ಚಿತ್ರದುರ್ಗ ಜಿಲ್ಲೆಯ ಕಾವ್ಯ – ಕಳೆದ ಒಂದು ದಶಕದಿಂದ

ಚಿತ್ರದುರ್ಗ ಜಿಲ್ಲೆಯ ಕಾವ್ಯ – ಕಳೆದ ಒಂದು ದಶಕದಿಂದ

ಇಲ್ಲಿ ಯಾರೂ ಮುಖ್ಯರಲ್ಲ
ಯಾರೂ ಅಮುಖ್ಯರಲ್ಲ
ನೀರೆಲ್ಲವೂ ತೀರ್‍ಥ
-ಕುವೆಂಪು (ಮಲೆಗಳಲ್ಲಿ ಮದುಮಗಳು)

ಒಬ್ಬ ಬರಹಗಾರನನ್ನು ಪ್ರಾದೇಶಿಕತೆಗೆ ಕಟ್ಟಿಹಾಕಿ ನೋಡುವುದು ಅಷ್ಟೇನು ಒಳ್ಳೆಯ ಕ್ರಮ ಅಲ್ಲ. ಆದರೂ ಅವನ ಅಭಿವ್ಯಕ್ತಿಗೆ ಪೂರಕವಾಗಿ ಒದಗಿರಬಹುದಾದ ಭಾಷಿಕ ಮತ್ತು ಸಾಂಸ್ಕೃತಿಕ ನೆನಹುಗಳು ಅಭ್ಯಾಸಕ್ಕೊಂದು ಚೌಕಟ್ಟು ಒದಗಿಸುವ ಸಂಭವನೀಯತೆ ಇದ್ದೇ ಇದೆ. ನೆಲದ ಸೊಗಡು ಬರಹಗಾರನಲ್ಲಿ ಹೇಗೆ ಮೂಡಿಬರುತ್ತದೆ ಎಂಬುದೂ ಸಹ ಕುತೂಹಲದ ಅಂಶವೇ.

ಚಿತ್ರದುರ್ಗ ಜಿಲ್ಲೆಯ ಕಾವ್ಯವನ್ನು ಗಮನಿಸುವಾಗ ಇಲ್ಲಿನ ದೇಸಿ ಪರಂಪರೆಯ ಪ್ರಭಾವಗಳ (ಲಯ, ನುಡಿಗಟ್ಟು, ಇತ್ಯಾದಿ) ಜೊತೆಗೆ ಸದ್ಯ ಪ್ರವಹಿಸುತ್ತಿರುವ ಕಾವ್ಯದ ವರ್ತಮಾನದ ಗತಿಶೀಲತೆಯೊಂದಿಗೆ ಅನುಸಂಧಾನ ಮಾಡುವ ರೀತಿಗಳನ್ನು ಪರಿಶೀಲಿಸಬೇಕಾಗಿದೆ. ಜಿಲ್ಲೆಯ ಕಾವ್ಯವು ಜೀವಂತವಾಗಿದ್ದು ತನ್ನದೇ ಆದ ಅನುಸಂಧಾನ ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಬಂದಿರುವುದು ಅಭ್ಯಾಸಕ್ಕೆ ಆಶಾದಾಯಕವಾಗಿ ಕಂಡುಬರುತ್ತದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಆಗಿಹೋದ ಮಹಾಲಿಂಗರಂಗ, ಹೆಳವನಕಟ್ಟಿಗಿರಿಯಮ್ಮ, ಬಬ್ಬೂರು ರಂಗನಂತವರ ಲಿಖಿತ ಅನುಭಾವ ಸಾಹಿತ್ಯ ಮತ್ತು ಹಿರಿಯೂರು, ಚಳ್ಳಕೆರೆಗಳಂತಹ ಪ್ರದೇಶಗಳಲ್ಲಿ ದಟ್ಟವಾಗಿ ವ್ಯಾಪಿಸಿರುವ ದೇಸಿ ಅನುಭಾವದ ಪ್ರಭಾವಗಳು ಜಿಲ್ಲೆಯ ಕಾವ್ಯಕ್ಕೆ ಸ್ವಲ್ಪಮಟ್ಟಿನ ಅನುಭಾವಿಕ ನೆಲೆಗಟ್ಟನ್ನು ಒದಗಿಸಿರಬಹುದಾದ ಸಾಧ್ಯತೆಗಳಿವೆ. ಇಲ್ಲಿನ ಕಾವ್ಯದ ಆರಂಭಿಕ ಹಂತದಲ್ಲಿ ಬಂದ, ನವೋದಯ ಕಾಲದಲ್ಲಿ ಬರೆದ ಬೆಳೆಗೆರೆ ಜಾನಕಮ್ಮ, ಚಂದ್ರಶೇಖರ ಶಾಸ್ತ್ರಿಯಂತವರ ಕಾವ್ಯ ಆತ್ಮಕೇಂದ್ರಿತ ನೆಲೆಗಳಲ್ಲಿ ಬಂದರೆ, ಸಿರಿಯಜ್ಜಿಯಂತಹ ಮೌಖಿಕ ಪರಂಪರೆಯ ಮಾದರಿಗಳಲ್ಲಿನ ಕಾವ್ಯಕಟ್ಟುವ ಕೌಶಲದ ಮಾದರಿಗಳು ಇಲ್ಲಿನ ಕಾವ್ಯಭ್ಯಾಸಕ್ಕೆ ಮುನ್ನೆಲೆಯಾಗಿ ಒದಗಿಬರುತ್ತದೆ. ಇದಲ್ಲೆಕ್ಕು ಮಿಗಿಲಾಗಿ ಸದಾ ಬರಗಾಲದ ನಾಡಾದ ಚಿತ್ರದುರ್ಗ ಜಿಲ್ಲೆಯ ಒಡಲಾಳದಲ್ಲಿ ಉರಿಯುತ್ತಿರುವ ಹಸಿವಿನ ಬೆಂಕಿ ಮತ್ತು ಅದರ ಆನುಷಂಗಿಕ ಪರಿಣಾಮಗಳಾದ ವ್ಯವಸ್ಥೆಯ ಕ್ರೌರ್ಯ, ಶೋಷಣೆಗಳ ಕಾವು ಇಲ್ಲಿನ ಕಾವ್ಯದ ಮುಖ್ಯ ಪ್ರೇರಣೆಗಳು ಎನ್ನಬಹುದು. ಈಗ ವ್ಯಕ್ತಿತ್ವ ಮತ್ತು ಕನ್ನಡ ಕಾವ್ಯದ ಜೊತೆಗಿನ ಅನುಸಂಧಾನ ಮಾರ್ಗಗಳು ಹೊಸದಾದ ದನಿಯನ್ನು ರೂಪಿಸಿ ಕೊಳ್ಳುತ್ತಿರುವುದು ಗೋಚರವಾಗುತ್ತಿದೆ. ಜಿಲ್ಲೆಯ ಕಾವ್ಯವನ್ನು ಕುರಿತಾಗಿ ಈಗಾಗಲೇ ಹಲವಾರು ವಿದ್ವಾಂಸರು ಲೇಖನಗಳನ್ನು ಬರೆದು ಪ್ರಸ್ತುತಪಡಿಸಿದ್ದಾರೆ. ನನ್ನ ಈ ಲೇಖನವು ಅವರ ಲೇಖನಗಳಲ್ಲಿ ಪ್ರಸ್ತಾಪಿಸಿದ ಅಂಶಗಳನ್ನು ಮುಂದುವರೆಸುತ್ತ, ಕಳೆದ ದಶಕದಿಂದ ಈಚೆಗೆ ಬರದಿರುವ ಜಿಲ್ಲೆಯ ಕಾವ್ಯದ ನೆಲೆ ಮತ್ತು ಬೆಳವಣಿಗೆಗಳನ್ನು ಗುರುತಿಸುವ ನಿಟ್ಟಿನಲ್ಲಿದೆ.

