ಕನ್ನಡತಾಯ ನೋಟ

(ವಿಜಯನಗರ ಸಾಮ್ರಾಜ್ಯದ ಆರುನೂರು ವರ್ಷದ ಹಬ್ಬದಲ್ಲಿ)


ಹಿರಿಯರಿರ, ಕೆಳೆಯರಿರ, ಅಕ್ಕತಂಗಿಯರಾ, ಅಣ್ಣತಮ್ಮದಿರಾ,
ಒಸಗೆನುಡಿ ತಂದಿಹೆನು ನಾನೊಂದ, ತಾಯಿಂದ, ಸಿರಿಯ ತಾಯಿಂದ-
ಕೇಳುವಿರ ಕಿವಿಗೊಟ್ಟು, ತಾಳುವಿರ ಎದೆನೆಟ್ಟು, ತಾಳಿ ಬಾಳುವಿರಾ ?
ಕಣ್ಣಾರ ಕಂಡೆನವಳನು-ಕಂಡು, ತಂದಿಹೆನು, ಕೇಳಿ,
ಅವಳನ್ನೊ ಳಾಡಿದುದನಾಡುವೆನು ನಿನ್ನಲ್ಲಿ, ಕೇಳಿ.


ಬಳಸಿ ಬಂದೆನು ಸುತ್ತ ಕನ್ನಡದ ನಾಡುಗಳ ಸಿರಿಯ ನೋಡುತ್ತ,
ತಾಯಡಿಯ ಹುಡಿಯ ತಲೆಗಾನುತ್ತ, ಹರಕೆಯ ಪವಿತ್ರ ಯಾತ್ರೆಯಲಿ.
ಏನು ಚೆಲುವಿನ ನಾಡು ! ಚೆಲುವು ಚೆಲ್ಲುವ ನಾಡು ! ಕನ್ನಡದ ನಾಡು !
ಏನು ಚಿನ್ನದ ನಾಡು | ನಮ್ಮೊಲುಮೆಯಾ ನಾಡು ! ನಮ್ಮಿನಿಯ ನಾಡು !
ಕಾವೇರಿಯಿಂದಮಾ ಗೋದಾವರಿಯ ವರೆಗೆ ಚಾಚಿರುವ ನಾಡು !
ಬಳಸಿದೆನು, ಸುತ್ತಿದೆನು, ಕಣ್ದಣಿಯ ನೋಡಿದೆನು, ಕುಣಿದು ಹಾಡಿದೆನು:
ಕೆಳಗೆ ಬೆಳೆಹೊಲ ಕಪ್ಪು, ಮೇಲೆ ಬಾಂಬೊಲ ಕಪ್ಪು, ಬೆಟ್ಟಗಳು ಕಪ್ಪು,
ಕಾರ್‌ಮೋಡಗಳು ಕಪ್ಪು, ಹೊಳೆ ಕೆರೆಯ ಮಡು ಕಪ್ಪು, ತಾಯ ಕಾಲ್ ತೊಳೆವ
ಉಪ್ಪು ಕಡಲದು ಕಪ್ಪು, ಜನ ಕಪ್ಪು-ಏನೆಂದೆ ? ತಪ್ಪು, ತಪ್ಪು !-
ಮೂಡ ಪಡುವಲು ತಿರುಗು, ಬಡಗ ತೆಂಕಲು ತಿರುಗು, ಕರ್ನಾಟದಲ್ಲಿ,
ನಿಮೂರ ಹೆಣ್ಣುಗಳ ಕಣ್ ನೋಟ, ತಣ್‌ನೋಟ ಕರ್ಪು, ಒಲು ಕರ್ಪು !
ಕರ್ಪೊ, ಬೆಳ್ಪೊ ಕಾಣೆ, ಕನ್ನಡದ ಕಣ್ಣೋಟ-ಕೂರ್ಪು, ಆರ್ಪು !
ಓ ತಾಯೆ, ಕನ್ನಡದ ಪೆರ್‌ತಾಯೆ, ನಮ್ಮಮ್ಮ, ದೇವಿ, ಸಮ್ರಾಜ್ಞಿ.
ಸುಳಿಗುರುಳು, ನಗೆಗಣ್ಣು ಏನು ಕಪ್ಪೇ ನಿನಗೆ-ಮುತ್ತಿಡುವ ಕಪ್ಪು !
ನಿನ್ನ ಕಲಿಗಳ ಕೂರ್ಪು, ಕೆಚ್ಚೆದೆಯ ಕಟ್ಟಾಳ ಕೂರ್ಪು, ನೆಚ್ಚಾರ್ಪು,
ಆರು ತಡೆಯಲುಬಹುದು-ಪುಲಕೇಶಿ ಹರ್ಷರೇ ಹೊಯ್ದು ಸಾರುವರು.
ಕರ್ಪಿರಲಿ, ಕೊರ್ಪಿರಲಿ, ನಿನ್ನ ಬೆಳ್ಪನು ಹೇಳು-ಕೂರಸಿಯ ಮಿಂಚು,
ಕಾರ್ ಮಿಂಚು, ಪೆಣ್ಮಣಿಗಳಾ ಕಣ್ಣನುಣ್ಮಿಂಚು, ಅರಿದರಾ ಕೂರ್‌ನೋಟ ಮಿಂಚು !
ಮೆಲ್ಲ ಮೆಲ್ಲನೆ ತೇಲಿ, ಆಳದಲಿ ಮಲೆಯೆಡೆಯೊಳಲುಗದೆಯೆ ಅಲುಗಿ,
ಕಡಿದು ಬಂಡೆಗೆ ಬಂದು, ನೆಗೆದು ಬೆಳಂಗೆಡೆವ ನೀರ್ ಬೀಳು ಬೆಳ್ಪು !
ಕಡೆದ ನೊರೆ, ಚಿಗಿವ ನೊರೆ, ತೂರು ನೊರೆ, ಕುದಿವ ನೊರೆ, ಬೆಳ್ಪಿ ನೊಳ್ ಬೆಳ್ಪು !
ಆ ಬೆಳ್ಪು, ಆ ತೆಳ್ಪು, ಆ ಮೆಲ್ಪು -ನಿನ್ನ ಮಕ್ಕಳ ಬಾಳಿನೊಳ್ಪು ;
ನೀರ್‌ ಬೀಳ ಬೆಳ್ನೊರೆಯ ಬಿಸಿಲ ಬೆಳ್ದಿಂಗಳಾ ಮಳೆಬಿಲ್ಲ ತಳ್ಪು !
ಬೆಳ್ಗೊಳವೊ, ತೀರ್ಥಗಳೊ, ಧರ್‍ಮಧರ್ಮದ ತಿರುಳೊ, ಪಾಡುವರ ಪುರುಳೋ,
ಒಳ್ಗನ್ನಡದ ಕಲೆಯೊ, ಕುಸುರಿಗೆಲಸದ ಸಿಲೆಯೊ, ಆ ನಯವೊ, ಮೆರುಗೋ !
ನಿನ್ನ ಚಿಣ್ಣರ ಸೊಬಗೊ, ಬೆಡಗೊ, ಮೆಲ್ಲೆದೆ ತಣ್ಪೊ, ಕೊಡುಗೈಯ ಬಿಣ್ಪೋ !
ಓ ಎನ್ನ ತಾಯಿ, ಕನ್ನಡ ತಾಯಿ, ನಮ್ಮವ್ವ, ದೇವಿ, ಸಮ್ರಾಜ್ಞಿ,
ನಿನ್ನ ನರಸುತ ಸುಳಿವ, ನೋಂಪಿಯೆನೆ ನಿನ್ನೊಲುಮೆನಾಡನೊಳಕೊಳುವ,
ನಿನ್ನ ಚೆಲುವನು ಸವಿವ ಮಗುವಾರು ತಣಿಯದನು, ಹಾಡಿ ಕುಣಿಯದನು,
ಭಕ್ತಿಯಲಿ ತಲೆದೂಗಿ ಬಾಗಿ ಮಣಿಯದನು !


ಚೆಲುವು ಕಣಿ ಕಾರ್‍ವಾರವೆದೆ ತುಂಬಿ, ಗೋಕರ್ಣದಲಿ ಮಿಂದು, ಸಂದು,
ಉಡುಪಿಯಲ್ಲಿ ಕೃಷ್ಣಂಗೆ ಕೈ ಮುಗಿದು, ಮಂಗಳೂರಿನ ಹಿರಿಯ ನಂಟರಲಿ ನಿಂದು,
ಚಾರ್‍ಮಾಡಿ ಘಾಟಿಯನು ಬಳಬಳಸಿ ಮೇಲೇರಿ ಬಂದವನು ಕಂಡೆ, ಕಂಡೆ !
ಮೇಲೆ ತಿಳಿಯಾಕಾಶ, ಸುತ್ತಲೂ ಬೆಟ್ಟಸಾಲ್ ತೋಳ ತೆಕ್ಕೆಯಲಿ
ಕಣಿವೆಯೇರುವ ಕಾಡು, ದಟ್ಟಡವಿ, ಒಮ್ಮೊಮ್ಮೆ ಹಕ್ಕಿಗಳ ಹಾಡು,
ಮರದ ಮರೆಯಲಿ ದುಮುಕುವಬ್ಬಿಗಳ ಹಬ್ಬಿ ಹರಡಿದ ಕೂಗು ಕೊರಲು !
ಕಂಡೆನಾಕೆಯನಲ್ಲಿ, ದೂರದಲಿ, ಕಣ್ ಪುಣ್ಯ ಮಿಂಚಿ ಮರೆಯಾಯ್ತು !
ಕನ್ನಡದ ಆ ನೋಟ, ದೇವಿಯಾ ದರ್ಶನಂ ಪೊಳೆದು ಬಯಲಾಯ್ತು !
ಎವೆ ಹೊತ್ತಿನಾ ನೋಟ, ಸವಿನೋಟ, ಸವೆಯದೆದೆಚಿಮ್ಮುತಿಹುದಿನ್ನೂ !
ಅಮೃತಲೋಕದ ಮಾತೆ, ಅಳಿಯದಳ್, ಬಾನ್‌ಬಾಳ ಪೆರ್‍ಮೆಗಳ ತಾಯಿ,
ತಲೆಯಲ್ಲಿ ಪೊನ್ನ ಮುಡಿ, ಪದಿದರಿಲ ಪೆಂಪು, ಬೆಳ್ದಾವರೆಯ ಪೊಂಗಯ್ !
ಸುತ್ತಲುಂ ಪೊನ್ನಾಡ ಕನ್ನಡದ ಪೆರ್‍ಮೆನಡಿಗಳ್, ಸಾವನೊದೆದು ಬೆಳಗಿ,
ಕನ್ನಡದ ಮಕ್ಕಳ್ಗೆ ಕನ್ನಡದ ಪಾಲೆರೆದು, ಬಾಳ್ಗೆ ಬಾಳ್ ಪೊಯ್ದು,
ಬಾಳ್ವವರು ಮೆರೆವವರು,-ಪೆರ್‌ ನೋಟ ! ಪಿರಿಯ ತಾಯ್ ಪಿರಿಯ ಮಕ್ಕಳ್‌ !
ಕಪ್ಪು ಹೆಪ್ಪಿನ ಕುರುಳ ಕರ್ಮುಗಿಲ ಬಸಿರಿಂದ ತೊಟ್ಟನೊಡೆಹೊಮ್ಮಿ,
ಬಾನ ಈ ಕರೆಯಿಂದ ಆ ಕರೆಗೆ ಚಿಮ್ಮಿ ಒಡನಡಗುವುದೆ ತೇಜಂ,
ಆ ತೇಜದುರಿಯಂತೆ ಕಣ್ಣುಳ್ಕಿ, ಹೊರಗಡಗಿ, ಒಳಗಿರ್‍ಪುದಿನ್ನುಂ.
ಇದೊ ಬಂದೆನೀ ಹಾಳು ಹಂಪೆಗಿಂದರಸುತ್ತ,-ಒಳಗಿರ್‍ಪುದಿನ್ನುಂ-
ಒಳಗಿದ್ದು ಹೊರಗಣ್ಗೆ ಕಾಣಿಪುದು ಮತ್ತೊಮ್ಮೆ ಆ ತಾಯ ನೋಟಂ.
ತುಂಗಭದ್ರೆಯ ತಡಿಯ ಚೆದರಿರುವ ಮೊರಡಿಗಳ ಕೊರಕಲಿನ ಬಿಸಿಲ
ಬೇಗುದಿಯ ಬಿರುಕಿನಲಿ ಮುಳ್ಳೆಡೆಯ ಕಲ್ಲುಹೂವಿಡಿದರೆಯ ಮೇಲೆ,
ಕುಳಿತಿದ್ದಳಾ ತಾಯಿ, ಕೈಮೇಲೆ ತಲೆಯೂರಿ, ಅಳಲಿನಾಳದಲಿ !-
“ಯಾರವ್ವ, ನೀ ತಾಯಿ ? ಏತಕಿಂತೊಬ್ಬಳೇ ಕುಳಿತೆ ಕಾಡಿನಲಿ ?
ಏಕೆ ಮೊಗ ಬಾಡಿಹುದು, ಕಂದಿಹುದು, ನೊಂದಿಹುದು, ಕಾಂತಿಗುಂದಿಹುದು ?”
ಕಂಬನಿಗಳೂರುತಿಹ, ಕಳವಳದ, ಕೂರ್‍ಮೆ ನಡುಗಿಪ ನುಡಿಯ ಕೇಳಿ,
ಕತ್ತೆತ್ತಿ, ಪಳಮೆಯಾಳದ ಕಣ್ಣನೆನ್ನ ಕಣ್ಣಲಿ ನೆಟ್ಟು, ಕಯ್ಯ
ಕುಳ್ಳಿರಲು ಸನ್ನೆ ಗೈದೀ ಪರಿಯೊಳಾಡಿದಳು, ತೋಡಿದಳು ತೊಳಲ-
ಕಣ್ಣಾರ ಕಂಡುದನು, ತಾಯೆನ್ನೊ ಳಾಡಿದುದನಾಡುವೆನು, ಕೇಳಿ.
ಕಿವಿಗೊಟ್ಟು ಕೇಳಿ:
ಎದೆಗೊಟ್ಟು ಕೇಳಿ:
ಏಳಿ, ಎಚ್ಚರವಾಗಿ, ಅರಳಿ ಬಾಳಿ !


“ಕೇಳಣ್ಣ, ನಾನೊಬ್ಬ ಹಳೆಯ ಮುತ್ತೈದೆ-ಹಿರಿದಾಗಿ ಬಾಳಿದವಳೊಮ್ಮೆ :
ಈಗ ಬಡತನ, ಬಡವೆ, ಬಡವಾದೆ : ಬಡವಾದ ಮಕ್ಕಳನು ನೋಡಿ,
ಬತ್ತಿ, ಮತ್ತಿಮ್ಮಡಿಯ ಸೊರಗಿನಲಿ ಬಡವಾದೆ-ಸಾವಿಲ್ಲ ನನಗೆ !
ಸಾವಿಲ್ಲ-ಸಾಯುತಿಹೆ: ಹೊಸ ಮಳೆಗಳಾಗಿ, ನೆಲ ಹೊಸ ಹೊನಲು ಹರಿದು,
ಹೊಸ ಹಮ್ಮು ಹಮ್ಮುತ್ತ, ಎಲ್ಲರೂ ನನ್ನಕ್ಕತಂಗಿಯರು ಚಿಗುರಿ
ಎಲ್ಲರೂ ಚೆಲುವಾದರೆಲ್ಲರೂ ಚಿನ್ನವಾದರು-ನೋಡು, ನೋಡು-
ಆ ಕಡೆಗೆ, ಈ ಕಡೆಗೆ ತೂಗುವರು ತೊನೆಯುವರು, ಆ ಪೊಂಕ, ಬಿಂಕ !
ಪೇರೊಕ್ಕಲಾಗಿ ಪಾಡುವರು ;
ಅವರ ಮಕ್ಕಳು ಬೆಳೆದು ಕಳೆಗೂಡಿ ಮನೆ ಬೆಳಗಿ ಹಬ್ಬ ಮಾಡುವರು-
ತಾವ್ ಮೊದಲು ಬದುಕಿ,
ತಾಯ್ ಮೊದಲು ಬದುಕಿ,
ಹೆರರ ಹೊರೆಗಳನಿಳಿಸೆ, ಹೆರರ ಸೆರೆಗಳ ಬಿಡಿಸೆ, ಕಯ್ಯ ನೀಡುವರು.
ಆ ಸಯ್ಪು, ಆ ಪುಣ್ಯ, ನನಗಿಲ್ಲ : ನನ್ನ ಮಕ್ಕಳಿಗಿಲ್ಲ ಹಬ್ಬ-
ನನ್ನ ಮಕ್ಕಳಿಗಿಲ್ಲ ಹಬ್ಬ :
ಮಳೆ, ಸುಗ್ಗಿ ; ಬೆಳೆ, ಬೆಳಕು ; ಹಾಡು, ಹಸೆ ; ಕೂಗಾಟ, ಕುಣಿದಾಟ, ಪಾಟ;
ಒಲೆದಾಟ, ನಲಿದಾಟ, ಒಲುಮೆ ಬೀರಾಟ,
ನನ್ನ ಮಕ್ಕಳಿಗಿಲ್ಲ-ನನಗಿಲ್ಲ-ಬಾಳ್ಗೆ ಆ ಅಕ್ಕ ತಂಗಿಯರು !
ನಮಗಿಲ್ಲ ಬಾಳು.
ಎಲ್ಲರೂ ಬಾಳುವೆಡೆ ನಮಗೆ ಸಾವೆ ?
ಎಲ್ಲರೂ ನಲಿವ ಕಡೆ ನಮಗೆ ನೋವೆ ?
ಏನು ಕವಿಯಿತೊ ಮಂಕು, ಮಕ್ಕಳಿಗೆ ! ಯಾರೆರಚಿದರೊ ಬೂದಿ, ಕಾಣೆ,
ನನ್ನ ನೊಲ್ಲರು ನನ್ನ ಮಕ್ಕಳೇ ! ತಾವ್ ಬಾಳಿ, ತಾಯ ಬಾಳಿಸರು.
ಹೆರರ ನುಡಿ, ಹೆರರ ನಡೆ,-ಹರರ ಕೂಗೇ ಕೂಗು ; ಹೆರರದೇ ಹೆಮ್ಮೆ !
ನನ್ನ ಮನೆ ಹಾಳು !
ನನ್ನ ನುಡಿ ಬೀಳು !
ನನ್ನ ನಾಡಿನಲಿರುಳು : ನನ್ನ ತೋಟವನಗೆವ, ತೆಂಗಡಕೆಯಿಡುವ,
ತಾವರೆಯ ಕಾಪಿಡುವ, ಮೊಲ್ಲೆ ಮಲ್ಲಿಗೆ ನೆಡುವ, ಆನಂದ ಕೊಡುವ
ಮಕ್ಕಳೆಲ್ಲಿಹರೆನಗೆ-ಹೆರರೊತ್ತೆ ಗಡಿಬಿಡುತ ಹದುಗುತ್ತ, ನುಗ್ಗೆ ಕುಗ್ಗುತ್ತ.
ಹೆರರ ಕೈ ಕಾಯುತ್ತ, ಸಾಯದೆಯೆ ಬದುಕದೆಯೆ ಬಾಳ ನೂಕುವೆನು.


ಅರಿದೆನರಿದೆನು ಮಾತನಾಡುವಳದಾರೆಂದು : ಕನ್ನಡದ ತಾಯಿ !
ನಮ್ಮ ಕನ್ನಡ ತಾಯಿ, ತನ್ನ ಹೊಂಬಸಿರಿಂದ ನಮ್ಮನ್ನು ತಂದು,
ನಾವು ಬಿಟ್ಟೋಡೆ ಬಿಡದೆ, ಹಂಬಲಿಸಿ, ಮರುಹುಟ್ಟಿ ಹಾರೈಸುತಿಹಳು-
ನಾನೆಂದೆ, ಅಳಲನಾರಿಸಬಯಸಿ- “ಏಕಮ್ಮ, ಇನಿಸೊಂದು ಕೊರಗು ?
ಬೇಡಮ್ಮ ಮಕ್ಕಳಲಿ ಇನಿಸೊಂದು ಕಡುಮುನಿಸು-ಬಾರಮ್ಮ, ಹರಸು.
ನಿನ್ನ ನಾಡಿನೊಳದೆಕೊ ಬೆಳಕು ಮೂಡಿಹುದು-ಜೀವ ಕೂಡಿಹುದು.
ನಿನ್ನ ಮಕ್ಕಳು ನಿದ್ದೆಗಳೆದೆದ್ದ ಸಿಂಹದಂತೇಳುತ್ತ, ಮೊಳಗಿ,
ಕಣಕಿಳಿದು ಪಂಪ ನೃಪತುಂಗರಾ ಮಾತುಗಳು ದಿಟವೆನಿಸುತಿಹರು.
ಸೆರೆಯನೊಕ್ಕಡೆಗೊಗೆದು, ಬಿಡುಗಡೆಯ ಕೈಕೊಂಡು, ಹಳ ನೆನಪು ನೆನೆದು,
ಹೊಸ ಕಾಣ್ಕೆಗಳ ಕಂಡು, ಸಾಮ್ರಾಜ್ಯಗಳ ಮತ್ತೆ ಕಟ್ಟುತಿಹರು.
ನಿನ್ನ ನಾಡೊಂದಾಗಿ, ನಿನ್ನ ನುಡಿ ಮೇಲಾಗಿ, ಮನೆ ಮಕ್ಕಳೆಲ್ಲ
ಪೇರೊಕ್ಕಲಾಗಿ ಪಾಡುವರು!
ತಾಯ್ ಬದುಕಿ, ತಾವ್ ಬದುಕಿ, ಹೆರರ ಬದುಕಿಪರು!
ಹಾಳು ಹಂಪೆಯ ನಡುವೆ, ನಡುಕಟ್ಟಿ ಮತ್ತೊಮ್ಮೆ ಮುಡಿಪಾಗಿ ತಾಯ್ಗೆ
ಭಕ್ತಿಯಲಿ ಜೀವವನು ಸಲಿಸುವರು-ಏಳು !
ಸಡಗರದ ಆ ಕೂಗ ಕೇಳು :
ನಾಡು ಸಿಂಗರವಾಯ್ತು, ಬೀಡು ಹೆಬ್ಬೆಳಕಾಯ್ತು, ಅದೊ ಹಬ್ಬ ಮೆರೆತ !
ಹೆಣ್ಣ ಚೆಲುವನು ನೋಡು-ಗಂಡುಗಲಿಗಳ ನೋಡು-ಕಟ್ಟಾಳುಗಳನು,
ರಾಜರನು, ಋಷಿಗಳನು, ಕವಿಗಳನು, ಧೀರರನು, ಕರ್ಮ ವೀರರನು-
ಹೊಸತ ಹಳದನು ಮಾಡಿ, ಹಳದ ಹೊಸತನು ಮಾಡಿ, ನಾಡೊಂದು ಮೂಡಿ,
ಧರ್ಮ ಸತ್ಯಗಳಿಂದ, ಪ್ರೇಮ ಶಾಂತಿಗಳಿಂದ, ಸ್ವಾತಂತ್ರ್ಯದಿಂದ,
ಸುಖದಿಂದ, ಸೌಂದರ್ಯದಾನಂದದಿಂದೆಲ್ಲ ಸಮದೃಷ್ಟಿಯಿಂದ
ಬಾಳರೇ ನೀ ಬಂದು ನಲಿಸಿದೊಡೆ, ಹರಸಿದೊಡೆ-ಬಾ ತಾಯಿ, ಹರಸು,
ತೇರೇರು ಬಾ ತಾಯಿ, ನಿನ್ನ ಸಿಂಹಾಸನವನೇರು ಮತ್ತೊಮ್ಮೆ.
ಪಳಮೆಯಲಿ ಪೇರಾಲವನು ನೀನು ಬಿತ್ತಲದು ಮೊಳೆತು, ಮರವಾಗಿ,
ಪಡುವ ಮೂಡಲು ತೆಂಕ ಬಡಗಲೆಡೆ ಕೊಂಬೆಗಳನೆಸೆದೆಸೆದು ಬೀಗಿ,
ಈ ಕೊಂಬೆ ಕರಗಿದೊಡೆ ಆ ಕೊಂಬೆ ಬಿಳಿಲಿಳಿದು ಬೇರೂರಿ ತಾಗಿ
ಒಂದೆ ಮರವಮರವಾಗಿರ್ಪಂತೆ, ಅಮರವಾಗಿನ್ನುಮದೆ ಇಹುದು
ನಿನ್ನೊಂದು ಕರ್ನಾಟರತ್ನ ಸಿಂಹಾಸನಂ-ಬಾಳ್ಗೆ, ಅದು ಬೆಳೆಗೆ
ಕನ್ನಡದ ಮುಡಿಯಾಗಿ, ಕನ್ನಡದ ನುಡಿಯಾಗಿ, ಕನ್ನಡದ ಬಾಳ ಕುಡಿಯಾಗಿ !
-ಬಾರಮ್ಮ, ಹರಸು.”


