ಮಾನವೀಯತೆ,
ಏನಾಗಿದೆ ನಿನಗೆ?
ಹೀಗೇಕೆ ನಡುಬೀದಿಯಲಿ
ಮೌನವಾಗಿ ಮಲಗಿರುವೆ,

ಸತ್ಯಕ್ಕೆ ಜಯವೆಂಬ
ನಿನ್ನ ವಾಕ್ಯ ಏನಾಯಿತಿಂದು?
ನಿನ್ನ ಸಂಗಾತಿಗಳೆಲ್ಲ ಇಂದು
ಯಾಕೆ ಪಕ್ಷಾಂತರ ಮಾಡಿದರು?

ಈ ಕೊರಗಿನಲ್ಲಿಯೇ ನೀನು
ಸ್ವರಗಿ ಹೋಗುತ್ತಲಿರುವೆಯಾ?
ನೆಲದಲಿ ಹುಗಿದು ಹೋಗಿ
ಆವಶೇಷವಾಗುತ್ತಲಿರುವೆಯಾ?

ಹೀಗೆ ಬೀದಿಯಲ್ಲಿ ಬಿದ್ದು
ಒದ್ದಾಡಿ ಕೊನೆಯ ಬಿಕ್ಕು
ಹತ್ತಿದಾಗಲೂ ಜನ ನಿನಗೆ
ಕಲ್ಲುಹೊಡೆದು ಘಾಸಿಗೊಳಿಸಿ
ಗಾಯ ಮಾಡಿದರು.

ನಿನ್ನ ದೇಹದಿಂದ ಹರಿದು
ಸೇರಿದ ರಕ್ತದ ಕೆಂಪು
ಬಡಿದೆಬ್ಬಿಸಿತು ನನ್ನ
ಮಲಗಿರುವ ಆತ್ಮವ
ಸಿಡಿದೇಳುವಂತೆ ಮಾಡಿತು.

ಹಾದಿ ಬೀದಿಯಲಿ ಹೀಗೆ
ನಿನಗೆ ಅವಮಾನಿಸುತ್ತಿರುವಾಗ
ನಾನು ನಿನ್ನ ಹತ್ತಿರ ಬಂದು
ಎಬ್ಬಿಸಿ ಮಾತನಾಡಿಸಿದೆ.

ಇದನ್ನು ಕಂಡೂ ಕಾಣದಂತೆ
ಸತ್ಯ ಮಾನವೀಯತೆಗಳ ಬಗ್ಗೆ
ಭಾಷಣ ಮಾಡುವ ಮಾಸ್ತರರು
ಮೂಗು ಮುಚ್ಚಿಕೊಂಡು
ರಸ್ತೆಯಂಚಿನಲಿ ಮುಖ
ತಿರುವಿಕೊಂಡು ಹೋಗುತ್ತಿದ್ದರು.
*****