾಗಿವೆ?

ಸೇವಾಕ್ಷೇತ್ರಗಳಾಗಿದ್ದ ಶಿಕ್ಷಣ ಮತ್ತು ಆರೋಗ್ಯ ವಲಯಗಳನ್ನೇ ನೋಡಿ. ಮುಕ್ತ ಮಾರುಕಟ್ಟೆಯ ಖಾಸಗೀಕರಣ ಬಂದ ಮೇಲೆ ಈ ಎರಡೂ ಕ್ಷೇತ್ರಗಳೂ ‘ಕೈಗಾರಿಕೆ’ಗಳಾಗಿವೆ; ಜನರ ಸುಲಿಗೆ ಮಾಡುತ್ತಿವೆ. ಇದೂ ಭ್ರಷ್ಟಾಚಾರವಲ್ಲವೆ? ಖಾಸಗಿ ವಲಯ ಮತ್ತು ಸರ್ಕಾರದ ಸಂಬಂಧದಲ್ಲಿ ಕಂಡುಬರುವ ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬರಬಹುದು. ಅದೂ ಸರ್ಕಾರ ತಪ್ಪು ಮಾಡಿದ್ದರೆ! ಅದರಾಚೆಗೆ ಚಾಚಿದ ಭ್ರಷ್ಟಾಚಾರದ ಬಹುಮುಖತೆಗೆ ಏನು ಪರಿಹಾರ?

ಜನಲೋಕಪಾಲ್ ಮತ್ತು ಸರ್ಕಾರಿ ಲೋಕಪಾಲ್ ಸ್ವಯಂ ಸೇವಾ ಸಂಸ್ಥೆಗಳ ಬಗ್ಗೆಯೂ ಪ್ರಸ್ತಾಪಿಸುವುದಿಲ್ಲ. ಎಲ್ಲ ಸ್ವಯಂಸೇವಾ ಸಂಸ್ಥೆಗಳೂ (ಎನ್.ಜಿ.ಓ) ಅಡ್ಡಹಾದಿ ಹಿಡಿದಿವೆಯೆಂದು ನಾನು ಹೇಳುವುದಿಲ್ಲ. ವಿದೇಶದಿಂದ ಮಿತಿಮೀರಿದ ಹಣದ ಹೊಳೆ ಯಾಕೆ ಈ ಸಂಸ್ಥೆಗಳತ್ತ ಬರುತ್ತಿದೆ ಎಂಬ ಸಂಶಯವಂತೂ ಇದೆ. ಈ ಸಂಶಯಕ್ಕೆ ಉತ್ತರವೆಂಬಂತೆ ಎಪ್ಪತ್ತರ ದಶಕದಲ್ಲಿ ಆಗಿನ ವಿಶ್ವಬ್ಯಾಂಕ್ ಅಧ್ಯಕ್ಷ ರಾಬರ್ಟ್ ಮೆಕ್‌ನಮಾರ ನೇತೃತ್ವದಲ್ಲಿ “Voluntary Agencies Movement” ಅನ್ನು ಬೆಳೆಸಿ ಬಡ ಹಾಗೂ ಅಭಿವೃದ್ಧಿಶೀಲ ದೇಶಗಳಲ್ಲಿ ಜನರು ಕ್ರಾಂತಿಕಾರಿ ಚಳವಳಿಗಳಿಗೆ ತೊಡಗಿಕೊಳ್ಳದಂತೆ ತಡೆಯಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ. ವಿಶ್ವಬ್ಯಾಂಕ್‌ನ ಈ ನಿರ್ಣಯಕ್ಕನುಗುಣವಾಗಿ ನಮ್ಮ ದೇಶಕ್ಕೂ ಹೇರಳ ವಿದೇಶಿ ಹಣ ಬರುತ್ತಿದೆ. ಹೀಗೆ ವಿದೇಶಿ ಹಣ ಪಡೆದು ಕ್ರಮ ತಪ್ಪಿ ನಡೆದಿದ್ದರೆ ಅದೂ ಭ್ರಷ್ಟಾಚಾರವೇ ಅಲ್ಲವೆ? ಒಂದು ಕಡೆ ಸಮಾಜ ಬದಲಾವಣೆಯ ಚಳವಳಿಗಳ ಶಕ್ತಿಯನ್ನು ಸಮಾಜಮುಖಿ ಕ್ರಿಯೆಯಿಂದಲೇ ಕುಂಠಿತಗೊಳಿಸುವುದು; ಇನ್ನೊಂದು ಕಡೆ ವಿದೇಶಿ ಹಣ ಪಡೆದು ಸ್ವಾರ್ಥ ಸಾಧಿಸುವುದು – ಹೀಗೆ ವರ್ತಿಸುವ ಸಂಸ್ಥೆಗಳನ್ನಾದರೂ ಲೋಕಪಾಲ್ ವ್ಯಾಪ್ತಿಗೆ ತರುವ ಅಗತ್ಯವಿಲ್ಲವೆ? ಈ ದಿಕ್ಕಿನಲ್ಲಿ ಚರ್ಚಿಸಬೇಕಲ್ಲವೆ?

ಹಾಗೆ ನೋಡಿದರೆ ಹಳ್ಳಿಪಳ್ಳಿಗಳಲ್ಲಿ ದುಡಿಯುವ ಎನ್.ಜಿ.ಓ.ಗಳ ಪಾಡೇ ಬೇರೆ. ಅರವಿಂದ ಕೇಜ್ರಿವಾಲ್, ಸಿಸೋಡಿಯಾ, ಕಿರಣ್ ಬೇಡಿಯಂಥವರ (ಮೂವರೂ ಅಣ್ಣಾ ಹಜಾರೆ ತಂಡ) ಎನ್.ಜಿ.ಓ.ಗಳ ಶ್ರೀಮಂತಿಕೆಯೇ ಬೇರೆ, ಅರವಿಂದ ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರು ಫೋರ್ಡ್ ಪೌಂಡೇಶನ್ನಿಂದ ಇತ್ತೀಚೆಗೆ ಪಡೆದ ೪ ಲಕ್ಷ ಡಾಲರ್‌ ಹಣದ ಮತ್ತು ತಮ್ಮ ‘ಕಬೀರ್’ ಸಂಸ್ಥೆಗೆ ೨೦೦೫ರಲ್ಲಿ ೧,೭೨,೦೦೦ ಡಾಲರ್, ೨೦೦೮ರಲ್ಲಿ ೧,೯೭,೦೦೦ ಡಾಲರ್ ಹಾಗೂ ೨೦೧೧ರಲ್ಲಿ ೨,೦೦,೦೦೦ ಡಾಲರ್ ಪಡೆದ ಬಗ್ಗೆ ಅವರ ಆದಾಯ – ಆಸ್ತಿ ವಿವರಗಳಲ್ಲಿ ಯಾಕೆ ಪ್ರಸ್ತಾಪಿಸಿಲ್ಲ ಎಂದು ಕೇಳಿದರೆ ಕೇಜರಿವಾಲ್ ‘ಕಣ್ತಪ್ಪು ಅಷ್ಟೆ’ ಎನ್ನುತ್ತಾರೆ (ದಿ ಹಿಂದೂ ೩೧-೮-೨೦೧೧) ಜೊತೆಗೆ ಭ್ರಷ್ಟಾಚಾರ ವಿರೋಧಿ ಆಂದೋಲನದ ಹಣ ಕೇಜರಿವಾಲ್‌ ಖಾತೆಗೆ ಸೇರುತ್ತದೆ. ಆದರೆ ಅದನ್ನು ಅವರೇನೂ ಮುಚ್ಚಿಟ್ಟಿಲ್ಲವೆನ್ನುವುದು ಮೆಚ್ಚತಕ್ಕ ಸಂಗತಿ. ಆದರೆ ಇಂತಹ ನಡವಳಿಕೆ ಅನುಮಾನಗಳಿಗೆ ಅವಕಾಶ ನೀಡಿದೆ. ಕಿರಣ್ ಬೇಡಿ ವಿವಿಧ ಸಮಾರಂಭಗಳಿಗೆ ಪಡೆದ ಪ್ರಯಾಣ ವೆಚ್ಚಕ್ಕೂ ಪ್ರಯಾಣಿಸಿದ ವೆಚ್ಚಕ್ಕೂ ವ್ಯತ್ಯಾಸವಿರುವುದು ಈಗ ವಿವಾದವಾಗಿದೆ. ಅವರು ನೀಡುವ ಸಮರ್ಥನೆ ಸಮಾಧಾನ ಪರವಾಗಿಲ್ಲ. ಇವಲ್ಲದೆ ಅಣ್ಣಾ ಹಜಾರೆಯವರು ತಮ್ಮ ನೇತೃತ್ವದ ಟ್ರಸ್ಟ್‌ನ ೨ ಲಕ್ಷಕ್ಕೂ ಹೆಚ್ಚು ಹಣವನ್ನು ಹುಟ್ಟುಹಬ್ಬಕ್ಕೆ ‘ದುರ್ಬಳಕೆ’ ಮಾಡಿಕೊಂಡರೆಂದು ಸಾವಂತ್ ಆಯೋಗ ಆಕ್ಷೇಪಿಸಿದ್ದನ್ನು ನೆನೆಯಬಹುದು. ಇವೆಲ್ಲ ಸಣ್ಣ ಸಂಗತಿಗಳು ಎನಿಸಬಹುದು. ಆದರೆ ಭ್ರಷ್ಟಾಚಾರ ವಿರೋಧಿ ನೇತಾರರ ವಿಶ್ವಾಸಾರ್ಹತೆಯ ಪ್ರಶ್ನೆ ಸಣ್ಣ ಸಂಗತಿಯಲ್ಲ. ತಮ್ಮದೇ ನೇತೃತ್ವದ ಸ್ವಯಂಸೇವಾ ಸಂಸ್ಥೆಗಳಲ್ಲಿ ಪಾರದರ್ಶಕತೆ ತರುವುದು ಮುಖ್ಯವಾಗಿರುವಂತೆಯೇ ಬೃಹತ್ ಮೊತ್ತದ ವಿದೇಶಿ ಹಣ ಪಡೆದು ‘ಸೇವೆ’ ಮಾಡುವ ಪರಿಯು ಶಂಕಾಸ್ಪದವಾಗುತ್ತದೆ. ಆದ್ದರಿಂದ ಈ ರೀತಿಯ ಸಂಸ್ಥೆಗಳೂ ಲೋಕಪಾಲ್ ವ್ಯಾಪ್ತಿಗೆ ಬರಬೇಕಲ್ಲವೆ?

ಇನ್ನು ಕಪ್ಪು ಹಣದ ವಿಚಾರ. ಎಲ್.ಕೆ. ಅಡ್ವಾನಿಯವರು ವಿದೇಶಿ ಬ್ಯಾಂಕ್‌ನಲ್ಲಿರುವ ಭಾರತೀಯರ ಕಪ್ಪು ಹಣದ ಮಾಹಿತಿ ಬಹಿರಂಗಕ್ಕೆ ಮತ್ತು ವಾಪಸ್ ತರುವುದಕ್ಕೆ ಒತ್ತಾಯ ಮಾಡುತ್ತಿದ್ದಾರೆ. ತಮ್ಮದೇ ಎನ್.ಡಿ.ಎ. ಸರ್ಕಾರ ಇದ್ದಾಗ ಈ ಬಗ್ಗೆ ಯಾಕೆ ಯೋಚಿಸಲಿಲ್ಲವೆಂಬ ಪ್ರಶ್ನೆ ಪ್ರಸ್ತುತವಾದರೂ ಆಡಳಿತಪಕ್ಷವು ಈ ಪ್ರಶ್ನೆಯನ್ನೇ ಉತ್ತರವೆಂದು ಪರಿಗಣಿಸಬಾರದು ಮತ್ತು ಎನ್.ಡಿ.ಎ. ಹಾಗೂ ಬಿ.ಜೆ.ಪಿ. ತನ್ನ ಕಾಲದ ತಪ್ಪನ್ನು ಮರೆಮಾಚಬಾರದು. ಕಪ್ಪು ಹಣ ಬಯಲಾಗಲೇಬೇಕು. ಬಾಬಾ ರಾಮದೇವ್ ಈ ಬಗ್ಗೆ ಸತ್ಯಾಗ್ರಹ ಮಾಡಲು ಹೋಗಿ ಸರ್ಕಾರದ ಬೋನಿನಲ್ಲಿ ಸಿಕ್ಕಿಬಿದ್ದರು. ಆಗ ಸರ್ಕಾರದ ವಿರುದ್ಧ ಜನಕ್ಕೆ ಸಿಟ್ಟುಬರಬೇಕಾಗಿತ್ತು. ಆದರೆ ಹಜಾರೆ ಬಂಧನದ ಸಂದರ್ಭದಲ್ಲಿ ಸ್ಫೋಟಗೊಂಡ ಸಿಟ್ಟಿನ ಪ್ರಮಾಣಕ್ಕೆ ಹೋಲಿಸಿದರೆ ರಾಮದೇವ್‌ ಬಂಧನ ಕಾಲದ ಕೋಪ ಔಪಚಾರಿಕವಾಗಿತ್ತು. ಇದಕ್ಕೆ ಮುಖ್ಯ ಕಾರಣ – ರಾಮದೇವ್ ಅವರ ೧೧೦೦ ಕೋಟಿ ಮತ್ತು ದ್ವೀಪದ ಒಡೆತನ ಬಹಿರಂಗವಾದದ್ದು, ಮತ್ತು ವಿಚಿತ್ರ ವರ್ತನೆ ಎಂದು ನನ್ನ ಭಾವನೆ. ಇಲ್ಲಿಯೇ ವಿಶ್ವಾಸಾರ್ಹತೆಯ ಪ್ರಶ್ನೆ ಮುಖ್ಯವಾಗುವುದು. ಅದೇನೇ ಇದ್ದರೂ ಅದ್ವಾನಿ, ರಾಮದೇವ್ ಮುಂತಾದವರು ಎತ್ತಿದ ಕಪ್ಪು ಹಣದ ಪ್ರಶ್ನೆ ಮಹತ್ವದ್ದೇ ಆಗಿದೆ.

ಆದರೆ ವಿದೇಶಿ ಬ್ಯಾಂಕುಗಳಲ್ಲಿರುವ ಸ್ವದೇಶಿಯರ ಕಪ್ಪು ಹಣ ಕುರಿತು ದನಿ ಎತ್ತುವವರು ಸ್ವದೇಶದಲ್ಲೇ ಇರುವ ‘ಧಾರ್ಮಿಕ ಸ್ವಿಸ್ ಬ್ಯಾಂಕ್’ಗಳ ಬಗ್ಗೆ ಯಾಕೆ ಚಕಾರ ಎತ್ತುವುದಿಲ್ಲ? ಭಕ್ತರ ಹೆಸರಿನಲ್ಲಿ ಕೋಟಿಗಟ್ಟಲೆ ಹಣವನ್ನು ಧಾರ್ಮಿಕ ಸಂಸ್ಥೆ ಹಾಗೂ ದೇವಾಲಯಗಳಿಗೆ ಕೊಟ್ಟರೆ ಮತ್ತು ಸ್ವೀಕರಿಸಿದರೆ ಅದು ಭ್ರಷ್ಟಾಚಾರವಲ್ಲವೆ? ಕೆಲವು ರಾಜಕಾರಣಿಗಳು ತಮ್ಮ ಕಪ್ಪು ಹಣವನ್ನು ಮಠಮಾನ್ಯಗಳ ಸುರಕ್ಷಿತ ತಾಣದಲ್ಲಿ ಇಡುತ್ತಾ ಬಂದದ್ದು ಸುಳ್ಳೆ? ಮಂದಿರ, ಮಸೀದಿ, ಚರ್ಚ್ ಮುಂತಾದ ಯಾವುದೇ ಧರ್ಮದ ಸ್ಥಾನಗಳಾಗಲಿ ತಾವು ಕ್ರೋಡೀಕರಿಸಿದ ಸಂಪತ್ತಿಗೆ ಲೆಕ್ಕಕೊಡಬೇಡವೆ? ತೆರಿಗೆ ಕಟ್ಟಬೇಡವೆ? ಈ ಎಲ್ಲ ಅಂಶಗಳನ್ನು ಆಧರಿಸಿದ ಕ್ರಾಂತಿಕಾರಿ ಕಾಯಿದೆಯ ಅಗತ್ಯವಿಲ್ಲವೆ? ಇಂತಹ ಪ್ರಶ್ನೆಗಳನ್ನು ಕಡೇ ಪಕ್ಷ ಚರ್ಚೆಗೂ ಎತ್ತಿ ಕೊಳ್ಳುವ ನೈತಿಕ ಧೈರ್ಯವನ್ನು ಭ್ರಷ್ಟಾಚಾರ ವಿರೋಧಿ ನೇತಾರರು ತೋರಿಸುತ್ತಿಲ್ಲ. ನಮ್ಮ ದೇಶದಲ್ಲಿ ಧರ್ಮವೆನ್ನುವುದು ಸೂಕ್ಷ್ಮ ಸಂಗತಿಯಾಗಿರುವುದು ಒಂದು ಕಾರಣವಾದರೆ ಎಲ್ಲ ಧರ್ಮಗಳಿಂದಲೂ ರಾಜಕೀಯ ಲಾಭ ಪಡೆಯುವುದು ಇನ್ನೊಂದು ಕಾರಣವಿರಬಹುದು. ಈ ಮಾತನ್ನು ನಾನು ಯಾವುದೇ ಒಂದು ಧರ್ಮಕ್ಕೆ ಸೀಮಿತಗೊಳಿಸುತ್ತಿಲ್ಲ. ಬಹುಸಂಖ್ಯಾತ, ಅಲ್ಪಸಂಖ್ಯಾತವೆನ್ನದೆ ಭ್ರಷ್ಟನೆಲೆಗಳನ್ನು ಬಯಲು ಮಾಡಲು ಅಗತ್ಯದ ಕಡೆ ಗಮನ ಸೆಳೆಯುತ್ತಿದ್ದೇನೆ.

