Home / ಲೇಖನ / ಇತರೆ / ಮೂವತ್ತೈದು ಪೈಸೆಗೊಂದು ಮಸಾಲೆದೋಸೆ…!?

ಮೂವತ್ತೈದು ಪೈಸೆಗೊಂದು ಮಸಾಲೆದೋಸೆ…!?

ನಾಟಕ ಕಂಪನಿಗಳ ಕಡೆಗೆ ಹೋಗಲು ಬಾರದೆಂದು ಬೇಸತ್ತ ನಂತರ ಬೆಳೆದಿದ್ದ ಜಡೆಯನ್ನು ಕಟ್ ಮಾಡಿಸಿದೆ. ಪ್ಯಾಂಟ್, ಶರ್ಟ್ ಹೊಲಿಸಿ, ಹೊಸ ಚಪ್ಪಲಿ ಕೊಂಡುಕೊಂಡು ತಿರುಗಾಡಲಾರಂಭಿಸಿದೆ. ಆಗಲು ಊರಲ್ಲಿ ಬೈಯ್ಯಲಾರಂಭಿಸಿದರು. “ಹೀಗೆ ನಡೆದಾಡಿದ್ರೆ ಛಲೋ ಅಲ್ಲೋ ತಮ್ಮಾ.. ಕಂಡಾಪಟ್ಟೆ ಓದಿದಿ, ಏನಾದ್ರು ಕೆಲಸ ಹುಡುಕಬಾರದು” ಅಂದ್ರು. ಕೆಲಸಕ್ಕೆಂದು ಸುಳ್ಳು ಹೇಳಿ ನಾಲ್ಕು ಎಕರೆ ಜಮೀನ್ ಬೇರೆ ಮಾರಿದ್ದೆ. ನಮ್ಮ ತಾಯಿ ಬಂಧು ಬಳಗ ಎಲ್ಲರೂ “ನೀನೊಂದು ನಮ್ಮನೆಗೆ ಇದಿಮಾಯಿ, ಊರುಬಿಟ್ಹೋಗು, ಕೆಲಸ ತಗೊಂಡು ಬಾ” ಎಂದು ಸಿಟ್ಟಿನ ಭರದಲ್ಲಿ ಬೈದಿದ್ದರು.

ನನಗೆ ಜಿಗುಪ್ಸೆಯಾಯಿತು. ಪಕ್ಕದ ಮನೆಯವರು ಹುಬ್ಬಳ್ಳಿಯಲ್ಲಿ ಏನೋ ಕೆಲ್ಸ ಮಾಡ್ತಿದ್ದಾರೆ, ಅಂತ ತಿಳಿದಿದ್ದೆ. ಅವರ ವಿಳಾಸ ತಗೊಂಡು ಕಿಸೆಯಲ್ಲಿ ಒಂದು ಸ್ವಲ್ಪ ರೊಕ್ಕ ಇಟ್ಟುಕೊಂಡು ಹಂಗೆ ಬಸ್ ಹತ್ತಿದೆ. ಅಂತೂ ಹುಬ್ಬಳ್ಳಿ ಶಹರ್‌ದಲ್ಲಿ ಇಳಿದಾಗ ಕೇವಲ ಇಪ್ಪತ್ತು ರೂಪಾಯಿ ಮಾತ್ರ ಉಳಿದಿತು. ಹೊಟ್ಟೆ ಹಸಿತಿತ್ತು. ನಾಲ್ಕಾಣೆ ಕೊಟ್ಟು ನಾಷ್ಟ ಮಾಡಿದೆ. ಅವರವರಿಗೆ ಕೇಳುತ್ತಾ, ನಮ್ಮ ಪಕ್ಕದಮನೆಯವರಿದ್ದ ವಿಳಾಸಕ್ಕೆ ಬಂದು ತಲುಪಿದೆ. ಕೆಲಸಕ್ಕೆ ಹೋಗುವ ಭರಾಟೆಯಲ್ಲಿದ್ದ ಅವರು ನಿರುತ್ಸಾಹದಿಂದ ನನ್ನ ಕಡೆ ನೋಡಿ, “ನೀನ್ಯಾಕೆ ಬಂದೆ ಇಷ್ಟು ದೂರ? ಎಂದು ಬೈದರು. ಕೆಲಸ ಹುಡುಕಿಕೊಂಡು ಬಂದೆ ಎಂದೆ. “ನನಗೇ ಕೆಲಸ ಇಲ್ಲ ಅಂತ ಸಾಯ್ತಿದೀನಿ, ನಿನಗೆಲ್ಲಿಂದ ಕೆಲಸ ಸಿಗ್ತದೆ? ಇಲ್ಲೆ ರೂಮ್‌ನಲ್ಲಿರು” ಎಂದು ಹೊರಗಡೆ ಹೋದರು.