ನಕ್ಕಳಾ ತಾಯಿ,
ಮುದುಕಿ ಎಳೆಯವಳಾಗಿ, ಮಾಸು ಮಿಂಚೆಳೆಯಾಗಿ, ಸವೆದ ಮೈ ತುಂಬಿ,
ಕಡಲ ತೆರೆಗಳನುಟ್ಟು, ಬೆಟ್ಟ ಬಯಲನು ತೊಟ್ಟು, ಅರಿಲ ಮುಡಿಗಿಟ್ಟು,
ಮುಗುಳ್ನಗೆಯ ನಸುನಕ್ಕಳಾ ತಾಯಿ, ನನ್ನ ತಲೆಯಲಿ ಕಯ್ಯ ತಾವರೆಯನಿಟ್ಟು ;
ಸುತ್ತಲುಂ ಕಾಣಿಸಿದರೊಡನೆ-
ಕನ್ನಡದ ಪೊನ್ನಾಡ ಪೆರ್ಮ ನಡಿಗಳ್ !
ಸಾವನೊದೆವಾ ಪಾಲ ಸೂಸು ಕಿಡಿಗಳ್‌ !
ಹಿಂದೆ ನೀಡಿದ ಸಾಲು, ಮುಂದೆ ನೀಡಿದ ಸಾಲು, ಕನ್ನಡದ ಕರುಳುಗಳು
-ನಡುವೆ, ಸಿರಿ ತಾಯಿ,
ಭುವನೇಶ್ವರೀದೇವಿ ರಥವನೇರಿದಳು.
ಕೂಗಿದರು ಎಲ್ಲರೂ ಒಕ್ಕೊರಲ್ !
“ತಾಯ್ ಬಿಜಯಮಾಡುವಳು, ದಾರಿ ಬಿಡಿ, ದಾರಿ ಬಿಡಿ, ಅಡ್ಡ ಬಾರದಿರಿ,
ಭಾರತಾಂಬೆಯ ಹಿರಿಯ ಹೆಣ್‌ಮಗಳೆ, ದಾರಿ ತೋರುವ ಹಿರಿಯ ಸೊಡರೆ,
ಬಾಳಮ್ಮ, ಬಾಳು !
ನೀನ್ ಬಾಳೆ, ಏನ್ ಬಾಳು ನಿನ್ನ ಮಕ್ಕಳದು!-ಬಾನ್ ಬಾಳು, ತಾಯೆ-
ಬಾಳಮ್ಮ, ಬಾಳು !”