ನವೋದಯದಿಂದ ಬಂಡಾಯದವರೆಗು ಅನೇಕ ಕಾಲಘಟ್ಟಗಳನ್ನು ದಾಟಿ ಬಂದ ಕನ್ನಡ ಕಾವ್ಯದ ಮುಂದಿನ ದಾರಿ ಏನು ಎಂಬುದು ಇಂದಿನವರೆಗು ಜಿಜ್ಞಾಸೆಯಾದ ವಿಷಯವಾಗಿತ್ತು. ಇಂದು ಕಾವ್ಯವು ಸ್ಥಗಿತಗೊಂಡಿದೆ ಆಥವಾ ಕಾವ್ಯವು ಹೊರಳುದಾರಿಯಲ್ಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇವು ಮುಖ್ಯವಾಗಿ ಬ೦ಡಾಯೋತ್ತರ ಕಾವ್ಯರಚನೆಗಳನ್ನೇ ಗಮನದಲ್ಲಿಟ್ಟುಕೊಂಡ ಮಾತುಗಳು. ಬಂಡಾಯದ ಸಾಹಿತ್ಯವು ಸೈದ್ದಾಂತಿಕತೆಯನ್ನು ವಿಶದವಾಗಿ ಪ್ರತಿಪಾದಿಸಿತಲ್ಲದೆ, ಸಾಹಿತ್ಯದ ಕಲಾತ್ಮಕ ನಿಲುವುಗಳ ಬಗ್ಗೆ ತನ್ನದೇ ಆದ ಧೋರಣೆಗಳನ್ನು ರೂಪಿಸಿಕೊಂಡಿದ್ದಿತು. ಕೃತಿಯೊಂದರ ಜಾನ್ (genre)ಗಳಿಗಿಂತ ಕೃತಿಯನ್ನು ಆವರಿಸುವ ಸೈದ್ದಾಂತಿಕತೆಯೇ ಮುಖ್ಯವೆನಿಸಿದ ಸಂದರ್ಭವೂ ಅದಾಗಿತ್ತು. ಬಂಡಾಯವು ಬಂದಾಗ ಸ್ತ್ರೀಯರ, ಮುಸ್ಲಿಮರ, ದಲಿತರ ದನಿಗಳು ಸಂವೇದನೆಗಳು ಸಾಹಿತ್ಯಕ್ಕೆ ದಕ್ಕಿದ್ದು ಧನಾತ್ಮಕ ಪರಿಣಾಮ. ಇದು ಸಾಧ್ಯವಾಗಿದ್ದು ಜಾನ್‌ಗಳ ಮೇಲಿನ ಉದಾರ ನಿಲುವಿನಿಂದಲೇ. ಆದರೆ ಯಾವಾಗ ಸೈದ್ಧಾಂತಿಕ ದೃಷ್ಟಿಧೋರಣೆಗಳು ತೆಳು ಅನುಕರಣೆಗಳಾಗಿ ಪುನರಾವರ್ತಿತ ಪ್ರತಿಭಟನಾ ಮಾದರಿಗಳಾಗುತ್ತ ಬಂದವೋ, ಆಗ ಮೊದಲಿನ ಹೊಸತನ ಇಲ್ಲವಾಗಿ ಕಾವ್ಯವು ಸವಕಲಾಯಿತು. ಇದರಿಂದ ಉಂಟಾದ ಶೂನ್ಯವನ್ನು ಬಂಡಾಯೋತ್ತರ ರಚನೆಗಳು ಹೊಸತನಕ್ಕಾಗಿ ಅರಸಿ, ಬೇರೆಬೇರೆ ರೀತಿಯ ಪ್ರಯೋಗಗಳಲ್ಲಿ ತೊಡಗಿಕೊಂಡಿರುವುದನ್ನು ಗಮನಿಸಬಹುದು. ಅನುಭಾವ, ಸಾಂಸ್ಕೃತಿಕ ನೆಲೆಗಳ ಶೋಧವು ತೀವ್ರವಾಗಿ ಒಂದೆಡೆ ಆತ್ಮಸಂಗಾತವೂ ಇನ್ನೊಂದೆಡೆ ಸಾಂಸ್ಕೃತಿಕ ಆಸ್ಮಿತೆಯ, ಸಾಮುದಾಯಿಕ ಆಸ್ಮಿತೆಯ ಶೋಧವೂ ಆಗಿ ಕಾವ್ಯ ಪ್ರಕಟಗೊಳ್ಳತೊಡಗಿತು. ಅಲ್ಲದೆ ಅಂತರ್ ಶಿಸ್ತೀಯ ಅಧ್ಯಯನಗಳು, ವಿಸೃತ ಓದಿನ ಮಾರ್ಗಗಳು ಒತ್ತಾಸೆಯಾಗಿ ನಿಂತವು. ಈಗ ಆತರಿಸುವ ಈ ಮಾರ್ಗಕ್ಕೆ ನವಬ೦ಡವಾಳಶಾಹೀ ಬದುಕಿನ ಜೀವನಕ್ರಮಗಳು ಇನ್ನಷ್ಟು ಗೊಂದಲಗಳನ್ನು ಉಂಟುಮಾಡಿ, ಹೊಸ ಹೊಸ ಮಾರ್‍ಆನ್ವೇಷಣೆಗಳಿಗೆ ಕಾವ್ಯವನ್ನು ತೆರೆದುಕೊಳ್ಳುವಂತೆ ಮಾಡಿದವು. ಇದರ ಫಲವಾಗಿಯೋ ಏನೋ ಆಧುನಿಕೋತ್ತರ ಜೀವನ ಕ್ರಮಗಳಲ್ಲಿ ಕಾಣುವ ಕೊಲಾಜ್ ಮಾದರಿಯ ಪ್ರಜ್ಞೆಯ ವಿಕಾಸವಾಗತೊಡಗಿದೆ. ಇದು ಕಾವ್ಯದ ಬಹುಮುಖಿ ಚಲನೆಯ ಸೂಚನೆಯೂ ಆಗುವಂತೆ ಕಾಣುತ್ತಿದೆ.

ಕನ್ನಡ ಕಾವ್ಯದ ಈ ಭಿತ್ತಿಯಲ್ಲಿ ಜಿಲ್ಲೆಯ ಕಾವ್ಯವನ್ನು ನೋಡಿದರೆ, ಕಳೆದ ದಶಕದಿಂದ ಬಂದ ಕಾವ್ಯದಲ್ಲಿ ಈಗಾಗಲೇ ಕಾವ್ಯಾಭ್ಯಾಸದಲ್ಲಿ ತೊಡಗಿಕೊಂಡು, ಸಿದ್ಧಾಂತದ ನೆಲೆಗಳಿಂದಲು, ಪ್ರಯೋಗಗಳ ದೃಷ್ಟಿಯಿಂದಲು ನಿರತರಾದ ಜಿಲ್ಲೆಯ ಹಿರಿಯ ಕವಿಗಳಿದ್ದಾರೆ. ಇನ್ನೂಂದು ಕಡೆ ಯುವಕವಿಗಳನೇಕರು, ಕಾವ್ಯರಚನೆಯಲ್ಲಿ ಗಂಭೀರವಾಗಿ ತೊಡಗಿಕೊಂಡು ಅನೇಕ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಇಲ್ಲಿನ ಹಿರಿಯ ಕವಿಗಳಿಗೂ ಯುವಕವಿಗಳಿಗೂ ಭಿನ್ನ ಆಯಾಮಗಳಿವೆ. ಅವರ ಅನುಸಂಧಾನದ ಕ್ರಮಗಳೂ ಭಿನ್ನವಾಗಿದ್ದು, ಕಾವ್ಯದ ಹೊರಳುಗಳನ್ನು ತೋರಿಸುವಂತಿದೆ.

