ಪಡ್ಡೆ ಕರುವಂತೆ
ಎಗ್ಗಿಲ್ಲದೆ ತಿಂದು, ತಿರುಗಿ ಕೊಂಡಿದ್ದೆನೆಗೆ
ಮದುವೆಯೆಂಬ ಮೂಗುದಾಣ ಬಿಗಿದು
ಸಂಸಾರ ದಾರಂಭಕ್ಕಿಳಿಸಿದರು.

ಮುಂದರಿಯದ ನನಗೆ
ಮದುವೆ ಯಾತನೆ ಯಾಯಿತು
ಗಿಳಿಬಾಳು ಕರಗಿ ಹೋಯಿತು
ಮೈ ಮನಸೆಲ್ಲಾ ಜರ್ಜರಿತವಾಯಿತು.

ಪರಿಸರ
ರೂಪಾಂತರ ಹೊಂದಿತು-
ಸಲಿಗೆ ಸತ್ತು, ಸೊಲ್ಲು ಹಿಂಗಿ
ಪರಕೀಯತೆ ಕಾಡಿ
ಬಾಳು ಅಣಕವಾಗಿ ಹೋಯಿತು.

ಆದರೆ, ಪೋಷಣೆ ಹಾಳಾಗಿ ಹೋಗಲಿ
ಮನಸ್ಸು ಪೂರ್ವಕವಾಗಿ ಅಳಲೂ ಬಿಡದೀ ಜನ
ಜೀವನವ ಕಾಡು ಮಾಡಿದರು.

ನೀನೇನೆ ಮಾಡು, ಹೇಗೆ ಮಾಡು
ಹುಡುಕುವರು ಹುಳುಕು
ಬಾಯಿ ಬಿಟ್ಟರೆ ಸಾಕು ಮೂದಲಿಕೆ, ಏಟು
ಯಾರಿಗೂ ಬೇಡ ಈ ಪಡಿಪಾಟು
ನನ್ನ ಶತ್ರುವಿಗೂ ಕೂಡ.

“ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ
ಕಷ್ಟ ಕೊಟ್ಟರೂ ಅವರೇ ಸುಖಕೊಟ್ಟರೂ ಅವರೇ”
ಎಂಬ ಹಿರಿಯರು

ಸಾಕಿ ಹಗೆ ತೀರಿಸಿ ಕೊಂಡರು

ಸಹಿಸಿ, ಸಹಿಸಿ ಸಾಕಾಗಿ
ಸುಮ್ಮನಿದ್ದ ಹಾಗೆಲ್ಲಾ ಇವರು ಹಾಗೇನೆ ಅಂದೆ!
ಬಜಾರಿ ಎನ್ನುವರು, ಬೀದಿಗಿಳಿಯುವರು

ಎರಡೂ ಕಾಣದ ಜನ
ಯಾರದಾದರೂ ಸಿಕ್ಕೀತಾ ಅಂತ ಕಾಯೋಜನ
ನಮ್ಮ ಹಾಗೇ ಅಲ್ಲವೆ ಎಲ್ಲರೂ ಅನ್ನದೆ
ಚೆಂದ ಚೆಂದವಾಗಿ ಆಡಿಕೊಳ್ಳ ತೊಡಗುವರು
ಗಾಯಕ್ಕೆ ಉಪ್ಪು ಸವರುವರು

ರೋಸಿಹೋಗಿ
ಎದೆ ಗಟ್ಟಿ ಮಾಡಿಕೊಂಡು
ಈ ಬಾಳು ಸಾಕು ಬಳ ಕೊಂಡಿದ್ದು ಸಾಕೆಂದು
ಯಾವುದಾದರೊಂದು ಗಿಡ ಗಂಟೆಗೆ ತೆಲೆ ಕೊಟ್ಟರೆ
‘ಬಾಳಲಾರದವಳ ಸುದ್ದಿ ಏನು ಬಿಡಿರಿ’ ಎನ್ನುವರು
*****