ನಮ್ಮ ದೇಶದ ಭ್ರಷ್ಟಾಚಾರಕ್ಕಿರುವ ಪ್ರಮುಖ ಕಾರಣಗಳಲ್ಲಿ ಸಂಪತ್ತಿನ ಕ್ರೋಡೀಕರಣವೂ ಒಂದು. ಇದು ಖಾಸಗಿ ಆಸ್ತಿಗೆ ಸಂಬಂಧಿಸಿದ್ದು, ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಮುಂಚೂಣಿಗೆ ಬಂದ ನಗರಾಸ್ತಿಮಿತಿ ಮತ್ತು ಭೂಸುಧಾರಣೆಗಳು ಹಿನ್ನೆಲೆಗೆ ಸರಿದಿವೆ. ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ತಂದ ಉದಾರೀಕರಣ ನೀತಿಯಿಂದ ‘ಉಳ್ಳವರ ಉದರೀಕರಣ’ವೇ ಪ್ರಮುಖವಾಗಿದೆ. ನಮ್ಮ ದೇಶದ ಬಡತನ ಎಷ್ಟು ಹೆಚ್ಚಿದೆಯೆಂದರೆ ೩ ಜನರಲ್ಲಿ ಒಬ್ಬರು ಬಡತನ ರೇಖೆಯ ಕೆಳಗಿದ್ದಾರೆ. ಶೇ. ೪೧.೬ರಷ್ಟು ಜನರು ತೀರಾ ಬಡವರೆಂದು ಗುರುತಿಸಲಾಗಿದೆ. ೨೦೦೭ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಅರ್ಜುನ್ ಸೇನ್ ಗುಪ್ತ ವರದಿಯ ಪ್ರಕಾರ ೪೫.೫ ಕೋಟಿ ಜನರಿಗೆ ಒಪ್ಪೋತ್ತಿನ ಊಟವೇ ಗತಿ. ಇನ್ನೊಂದು ಮಾಹಿತಿ ಪ್ರಕಾರ ಶೇ. ೪೨ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಹಾಗಾದರೆ ಜಾಗತೀಕರಣದಿಂದ, ಆರ್ಥಿಕ ಸುಧಾರಣೆಯಿಂದ ಆದದ್ದಾದರೂ ಏನು? ಮೊದಲಿಂದ ಆಗುತ್ತಿದ್ದ ಖಾಸಗಿ ಸಂಪತ್ತಿನ ಕ್ರೋಡೀಕರಣ ಬೃಹದಾಕಾರವಾಯಿತು. ಅಡ್ಡಹಾದಿಯ ಆಸ್ತಿ-ಆದಾಯ ಗಳಿಕೆಯ ಹುನ್ನಾರಗಳು ಹೆಚ್ಚಿದವು. ಜೊತೆಗೆ ಭ್ರಷ್ಟಾಚಾರವೂ ಮಿತಿಮೀರಿತು.

ರಾಜಕೀಯ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಮೂಲ ಬೇರುಗಳು ನಮ್ಮ ಚುನಾವಣಾ ವ್ಯವಸ್ಥೆಯಲ್ಲಿವೆ. ಕೋಟಿಗಟ್ಟಲೆ ಹಣವಿಲ್ಲದೆ ಶಾಸನ ಸಭೆಗಾಗಲಿ ಸಂಸತ್ತಿಗಾಗಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬ ಅನಿಷ್ಟ ಹಂತವನ್ನು ಮುಟ್ಟಿದ ಆಯ್ಕೆ ಪ್ರಕ್ರಿಯೆ ಪ್ರಜಾಪ್ರಭುತ್ವವನ್ನೇ ಅಣಕಿಸುತ್ತಿದೆ. ಮತದಾರರಿಗೆ ಹಣಕೊಡುವುದು ಮತ್ತು ತೆಗೆದುಕೊಳ್ಳುವುದು ಅನಿವಾರ್ಯ ಆಚರಣೆಯಾಗಿಬಿಟ್ಟಿದೆ. ಜೊತೆಗೆ ಜಾತಿ-ಧರ್ಮಗಳ ವಶೀಲಿಬಾಜಿ ಕ್ರಿಮಿನಲ್‌ಗಳ ಕಾರುಬಾರು. ಎತ್ತ ಸಾಗುತ್ತಿದೆ ನಮ್ಮ ಸಮಾಜ?

ಅಣ್ಣಾ ಹಜಾರೆ ತಂಡ ಈಗ ಚುನಾವಣಾ ಸುಧಾರಣೆಯನ್ನು ಕೈಗೆತ್ತಿಕೊಂಡಿದೆ. ಗೆದ್ದ ಅಭ್ಯರ್ಥಿಯನ್ನು ವಾಪಸ್ ಕರೆಸಿಕೊಳ್ಳುವ, ನಿರಾಕರಿಸುವ ಹಕ್ಕು ಇರಬೇಕೆಂದು ಕೇಳುತ್ತಿದೆ. ಇದು ಅಷ್ಟು ಸುಲಭದ ಹಾಗೂ ಶುದ್ಧ ಕೆಲಸವಾದೀತೆಂದು ನನಗನ್ನಿಸುವುದಿಲ್ಲ. ಒಂದು ಕ್ಷಣ ಯೋಚಿಸೋಣ, ಗೆದ್ದ ಅಭ್ಯರ್ಥಿಯನ್ನು ವಾಪಸ್ ಕರೆಸಿಕೊಳ್ಳಬೇಕೆಂದರೆ ಅವನು ಕೆಟ್ಟವನಾಗಿರಬೇಕು; ಆಯ್ಕೆ ಮಾಡುವಾಗ ವಿವೇಕದಿಂದ ಮತ ಚಲಾಯಿಸದವರು ಆಮೇಲೆ ವಿವೇಕವನ್ನು ಸ್ಥಾಪಿಸಲು ಹೋಗುತ್ತಾರೆಯೆ? ಹೋದರೂ ಅದರ ಹಿಂದಿನ ಒತ್ತಡಗಳೇನು? ಸೋತ ಅಭ್ಯರ್ಥಿಗಳ ಒತ್ತಾಸೆ, ಒತ್ತಡ, ಬೆಂಬಲಗಳನ್ನೂ ಇದು ಒಳಗೊಳ್ಳುತ್ತಲ್ಲವೆ? ಕಡೆಗೆ ಇದು ಸಹ ಮೊದಲ ಚುನಾವಣೆಯ ಪುನರಾವರ್ತನೆಯೇ ಆಗುತ್ತದೆ. ಆದ್ದರಿಂದ ಗೆದ್ದ ಅಭ್ಯರ್ಥಿಯನ್ನು ವಾಪಸ್ ಕರೆಸಿಕೊಳ್ಳುವ ಹಕ್ಕು ಅಗತ್ಯವೆಂದು ನನಗನ್ನಿಸುವುದಿಲ್ಲ. ಗೆದ್ದ ಅಭ್ಯರ್ಥಿಯನ್ನು ವಾಪಸ್ ಕರೆಸುವುದಕ್ಕಿಂತ ಉತ್ತಮ ಅಭ್ಯರ್ಥಿಯನ್ನು ಗೆಲ್ಲಿಸುವ ಶುದ್ಧ ಪ್ರಕ್ರಿಯೆಯೇ ಮುಖ್ಯ. ಚುನಾವಣೆಯ ನಂತರ ಶುದ್ದೀಕರಣಕ್ಕೆ ತೊಡಗುವ ಬದಲು ಚುನಾವಣೆಯ ಶುದ್ದೀಕರಣಕ್ಕೇ ತೊಡಗಬೇಕು. ಭ್ರಷ್ಟಾಚಾರ ಮುಕ್ತ ಚುನಾವಣೆ ನಡೆಯುವಂತಹ ಕಾಯಿದೆಯ ಜೊತೆಗೆ ಜನ ಜಾಗೃತಿಯ ಕೆಲಸ ಕೈಗೊಳ್ಳಬೇಕು. ಜನಜಾಗೃತಿಯು ಒಂದು ನಿರಂತರ ಪ್ರಕ್ರಿಯೆಯಾಗಿ ನಡೆಯುತ್ತಲೇ ಇರಬೇಕು. ಆದರೆ ಚುನಾವಣಾ ವ್ಯವಸ್ಥೆಯನ್ನು ಭ್ರಷ್ಟ ಮುಕ್ತ ಮಾಡುವ ಕಠಿಣ ಕಾಯಿದೆ ಕೂಡಲೇ ರೂಪುಗೊಂಡು ಅದು ಜನಜಾಗೃತಿಗೆ ಪೂರಕ ಪ್ರೇರಣೆಯೂ ಆಧಾರವೂ ಆಗಬೇಕು.

