ಬ್ಯಾಸೀಗಿ ಬಲುಕೆಟ್ಟ ಹೇಸೀಗಿ ನೀರ್‍ಕೆಟ್ಟ
ಮುನಿಪಾಲಿಟಿ ನೀರು ಅಡಮುಟ್ಟ
ಮುಕ್ಕು ನೀರಿಗಿ ಮಾನ ಮುಕ್ಕಾಗಿ ಹೋಯ್ತಲ್ಲ
ನಳದಾಗ ನಿಂತೋರ ಗತಿಕೆಟ್ಟ ||೧||

ಮುಗಿಲಣ್ಣ ನಕ್ಕಾಗ ಮುತ್ತಾಗಿ ಸುರಿದಾವ
ಗಿಂಡ್ಯಾಗಿ ತುಂಬ್ಯಾವ ಡ್ಯಾಮೆಲ್ಲ
ಗ್ಲಾಸು ನೀರಿಗಿ ಪಾವ್ಲಿ ಕೊಡಪಾನ ರೂಪಾಯಿ
ಚಾದಂಗ್ಡಿ ಬಿಲ್ಲೀನ ಗುಲ್ಲಿಲ್ಲ ||೨||

ಅಬ್ಬರದ ಮಳಿಯಾಗ ಉಬ್ಬರದ ತೆರಿಯಾಗ
ಗಂಡಸರು ನೆರತಾರ ಕುಂತಾರ
ಹುಡಿಗೇರು ಹೌಹಾರಿ ವಲಿಕೆಂಡ ಕಾಸ್ಯಾರ
ಕೌದ್ಯಾಗ ನಕ್ಕಾರ ಮುದಿಕ್ಯಾರ ||೩||

ಹೊಳಿಯಾಗ ಹೊಸನೀರು ಹಿಗ್ಹಿಗ್ಗಿ ಬಂದೈತೊ
ಕೆರಿಯಾಗಿ ಕರ್‍ಲೆಲ್ಲ ಕರಗೈತೊ
ಹೊಲತುಂಬ ದೊಡಪೆಂಟಿ ಬೆಣ್ಯಾಗಿ ಬಿಚ್ಚೈತೊ
ರೈತ ರಾಯನ ಕಣ್ಣು ಅರಳೈತೊ ||೪||
*****