ಚೆಲುವೆಯರ, ಚೆನ್ನಿಗರ, ಹಿರಿಯ ತಾಯ್ ಮಕ್ಕಳಿರ, ಒಡಹುಟ್ಟಿದವರಾ
ಒಸಗೆನುಡಿ ಕೇಳಿದಿರ, ತಾಳಿದಿರ ಎದೆಯಲ್ಲಿ, ತಾಳಿ ಬಾಳುವಿರಾ,
ನಾಡು ನುಡಿ ನಡೆಗಳನ್ನು ಮುನ್ನಡೆಗೆ ನಡಸುತ್ತ, ಮುಂದೆ ಸಾಗುವಿರಾ ?
ಭಾರತದ, ಲೋಕದಾ ಮಕ್ಕಳಲಿ ಹಿರಿದಾಗಿ ತೂಕ ತೂಗುವಿರಾ ?
ಬನ್ನಿ, ಓ ಮಕ್ಕಳಿರ,
ಒಕ್ಕೊರಲಲೆಲ್ಲರೂ ಕೂಗಿ ಈ ಒಕ್ಕೂಗ-ಈ ಹಿರಿಯ ಕೂಗ –
“ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ, ಬಾಳ್ಗೆ-
ಕನ್ನಡದ ತಾಯ್ ಗೆಲ್ಗೆ, ಬಾಳ್ಗೆ.”
*****
೧೯೩೬

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂರ್ಖ ನಾನು
Next post ಚಿತ್ರದುರ್ಗ ಜಿಲ್ಲೆಯ ಕಾವ್ಯ – ಕಳೆದ ಒಂದು ದಶಕದಿಂದ

ಸಣ್ಣ ಕತೆ

 • ಬೂಬೂನ ಬಾಳು

  ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

 • ಎರಡು ಪರಿವಾರಗಳು

  ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

 • ಟೋಪಿ ಮಾರುತಿ

  "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys