ಅಯೋಧ್ಯೆಯಲ್ಲಿ ಅಂದು
ಹುಚ್ಚೆದ್ದು ಹರಿದ
ಕೇಸರಿಹೊಳೆಯಲ್ಲಿ
ಕೊಚ್ಚಿ ಹೋದ ಹೆಣಗಳೆಷ್ಟು
ಹೇಳೋ ರಾಮಾ!
ದೇಶದ ನಾಡಿಯಲ್ಲಿ
ಹರಿದ ರಕ್ತದ ಕೆಂಪು
ಮಡುಗಟ್ಟಿ ನಿಂತು
ಹೆಪ್ಪುಗಟ್ಟಿದೆಯಲ್ಲೋ ರಾಮಾ
ಮಂಜುಗಟ್ಟಿದೆಯಲ್ಲೋ!
ಧರ್ಮಲಂಡ
ಭಂಡ ಭಗವಾಗಳು
ಹಚ್ಚಿದ ಕೋಮು ಜ್ವಾಲೆಗೆ
ಬಡವರು ಬೆಂದು
ಹೋದರಲ್ಲೋ ರಾಮಾ
ಭಸ್ಮವಾದರಲ್ಲೋ!
ರಥ ಹತ್ತಿ, ಕೊಳ್ಳಿ ಹಿಡಿದು,
ತಲೆ ಮೇಲೆ ಕೆರ ಹೊತ್ತು
ಕರಸೇವೆ ಮಾಡಿದ ಇವರು
ನಿನ್ನ ಮುಖಕ್ಕೇ
ಮಸಿ ಬಳಿದರಲ್ಲೋ ರಾಮಾ
ನಿನ್ನ ತಲೆ ತಗ್ಗಿಸಿದರಲ್ಲೋ!
ದೇಶದುದ್ದಕ್ಕೂ ಬಿದ್ದ
ಹೆಣ ರಾಶಿಗಳ ಮೇಲೆ
ನಿನ್ನನೇ ಕೂಡಿಸಿ,
ಕುಣಿದಾಡಿದರಲ್ಲೋ ರಾಮಾ
ಇವರು ಕೊಳ್ಳಿದೆವ್ವಗಳೋ!
*****


















