ನಿರಂತರವಾದ ಅಂತರದಿಂದ
ನೆಲಮುಗಿಲುಗಳ ಮಿಲನವಾಗುವುದಿಲ್ಲ
ಆಕಾಶವು ದೂರ ದೂರಕೆ ಸರಿದು
ಅಂತರದ ವ್ಯಾಸವನ್ನು ಹೆಚ್ಚಿಸುತ್ತ
ನನ್ನ ನಿನ್ನನೂ ಹತ್ತಿರ
ಬರಲು ಬಿಡುವುದಿಲ್ಲ
ಎಷ್ಟು ಕಾಲದಿಂದ ಒಳ ಮಾತುಗಳು
ತುಟಿವರೆಗೆ ಬಂದು ನಿಂತು ಬಿಟ್ಟಿವೆ.
ಒಳಗಿನ ಭಾವತೆರೆಗಳು
ಒಂದರ ಮೇಲೊಂದು ಉರುಳುತ್ತ
ದಡ ಮುಟ್ಟಲು ಕಾತರಿಸಿ
ಮರು ಉರುಳಿ ಸಾಗಿ ಬಿಡುತ್ತವೆ.
ಹೀಗೇ………….
ಮನದೊಳಗೊಂದು ಲೋಕ
ತೆರೆದು ಕೊಳ್ಳುವುದು
ಅದರೊಳಗಿರುವ ವರ್ಣರಂಜಿತ
ದೃಶ್ಯಗಳಲ್ಲಿ ಕರೆಯುವ
ಪರಿಪರಿಯ ಆಮಿಷಗಳಿಗೆ
ಅಂತರ ಕಾಣದು
ಒಂದರ ಹಿಂದೊಂದು
ನಡುವಿರುವ ದೂರವನು ಮೀರಿ
ಸಮೀಪ ಎಳೆಯುವಾಗ
ನಂತರ ಏನು ಎನ್ನುವ ಪ್ರಶ್ನೆ
ನಿರ್ ಅಂತರವಾಗುವುದು…..
*****