ನನ್ನನ್ನು ಮೊದಲು ನಿನ್ನ ಗುಲಾಮನಾಗಿಸಿದ
ದೈವ ನನಗೊಂದು ಕಟ್ಟಳೆಯನ್ನು ವಿಧಿಸಿತು,
ನಿನ್ನ ಪ್ರಿಯ ಸುಖ ಸಮಯದಲ್ಲಿ ತಲೆಹಾಕದೆ
ನೀನೆ ಕರೆಸುವ ತನಕ ತೆಪ್ಪನಿರು ಎಂದಿತು.
ನಾನು ಸೇವಕ ತಾನೆ ? ಒಡೆಯ ವಿಧಿಸಿದ ವಿರಹ-
ಕಾರಾಗೃಹದ ವಾಸ ಒಪ್ಪಿ ಬಾಳುತ್ತೇನೆ,
ನಿನ್ನಾಜ್ಞೆ ಹೃದಯ ಹಿಂಡಿದೆ ಎಂದು ದೂರದೆಯೆ
ತುಟಿಕಚ್ಚಿ ವ್ಯಥೆಯನ್ನು ನುಂಗಿ ಬಾಳುತ್ತೇನೆ.
ಇಚ್ಛೆ ಬಂದಲ್ಲಿರುವ ಅಧಿಕಾರ ನಿನಗಿದೆ
ನಿನ್ನ ಸಮಯದ ಮೇಲೆ ಹಕ್ಕು ಸಹ ನಿನ್ನದೇ ;
ಮನಬಂದ ಹಾಗೆ ಕಾಲವ ಕಳೆದರೂ ಏನು,
ನಿನ್ನ ತಪ್ಪನ್ನು ಕ್ಷಮಿಸಬಲ್ಲವನು ಸಹ ನೀನೆಯೇ.
ಕಾಯುವುದು ನರಕ, ಆದರು ಸಹಿಸಿ ಕಾಯುವೆನು,
ಒಳಿತೊ ಕೆಡುಕೋ ದೂರದೆಯೆ ನಿನ್ನ ಸುಖಗಳನು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 58
That God forbid, that made me first your slave