ಜನ ಜನ ನಮ್ಮ ಜನ
ಕಾಳು ಕಡ್ಡಿ ತಿನ್ನುವ ಜನ
ಹುಲ್ಲು ಮೇದು ಬರುವ ಜನ
ಯಾವ ಕಸಾಯಿಖಾನೆಗೆ ಈ ಜನ ?
ನಶ್ಶವ ತಿಣಿಕಿ ಎಡೆ ಎಡೆ ಹಣಿಕಿ
ಏಕ್ಸಿ ಏಕ್ಸಿ ಎನ್ನುವರು
ಎಡಬಲವೆನ್ನದೆ ಗಾಳಿಗೆ ಉಗಿದು
ಬಯ್ಯುವರು ಬಯ್ಯಿಸಿಕೊಳ್ಳುವರು
ಸಿಹಿ ಸಿಹಿ ಗುಲಾಬುಜಾಮೂನು ನುಂಗಿ ಖಾರಾ ಹಾಕಿ
ಹುರಿದ ಚಮ್ಮೀನು ಕಡಿಮೆ ಕೈ ಬಾಯಿ ಒರೆಸಿ
ಸಿಗರೇಟು ಕಚ್ಚಿ ತೊದಲಬಹುದು ಆಸ್ತಿತ್ವವಾದ
ಚಪ್ಪರಿಸಬಹುದು ಬಾಯಿ ಏನರೀ ರಾಜೀವಿ ಬಾಯಿ
ನವಂಬರದ ಸಂಜೆ ಬೀಚಿನಲ್ಲೋ ಪಾರ್ಕಿನಲ್ಲೋ
ತಾತ್ವಿಕ ಚರ್ಚೆಯಲ್ಲಿ ಮನಸ್ಸು ಮರೆತು
ಟೀಬಲಿನ ಕೆಳಗೆ ಕಾಲಿಗೆ ಕಾಲು ಬೆರೆತು
ಎಕ್ಕಾ ಜಾಕಿ ರಾಜಾ ರಾಣಿ-ಹೀಗೆ ಕಿಂಚಿತ್ತು ಮಜಾ
ಸ್ವಯಂ ಪ್ರೇರಿತ ಅಬ್ಬರ ಕ್ಷಣದಲ್ಲಿ ಸುಟ್ಟು ಕರಗಿ
ನೀರು ಬತ್ತಿದ ನಲ್ಲಿ ಹಾಳು ಬಿದ್ದ ಗಲ್ಲಿ
ತಾರಸಿ ನೋಡುವ ಜನ
ಹೊಟ್ಟು ತುಂಬಿ ಮಾಡಿಟ್ಟ ಸಂತೆಯಲ್ಲಿ ತಂದಿಟ್ಟ
ಟೊಳ್ಳು ಜನಾ ಜನಾ
ಬೆಳಕಿಗೆ ಕಾಯುವ ಖಾಲಿ ಜನ
ಜಾರಿ-ಬೇಕಾಗಿಯೋ ಬೇಡಾಗಿಯೋ
ಈ ಇಳಿಜಾರಿನಲ್ಲಿ ತೆವಳಲೆ ಬೇಕು
ಒಳಗಿನ ಶೂನ್ಯದಲ್ಲಿ ಸುಳಿಯಲೆ ಬೇಕು
ತೂಕಡಿಸುವವರು ಗಾಂಜಾ ಮುಖದವರು
ಅಸ್ವಸ್ಥರು ಈ
ಸಂಜೆಯ ಜನರು.
*****