ಹಾಗಾದರೆ ಭ್ರಷ್ಟಾಚಾರ ಮುಕ್ತ ಚುನಾವಣೆಗೆ ಏನೆಲ್ಲ ಮಾಡಬೇಕು? ಇದು ಸರಳ ಪ್ರಶ್ನೆಯಲ್ಲ. ಒಬ್ಬಿಬ್ಬರು ಉತ್ತರಿಸಿ ಪರಮಾನು ಹೊರಡಿಸುವ ಪ್ರವೃತ್ತಿಯದೂ ಅಲ್ಲ. ಚುನಾವಣಾ ಆಯೋಗವು ಕಾಲಕಾಲಕ್ಕೆ ಕೆಲವು ಕಠಿಣ ನಿಯಮಗಳನ್ನು ಮಾಡಿದ್ದರೂ ಯಾಕೆ ಫಲಪ್ರದವಾಗಿಲ್ಲವೆಂಬುದನ್ನೂ ಯೋಚಿಸಬೇಕು. ಚುನಾವಣೆಗಾಗಿ ಕಳ್ಳ ಹಣ ಹಂಚಲು ಬಂದದ್ದನ್ನು ಪತ್ತೆ ಮಾಡಿದ ಪ್ರಕರಣಗಳುಂಟು; ನಿಗದಿತ ಮೊತ್ತವನ್ನು ಮಾತ್ರ ಖರ್ಚು ಮಾಡಬೇಕೆಂಬ ಕಾನೂನು ಉಂಟು. ಕ್ರಿಮಿನಲ್‌ಗಳೆಂದು ಸಾಬೀತಾದವರು ಸ್ಪರ್ಧಿಸಬಾರದೆಂಬ ನಿಯಮವುಂಟು. ಆದರೆ ಕೋಟ್ಯಾಂತರ ಹಣ ಖರ್ಚಾಗುತ್ತದೆ. ಆರೋಪಿಯಾಗಿ ಜೈಲಲ್ಲಿದ್ದವರು ಸಹ ಗೆಲ್ಲುತ್ತಾರೆ. (ಅಪರಾಧಿ ಅಲ್ಲ ಆರೋಪಿ ಮಾತ್ರ ಎಂಬ ಸಮಜಾಯಿಷಿ ಇದೆ). ಇಲ್ಲಿ ರಾಜಕೀಯ ಪಕ್ಷಗಳ ಜವಾಬ್ದಾರಿ ತುಂಬಾ ಮುಖ್ಯವಾಗುತ್ತದೆ. ವಿಷಾದದ ಸಂಗತಿಯೆಂದರೆ ನಮ್ಮ ದೇಶದ ಬಹುಪಾಲು ರಾಜಕೀಯ ಪಕ್ಷಗಳು ಸಿದ್ಧಾಂತರಹಿತ ‘ರಾಜಕೀಯ ಗುಂಪು’ಗಳಾಗಿವೆ. ಮೊದಲು ಎಡಪಕ್ಷಗಳು ಮತ್ತು ಬಿ.ಜೆ.ಪಿ.ಗೆ ಸೈದ್ಧಾಂತಿಕ ಬದ್ಧತೆಯಿತ್ತು. ಈ ಎರಡೂ ಪಕ್ಷಗಳು ಪರಸ್ಪರ ವಿರುದ್ಧ ಸಿದ್ಧಾಂತಗಳಿಗೆ ಬದ್ಧವಾಗಿದ್ದವು. ಅವುಗಳನ್ನು ಒಪ್ಪುವುದೂ ಬಿಡುವುದೂ ಚರ್ಚೆಯ ವಿಷಯ. ಆದರೆ ಈಗ ಏನಾಗಿದೆ ನೋಡಿ. ಬಿ.ಜೆ.ಪಿ. ತನ್ನ ಸಿದ್ಧಾಂತವನ್ನು ‘ಹಿಡನ್ ಅಜೆಂಡಾ’ಗೆ (ರಹಸ್ಯ ಕಾರ್ಯಸೂಚಿ) ಸೇರಿಸಿಕೊಂಡು ಸೋಗು ಹಾಕಿದ ಸರ್ಕಾರಗಳನ್ನು ಮುಂದು ಮಾಡಿದೆ. ಕರ್ನಾಟಕದ ಬಿ.ಜೆ.ಪಿ. ಸರ್ಕಾರವಂತೂ ಹಿಂದೆ ಸರ್ಕಾರ ನಡೆಸಿದವರೇ ನಾಚುವಷ್ಟು ಭ್ರಷ್ಟಾಚಾರದ ಹಗರಣಗಳಲ್ಲಿ ಸಿಕ್ಕಿಕೊಂಡಿದೆ. ಸದ್ಯಕ್ಕೆ ಎಡಪಕ್ಷಗಳಲ್ಲಿ ಮಾತ್ರ ಸೈದ್ಧಾಂತಿಕ ಬದ್ಧತೆ ಕಾಣಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ನಮ್ಮ ರಾಜಕೀಯ ಪಕ್ಷಗಳು ಚುನಾವಣೆಗೆ ಎಂತಹ ಅಭ್ಯರ್ಥಿಯನ್ನು ಆರಿಸುತ್ತವೆ? ಹಣ ಬಲ, ಜಾತಿ ಬಲ ಇರುವವರೇ ಅಭ್ಯರ್ಥಿಗಳು! ಈ ಪರಿಸ್ಥಿತಿ ಬದಲಾಗಬೇಕು. ರಾಜಕೀಯ ಪಕ್ಷಗಳನ್ನು ನಿಯಂತ್ರಿಸಲು ಸಾಧ್ಯವಾಗುವಂತೆ ಜನಶಕ್ತಿ ಬೆಳೆಯಬೇಕು. ಜನಶಕ್ತಿಯನ್ನು ಬೆಳೆಸಲು ಇರುವ ಮುಖ್ಯಮಾರ್ಗ – ಜನಜಾಗೃತಿ ಆಂದೋಲನ. ಈ ದಿಕ್ಕಿನಲ್ಲಿ ಸಾಮಾಜಿಕ-ಸಾಂಸ್ಕೃತಿಕ ವಲಯ ಮುಂಚೂಣಿಗೆ ಬರುವ ಅಗತ್ಯವಿದೆ. ಯಾಕೆಂದರೆ ಈ ವಲಯ ಇನ್ನೂ ತನ್ನ ವಿಶ್ವಾಸಾರ್ಹತೆಯನ್ನು ಸಂಪೂರ್ಣ ಕಳೆದುಕೊಂಡಿಲ್ಲ.

ರಾಜಕೀಯ ಪಕ್ಷಗಳನ್ನು ಕೋಟ್ಯಾಂತರ ಹಣವಿಲ್ಲದೆ ನಡೆಸಲಾಗದು ಎಂಬ ಸ್ಥಿತಿಗೆ ನಮ್ಮ ವ್ಯವಸ್ಥೆಯನ್ನು ರೂಪಿಸಲಾಗಿದೆ. ವಿವಿಧ ಧಾರ್ಮಿಕ ಕೇಂದ್ರಗಳಿಗೆ (ಮಂದಿರ, ಮಸೀದಿ, ಚರ್ಚ್ ಮತ್ತಿತರ ಎಲ್ಲ ಧರ್ಮ ಕೇಂದ್ರಗಳಿಗೆ) ಬೇನಾಮಿ ಹಣವು ಧಾರಾಳವಾಗಿ ಹರಿದು ಬರುವಂತೆ ರಾಜಕೀಯ ಪಕ್ಷಗಳಿಗೂ ಬಂಡವಾಳಗಾರರ ದೇಣಿಗೆ ಸಲ್ಲುತ್ತಿದೆ. ಬಹಳಷ್ಟು ಬಂಡವಾಳಗಾರರು ಒಂದಕ್ಕಿಂತ ಹೆಚ್ಚು ಪಕ್ಷಗಳಿಗೆ ಮತ್ತು ಎಲ್ಲ ಪಕ್ಷಗಳ ಪ್ರಬಲ ಅಭ್ಯರ್ಥಿಗಳಿಗೆ ಆರ್ಥಿಕ ಬೆಂಬಲ ಕೊಡುತ್ತಾರೆ. ಯಾರೇ ಗೆದ್ದು ಬಂದರೂ ತಮ್ಮ ಬೆಂಬಲಕ್ಕಿರಲಿ ಎಂಬ ‘ದೂರದೃಷ್ಟಿ’ ನಿಜ, ಒಂದು ರಾಜಕೀಯ ಪಕ್ಷವನ್ನು ನಡೆಸಲು ಇಂದು ಹಣಬೇಕು. ಆದರೆ ದೈನಂದಿನ ನಿರ್ವಹಣೆಯ ವೆಚ್ಚವನ್ನು ಮೀರಿದ ‘ಕಪ್ಪು ಹಣ’ವನ್ನು ಶೇಖರಿಸುವ ‘ಹಕ್ಕು’ ಯಾಕೆ ಬೇಕು? ರಾಜಕೀಯ ಪಕ್ಷಗಳು ಆರ್ಥಿಕವಾಗಿ ಬಡವಾಗುತ್ತಾ ಹೋದಂತೆ ಸೈದ್ಧಾಂತಿಕವಾಗಿ ಶ್ರೀಮಂತವಾಗಬಹುದು! ಒಟ್ಟಿನಲ್ಲಿ ರಾಜಕೀಯ ಪಕ್ಷಗಳು ದೇಣಿಗೆ ರೂಪದಲ್ಲಿ ಕಪ್ಪು ಹಣ ಸಂಗ್ರಹಿಸುವುದಕ್ಕೆ ಕಠಿಣ ಕಡಿವಾಣ ಹಾಕಬೇಕು.

ಚುನಾವಣೆಯ ಘೋಷಣೆ ಆದ ದಿನದಿಂದ ಪಕ್ಷಾಂತರಕ್ಕೆ ಅವಕಾಶವಿಲ್ಲದಂತೆ ಪಕ್ಷಾಂತರ ವಿರೋಧಿ ಕಾಯಿದೆಗೆ ತಿದ್ದುಪಡಿ ತರುವ ಅಗತ್ಯವಿದೆ. ಇಲ್ಲದಿದ್ದರೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗದವರು, ಅವರ ಬೆಂಬಲಿಗರು ದಿಢೀರನೆ ತಾತ್ವಿಕ ಭಿನ್ನಾಭಿಪ್ರಾಯದ ಕಾರಣ ನೀಡಿ ಇನ್ನೊಂದು ಪಕ್ಷಕ್ಕೆ ಜಿಗಿದು ಅರಾಜಕತೆಯನ್ನು ಅನಿವಾರ್ಯಗೊಳಿಸುತ್ತಾರೆ. ಸ್ವತಂತ್ರ ಅಭ್ಯರ್ಥಿಯಾಗುವುದು ಬೇರೆ; ಇನ್ನೊಂದು ರಾಜಕೀಯ ಪಕ್ಷಕ್ಕೆ ದಿಢೀರನೆ ಸೇರ್ಪಡೆಯಾಗುವುದು ಬೇರೆ. ಚುನಾವಣೆ ನೀತಿ ಸಂಹಿತೆಯೆನ್ನುವುದು ಇಂತಹ ವಿಷಯಗಳಿಗೂ ಅನ್ವಯಿಸುವಂತಾಗ ಬೇಕಲ್ಲವೆ? ನಾವು ಒಪ್ಪಲಿ, ಬಿಡಲಿ, ನಮ್ಮ ಪ್ರಜಾಪ್ರಭುತ್ವವೆನ್ನುವುದು ಈಗ ಪಕ್ಷರಾಜಕಾರಣದ ಮೇಲೆ ನಿಂತಿದೆ. ಆದ್ದರಿಂದ ಚುನಾವಣೆ ಹತ್ತಿರ ಬಂದಂತೆ ಪಕ್ಷ ಬದಲಾಯಿಸುವ ‘ಸಮಯ ಸಾಧಕತನ’ಕ್ಕೆ ತಡೆಯೊಡ್ಡುವ ಅಗತ್ಯವಿದೆಯೆಂದು ನನಗನ್ನಿಸುತ್ತದೆ. ಇದು ಚರ್ಚೆಯಾಗಬೇಕಾದ ಅಂಶವೂ ಹೌದು.

