ಅವನೊಬ್ಬ ರಾಜಕೀಯ ಪುಢಾರಿ, ಮಂತ್ರಿಪದವಿಯಲ್ಲಿ ಸಂಪಾದಿಸಿದ ಕೋಟಿ ಕೋಟಿ ಹಣದ ಅಪಾರ ಸಂಪತ್ತು ಇತ್ತು. ಚಿನ್ನ, ಬೆಳ್ಳಿ, ಅಲ್ಲದೆ ತನ್ನದೇ ಆದ ಹೆಲಿಕ್ಯಾಪ್ಟರ್, ಸ್ವಂತ ವಿಮಾನ ಇಟ್ಟು ಕೊಂಡಿದ್ದ. ಅವನ ಹುಟ್ಟಿದ ಹಬ್ಬಕ್ಕೆ ಅತ್ಯಂತ ಬೆಲೆಬಾಳುವ ಚಪ್ಪಲಿ ಕೊಳ್ಳಲು ದೊಡ್ಡ ದೊಡ್ಡ ನಗರಗಳನ್ನು ಸುತ್ತಿ ಬಂದ. ಹುಟ್ಟಿದ ಹಬ್ಬದ ಊಟಕ್ಕೆ ನೂರಾರು ಭಕ್ಷ ಭೋಜ್ಯಗಳನ್ನು ತಯಾರು ಮಾಡಿಸಿ ಒಂದೊಂದು ಖಾದ್ಯವನ್ನು ಒಬ್ಬರಿಗೆ ತಿನ್ನಲು ಕೊಟ್ಟು ನಂತರ ತಾನು ತಿನ್ನುತಿದ್ದ. ಎಲ್ಲರು ಅವನನ್ನು ಉದಾರಿ, ದಾನಿ ಎಂದುಕೊಂಡರು. ಆದರೆ ದೂರದಲ್ಲಿ ನಿಂತಿದ್ದ ಓರ್ವ “ಆತನಿಗೆ ವಿಷಪೂರಿತ ಆಹಾರದ ಭಯ. ಬೇರೆಯವರು ಸತ್ತರೆ ಪರವಾಗಿಲ್ಲ, ತಾನು ಸಾಯಬಾರದೆಂಬ ಸ್ವಾರ್ಥಿ, ಕಟುಕ” ಎಂದು ಪಿಸುಗುಟ್ಟಿದ್ದ.
*****