ಶ್ರೀ ಕೃಷ್ಣೌವಾಚಃ ಲೊಚ ಲೊಚ
ಶ್ರೀ ಕೃಷ್ಣ ಪರಮಾತ್ಮನು ಹೇಳಿದ್ದೇನೆಂದರೆ:
ಕೇಳಯ್ಯ ಇಲ್ಲಿ ಭಾವಯ್ಯ ಯದಾ ಯದಾಹಿ ಧರ್ಮಸ್ಯ
ಧರ್ಮಗ್ಲಾನಿ ಕೆಂಪು ನಿಶಾನಿ ಶನಿ ಶನೀ
ಹುಟ್ಟಿ ಬಂದೇನಯ್ಯ ಕುಟುಂಬದ ಎಂಟನೇಯವ
ಕೂರ್ಮಾವತಾರಿ ಚಪಾತಿ ಪೂರೀಬಾಜಿ
ಮತ್ಸ್ಯಾವತಾರಿ ಬೆಳ್ತಿಗೆ ಅಕ್ಕಿ ರೊಟ್ಟಿ
ಬಿರಿಯಾಣಿ ಮತ್ತು ಕುರ್ಮ
ಕರ್ಮಣ್ಯೇವಾಧಿಕಾರಸ್ತೇ
ಮಾ ಫಲೇಶು ಕದಾಚನ-ಈ ವಾಚನ
ಭಗವದ್ಗೀಗೀತೆಯ ರಟ್ಟು
ವಾತ್ಸಾಯನನ ಗುಟ್ಟು
ಇದು ವಿಶ್ವರೂಪದ ಸಿಂಥೆಟಿಕ್ ದರ್ಶನ
ಹಿಟ್ಟಿಗಿಂತ ಹೊಟ್ಟೆ ದೊಡ್ಡದು
ಹೊಟ್ಟೆಗಿಂತ ಮನುಷ್ಯ ದೊಡ್ಡದು
ಮನುಷ್ಯನಿಗಿಂತ ಆತ್ಮ ದೊಡ್ಡದು
ಆತ್ಮಕ್ಕಿಂತ ಪರಮಾತ್ಮ ದೊಡ್ಡದು
ಎಂಬ ಲೆಕ್ಕಾಚಾರದ ಹಿಂದೆ
ಡೊಂಬರಾಟ ಹಾಕಿ
ಫಿಲಾಸಫಿಯ ಕೆಳಗಡೆ ಅಡಗಿ
ಲಾಜಿಕ್ಕಿನ ಸುತ್ತ ಖೊಕ್ಕೊ ಆಡಿ
ಸಿನಿಕನ ಕೆಮ್ಮು ಬೀಡಿಯ ದಮ್ಮು
ಮಿಸ್ಟಿಸಿಸಮಿನ ಮೋರ್ಫಿಯಾ ತಿಂದು ಮಲಗಿ-
ದುರ್ಯೋಧನ ಬಂದು ಈಚೆಗೆ ಜಗ್ಗಿ ಎಳೆದಾಗ
ಚರ್ಮ ಉಳಿಸುವುದಕ್ಕೆ ಎರಡು ಪೆಗ್ ಹಾಕಿ
ಎದ್ದು ಹೋರಾಡುವ ಧರ್ಮ
ಗೀತೆಯ ಮರ್ಮ-ಕೇಳದೇ ಹುಟ್ಟಿ ಬಂದವರು
ಬದುಕಿಗೆ ಅರ್ಧ ಕಾಣದೇ ಹೋಗುವರು
ಕರ್ಮಣ್ಯೇವಾಧಿಕಾರಸ್ತೇ
ಇಂದಿಗೆ ಸಾಕು-ಗುಡ್‌ನಾಯಿಟ್-ನಮಸ್ತೇ.
*****