ಇನ್ನು ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಹಣ ಹಂಚುವ ವಿಷಯ. ಇದಂತೂ ಅವ್ಯಾಹತವಾಗಿ ನಡೆಯುತ್ತದೆ. ನನಗನ್ನಿಸಿದಂತೆ ಹಣ ಹಂಚುವುದು ಮತ್ತು ಮತದಾರರು ಸ್ವೀಕರಿಸುವುದು – ಎರಡೂ ಅಪರಾಧವಾಗಬೇಕು. ಸಾಬೀತಾದರೆ ಇಬ್ಬರಿಗೂ ನಿರ್ದಿಷ್ಟ ಶಿಕ್ಷೆ ಯಾಗಬೇಕು. ಹಣ ಪತ್ತೆಯಾಗುವುದು, ಹಂಚುವುದು, ಸ್ವೀಕರಿಸುವುದು – ಈ ಪ್ರಕರಣಗಳು ಪತ್ತೆಯಾದಾಗ ಕಾಲಮಿತಿಯಲ್ಲಿ ಕೋರ್ಟಿನ ತೀರ್ಮಾನಗಳಾಗಬೇಕು. ಸಾಧ್ಯವಾದರೆ ಚುನಾವಣಾ ದಿನಾಂಕಕ್ಕೆ ಮೊದಲೇ ತೀರ್ಪು ಬಂದು ಲಂಚ ನೀಡಿದ ಅಭ್ಯರ್ಥಿಯನ್ನು ಅನರ್ಹಗೊಳಿಸಬೇಕು. ತ್ವರಿತ ತೀರ್ಮಾನಗಳಿಗೆ ಅವಕಾಶವಾಗುವಂತೆ ಚುನಾವಣಾ ಕೋರ್ಟುಗಳ ಸ್ಥಾಪನೆಯಾಗ ಬೇಕು. ಈ ಚುನಾವಣಾ ಕೋರ್ಟುಗಳು ಪ್ರತಿ ಜಿಲ್ಲೆಗೊಂದರಂತೆ ಸ್ಥಾಪನೆಯಾಗಿ ಚುನಾವಣೆ ಘೋಷಣೆ ಮತ್ತು ಫಲಿತಾಂಶ ಘೋಷಣೆಯವರೆಗೆ ಕಾರ್ಯ ನಿರ್ವಹಿಸುವಂತಿರಬೇಕು. ಮತಲಂಚದ ಪ್ರಕರಣಗಳನ್ನು ಕೂಡಲೇ ಇತ್ಯರ್ಥ ಮಾಡಬೇಕು. – ಇದು ಒಂದು ಸಲಹೆ. ಈ ಬಗ್ಗೆ ಸೂಕ್ತ ಚಿಂತನೆಯ ಅಗತ್ಯವಿದೆಯೆಂದು ನಾನು ಭಾವಿಸುತ್ತೇನೆ.

ಇದೇ ಸಂದರ್ಭದಲ್ಲಿ ನನಗನ್ನಿಸುತ್ತದೆ – ಚುನಾವಣಾ ಕೋರ್ಟುಗಳಂತೆಯೇ ಪ್ರತ್ಯೇಕ ಭ್ರಷ್ಟಾಚಾರ ವಿಚಾರಣಾ ಕೋರ್ಟುಗಳ ಅಗತ್ಯವಿದೆ. ಈಗ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿದೆ; ನಿಜ. ಆದರೆ ಅದಷ್ಟೇ ಸಾಕಾಗುತ್ತಿಲ್ಲ. ಎಲ್ಲ ಭ್ರಷ್ಟಾಚಾರ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ತೀರ್ಮಾನಗಳಿಗಾಗಿ ಬಹುಸಂಖ್ಯೆಯ ಭ್ರಷ್ಟಾಚಾರ ವಿಚಾರಣಾ ಕೋರ್ಟುಗಳನ್ನು ಸ್ಥಾಪಿಸುವ ಅಗತ್ಯವಿದೆ. ಈ ಕೋರ್ಟುಗಳು ಭ್ರಷ್ಟಾಚಾರ ಪ್ರಕರಣಗಳಿಗೆ ಮಾತ್ರ ಸೀಮಿತವಾಗಿರಬೇಕು. ಹೈಕೋರ್ಟಿನಲ್ಲೂ ಭ್ರಷ್ಟಾಚಾರ ವಿಚಾರಣೆಗೆ ಮೀಸಲಾದ ಪ್ರತ್ಯೇಕ ಪೀಠವಿರಬೇಕು. ಈ ಸಲಹೆಯೂ ಚಿಂತನಾರ್ಹ ಮತ್ತು ಅನುಷ್ಠಾನಾರ್ಹವೆಂದು ಭಾವಿಸುತ್ತೇನೆ.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಆಸ್ತಿಯನ್ನು ಘೋಷಿಸಿಕೊಳ್ಳುವ ನಿಯಮವಿದೆ. ಆನಂತರ ಗೆದ್ದ ಶಾಸಕರು ಲೋಕಾಯುಕ್ತಕ್ಕೆ ಪ್ರತಿ ವರ್ಷ ಆಸ್ತಿ ವಿವರ ಸಲ್ಲಿಸುವುದೂ ಉಂಟು. ಅಧಿಕಾರಕ್ಕೆ ಬಂದ ನಂತರ ಪ್ರತಿವರ್ಷ ಶಂಕಾಸ್ಪದವಾಗಿ ಆಸ್ತಿ-ಆದಾಯ ಹೆಚ್ಚಾಗಿದ್ದರೆ, ಯಾರ ದೂರೂ ಇಲ್ಲದೆ ಸ್ವಯಂಪ್ರೇರಿತವಾಗಿ ತನಿಖೆ ಕೈಗೊಂಡು ಮೊಕದ್ದಮೆ ಹೂಡುವ ಅಧಿಕಾರವನ್ನು ಲೋಕಾಯುಕ್ತಕ್ಕೆ ಕೊಡಬೇಕು ಮತ್ತು ಇಂತಹ ತನಿಖೆ, ವಿಚಾರಣೆ ಮತ್ತು ತೀರ್ಪು ಕಾಲಮಿತಿಯಲ್ಲಿ ಮುಗಿಯಬೇಕು. ಅಡ್ಡದಾರಿಯಲ್ಲಿ ಆಸ್ತಿ ಮಾಡಿಕೊಂಡಿರುವುದು ಸಾಬೀತಾದರೆ ಕೂಡಲೇ ಶಾಸಕತ್ವ ರದ್ದಾಗಬೇಕು. ಇದು ಸಂಸತ್ ಸದಸ್ಯರಿಗೂ ಅನ್ವಯಿಸಬೇಕು. ಚುನಾಯಿತರನ್ನು ವಾಪಸ್ ಕರೆಸಿಕೊಳ್ಳುವ ಹಕ್ಕಿಗಿಂತ ಇದು ಹೆಚ್ಚು ಆರೋಗ್ಯಕರವಾದ ಪ್ರಜಾ ಪ್ರಭುತ್ವ ಪ್ರಕ್ರಿಯೆ ಎಂದು ನಾನು ಭಾವಿಸುತ್ತೇನೆ. ಇಲ್ಲಿ ಕಾಲಮಿತಿ ಮುಖ್ಯವೆಂದು ಮತ್ತೆ ಹೇಳಬಯಸುತ್ತೇನೆ; ಕಾಲಮಿತಿ ಕೆಲವೇ ತಿಂಗಳುಗಳಿಗೆ ಸೀಮಿತವಾಗಿರಬೇಕು.

ಭ್ರಷ್ಟಾಚಾರ ವಿರೋಧ ಮತ್ತು ಚುನಾವಣಾ ಸುಧಾರಣೆಗಳ ಹೋರಾಟವಷ್ಟೇ ನಮ್ಮ ದೇಶದ ವ್ಯವಸ್ಥೆಯನ್ನು ಬದಲಾಯಿಸುವುದಿಲ್ಲ. ವ್ಯವಸ್ಥೆಯೆನ್ನುವುದು ಸಾಮಾಜಿಕ, ಆರ್ಥಿಕ, ರಾಜಕೀಯ ಸಂಗತಿಗಳನ್ನು ಪರಸ್ಪರ ಹೆಣೆದುಕೊಂಡ ಒಂದು ಪದ್ಧತಿಯಾಗಿರುತ್ತದೆ. ಆದ್ದರಿಂದ ಭ್ರಷ್ಟಾಚಾರದ ಮೂಲಗಳು ಈ ಪದ್ಧತಿಯ ಭಾಗವಾಗಿರುತ್ತವೆ ಮತ್ತು ಭಾಗವಾಗಿ ಬೆಳೆಯುತ್ತವೆ. ಈ ದೇಶದ ಜಾತಿ ಮತ್ತು ವರ್ಣವ್ಯವಸ್ಥೆಗಳು ಸಾಮಾಜಿಕ ಪದ್ಧತಿಯ ಪ್ರಮುಖ ಪಾತ್ರಧಾರಿಗಳಾಗಿದ್ದರೆ, ಜಾಗತೀಕರಣದ ಫಲವಾಗಿ ಬಂಡವಾಳಶಾಹಿ ಆಶೋತ್ತರಗಳು ನಮ್ಮ ಆರ್ಥಿಕ ಪದ್ಧತಿಯ ಪ್ರಧಾನ ಪಾತ್ರಧಾರಿಯಾಗಿದೆ. ರಾಜಕೀಯ ಪದ್ಧತಿಯನ್ನು ಈ ಸಾಮಾಜಿಕ-ಆರ್ಥಿಕ ನೆಲೆಯ ಪ್ರಧಾನ ಪಾತ್ರಧಾರಿಗಳು ನಿಯಂತ್ರಿಸುತ್ತಿವೆ. ತಮ್ಮ ಪ್ರತಿ ರೂಪಗಳನ್ನು ಅಧಿಕಾರದಲ್ಲಿ ಸ್ಥಾಪಿಸುತ್ತಿವೆ. ಇದು ನಮ್ಮ ವ್ಯವಸ್ಥೆಯ ವಿಷಾದಕರ ವಾಸ್ತವ. ಇಂತಹ ಕಟುವಾಸ್ತವವು ನಮ್ಮ ಕಣ್ಣೆದುರಿಗಿರುವಾಗ ಭ್ರಷ್ಟಾಚಾರ ವಿರೋಧದ ಹೋರಾಟವನ್ನು – ಇನ್ನೂ ಸೀಮಿತಗೊಳಿಸಿ ಜನಲೋಕಪಾಲ್ ಅನುಷ್ಠಾನದ ಹೋರಾಟವನ್ನು – ಎರಡನೇ ಸ್ವಾತಂತ್ರ್ಯ ಹೋರಾಟವೆಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ. ಇದು ಮತ್ತೊಮ್ಮೆ ನಮ್ಮ ಮುಗ್ಧ ಜನರನ್ನು ಭ್ರಮೆಗೆ ತಳ್ಳುವ ಮತ್ತು ಸಮೂಹ ಸನ್ನಿಯ ಸನ್ನಿವೇಶವನ್ನು ನಿರ್ಮಾಣ ಮಾಡುವ ಫಲಿತಕ್ಕೆ ಕಾರಣವಾಗುತ್ತದೆ.

ಸ್ವಾತಂತ್ರ್ಯ ಚಳವಳಿಯ ಸನ್ನಿವೇಶವನ್ನು ಸಮಗ್ರವಾಗಿ ಗ್ರಹಿಸಿದರೆ ಅದು ಏಕಾಂಶ ಹೋರಾಟದ ಸ್ವರೂಪದಲ್ಲಿರಲಿಲ್ಲವೆಂದು ತಾನಾಗಿಯೇ ಗೊತ್ತಾಗುತ್ತದೆ. ಗಾಂಧೀಜಿಯವರಿಗೆ ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಅಂಶ ಆದ್ಯತೆಯಾಗಿದ್ದರೂ ಹರಿಜನೋದ್ಧಾರ, ಗ್ರಾಮೋದ್ಯೋಗವೇ ಮುಂತಾದ ಸಾಮಾಜಿಕ – ಆರ್ಥಿಕ ಸಂಗತಿಗಳು ಅವರ ಕ್ರಿಯಾಶೀಲತೆಯ ಅವಿಭಾಜ್ಯ ಅಂಗವಾಗಿದ್ದವು. ಅಂಬೇಡ್ಕರ್‌ ಅವರಿಗೆ ಅಸ್ಪೃಶ್ಯತೆ ಮತ್ತು ವರ್ಣವ್ಯವಸ್ಥೆಯನ್ನು ವಿರೋಧಿಸಿ ಹೋರಾಟ ಕಟ್ಟಿದ್ದು ಆದ್ಯತೆಯಾಗಿದ್ದರೂ ಕಾರ್ಮಿಕರು ಮತ್ತು ಮಹಿಳೆಯರ ಪರವಾದ ಚಿಂತನೆ ಅವರಲ್ಲಿ ಅಂತರ್ಗತವಾಗಿತ್ತು. ಬ್ರಿಟಿಷ್ ವಿರೋಧವೂ ಇತ್ತು. ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ಗ್ರಹಿಕೆಯ ನೆಲೆಗಳು ಬೇರೆಯಾಗಿದ್ದರೂ ಅವರಿಬ್ಬರಲ್ಲೂ ಏಕಾಂಶದ ಕಾರ್ಯಕ್ರಮವಿರಲಿಲ್ಲ. ಅಂದಿನ ಸಮತಾವಾದಿಗಳಿಗೆ ಹೊರಗಿನ ಶತ್ರು ಹೋದರೆ ಸಾಲದು ಒಳಗಿನ ಶತ್ರುಗಳ ವಿರುದ್ಧದ ಆರ್ಥಿಕ ನೆಲೆಯ ಹೋರಾಟ ಬೇಕು ಎಂಬ ಆದ್ಯತೆಯಿತ್ತು. ಈ ಎಲ್ಲರಿಗೂ ಆದ್ಯತೆ ಒಂದು, ಅವಿಭಾಜ್ಯ ಅಂಗವಾದ ಅಂಶಗಳು ಅನೇಕ. ಹಾಗೆ ನೋಡಿದರೆ ಸ್ವಾತಂತ್ರ್ಯ ಚಳವಳಿಯ ಸನ್ನಿವೇಶದಲ್ಲಿ ಒಂದೇ ಮಾದರಿಯ ರಾಷ್ಟ್ರೀಯತೆಯ ಕಲ್ಪನೆಯೂ ಇರಲಿಲ್ಲ. ವಿಭಿನ್ನ ರಾಷ್ಟ್ರೀಯತೆಗಳ ಕಲ್ಪನೆ ಏಕಕಾಲದಲ್ಲಿ ಅಸ್ತಿತ್ವದಲ್ಲಿದ್ದ ಕಾಲವದು. ಉದಾಹರಣೆಗೆ ಸ್ವಾತಂತ್ರ್ಯ ಹೋರಾಟವೇ ಮುಖ್ಯವಾದ ಬಾಲಗಂಗಾಧರ ತಿಲಕರು ಮತ್ತು ಗಾಂಧೀಜಿಯವರ ರಾಷ್ಟ್ರೀಯತೆಯ ಕಲ್ಪನೆಯಲ್ಲಿ ವ್ಯತ್ಯಾಸವಿತ್ತು. ಹಾಗೆಂದು ಅದು ಅನಾರೋಗ್ಯಕರ ಸ್ಪರ್ಧೆಯಾಗಿರಲಿಲ್ಲ. ಮಾದರಿಗಳು ಬೇರೆಯಾಗಿದ್ದವು. ತಂತಾನೇ ಕ್ರಿಯಾಶೀಲವಾಗಿದ್ದವು. ಕಡೆಗೆ ಗಾಂಧಿ ಪ್ರಣೀತ ಮಾದರಿಯ ರಾಷ್ಟ್ರೀಯ ಹೋರಾಟವೇ ಮುನ್ನೆಲೆಯಲ್ಲಿ ಇದ್ದದ್ದು, ಮುನ್ನಡೆಸಿದ್ದು ಈಗ ಇತಿಹಾಸ. ಆದರೆ ಅಂಬೇಡ್ಕರ್‌ ಹೋರಾಟ, ಸಮತಾವಾದಿಗಳ ಗ್ರಹಿಕೆಯ ಮಾದರಿ ಸಹ ಇಂದಿಗೂ ಪ್ರಸ್ತುತವಾಗಿರುವುದನ್ನು ಗಮನಿಸಬೇಕು. ಅಂದರೆ, ನಾನು ಈ ಸಂದರ್ಭಕ್ಕೆ ಹೇಳಬಯಸುವ ವಿಷಯವೆಂದರೆ – ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಟದ ವಿವಿಧ ಅಂಶಗಳು ಒಟ್ಟಿಗೆ ಸೇರಿದ್ದವು ಮತ್ತು ಅದು ಸ್ವಾತಂತ್ರ್ಯ ಮತ್ತು ಸಮಾನತೆಯ ಆಶಯಗಳನ್ನು ಅಂತರ್ಗತ ಮಾಡಿಕೊಂಡ ಚಳವಳಿಯಾಗಿತ್ತು. ವಸ್ತುಸ್ಥಿತಿ ಹೀಗಿರುವಾಗ ಭ್ರಷ್ಟಾಚಾರ ವಿರೋಧಿ ಹೋರಾಟವೊಂದನ್ನೇ ಎರಡನೇ ಸ್ವಾತಂತ್ರ್ಯ ಹೋರಾಟವೆಂದು ಬಿಂಬಿಸುವುದು ಸಮರ್ಥನೀಯವಲ್ಲ. ಎರಡನೇ ಸ್ವಾತಂತ್ರ್ಯ ಹೋರಾಟವಲ್ಲ ಎಂಬ ಕಾರಣಕ್ಕಾಗಿ ಭ್ರಷ್ಟಾಚಾರ ವಿರೋಧಿ ಹೋರಾಟದ ಮಹತ್ವವೂ ಕಡಿಮೆಯಾಗುವುದಿಲ್ಲ. ಶುದ್ಧವಾಗಿದ್ದರೆ ಅದು ತನಗೆ ತಾನೇ ಅನನ್ಯವಾಗುತ್ತದೆ. ಭ್ರಷ್ಟಾಚಾರ ವಿರೋಧಿ ಹೋರಾಟವು ಹಿಂದೆಂದಿಗಿಂತ ಇಂದು ಅಗತ್ಯವಾಗಿದೆ; ತೀವ್ರವಾಗಬೇಕಾಗಿದೆ. ಆದರೆ ಈ ಹೋರಾಟಕ್ಕೆ ಹಿನ್ನೆಲೆಯಾಗಿ ನಮ್ಮ ದೇಶದ ಸಾಮಾಜಿಕ-ರಾಜಕೀಯ ಪ್ರಜ್ಞೆ ಜಾಗೃತವಾಗಿರಬೇಕಾಗುತ್ತದೆ. ರಾಜಕೀಯ ಪ್ರಜ್ಞೆಯೆಂದರೆ ಪಕ್ಷ ಪ್ರಜ್ಞೆಯಲ್ಲ; ತಾತ್ವಿಕ ತಿಳುವಳಿಕೆ. ಆಗ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಹೋರಾಟಕ್ಕೂ ಒಂದು ತಾತ್ವಿಕ ಗಟ್ಟಿತನ ಒದಗುತ್ತದೆ. ಇದು ಅಗತ್ಯವೂ ಹೌದು. ಯಾಕೆಂದರೆ ಭ್ರಷ್ಟಾಚಾರದ ವಿಷಯವನ್ನು ನೈತಿಕ ನೆಲೆಯಿಂದ ನೋಡಿದರೆ ಸಾಲದು. ಭ್ರಷ್ಟತೆ ಒಂದು ಪಾಪ ಎಂಬ ಕಲ್ಪನೆಯಷ್ಟೇ ನೈತಿಕ ನಿಲುವುಗಳು ನಿಲ್ಲುವ ಮಿತಿಯಿರುತ್ತದೆ. ಆದ್ದರಿಂದ ನೈತಿಕ ನೆಲೆಯನ್ನೂ ಒಳ ಗೊಳ್ಳುತ್ತ ಸಾಮಾಜಿಕ-ರಾಜಕೀಯ ತಿಳುವಳಿಕೆಯ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ನಮಗೆ ನೈತಿಕ ಸ್ಥೆರ್ಯ ಬೇಕು; ಸಾಮಾಜಿಕ ತಿಳುವಳಿಕೆ ಬೇಕು, ರಾಜಕೀಯ ವ್ಯವಸ್ಥೆ ಅರ್ಥವಾಗಬೇಕು. ಆಗ ಒಟ್ಟು ವ್ಯವಸ್ಥೆಯ ‘ಸೂಕ್ಷ್ಮಗಳು’ ಮನವರಿಕೆಯಾಗುತ್ತವೆ; ಹೋರಾಟದ ವ್ಯಾಪ್ತಿಯನ್ನು ಹಿಗ್ಗಿಸುತ್ತವೆ. ಈ ಮೂಲಕ ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ಸಮಾಜ ಬದಲಾವಣೆಯ ಸಮಗ್ರ ಹೋರಾಟದ ಒಂದು ಭಾಗವಾಗಿ ಮುನ್ನಡೆಸಲು ಸಾಧ್ಯವಾಗುತ್ತದೆ; ಸಾಧ್ಯವಾಗಬೇಕು

ನಿಜ, ಒಂದೇ ಸಾರಿಗೆ ಸಮಗ್ರ ಸಮಾಜ ಬದಲಾವಣೆಯ ಹೋರಾಟವನ್ನೇ ಮಾಡ ಬೇಕೆಂದು ನಿರೀಕ್ಷಿಸಬಾರದು, ಬಿಡಿ ಬಿಡಿ ಹೋರಾಟಗಳೂ ಬಹು ಮುಖ್ಯ. ಆ ಮೂಲಕ ಸಮಗ್ರ ಹೋರಾಟಕ್ಕೆ ಹಾದಿ ಮಾಡಿಕೊಡಲು ಸಾಧ್ಯ. ಬಿಡಿ ಬಿಡಿ ಹೋರಾಟಗಳ ಹಿಂದೆ ಸಮಗ್ರ ಹೋರಾಟದ ನೆಲೆ-ನಿಲುವುಗಳು ಜಾಗೃತವಾಗಿದ್ದರೆ ಮತ್ತಷ್ಟು ವಾಸ್ತವಗಳು ತೆರೆದುಕೊಳ್ಳುತ್ತವೆ. ಈಗ ನೋಡಿ, ಬೇಕೊ ಬೇಡವೊ ಕಾರ್ಪೊರೇಟ್ ಕಂಪನಿಗಳು ಆರ್ಥಿಕತೆಯನ್ನು ಆಳ ತೊಡಗಿವೆ; ಸಾಮಾಜಿಕ-ಸಾಂಸ್ಕೃತಿಕ ಪರಿಣಾಮವನ್ನೂ ಬೀರುತ್ತಿವೆ; ಕಾರ್ಪೊರೇಟ್ ಕಲ್ಟರ್‌ ಅನ್ನು ಮಾದರಿ ಮಾಡತೊಡಗಿವೆ; ಅಂತೆಯೇ ಕಾರ್ಪೊರೇಟ್ ಕರಪ್ಷನ್ (Corporate Corruption) ವ್ಯಾಪಿಸಿಕೊಳ್ಳುತ್ತಿದೆ. ಇವೆಲ್ಲವನ್ನೂ ಒಟ್ಟಿಗೇ ಗ್ರಹಿಸಬೇಕಲ್ಲವೆ?

ಶಾಲೆಗಳ ಸ್ಥಿತಿ ನೋಡಿ. ಜಗತ್ತಿನ ಬಹುಪಾಲು ಶಿಕ್ಷಣ ತಜ್ಞರು ಪ್ರಾಥಮಿಕ ಹಂತದಲ್ಲಿ ಮಾತೃಭಾಷಾ ಶಿಕ್ಷಣವಿರಬೇಕೆಂದು ಪ್ರತಿಪಾದಿಸುತ್ತ ಬಂದರೂ ಅದು ಸಂಪೂರ್ಣ ಸಾಧ್ಯವಾಗಿಲ್ಲ. ಆಂಗ್ಲ ಮಾಧ್ಯಮ ಶಾಲೆಗಳನ್ನು ಅನ್ಯಾಯದ ದಾರಿಯಲ್ಲಿ ನಡೆಸಲು ಅವಕಾಶ ಕೊಡುವುದೂ ಒಂದು ಭ್ರಷ್ಟಾಚಾರ. ಬಹು ಮುಖ್ಯವಾಗಿ ಒಂದೇ ವಯಸ್ಸಿನ ಹಸುಗೂಸುಗಳಲ್ಲಿ ವ್ಯತ್ಯಾಸ ಮಾಡಿ ಬಡವರಿಗೊಂದು ಶಾಲಾ ಮಾದರಿ, ಶ್ರೀಮಂತರಿಗೊಂದು ಶಾಲಾ ಮಾದರಿ ಎಂಬ ಶೈಕ್ಷಣಿಕ ಅಸಮಾನತೆಗೆ ಅವಕಾಶ ನೀಡಿರುವುದು ಶೈಕ್ಷಣಿಕ ಭ್ರಷ್ಟಾಚಾರ. ಜೊತೆಗೆ ಜಾತಿ-ವರ್ಣಗಳ ಹೆಸರಲ್ಲಿ ಇಂದಿಗೂ ನಡೆಯುತ್ತಿರುವ ಕ್ರೌರ್ಯವೂ ನಿರಂತರ ಭ್ರಷ್ಟಾಚರಣೆಯಾಗಿಬಿಟ್ಟಿದೆ. ದಲಿತರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲಿನ ಹಿಂಸೆ, ಹಸಿವಿನ ಹಾಹಾಕಾರ ಇನ್ನೂ ನಿಂತಿಲ್ಲ. ಧಾರ್ಮಿಕ ಭ್ರಷ್ಟಾಚಾರದ ವಿರುದ್ಧದನಿಯೇ ಇಲ್ಲ. ಧರ್ಮಗಳ ಹೆಸರಿನಲ್ಲಿ ನಡೆಯುವ ಧಾರ್ಮಿಕವಲ್ಲದ ದೌರ್ಜನ್ಯದ ದಳ್ಳುರಿ ಹಚ್ಚಿ ಅನ್ಯ ಧರ್ಮದವರನ್ನಷ್ಟೇ ಅಲ್ಲ ಸ್ವಧರ್ಮಿಯರ ನೈತಿಕತೆಯನ್ನು ಸುಡುವ ಪ್ರವೃತ್ತಿ ನಿಂತಿಲ್ಲ. ಜಾತಿವಾದ ಮತ್ತು ಕೋಮುವಾದಗಳು ಜೀವಬಲಿ ಕೇಳುತ್ತಿರುವ ಕರಾಳ ಸನ್ನಿವೇಶವನ್ನು ಮರೆತು ಸ್ವಾತಂತ್ರ್ಯ ಹೋರಾಟದ ಮಾತು ಆಡಲು ಹೇಗೆ ಸಾಧ್ಯ? ಮಾತು ಮೈಲಿಗೆಯಾಗುತ್ತಿರುವ, ಮನಸ್ಸು ಮಲಿನವಾಗುತ್ತಿರುವ ಸಂಕಟದಲ್ಲಿ ಸತ್ಯಶಾಲಿ ಮನುಷ್ಯರೂಪಕವನ್ನು ಕಟ್ಟಿಕೊಳ್ಳುವುದು ನಮಗೆ ಸಾಧ್ಯವಾಗಬೇಕು. ಆಗ ಭ್ರಷ್ಟಾಚಾರದ ಬಹುಮುಖತೆ, ಹೋರಾಟ ತಾತ್ವಿಕತೆ, ಮುನ್ನೋಟದ ಮಾನವೀಯತೆಗಳು ಒಟ್ಟಿಗೇ ತೆರೆದುಕೊಳ್ಳುತ್ತವೆ.

