ಪ್ರೀತಿ ನನಗೆ ರೀತಿ ನಿನಗೆ ನನ್ನ ಬೆರಗುಗೊಳಿಸುವಿ
ಒಮ್ಮೆ ಹಾಗೆ ಒಮ್ಮೆ ಹೀಗೆ ನನ್ನ ಮರುಳುಗೊಳಿಸುವಿ

ಒಮ್ಮೆ ವರ್ಷಧಾರೆಯಂತೆ ಬಂದು ಹೃದಯ ತೊಳೆಯುವಿ
ಒಮ್ಮೆ ಮಂಜಿನಂತೆ ಎದ್ದು ಮನವ ಮುಸುಕುವಿ

ಒಮ್ಮೆ ಬೆಳಕಿನಂತೆ ಸಕಲ ಜೀವಜಾಲ ಬೆಳಗುವಿ
ಒಮ್ಮೆ ಇರುಳಿನಂತೆ ಸಮಸ್ತ ಲೋಕವನ್ನೆ ಮರೆಸುವಿ

ಒಮ್ಮೆ ಜ್ವಾಲಾಮುಖಿಯಂತೆ ಉರಿದು ಬೂದಿ ಮಾಡುವಿ
ಒಮ್ಮೆ ಜಲಪಾತದಂತೆ ಅಧಃಪಾತಕೆ ಒಯ್ಯುವಿ

ಒಮ್ಮೆ ಪಾಪದಂತೆ ಕವಿದು ನರಕಕೆ ನನ್ನ ಇಳಿಸುವಿ
ಒಮ್ಮೆ ಪುಣ್ಯದಂತೆ ಆವರಿಸಿ ಸ್ವರ್ಗಕೇರಿಸುವಿ
*****