ಅವರೆಲ್ಲಿಯೋ ಖಾನಾವಳಿಯ ಎಲ್ಲಿ ಊಟ ಮಾಡುತ್ತಿದ್ದರು. ನನಗೆ ಒಂದು ದಿನವೂ ಕೂಡ ಊಟಕ್ಕೆ ಕರೆಯಲಿಲ್ಲ. ಇನ್ನು ಕಿಸೆಯಲ್ಲಿ ಇಪ್ಪತ್ತು ರೂಪಾಯಿ ಇತ್ತಲ್ಲಾ ನೋಡೋಣ ಎಂದು ಬಂದಾಗಲೆಲ್ಲಾ ಕೆಲಸ ಕೊಡಿಸಿ ಎಂದು ವಿನಂತಿಸುತ್ತಿದ್ದೆ. ಊಟ, ನಾಷ್ಟ ಎಂದು ಖಾನಾವಳಿಗೆ ಹೋದರೆ, ಎರಡು ದಿವಸದಲ್ಲಿ ಎಲ್ಲಾ ರೊಕ್ಕ ಮುಗಿದು ಹೋಗ್ತದೆ, ಎಂದು ಭಾವಿಸಿ, ಒಂದು ಹೊತ್ತು ಮಾತ್ರ ಹೋಟೆಲ್‌ಗೆ ಹೋಗಿ, ಮಸಾಲೆ ದೋಸೆ, ಒಂದು ಚಹಾ.. ಹೇಳುತ್ತಿದ್ದೆ. ಎರಡೂ ಸೇರಿ ಅರವತ್ತು ಪೈಸ ಮಾಲೀಕನ ಕೈಗಿತ್ತು ಹೊರಬರುತ್ತಿದ್ದೆ.

ರೂಮು ಮಹಡಿ ಮೇಲೆ ಇತ್ತು. ಸಂಜೆ ಹೊಟ್ಟೆ ಹಸಿದಾಗ ರೂಮ್ ನ ಕೆಳಗೆ ಹಾಕಿದ್ದ ಒಂದು ಹತ್ತಿ ಮರವಿತ್ತು. ಆ ಮರದಿಂದ ಬಿದ್ದ ಹಣ್ಣುಗಳನ್ನು ನಿಧಾನವಾಗಿ ಆರಿಸಿಕೊಂಡು, ಯಾರಾದರೂ ನೋಡಿಯಾರು ಎಂಬ ಭಯದಿಂದ ನಾಲ್ಕಾರು ತಿಂದು, ಹಾಗೆ ನೀರು ಕುಡಿದು ಮಲಗುತ್ತಿದ್ದೆ. ಬೆಳಿಗಿನ ನಾಷ್ಟ ಯಾವ ಕಾರಣಕ್ಕೂ ಇರುತ್ತಿರಲಿಲ್ಲ. ಪುನಃ ಒಂದು ಗಂಟೆಗೆ ಆ ಹೋಟೆಲ್‌ಗೆ ಹೋದಾಗ, ಆ ಹೋಟೆಲ್ ಮಾಲೀಕನು ಮುವತ್ತೈದು ಪೈಸ ದೋಸೆಗೆ ಬಂದಿದ್ದಾನೆ ನೋಡ್ರಾಪ್ಪಾ, ಎಂದು ಗೇಲಿ ಮಾಡುತ್ತಿದ್ದರು. ಹೀಗೆ ನಾಲ್ಕಾರು ದಿನ ಕಳೆಯಿತು. ರೂಮ್‌ನವರು ನನ್ನನ್ನು ಅಲ್ಲಿ ಇಟ್ಟುಕೊಳ್ಳಲು ಯಾಕೋ ಇಷ್ಟ ಪಡಲಿಲ್ಲ. ನಾಳೆ ಎಲ್ಲಿಯಾದರು ರೂಮ್ ನೋಡಿಕೊಂಡು ಹೋಗು, ಇಲ್ಲಿ ಇರೋದು ಬೇಡ, ಎಂದು ಕಟ್ಟಕಡೆಯದಾಗಿ ಹೇಳಿದರು. ನನಗೆ ಮನಸ್ಸಿಗೆ ಕಸಿವಿಸಿಯಾಗಿ, ಒಂದು ತಿಂಗಳು ರೂಮ್ ಮಾಡಿಕೊಂಡಿದ್ದು, ಯಾವುದಾದರೂ ಫ್ಯಾಕ್ಟರಿ ಕೂಲಿ ಕೆಲಸಕ್ಕೆ ಹೋಗಬೇಕೆಂದು ತೀರ್ಮಾನಿಸಿದೆ. ಜೋಬಿನಲ್ಲಿ ೧೨ ರೂಪಾಯಿ ಮಾತ್ರ ಉಳಿದಿತು. ಎಷ್ಟು ದೂರವಿದ್ದರೂ ನಮ್ಮಂತವರು ಕಾಲ್ನಡಿಗೆಯಲ್ಲಿ ಹೋಗಬೇಕಲ್ಲಾ? ಎಂದು ರೂಮ್ ಹುಡುಕಲು ಹೋದೆ…ಹೋದೆ.. ಹಳೇ ಹುಬ್ಬಳ್ಳಿ ದಾಟಿ ಹೋದೆ. ಬಯಲು ಪ್ರದೇಶ. ಅಲ್ಲಿ ಚರಂಡಿಗಳದ್ದೇ ಸಾಮ್ರಾಜ್ಯ. ದುರ್ವಾಸನೆಗಳ ಮೇಲಾಟವೇ ಇತ್ತು. ಅಲ್ಲಿ ಹತ್ತಿರದಲ್ಲಿ ಎರಡು-ಮೂರು ರೂಮ್‌ಗಳು ಕಂಡವು. ಅವುಗಳನ್ನೇ ನೋಡುತ್ತ ನಿಂತೆ. ಒಬ್ಬ ಆ ಕಡೆಯಿಂದ ಬಂದವನು “ಏನ್ ಬೇಕಾಯಿತ್ತೋ ತಮ್ಮಾ?” ಎಂದಂದ. ನಾನು ಸಣ್ಣದಾಗಿ ಹೇಳಿದೆ. ಅವನು ಆ ರೂಮ್‌ಗಳನ್ನು ತೋರಿಸುತ್ತಾ, ಆ ಮೊದಲನೇ ರೂಮ್ ನನ್ನದೆ ಹತ್ತು ರೂಪಾಯಿ ಬಾಡಿಗೆ, ಕೊಡು ಇಲ್ಲಿ ಎಂದ. ನನಗೂ ಆ ರೂಮ್‌ನ ಸಹವಾಸದಿಂದ ದೂರವಿದ್ದರಾಯ್ತು ಎಂದು ಭಾವಿಸಿ, ಹತ್ತು ರೂಪಾಯಿ ಕೊಟ್ಟೆ. ಅವನು ಆ ಕಡೆ ಎಲ್ಲಿಯೋ ಹೋದ. ನಾನು ಖುಷಿಯಿಂದ ರೂಮ್‌ಗೆ ಬಂದೆ.

ಮಾರನೇ ದಿನ ಬ್ಯಾಗ್‌ನಲ್ಲಿ ನನ್ನ ಸಾಮಾನುಗಳನ್ನು ಇಟ್ಟುಕೊಂಡು, ಅಡ್ವಾನ್ಸ್ ಕೊಟ್ಟಿದ್ದ ರೂಮ್‌ನ್ನು ಹುಡುಕಿಕೊಂಡು ಹೊರಟೆ. ನಮ್ಮ ರೂಮ್‌ನವನು ನಾನೂ ನೋಡುತೇನೆ ನಡಿ ಎಂದು ನನ್ನ ಜೊತೆ ಬಂದ. ಅವನೆ ಆಟೋದಲ್ಲಿ ಕರೆದುಕೊಂಡು ಹೋದ. ಸ್ಥಳಬಂದಾಗ ಕೆಳಗಿಳಿದು – ನಾನು ಅವನಿಗೆ “ಇದೇ ನೋಡಣ್ಣ ರೂಮ್” ಎಂದು ತೋರಿಸಿದ. ಹತ್ತಿರ ಹೋಗಿ ನೋಡಿದೆವು. ಅಲ್ಲೊಂದು ಮುರುಕಲು ಟೇಬಲ್ ಮೇಲೆ ಅನಾಥ ಹೆಣವೊಂದನ್ನು ವೈದ್ಯರು ಕೊಯ್ಯುತ್ತಿದ್ದರು. ಅದು ಹೆಣ ಕೊಯ್ಯುವ ಮನೆ. ಖಚಿತವಾಯಿತು. ನಮ್ಮ ರೂಮ್‌ನವ ನನಗೊಂದು ಏಟು ಕೊಟ್ಟು ಎಳೆದುಕೊಂಡು ಬಂದು ಸಿಕ್ಕಾಪಟ್ಟೆ ಬೈದ. ಅಂದು ಆಘಾತಗೊಂಡು ದುಃಖಿಸುತ್ತಾ ಮಲಗಿಕೊಂಡೆ. ಅವನಿಗೆ ನನ್ನ ವ್ಯಥೆ ಅರ್ಥವಾಯಿತೇನೋ? ಮಾರನೇ ದಿನ ಬೆಳಗ್ಗೆ ಕೆ.ಎಂ.ಸಿ. ಆಸ್ಪತ್ರೆಯ ಲೈಬ್ರರಿಯನ್‌ರವರಿಗೆ ಪರಿಚಯಿಸಿದ.

ನನ್ನ ದಯನೀಯ ಪರಿಸ್ಥಿತಿಯನ್ನು ನೋಡಿ, ಕೆಲಸ ಕೊಡಿಸುತ್ತೇನೆಂದು ಹೇಳಿ, ನನಗೆ ಊಟ ಹಾಕಿಸಿ, ಅವರೆ ಬಸ್ ಚಾರ್ಜ್ ಖರ್ಚು ಮಾಡಿಕೊಂಡು, ಅಂದಿನ ಗ್ರಂಥಾಲಯ ಇಲಾಖೆಯ ಮುಖ್ಯಸ್ಥರಾಗಿದ್ದ ಎನ್.ಡಿ.ಬಗರಿಯವರಿಗೆ ಪರಿಚಯಿಸಿದರು. ಆಗ ತಾನೇ ಗ್ರಂಥಾಲಯ ಇಲಾಖೆ ಬೆಳೆಯುತ್ತಿರುವ ಕಾಲಘಟ್ಟವಾಗಿತ್ತು. ಅದೇನೋ ಅಭಿಮಾನ ಬಂತೋ ನನ್ನ ಮೇಲೆ ಗೊತ್ತಿಲ್ಲ? ಹಾಸನದಲ್ಲಿ ಕೆಲಸ ಮಾಡಲೆಂದು ಡ್ಯೂಟಿಯ ಆದೇಶ ಕೈಗಿತ್ತರು.
*****
ಅನುಭವದ ಆಲಯದೊಳು
ಅಲುಗಾಡದಿರಯ್ಯ!
ಅನುಭವದ ಆಲಯದೊಳು
ಚಂಚಲಿಸದಿರಯ್ಯ!
ಅನುಭವದ ಆಲಯದೊಳು
ಅನುಭಾವಗೊಂಡು
ನೀ ಅಮರವಾಗಯ್ಯ!

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...