ಹೋರಾಟಗಳಿಗೊಂದು ವಿನಯಬೇಕು; ವಿವೇಕ ಬೇಕು; ಧೈರ್ಯ ಬೇಕು; ಆತ್ಮಸ್ಥೈರ್ಯ ಮತ್ತು ಆತ್ಮಾವಲೋಕನಗಳನ್ನು ಒಳಗೊಳ್ಳುತ್ತಲೇ ಹೋರಾಟದ ಕೆಚ್ಚು ಹೊರಹೊಮ್ಮಬೇಕು. ಹೋರಾಟಗಾರ ತನ್ನ ಸಂವೇದನಾಶೀಲ ಗುಣವನ್ನು ಸದಾ ಕಾಪಾಡಿಕೊಳ್ಳಬೇಕು. ಇವು ನಮ್ಮ ಒಳದನಿಗಳಾಗಬೇಕು. ನಮಗೆ ನಾವೆ ಹೇಳಿಕೊಳ್ಳುವ ಮಾತುಗಳಾಗಬೇಕು. ಆಗ ನಮ್ಮ ಹೊರಗಿನ ಮಾತುಗಳು ಸಾರ್ಥಕವಾಗುತ್ತವೆ; ನಮ್ಮ ಕ್ರಿಯೆ ಶಕ್ತಿಶಾಲಿಯಾಗುತ್ತದೆ. ಈ ಎಚ್ಚರ ಮತ್ತು ವಿವೇಕ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ತುಂಬಾ ಮುಖ್ಯವಾಗುತ್ತದೆ. ಸಮಾನತೆಯ ಸಮಾಜವನ್ನು ಸ್ಥಾಪಿಸುವ ಆಶಯದ ಭಾಗವಾಗಿ ಭ್ರಷ್ಟಾಚಾರದ ಸಮಸ್ಯೆಯನ್ನೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಪ್ರಗತಿಪರರ ಪಾತ್ರ ಮಹತ್ವದ್ದು, ಸಾಮಾನ್ಯವಾಗಿ ನಮ್ಮ ಸಮಾಜದ ಎಲ್ಲ ಕೆಡುಕುಗಳಿಗೆ ಪ್ರತಿಕ್ರಿಯಿಸುತ್ತ ಪ್ರತಿಭಟಿಸುತ್ತ ಬಂದವರು ಪ್ರಗತಿಪರರು. ಈಗ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಹೋರಾಟದ ನೆಲೆ-ನಿಲುವುಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಭ್ರಷ್ಟಾಚಾರ ವಿರೋಧದ ಬಗ್ಗೆಯಂತೂ ಭಿನ್ನಾಭಿಪ್ರಾಯ ಇರುವುದಿಲ್ಲ. ಆದ್ದರಿಂದ ಈಗಿನ ಹೋರಾಟದ ಕೊರತೆಗಳನ್ನು ತುಂಬುವಂತಹ ಚಿಂತನೆ ಮತ್ತು ಚಳವಳಿಯನ್ನು ಕಟ್ಟಲು ಪ್ರಗತಿಪರ ಶಕ್ತಿಗಳು ಮುಂದಾಗುವ ಅಗತ್ಯವಿದೆ. ಇಲ್ಲದಿದ್ದರೆ ಭ್ರಮೆ ಮತ್ತು ವಾಸ್ತವಗಳ ವ್ಯತ್ಯಾಸವೇ ಜನರಿಗೆ ಗೊತ್ತಾಗುವುದಿಲ್ಲ. ಈ ವ್ಯತ್ಯಾಸವನ್ನು ಕ್ರಿಯಾತ್ಮಕವಾಗಿ ತೋರಿಸುವ ಸಾಮಾಜಿಕ ಜವಾಬ್ದಾರಿ ನಮ್ಮದಾಗಬೇಕು. ವಿಶೇಷವಾಗಿ ಎಡಪಂಥೀಯ ಮತ್ತು ಪ್ರಗತಿಪರ ಪ್ರಜಾಸತ್ತಾತ್ಮಕ ಶಕ್ತಿಗಳೆಲ್ಲ ಒಟ್ಟಾಗಿ ಹೋರಾಟದ ಮುನ್ನೆಲೆಗೆ ಬರಬೇಕಾಗಿದೆ. ಸಾಂಸ್ಕೃತಿಕ ಕ್ಷೇತ್ರದ ಪ್ರಗತಿಪರರು ಮುಂಚೂಣಿಗೆ ಬರುವ ವಾತಾವರಣ ನಿರ್ಮಾಣವಾಗಬೇಕಾಗಿದೆ. ಯಾಕೆಂದರೆ ರಾಜಕೀಯ ಹಿನ್ನೆಲೆಯಿಂದ ಬಂದವರನ್ನು ಅನುಮಾನಿಸುವ ವಾತಾವರಣವಿದ್ದು ರಾಜಕೀಯ ಪ್ರಜ್ಞೆಯುಳ್ಳ ರಾಜಕೀಯ ಪಕ್ಷಕ್ಕೆ ಸೇರಿರದ ಸಾಂಸ್ಕೃತಿಕ – ಸಾಮಾಜಿಕ ವ್ಯಕ್ತಿಗಳು ಮುಂದೆ ಬಂದರೆ ಜನರಿಗೆ ಸ್ವಲ್ಪವಾದರೂ ಭರವಸೆ ಬಂದೀತು. ಜನರ ಭರವಸೆಗಿಂತ ‘ಇದು ನಮ್ಮ ಒಂದು ಜವಾಬ್ದಾರಿ’ ಎಂದು ಪ್ರಗತಿಪರರೆನ್ನಿಸಿಕೊಂಡ ನಾವು ವಿನಯದಿಂದ ಒಪ್ಪಿ ಕ್ರಿಯಾಶೀಲರಾಗುವುದು ಸರಿಯೆಂದು ನಾನು ಭಾವಿಸುವೆ; ಇದಕ್ಕೆ ತಕ್ಕ ವಾತಾವರಣವನ್ನು ನಿರ್ಮಾಣ ಮಾಡುವುದು ಸಹ ಮುಖ್ಯ.

ಭ್ರಷ್ಟಾಚಾರವೆಂದರೆ ಬೆಚ್ಚಿಬೀಳುವ ಒಂದು ಕಾಲವಿತ್ತು. ಭ್ರಷ್ಟಾಚಾರದಲ್ಲಿ ತೊಡಗಿಕೊಂಡವರಿಗೆ ಒಳಗೊಳಗೇ ಭಯ ಕಾಡುತ್ತಿತ್ತು. ಲಂಚ ಕೊಡುವುದು, ಪಡೆಯುವುದು, ಕದ್ದು ಮುಚ್ಚಿ ಮಾಡುವ ಕಳ್ಳ ವ್ಯವಹಾರವಾಗಿತ್ತು. ಭ್ರಷ್ಟಾಚಾರದ ಆರೋಪ ಹೊತ್ತವರ ಜೊತೆ ಗುರುತಿಸಿ ಕೊಳ್ಳುವುದು ಹಿಂಜರಿಕೆಯ ವಿಷಯವಾಗಿತ್ತು. ಈಗ ಎಲ್ಲವೂ ರಾಜಾರೋಷ; ನಾಚಿಕೆ, ನೈತಿಕತೆಗಳು ನಿಘಂಟಿನಿಂದ ಕೈಬಿಡಬೇಕಾದ ಪದ ಸಂಪತ್ತು! ಅನ್ಯಾಯದ ಸಂಪತ್ತೇ ಇವತ್ತಿನ ಘನತೆ ಎಂಬಂಥ ವಿಷಾದದ ವಾತಾವರಣ. ಒಟ್ಟಿನಲ್ಲಿ ಭ್ರಷ್ಟಾಚಾರ ಈಗ ಬೀದಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ನಾವೆಲ್ಲ ಒಂದಾಗಿ ತೊಡಗಿಸಿಕೊಳ್ಳೋಣ. ಬೀದಿಗೆ ಬಂದ ಭ್ರಷ್ಟಾಚಾರಕ್ಕೆ ಮುಖಾಮುಖಿಯಾಗೋಣ. ಸರಿದಾರಿಯಲ್ಲಿ ನಡೆದು ಜನಸಮುದಾಯದಲ್ಲಿ ಆಶಾವಾದವನ್ನು ಜೀವಂತವಾಗಿಡೋಣ. ಇಲ್ಲದಿದ್ದರೆ ಜನರು ಪ್ರಜಾಸತ್ತಾತ್ಮಕ ರಾಜಕಾರಣದ ಬಗ್ಗೆಯೇ ವಿಶ್ವಾಸ ಕಳೆದುಕೊಳ್ಳುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೮
Next post ಮುದುಕರು

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys