ಮೂರ್ಖ ನಾನು ಅಪರಾಧ ಮಾಡಿರುವೆ ಕ್ಷಮಿಸಿಬಿಡು ನನ್ನನು
ನಿನ್ನನು ನಾನು ಕ್ಷಮಿಸುವಂತೆಯೇ
ನನ್ನನು ನೀನು
ಬಸವಳಿದು ಬೆಂಡಾಗಿ ಕುಳಿತೆ ನೀನು
ಬಸವಳಿದು ಬಂಡಾಗಿ ನಿಂತೆ ನಾನು
ಚಳಿ ಮಳೆ ಗಾಳಿಯಲಿ ದಿಕ್ಕೆಟ್ಟೆ ನೀನು
ಚಳಿ ಮಳೆ ಗಾಳಿಯಲಿ ಕಂಗೆಟ್ಟೆ ನಾನು
ಒಂದೆ ಪೃಥವಿಯ ಹಾಸಿಗೆ ಹಾಸಿ
ಒಂದೆ ಬಾನಿನ ಛದ್ದರ ಹೊದ್ದು
ಒಂದೆ ನಿದ್ದೆಗೆ ಬಿದ್ದೆವು ನಾವು
ಒಂದೆ ಕನಸೊಳಗಿದ್ದೆವು ನಾವು
ಆಮೇಲೆ ಏನಾಯ್ತೊ ಆಮೇಲೆ ಯಾತಕ್ಕೊ
ಒಬ್ಬರೊಬ್ಬರ ಮೇಲೆ ಹಾಯ್ದು ಹೋದವೊ
ಕುತ್ತಿಗೆ ಹಿಸುಕಿದೆವೊ ಕೈ ಕಾಲು ಮುರಿದೆವೊ
ಭಾರಿ ಪ್ರಪಾತಕ್ಕೆ ತಳ್ಳಿಬಿಟ್ಟೆವೊ
ಬೇರೊಂದು ದಾರಿಯ ಯೋಚಿಸಲೆ ಇಲ್ಲ
ಕೈಯಲಿ ಕೈಯ ಹಿಡಿಯಲೆ ಇಲ್ಲ
ಉಭಯ ಕುಶಲೋಪರಿ ವಿಚಾರಿಸಲಿಲ್ಲ
ನಗುವಂತು ನಾವು ನಗಲೆ ಇಲ್ಲ
ಇನ್ನೊಂದು ಜನ್ಮ ಬರುವುದಿಲ್ಲ
ಈಯೊಂದು ಜನ್ಮದಲೆ ಆಗಬೇಕೆಲ್ಲ
ಇರುವುದೊಂದೇ ಕ್ಷಣ ಕ್ಷಮೆಯ ಕೇಳಲು
ಇರುವುದೊಂದೇ ಕ್ಷಣ ಸ್ವರ್ಗದ ಬಾಗಿಲನು ತೆರೆಯಲು
*****