ಜೀವನದಲ್ಲಿ ಅರ್ಥವನ್ನು ಹುಡುಕಲು
ಓಡಾಟ
ನಡೆದಿದೆ ಸತತ
ಎಷ್ಟು ಓದಿದರೂ
ಅರ್ಥ ಕಾಣದು
ಅಲ್ಲಲ್ಲಿ ನಿಂತು
ದಣಿವ ಪರಿಹರಿಸಿ
ಮುಂದುವರಿದಾಗ
ತುಸುವೆ ಲಭಿಸಿದ
ಸುಖವೂ ಅರ್ಥಹೀನ,
ಮುಂದೆ ಧುತ್ತೆಂದು
ಎದುರು ನಿಲ್ಲುವ
ಪ್ರಶ್ನೆ
ಮುಖದ ಮೇಲಿನ
ದಣಿದ ಗೆರೆಗಳ ಮರೆಸಿ
ಹಣೆ-ಗಲ್ಲಗಳ ಮೇಲಿನ
ಬೆವರುಗಳ ಒರೆಸಿ
ಕಣ್ಣಗುಳಿಯಲಿ ಕಂಡ
ಕಪ್ಪು ಸುತ್ತನು ಕಡೆಗಣಿಸಿ
ಬಾಳ ಹಾದಿಯಲಿ ನಡೆದಾಗ
ಮತ್ತೆ
ಗೋಲಾಕಾರದ ಶೂನ್ಯ
ಆಗ
ನೌಕರಿಗೋಡುವ ನಿರಂತರ
ಚಿಂತೆಯ
ಕಪ್ಪು ಮುಸುಕು ಹೊತ್ತ
ಬಸ್ಸಿಗೆ ಕಾಯುವ
ತಂಡ ತಂಡಗಳ ನಡುವೆ
ಬಸ್ಸೇರುವ ದುರ್ಬಲ ಶರೀರಗಳು
ನಡೆಸುವ ಹೋರಾಟದಲ್ಲಿ
ಯಾವ ಅರ್ಥವೂ ಹೊಳೆಯದೆ
ಹೊಳೆಗೆ ಒಗೆದ ಕಲ್ಲಿನ ಸುತ್ತು
ಸುಳಿಯೆದ್ದಂತೆ
ಆ ಸುಳಿಯು ತೇಲಿ ಹೋಗುವುದನ್ನೆ ನೋಡಿ
ಮುಖದ ಮೇಲೆದ್ದ ಅರ್ಥ ಸುಳಿಯನ್ನು
ಅರಿಯದೆ
ಅರಿತ-ಸೋಗನ್ನು ಹಾಕುತ್ತ
ತನ್ನತಾ ವಂಚಿಸುತ
ಬದುಕುವುದು
ಬದುಕೆ?
*****