ಬಂದು ಹೋಗುವರೆ ಇಂತು ಪ್ರತಿದಿನವು
ಹೇಳೆ ಎದೆಯ ಗೆಳತಿ

ಹೋಗಿ ಮುಟ್ಟಿಸುವೆಯೇನೆ ಈ ವೇಣಿ
ಪುಷ್ಪವನ್ನು ಗೆಳತಿ ?

ಯಾರು ಕೊಟ್ಟರಿದ ಯಾವ ಮಧುವನದ
ಪುಷ್ಪವೆಂದು ಕೇಳೆ

ಹೇಳದಿರು ಮತ್ತೆ ಬೇರೆ ಏನನ್ನು
ಕೇಳರೆನ್ನ ಆಣೆ

ವೃಕ್ಷದಡಿಯಲ್ಲಿ ಧೂಳ ಹಾಸಿನಲಿ
ಕುಳಿತುಕೊಳುವರೇನೆ ?

ಹೋಗು ತಡವೇಕೆ? ಹಾಕು ಈ ಬಕುಲ
ಕುಸುಮಪೀಠವನ್ನೆ

ಕರುಣ ಪೂರ್ಣ ಹೊಳೆಹೊಳೆವ ತನ್ನ ಚಲು
ನೇತ್ರಯುಗ್ಮದಿಂದ

ಹೊತ್ತಿಸಿಹರವರು ನನ್ನ ಮನದಲ್ಲಿ
ಜ್ಯೋತಿ ಪ್ರೀತಿಯಿಂದ

ಏನೋ ಎದೆವಾತ ಹೇಳಬೇಕೆಂಬ
ಆಸೆ ತುಡಿವುದವರ

ಆದರೇನನೂ ಯಾರಿಗೂನು ಸಹ
ಹೇಳದೇನೆ ಇಹರ

ಬಂದು ಹೋಗುವರೆ ಇಂತು ಪ್ರತಿದಿನವು
ಹೇಳೆ ಹೃದಯಸಖಿಯೇ

ಹೋಗಿ ಮುಟ್ಟಿಸುವೆಯೇನೆ ಕಾಣಿಕೆಯ
ಹೇಳು ಚಂದ್ರಮುಖಿಯೆ
*****