ಬಂಡಾಯೋತ್ತರ ಕಾವ್ಯದಲ್ಲಾದ ವಸ್ತುವಿನ, ಸಂವೇದನೆಯ ಬದಲಾವಣೆಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಪಲ್ಲಟಗಳು ಕಾಣದೇ ಹೋಗಬಹುದು. ಈ ಮೊದಲೇ ಹೇಳಿದಂತೆ ಹಸಿವು, ಬಡತನದ ಆಕ್ರೋಶಗಳು ಜಿಲ್ಲೆಯ ಕಾವ್ಯದ ಮೂಲಶ್ರುತಿಯಾಗಿದ್ದು ಅವು ಈಗ ಧ್ಯಾನಸ್ಥನೆಲೆಯನ್ನು ತಲುಪುತ್ತಿವೆ.

ಬಂಜಗೆರೆ ಜಯಪ್ರಕಾಶರಂತಹ ಕವಿಯಲ್ಲಿ ಇದು ಸ್ಪಷ್ಟವಾಗುತ್ತಿರುವುದರ ಸೂಚನೆಗಳಿವೆ. ಪ್ರಭುತ್ವ ಮತ್ತು ವ್ಯವಸ್ಥೆಯಲ್ಲಿನ ಲೋಪಗಳು ಕವಿಗೆ ಆಕ್ರೋಶ ಹುಟ್ಟಿಸಿವೆ. ನೆರೂಡ, ಬೆಂಜಮಿನ್ ಮೊಲಾಯಿಸ್, ಮಂಡೇಲಾರಂತಹ ಎಚ್ಚೆತ್ತ ಕವಿಪ್ರಜ್ಞೆಯ ಅಂತಃಸತ್ತ್ವವೊಂದು ಬಂಜಗೆರೆಯವರಲ್ಲಿದೆ. ಚಳವಳಿಗಳಿಂದ ಪ್ರೇರೇಪಿತಗೊಂಡ, ಎಡಪಂಥೀಯ ನಿಲುವುಗಳ ತೆಲುಗಿನ ಕಾವ್ಯದ ಬೀಸು ಸಹ ಅವರ ಕಾವ್ಯದಲ್ಲಿದೆ. ಕನ್ನಡದಲ್ಲಿ ಇದು ವಿಶೇಷವೆನಿಸುವ ವಸ್ತುಪಲ್ಲಟ. ವ್ಯವಸ್ಥೆಯ ಬಗ್ಗೆ ಅನುಮಾನಗಳನ್ನಿಟ್ಟುಕೊಂಡು ವ್ಯಗ್ರತೆಯನ್ನು ಕಾವ್ಯಾತ್ಯಕ ನೆಲೆಗಳಲ್ಲಿ ಗಟ್ಟಿಗೊಳಿಸಿಕೊಳ್ಳುವ ಹಂಬಲ ಅವರದು. ಪರಿಹಾರಕ್ಕಾಗಿ ಆಪೇಕ್ಷಿಸುವ ಚಿಕಿತ್ಸಕ ಮಾರ್ಗಗಳನ್ನು ತಡವಿಯು ಕಾವ್ಯದಕ ಅಮೂರ್ತತೆ ಒದಗಿಸಬಹುದಾದ ಅಸಂಖ್ಯೆ ಸಂಭವನೀಯತೆಗಳ ಬಗೆ ಜೆ. ಪಿ. ಕುತೂಹಲಿಯಾಗುತ್ತಾರೆ. ಅವರ ‘ಮಹೂವಾ’ ಅಥವಾ ‘ಎನೋಸ್ಕಿ ಸಿಕಲೆಲೆ ಆಫ್ರಿಕಾ’ ಮುಂತಾದ ಕವಿತೆಗಳು ಪ್ರಭುತ್ವ ವಿರ್‍ಓಧೀ ಚಳವಳಿಯ ದನಿಗಳಂತಿದ್ದರೂ, ಅವನ್ನು ಕಾವ್ಯಸಂದರ್ಭದಲ್ಲಿ ನಿಲ್ಲಿಸಲು ಅವರು ಇಚ್ಛಿಸುತ್ತಾರೆ. ಶೋಷಿತರು ವ್ಯವಸ್ಥೆಗೆ ಬಲಿಯಾಗುವುದನ್ನು ರಂಜನೆಯಿಲ್ಲದೆ, ಅಬ್ಬರವಿಲ್ಲದೆ ನಿರೂಪಿಸುವ ಧಾಟಿ ಅವರ ಕಾವ್ಯದಲ್ಲಿದ್ದು, ಅದಕ್ಕಾಗಿ ಆವರು ಮಿಥ್‌ಗಳ ಮೊರೆ ಹೋಗುತ್ತಾರೆ. ಉದಾಹರಣೆಗೆ ಶುನಃ ಶೇಫನ ಮಿಥ್:

‘ಯಾಕಳುವೆ ಎಲೆ ಕಂದ
ಮೂಕ ಶುನಃ ಶೇಫ
ಕಣ್ಣೊರೆಸಿರೋ ನಗಬೇಕು’.

ವಾಸ್ತವದಕ ವಿಷಾದವು ಸ್ಥಾಯಿಯಾಗಿ, ಅದನ್ನು ಮೀರಲು ರಮ್ಯ ನೆಲೆಗಳಿಂದ ಹಿಂದಿರುಗುವ ಚಲನೆಯನ್ನು ಜೆ. ಪಿ. ಯವರ ಕಾವ್ಯದಲ್ಲಿ ಕಾಣಬಹುದು. ಅವರ ‘ಋತುಸಂಹಾರ’ ಕವಿತೆ ನೋಡಿ:

ಯಾವ ಕಾಲಕ್ಕೂ ಕಾಲು ಮುರಿದ ಕೋಳಿಯಂತೆ
ಕಿರುಚಿಕೊಳ್ಳುವುದು ನಗರ
ಇಲ್ಲಿ ಋತುಗಾನವಿಲ್ಲ
ಇದ್ದರೆ ಗಾನದ ದನಿ
ಒಡೆದ ಗಾಯವಾಗಿದೆ

ಈ ನಿರಾಶೆಯ ದನಿ ಕೊನೆಮುಟ್ಟುವುದು ಹೀಗೆ:

ಆದಕ್ಕೇ ನಾ ಹಂಬಲಿಸುತ್ತೇನೆ
ಹೂವು ಹಕ್ಕಿಯ ಗೂಡು
ಹಣ್ಣು ಜೇನು ಗೊಂಚಲು
ಮರಕೋತಿ ಆಡಲು ನೆರಳಿದ್ದ
ಹಳ್ಳಿಮರವನ್ನು.

ಈ ಆಶಯವು ಕುವೆಂಪು ಅವರ ‘ಹೋಗುವೆ ನಾ ಮಲೆನಾಡಿಗೆ, ನನ್ನೊಲುಮೆಯ ನಾಡಿಗೆ’ ಎನ್ನುವುದಕ್ಕಿಂತ ಭಿನ್ನವಾಗಿಲ್ಲ. ಕವನ ಸ೦ಕಲನಕ್ಕೆ ‘ಕಳೆದ ಕಾಲದ ಪ್ರೇಯಸಿಯರಿಗೆ’ ಎಂದು ಹೆಸರು ಕೊಟ್ಟಿರುವುದರಲ್ಲೇ ಭಾವನಾತ್ಮಕ, ರಮ್ಯನೆಲೆಗಳ ಕಡೆಗೆ ಮುಖಮಾಡಿದಂತಿದೆ. ಪ್ರಖರವಾದ ವಿಷಾದವನ್ನು ಸೃಷ್ಟಿಸಿಕೊಂಡ ಆಧುನಿಕತೆಯ ನರಕಕ್ಕೆ ಪ್ರತಿಯಾಗಿ, ದೇಸಿಯ ನೆಲೆಯತ್ತ ತಿರುಗುತ್ತಿರುವ ಸೂಚನೆಯಿದೆ. ಮತ್ತು ಈ ಕಾರಣಕ್ಕೇ ಜಯಪ್ರಕಾಶರ ಕಾವ್ಯವು ಸತ್ತ್ವಶಾಲಿಯಾಗಿ ನಿಲ್ಲುತ್ತದೆ.

ಚಂದ್ರಶೇಖರತಾಳ್ಯ ಅವರಲ್ಲು ವಾಸ್ತವದ ವಿಷಾದವು ಪ್ರತಿಫಲಿಸುವ ಸೂಚನೆಗಳಿವೆ. ಇಲ್ಲಿಯೂ ಹೊರಳುಗಳಿವೆ. ಅವರ ವಿಷಾದ ಯೋಗವು ಕೆಲವೊಮ್ಮೆ ಅನುಭಾವಕ್ಕೆ ತೆರೆದುಕೊಂಡರೆ, ಇನ್ನೂ ಕೆಲವು ಸಾರಿ ರಮ್ಯತೆಗೆ ಹಿಂದಿರುಗುವ ಹಾದಿಯಲ್ಲಿದೆ. ‘ಎಲ್ಲಿ ನವಿಲು ಹೇಳಿರೇ’ ಕವಿತೆಯಲ್ಲಿ ತಾಳ್ಯ ನವಿಲೆಂಬ ಆಧ್ಯಾತ್ಮಿಕ ಸಂಕೇತವನ್ನು ಎತ್ತಿಕೊಂಡು ಅದನ್ನು ಮುಟ್ಟುವ ಆಶಯ ಹೊಂದುತ್ತಾರೆ. ವರ್ತಮಾನದ ದುಷ್ಟಜಗತ್ತಿನ ಸಂದರ್ಭವನ್ನು ವರ್ಣಿಸುತ್ತಲೇ ನವಿಲು ಹುಡುಕುತ್ತೇನೆ ಎನ್ನುವ ಅಪೇಕ್ಷೆ ಇರುವುದು ಇಲ್ಲಿ ಕಾಣುತ್ತದೆ.

ಸರ್ಪಸರಿವ ಹಾದಿಗಳೇ
ಬಿಲ್ಲುಗಾರ ಗಾಳಿಗಳೇ
ಹಲ್ಲುಕಿರಿವ ಸೂಜಿಗಳೇ
ಎಲ್ಲಿ ನವಿಲು ಹೇಳಿರೇ || ಅಲ್ಲಿ ಬರುವೆ ತಾಳಿರೇ.

ತಾಳ್ಯರ ‘ಸುಡುವ ಭೂಮಿ’ ಸಂಕಲನದ ‘ಫ್ಯಾಂಟಮ್’ ಕವಿತೆಯು ರಮ್ಯ ಚಲನೆಯನ್ನು ತೋರುತ್ತದೆ. ಅವರು ಕವಿತೆ ಕಟ್ಟುವ ಕ್ರಮ, ಅವರ ಲಯವಿನ್ಯಾಸಗಳು, ಭಾಷೆಯ ಬಳಕೆ ಎಲ್ಲವೂ ರಮ್ಯತೆಯಿಂದ ಕೂಡಿವೆ. ಕವಿತೆ ತಾಳ್ಯ ಅವರಿಗೆ ‘ಬಿನ್ನಾಣಗಿತ್ತಿ’ ಯಂತಿರುವುದರಿ೦ದ, ಆಧುನಿಕ ತಳಮಳಗಳನ್ನು ನವೋದಯ/ಸಾಂಪ್ರದಾಯಿಕ ಲಯಗಳಲ್ಲಿ ಹಿಡಿಯ ಬಯಸುತ್ತಾರೆ. ಬೆಳೆಗೆರೆ ಜಾನಕಮ್ಮ ಮತ್ತು ಸಿರಿಯಜ್ಜಿ ಕಾವ್ಯಮಾದರಿಗಳು ತಾಳ್ಯ ಅವರಲ್ಲಿ ಮುಂದುವರಿದಿವೆ. ಎಲ್ಲಿ ನವಿಲು ಹೇಳಿರೇ’ ಸಂಕಲನದ ಬಹುಪಾಲು ಕವಿತೆಗಳು ೩-೩ರ ಲಯದಲ್ಲಿ ಮೂಡಿರುವುದು ಆಕಸ್ಮಿಕವಲ್ಲದಿರಬಹುದು.

ರಂಗಸಾಲೆ ರಂಗಸಾಲೆ
ಯಾವ ರಂಗಸಾಲೆ
ಕುಣಿದು ಕುಣಿದು ಕಾಲು ಸೋಲೆ
ಯಾವ ರಂಗಶೂಲೆ.

‘ನೋಡುವ’/‘ಓದುವ’ ಕ್ರಿಯೆಗೆ ರೂಢಿಯಾದ ರಚನೆಗಳನ್ನು ‘ಕೇಳುವ’ ಕ್ರಿಯೆಗೆ ಒಗ್ಗಿಸುವ ತಾಳ್ಯ ಆ ಮೂಲಕ ಪದಾರ್ಥಗಳ ವಿಸ್ತಾರ ಸಾಧಿಸುತ್ತಾರೆ. ಇದು ಒಮ್ಮೊಮ್ಮೆ ಪದಗಳ ಮಾಯಾಜಾಲ ಅನ್ನಿಸುವಷ್ಟು ಪದಾರ್ಥಗಳ ಹೆಣಿಗೆ, ವಿನ್ಯಾಸ ಇದೆ. ಆದ್ದರಿಂದ ಆಸ್ಪಷ್ಟತೆಯ ಹೊರಳುಗಳನ್ನೂ ತಾಳ್ಯ ಅವರ ಕಾವ್ಯ ಎದುರಿಸುತ್ತದೆ.

ಜಿಲ್ಲೆಯ ಇನ್ನೊಬ್ಬ ಕವಿ ಲೋಕೇಶ ಅಗಸನ ಕಟ್ಟೆಯವರು ಬಂಡಾಯ ಚಳವಳಿಯಲ್ಲಿ ಸಕ್ರಿಯರಾಗಿದ್ದವರು. ಅವರ ಎರಡನೆಯ ಸಂಕಲನದ ವೇಳೆಗೆ ಬಂಡಾಯ ಹೊರಳುಗಳನ್ನು ಅವರು ದಾಟಿದ್ದಾರೆ. ಬಂಡಾಯದ ಕಾವು ಆರುತ್ತ ಬಂದಂತೆ ಕಾವ್ಯರಚನೆಯಲ್ಲಿ ಎದುರಾಗಿದ್ದ ಸಂದಿಗ್ನತೆಯನ್ನು ಗುರುತಿಸಿಕೊಂಡಿರುವ ಅವರಲ್ಲಿಯೂ ವ್ಯವಸ್ಥೆಯನ್ನು ಕುರಿತ ವಿಷಾದವು ಹೆಪ್ಪುಗಟ್ಟಿದೆ. ಅವರ ಕಾವ್ಯದಲ್ಲಿ ವಿಷಮಿಸಿರುವ ಜಗತ್ತಿನ ಕುರಿತಾದ ತಲ್ಲಣಗಳಿವೆ; ‘ಮನೆಯಂಗಳದ ಮರಕ್ಕೆ ಲಾಠಿ ಬೂಟಿನ ಜನ ಗರಗಸ’ ಹಿಡಿದು ಬಂದು ಕಡಿಯುವ ಕ್ರೂರಲೋಕದ ನೋಟಗಳಿವೆ. ಅವರ ಈ ವಿಷಾದವು ಅಬ್ಬರದಲ್ಲಿ ಪರ್ಯಾವಸಾನಗೊಳ್ಳದೆ ಧ್ಯಾನಸ್ಥ ನೆಲೆಯಲ್ಲಿ ನಿಲ್ಲುವುದರಿಂದ ಹೆಚ್ಚು ಆಳವಾಗಿದೆ. ಸ್ವಗತವು ಅವರು ಆನುಸರಿಸುವ ಮಾರ್ಗ. ‘ಆದಿನಾಥ ಹೇಳಿದ್ದು’, ‘ಕದಳಿಗೆ ಪಥ’-ದಂತಹ ಕವಿತೆಗಳಲ್ಲಿ ವಿಷಾದವು ಆಧ್ಯಾತ್ಮಿಕ ಹೊರಳುಗಳನ್ನು ಕಾಣುತ್ತದೆ. ಅವರ ಮೊದಲ ಸಂಕಲನ ‘ಮತ್ತೆ ಸೂರ್ಯ ಬರುತ್ತಾನೆ’ಯಲ್ಲಿನ ಭರವಸೆ, ಆಶೆಗಳೇ ಎರಡನೆಯ ಸಂಕಲನದಲ್ಲೂ ಮುಂದುವರೆದಿದೆ. ವಿಷಾದವು ಆಶಯಕ್ಕೆ ಹೊರಳುವುದೂ ಮುಖ್ಯ ಪಲ್ಲಟ ಎನ್ನಿಸುತ್ತದೆ.

ಜಿ. ಕೆ. ರವೀಂದ್ರಕುಮಾರರ ಕಾವ್ಯವು ಕ್ರೌರ್ಯ, ವಿನಾಶದ ಸ್ವರೂಪವನ್ನು ಚಿಂತಿಸುತ್ತದೆ. ಹೊಯ್ಸಳ ಶಿಲ್ಪಿಗಳಲ್ಲಿ ಒಂದಾದ ‘ನಾಶದ ಸರಪಳಿ’ಯನ್ನು ವಸ್ತುವಾಗಿರಿಸಿಕೊಂಡು ಅವರು ಬರೆದಿರುವ ಪದ್ಯ ಒಂದು ಪ್ರಾಣಿ ಮತ್ತೊಂದನ್ನು ನುಂಗಲು ಕಾದಿರುವ ನಾಶದಕೊಂಡಿಯೇ ಅವುಗಳನ್ನು ಬೆಸೆದಿರುವ ಕೊಂಡಿ ಎಂಬುದನ್ನು ಸೂಚಿಸುತ್ತದೆ. ಇಂಥ ಕ್ರೂರ ವಾಸ್ತವಕ್ಕೆ ಪ್ರತಿಯಾಗಿ ‘ಪ್ಯಾಂಜಿಯಾ’ ಸೃಷ್ಟಿಯಾಗುತ್ತದೆ. ಈ ರೂಪಕ ಭೂಮಿ ಖಂಡಗಳಾಗಿ ಒಡೆಯುವ ಮೊದಲಿದ್ದ ಅಖಂಡ ಸ್ಥಿತಿ. ‘ಪ್ಯಾಂಜಿಯಾ’ದ ರಮ್ಯಹುಡುಕಾಟದಲ್ಲಿ ಕವಿ ಹೇಳುತ್ತಾರೆ:

ಖಂಡಾಂತರ ಕಾದಾಟದಲ್ಲಿ
ಹೋದೆಯಲ್ಲಿ ಪ್ಯಾಂಜಿಯಾ
ಮೂಲ ಪ್ಯಾಂಜಿಯಾ

ರವೀಂದ್ರಕುಮಾರರ ಕಾವ್ಯವು ವಿಜಾರ ಮತ್ತು ತಾರ್ತಿಕತೆಯ ಅರಿವಿನಿಂದ ಹುಟ್ಟುತ್ತದೆ. ಅವರು ಸೃಷ್ಟಿಸುವ ರೂಪಕಗಳ ಆಶಯಗಳೂ ಪ್ರಜ್ಞಾಪೂರ್ವಕವಾಗಿವೆ. ಬೌದ್ಧಿಕ ಸೃಷ್ಟಿಯೆನಿಸುವ ‘ಪ್ಯಾಂಜಿಯಾ’, ‘ಸಿಕಾಡ’ದಂತಹ ರೂಪಕಗಳು ರಮ್ಯತೆಯನ್ನೂ ತಾರ್ಕಿಕವಾಗಿ ಮುಟ್ಟಬಯಸುತ್ತದೆ. ‘ನಾಶದ ಕೊಂಡಿ’, ‘ನಕಾರ ಪದ್ಯ’ಗಳು ಪ್ರಯೋಗಗಳಾಗಿ ಗೆದ್ದರೂ, ಅವುಗಳ ವಿಷಾದವು ತಟ್ಟದೇ ಹೋಗುವುದನ್ನು ಗಮನಿಸಿದಾಗ ಆವು ಬೌದ್ಧಿಕ ಯಶಸ್ಸು ಮಾತ್ರ ಎನ್ನಿಸುತ್ತದೆ.

ಟಿ. ಎಸ್. ರಾಜೇದ್ರಪ್ರಸಾದರ ‘ಪ್ರೀತಿಸುತ್ತ ಹೋದಂತೆಲ್ಲ’ ಸಂಕಲನದಲ್ಲಿ ಪ್ರೀತಿಪ್ರೇಮಗಳನ್ನೇ ಮುಖ್ಯವಾಗಿರಿಸಿಕೊಂಡು ಬರೆಯುತ್ತಾರೆ. ನಿಸಾರ್ ಆಹಮದ್ ಆವರ ‘ಏ. ಕೆ. ನಲವತ್ತೇಳು’ ಸಂಕಲನವು ವಿಷಾದದ ದನಿಯಲ್ಲೇ ವ್ಯವಸ್ಥೆಯ ಊನಗಳನ್ನು ನಿರೂಪಿಸುತ್ತಾರೆ. ಬಂಡಾಯದ ಸಂಘಟನೆಯಲ್ಲಿದ್ದ ಸಿ. ಶಿವಲಿಂಗಪ್ಪ ಅವರೂ ಸಹ ಬಂಡಾಯದ ಅಬ್ಬರ ಕೈಬಿಟ್ಟು ವಿಷಾದದ ದನಿಯಲ್ಲೇ ಕಾವ್ಯವನ್ನು ನಿರೂಪಿಸಿರುವುದು ಕಾಣುತ್ತದೆ. ಬಿ. ಎನ್. ಶರಭೇಂದ್ರಯ್ಯನವರಲ್ಲೂ ಬಂಡಾಯದ ಕಾವು ತಗ್ಗಿ ಆಶಯಗಳಿಗೆ ಒತ್ತು ಸಿಗುತ್ತದೆ. ಇಲ್ಲೆಲ್ಲಾ ವಿಷಾದವು ಒಂದು ಪಲ್ಲಟದಂತೆ ಸಂಭವಿಸಿ, ಮುಂದಿನ ದಾರಿಗಳತ್ತ ಮುಖಮಾಡುವುದು ಇಲ್ಲಿ ಗಮನಿಸಬೇಕಾದ ಅಂಶ. ಜಿಲ್ಲೆಯ ಕಾವ್ಯದಲ್ಲಿ ಸಾಮಾಜಿಕ ವಿಷಮತೆಯ ಬಗ್ಗೆ ಇರುವ ಅಸಹನೆ ವಿಷಾದವಾಗಿ, ಸ್ವಗತ ರೂಪಕ್ಕೆ ಮರಳುತ್ತ, ಹೊರಜಗತ್ತಿನ ತಕರಾರುಗಳನ್ನು ಧ್ಯಾನಿಸುತ್ತ, ಅದೇ ವ್ಯವಸ್ಥೆಯಲ್ಲಿ ಸಹಸ್ಪಂದನದ ಆಶಯಗಳನ್ನು ಹೊಂದಿದ dialectical ಚೈತನ್ಯ ಹೊಂದಿದೆ.

ಇತ್ತೀಚಿನ ಕವಿಗಳು ತಮ್ಮ ಕಾವ್ಯದಲ್ಲಿ ಮುಖಾಮುಖಿಯಾಗಿಸಿಕೊಳ್ಳುವ ವಿಷಯ ಮತ್ತು ರಚನೆಗಳೇ ಭಿನ್ನರೀತಿಯವು. ಅಭಿವ್ಯಕ್ತಿಯು ಬದಲಾಗಿದೆ, ವಿಷಯದ ಆಯ್ಕೆ ಬದಲಾಗಿದೆ, ಅವರ ನುಡಿಗಟ್ಟು, ರೂಪಕಗಳ ಭಾಷೆಯೂ ವಿಭಿನ್ನವಾಗಿದೆ. ಈ ಶತಮಾನವನ್ನು ಆವರಿಸಿರುವ ನವಬಂಡವಾಳಶಾಹಿಯ ಪರಿಣಾಮಗಳು ಸಾಮಾಜಿಕ ಮತ್ತು ವೈಯಕ್ತಿಕ ನೆಲೆಗಳಲ್ಲಿ ಉಂಟುಮಾಡುವ ಪಲ್ಲಟಗಳು ಇಲ್ಲಿನ ಕವಿಗಳಿಗೆ ಮುಖ್ಯವೆನಿಸುತ್ತವೆ. ಬದಲಾದ ಕೇಂದ್ರಗಳು, ನಿರಾಶೆಯ ಅನುಭವಗಳು, ವಿಕ್ಷಿಪ್ತತೆಯ ರೂಪ, ಅಸ್ತಿತ್ವದ ಹುಡುಕಾಟ ಈ- ಮುಂತಾದವು ಆಧುನಿಕತೆಯನ್ನುತ ಪರಿಭಾವಿಸುವ ಕ್ರಮವೇ ವಿಭಿನ್ನವಾಗಿದ್ದು ನವ್ಯದ ಆಧುನಿಕತೆಯನ್ನು ಪುನಾರಚಿಸಿಕೊಳ್ಳುವ ಕ್ರಮವನ್ನು ಈ ಯುವಕವಿಗಳ ಕಾವ್ಯದಲ್ಲಿ ಮುಖ್ಯವಾಗಿ ಗುರುತಿಸಬಹುದು. ಹೊಸ ಆವಿಷ್ಕಾರವು ಪೋಟೋಗ್ರಫಿ, ಚಿತ್ರಕಲೆಗಳ ಹಿನ್ನೆಲೆಯಲ್ಲಿ ರೂಪಕಗಳನ್ನು ಸೃಷ್ಟಿಸಿಕೊಂಡು ನವೀನತೆಯನ್ನು ಪಡೆದುಕೊಳ್ಳುತ್ತವೆ.

ಬಂಡವಾಳಶಾಹಿಯ ಕುರೂಪದಿಂದ ಕಡಿದ ಬದುಕಿನಲ್ಲಿ ಕಾಮವು ವಿಕೃತಗೊಂಡು ಬರುವುದನ್ನು ಹಿಡಿಯುವ ಹೆಚ್. ಆರ್. ರಮೇಶರ ಕಾವ್ಯವು ‘ಲಿಬಿಡೋ’ ಛಾಯೆಯಿಂದ ಹುಟ್ಟಿದಂತೆ ಕಂಡರೂ, ಸಮಕಾಲೀನ ಬದುಕಿನ ನಿರಾಶೆ, ವಿಕ್ಷಿಪ್ತತೆಗಳನ್ನು ತೋರುವಂತಿದೆ. ತಾತ್ತ್ವಿಕತೆಗಳ ಪ್ರಭಾವದಿಂದಲೇ ಬರೆಯುವ ಮಲ್ಲಿಕಾರ್ಜುನಗೌಡ ತೂಲಹಳ್ಳಿಯವರ ಕವಿತೆಗಳಲ್ಲಿಯೂ ಈ ಪ್ರಭಾವಗಳಿರುವುದನ್ನು ಗಮನಿಸಬಹುದು. ಬೋದಿಲೇರನ ಜಗತ್ತಿನ ಆಳಕ್ಕೆ ಧುಮುಕಿ-ನೋಡಲು ತಯಾರಾದ ಕವಿಗಳಲ್ಲಿ ಈ ಚಂದ್ರತಾಳಿಕಟ್ಟೆಯೋ ಸೇರುತ್ತಾರೆ. ಬಂಡವಾಳಶಾಹಿ ಬದುಕಿನ ಬದಲಾದ ಚಿತ್ರಣ, ಅದರಿಂದ ಉಂಟಾದ ತಲ್ಲಣಗಳು ಪವಿತ್ರ ಪ್ರಿಯಭಾಷಿಣಿ, ತಾರಿಣಿ ಶುಭದಾಯಿನಿ ಮುಂತಾದವರ ಕವಿತೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ರಮ್ಯಕಾಲವೊಂದರ ನಿರೀಕ್ಷೆಯು ಇಲ್ಲಿಯೂ ವ್ಯಕ್ತವಾಗುತ್ತದೆ.

ಈ ಮೇಲೆ ಹೇಳಿದ ಎಲ್ಲ ಕವಿಗಳೂ ಕಾವ್ಯದ ಅಭಿವ್ಯಕ್ತಿಯಲ್ಲಿ ಸಾಂಪ್ರದಾಯಿಕ ಲಯಗಳನ್ನು ಬಿಟ್ಟಿದ್ದಾರೆ. ಗದ್ಯವೇ ಇಲ್ಲಿನ ಓಘ, ಮಾತು, ಉಲ್ಲೇಖ, ಉದ್ದೇಶ ಪೂರ್ವಕ ವಿಷಯಾಂತರ, ವ್ಯಂಗ್ಯ ಆಥವಾ ಹಗುರ ನಿರೂಪಣೆ ವಿಧಾನ- ಈ ಕವಿಗಳಲ್ಲಿ ಕಾಣುವ ಕೆಲವು ಲಕ್ಷಣಗಳು. ಕಾವ್ಯ ತನ್ನ ಸುಕೋಮಲ ಭಾಷೆ ಬದಿಗಿರಿಸಿ ವಾಚಾಳಿತನದಲ್ಲಿ ಮೈದೋರುತ್ತಿದೆ. ಸಮಕಾಲೀನ ಭಾಷೆಯ ಬಳಕೆ (ಅಂದರೆ ಟಿ. ವಿ., ಕಂಪ್ಯೂಟರ್, ಜಾಹೀರಾತುಗಳ ಭಾಷೆ) ಕಾವ್ಯದ ರೀತಿಯನ್ನು ಬೇರೆ ರೂಪದಲ್ಲಿ ತಂದು ನಿಲ್ಲಿಸುತ್ತದೆ. ಇದು ಕಲಾತ್ಮಕ ನಿರಾಕರಣೆಯೇ ಅಥವಾ ಹೊಸಕಲಾತ್ಮಕ ಶಿಲ್ಪವೇ ಎನ್ನುವುದು ಕುತೂಹಲ ಹುಟ್ಟಿಸುವ ಸಂಗತಿಯಾಗುತ್ತದೆ. ಪವಿತ್ರ ಅವರ ಈ ಸಾಲುಗಳನ್ನು ಗಮನಿಸಬೇಕು:

ತಿಪ್ಪರಲಾಗ ಹಾಕಿದ ಅವನು
ದಕ್ಕೆಲೆ ಇಲ್ಲ ಆ ಕಲಾತ್ಮಕ ನೇಯ್ಗೆ…

ಕಲಾತ್ಮಕ ನೇಯ್ಗೆಯ- ನಿರಾಕರಣದಲ್ಲಿಯೇ ಶಿಲ್ಪವನ್ನು ಹುಡುಕುವ ಮಾದರಿಯನ್ನು ಇವು ಹೇಳುವಂತಿವೆ.

ನಮ್ಮ ಹಿರಿಯ ಕವಿಗಳಾದ ತಾಳ್ಯ, ಲೋಕೇಶ್, ರವೀದ್ರಕುಮಾರ್ ಅಂತವರಿಗೆ ಭಾಷೆಯ ಬದಲಾದ ಸಂವೇದನೆಯ ಅರಿವಿದೆ. ಈ ಎಲ್ಲ ಕವಿಗಳೂ ‘ಪದಾರ್ಥ’ವನ್ನು ಕುರಿತು ಚಿ೦ತಿಸಿದವರೇ. ‘ಅರ್ಥ ಅನರ್ಥಕ್ಕೆ ಹೆದರದ ಪದಾರ್ಥ’ ಎಂದು ಜಿ. ಕೆ. ರವೀಂದ್ರಕುಮಾರರು ಹೇಳಿದರೆ, ಲೋಕೇಶ್ ಅವರು ಪದಾರ್ಥ ಸ್ಥಾಯಿಯಲ್ಲ ಎಂಬುದನ್ನು ಗುರುತಿಸಿದ್ದಾರೆ:

ಶಬ್ಬದ ಅಪರಿಮಿತ ಬೆಳಕೇ
ಬೆಳಕು ನಿನ್ನಲ್ಲೋ
ನೋಡುವ ನನ್ನಲ್ಲೋ

ಇದು ಓದುಗಕೇಂದ್ರಿತ, ಸಂಸ್ಕೃತಿ ಕೇಂದ್ರಿತ ನೆಲೆಯಲ್ಲಿ ಅರ್‍ಥಗಳು ಪಲ್ಲಟಗೊಳ್ಳುವುದನ್ನು ಸೂಚಿಸುವಂತಿದೆ.

ಜಿಲ್ಲೆಯ ಕಾವ್ಯವನ್ನು ಗಮನಿಸಿದಾಗ ಪ್ರಯೋಗಶೀಲತೆಯು ಕಾವ್ಯ ಪ್ರಕಾರವನ್ನು ಒಳಗೊಂಡಿರುವುದು ಕಾಣುತ್ತದೆ. ಶಕ್ತಹನಿಗವಿತೆಗಳನ್ನು ಬರೆಯುತ್ತಿರುವ ಬಾಗೂರು ನಾಗರಾಜಪ್ಪ, ಪರಮೇಶ್ವರ ಕುದರಿ, ಮಹೇಶ್ವರಪ್ಪ ಮುಂತಾದವರಿದ್ದಾರೆ. ಜಿಲ್ಲೆಯ ಮಠಾಧೀಶರುಗಳಾದ ಪಂಡಿತಾರಾಧ್ಯರು, ಹಾಗು ಶಿವಮೂರ್ತಿಶರಣರೂ ವಚನಶೈಲಿಯಲ್ಲಿ ಕವಿತೆಗಳನ್ನು ರಚಿಸಿದ್ದಾರೆ. ಮಕ್ಕಳ ಕವಿತೆಗಳಲ್ಲಿ ನಿಪುಣತೆಯನ್ನು ಸಾಧಿಸಿರುವ ಬಿ. ತಿಪ್ಪೇರುದ್ರಪ್ಪನವರು ಗಂಭೀರ ಕವಿತೆಗಳನ್ನು ಬರೆದಿದ್ದರೂ ಸಹ ಮಕ್ಕಳ ಕಾವ್ಯದಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ.

ಇನ್ನುಳಿದಂತೆ ಬಂಡಾಯದ ಧಾಟಿಯಲ್ಲಿ ಬರೆಯುತ್ತಿರುವ ಕವಿಗಳು ಹಲವಾರು ಜನರಿದ್ದಾರೆ. ಸಾಮಾಜಿಕ ಅಸಮಾನತೆಗಳೇ ಇವರ ಕಾವ್ಯದ ವಸ್ತು. ‘ಗತಿ’ಯ ಬಿ. ಕುಮಾರ್, ‘ಬಂದಾನು ಮತ್ತೊಬ್ಬ ಸರದಾರ’ದ ಶೈಲಪ್ಪ ನಾಗರಕಟ್ಟೆ, ‘ಬಿಕ್ಕುತಿದೆ ಚುಕ್ಕಿ’ಯ ಬಸವೇಶ ಎಂ ಹೊಳೆ, ‘ನಾನು ಬುದ್ದನಲ್ಲ’ದ ಅಶೋಕ್‌ಕುಮಾರ್ ಸಂಗೇನಹಳ್ಳಿ- ಹೀಗೆ ಹಲವಾರು ಕವಿಗಳು ಈ ಸಾಲಿನಲ್ಲಿ ನಿಲ್ಲುತ್ತಾರೆ. ಅನೇಕರು ಕವಿಗೋಷ್ಠಿಗಳಲ್ಲಿ ಉತ್ತಮ ಕವಿತೆಗಳನ್ನು ವಾಚನ ಮಾಡಿದ್ದಾರೆ. ಅವರ ಕಾವ್ಯದ ಧೋರಣೆಗಳನ್ನು ಅರಿಯಲು ಸಾಧ್ಯವಾಗುವುದು ಅವರ ಕವಿತೆಗಳು ಒಟ್ಟಾಗಿ ಬಂದಾಗಲೇ ಎನ್ನುವುದನ್ನು ಹೇಳಬಯಸುತ್ತೇನೆ.

ಕಳೆದೊಂದು ದಶಕದ ಕಾವ್ಯವನ್ನು ಅವಲೋಕಿಸಿದಾಗ, ಕಾವ್ಯ ಅನುಸಂಧಾನವು ನಿರಂತರವಾಗಿ ಸಾಗಿಬಂದಿರುವುದನ್ನು ಕಾಣಬಹುದು. ಚಿತ್ರದುರ್ಗದಂತಹ ಬಂಡೆಗಲ್ಲಿನ ನಾಡಿನಲ್ಲಿ ಕಾವ್ಯದ ಒರತೆಯೊಂದು ಬತ್ತದೇ ಉಳಿದಿರುವುದು ಸಮಾಧಾನದ ಸಂಗತಿ. ಕಳೆದ ದಶಕಗಳಲ್ಲಿ ಆಗಿಹೋದ ಪಂಥಗಳು ವಿಚಾರಧಾರೆ ಎಲ್ಲವೂ ಇಲ್ಲಿನ ಕವಿಗಳನ್ನು ಪ್ರಭಾವಿಸಿವೆ. ಇದರ ಜೊತೆ ನಿರಂತರ ಅನುಸಂಧಾನ ಮಾಡುತ್ತ ಬಂದಿರುವ ಜಿಲ್ಲೆಯ ಕವಿಗಳು, ತಮ್ಮದೇ ಆದ ಶೈಲಿ, ಧ್ವನಿಗಳನ್ನು ರೂಢಿಸಿಕೊಳ್ಳುವಲ್ಲಿ ಸ್ವಲ್ಪಮಟ್ಟಿನ ಯಶಸ್ಸನ್ನೂ ಸಾಧಿಸಿದ್ದಾರೆ.

ಬಂಡಾಯವು ಮುಖ್ಯ ಪ್ರೇರಣೆಯಾಗಿದ್ದ ಜಿಲ್ಲೆಯ ಕಾವ್ಯ ಈಗ ಬಂಡಾಯೋತ್ತರ ನೆಲೆಯಲ್ಲಿ ಅನುಭಾವ, ಧ್ಯಾನಗಳ ಕಡೆಗೆ ತಿರುಗುತ್ತಿರುವುದು ರಮ್ಯ ಚಲನೆಯಂತೆ ಕಾಣುತ್ತದೆಯಲ್ಲದೆ, ನವೋದಯದ ಚೈತನ್ಯವನ್ನು ಪುನಃ ಪಡೆದು ಪುಷ್ಟಗೊಳ್ಳುವ ಸನ್ನಾಹದಂತೆಯೂ ಇವೆ. ವಿನಾಶವನ್ನು ಕಣ್ಣೆದುರು ಕಾಣುತ್ತ, ಅದಕ್ಕೆ ಪ್ರತಿಕ್ರಿಯೆಯಾಗಿ ಬಂಡಾಯವನ್ನು ಆರಂಭಿಕ ಹಂತದಲ್ಲಿ ಮುಂದಿಟ್ಟುಕೊಂಡರೂ ಅಲ್ಲಿ ಶೂನ್ಯವೊಂದು ಎದುರಾದಂತೆ ಕಾಣುತ್ತದೆ. ಅದನ್ನು ತುಂಬಿಕೊಳ್ಳುವ ತವಕದಲ್ಲಿ ಬಹುಮುಖೀ ಚಲನೆಗಳು ಆರಂಭವಾದಂತೆ ತೋರುತ್ತದೆ. ಕವಿ ಕುವೆಂಪು ಹೇಳುವಂತೆ ‘ಸರ್ವೋದಯವಾಗಲಿ, ಸರ್‍ವರಲಿ’ ಎಂಬ ಆಶಯವನ್ನೇ ಎತ್ತಿಹಿಡಿಯುವ ಪ್ರಕ್ರಿಯೆಯಲ್ಲಿ ಕಾವ್ಯ ಸಹಸ್ಪಂದನದ ಮಾದರಿಗಳನ್ನು ಅರಸುತ್ತಿದೆ. ವಿಷಾದವು ಸ್ಥಾಯಿಯಾಗಿ, ಅದನ್ನು ಅನುಭಾವದ ನೆಲೆಯಲ್ಲಿ ನಿಲ್ಲಿಸಿ ಮೋಕ್ಷಪಡೆಯುವ ಗುರಿಗಳಿರುವಂತೆ, ಸಾಮುದಾಯಿಕ ಬದುಕಿನ ಶುಚಿಯನ್ನು ಆಶಿಸುವ ಗುರಿಗಳೂ ಇವೆ. ಇವು ಮಾನವೀಯ ನೆಲೆಯಲ್ಲಿ ಕಾವ್ಯವನ್ನು ನಿಲ್ಲಿಸುವ ಪ್ರಯತ್ನಗಳು. ಆದರೆ ಆತ್ಮಕೇಂದ್ರಿತ ಮತ್ತು ಸಮಾಜಕೇಂದ್ರಿತ ಎಂಬ ಎರಡು ಮಾರ್ಗಗಳನ್ನು ಭಿನ್ನವೆಂದು ಗ್ರಹಿಸುವ ಮೊದಲಿನ ಕ್ರಮಗಳನ್ನು ಕೈಬಿಟ್ಟು, ವ್ಯಕ್ತಿಗತ ನೆಲೆಯಲ್ಲಿ ಸಾಮಾಜಿಕತೆಯನ್ನು ಪರಿಭಾವಿಸಿಕೊಳ್ಳುವ, ಆ ಮೂಲಕ ತನ್ನದೇ ಆದ ದಾರಿಗಳನ್ನು ಕಂಡುಕೊಳ್ಳುತ್ತಿರುವುದನ್ನು ಇಲ್ಲಿಯು ಗಮನಿಸಬಹುದು.

ಕಲಾತ್ಮಕತೆಯ ದೃಪ್ಪಿಯಿಂದಲೂ ರೂಪರಚನೆಗಳ ವಿನ್ಯಾಸವು ಬದಲಾಗುತ್ತಿದೆ. ಇದೊಂದು ಹೊಸ ಬೆಳವಣಿಗೆ. ಚಳವಳಿಯ ಸಮೂಹಗಾನಕ್ಕಿಂತ ಸ್ವಂತದನಿಯನ್ನು ಕಂಡುಕೊಳ್ಳುವ ಸ್ವಗತರೂಪದ ಶೈಲಿಯಲ್ಲೇ ಕಲಾತ್ಮಕ ಹೊರಳುಗಳಿವೆ. ಇದಕ್ಕೆ ವಿರುದ್ಧವಾಗಿ ಜಿಲ್ಲೆಯ ಯುವಕವಿಗಳು ಬರೆಯುತ್ತಿರುವ ಕಾವ್ಯದಲ್ಲಿವಾಚಾಳಿತನವೇ ಪ್ರಧಾನವಾಗಿ ಕಾವ್ಯದ ಶಿಲ್ಪದ ಗ್ರಹಿಕೆ ವಿಭಿನ್ನವಾಗಿದೆ. ಈ ರೀತಿಯ ಆಭಿವ್ಯಕ್ತಿಗೂ, ಧ್ವನಿಯ ಧ್ಯಾನಕ್ಕೆ ತಿರುಗುತ್ತಿರುವ ಹಿರಿಯ ಕವಿಗಳ ಕಾವ್ಯಕ್ಕೂ ಅಂತರವಿದೆ. ಇದನ್ನೂ ಬಹುಮುಖ ಪ್ರಜ್ಞೆಯಾಗಿ ಗುರುತಿಸಬಹುದು. ಈ ಮೊದಲು ಗುರುತಿಸಿದಂತೆ, ಕಾವ್ಯದ ವಿನ್ಯಾಸದಲ್ಲಿ ಕೊಲಾಜ್ ಮಾದರಿಯಿರುವಂತೆ ಪ್ರಜ್ಞೆಯಲ್ಲೂ ಕೊಲಾಜ್ ಮಾದರಿಯ ವಿಕಾಸ ಆಗಿರುವ ಸಾಧ್ಯತೆಗಳಿವೆ. ಇದನ್ನು ಕಾವ್ಯದ ಬಿಕ್ಕಟ್ಟು, ಅರಾಜಕಮಾರ್ಗಕ ಎಂದು ಗ್ರಹಿಸುವುದಕ್ಕಿಂತ, ಅನುಸಂಧಾನದ ಭಿನ್ನಕ್ರಮಗಳೆಂದು ನೋಡುವುದರಲ್ಲೇ ವಿವೇಚನೆಯಿದೆ ಎನ್ನಿಸುತ್ತದೆ.

(೨೦೦೬ರ ಹಿರಿಯೂರು ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧ).
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡತಾಯ ನೋಟ
Next post ದಿವ್ಯಾತ್ಮರು

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…