ವಿಲಯ ದಿಂದ ಮಲಯ ಭಾನು
ಇಗೋ ಇಲ್ಲಿ ಮೂಡಲಿ
ಪ್ರಲಯ ಮೇಘ ಇಂಗಿ ತಂಗಿ
ಹೂವು ಹಣ್ಣು ಸುರಿಯಲಿ ||೧||

ಎಂಥ ಗಾಳಿ ಕುತ್ತು ಕೇಳಿ
ಗರ್ರ ಗರ್ರ ತಿರುಗಿತು
ಮನೆಯ ಗುಡಿಯ ಹುಡಿಯ ಮಾಡಿ
ಚಿಂದಿ ಚೂರು ಮಾಡಿತು ||೨||

ಬರಲಿ ಶಾಂತ ಅವಲ ವಿಮಲ
ರಾಜ ಹಂಸ ಜಲವನಂ
ಮನವೆ ವನವು ದೇಹ ಬನವು
ಅಕ್ಷಿ ಪಕ್ಷಿ ಕೂಜನಂ ||೩||

ಅಕಾ ಅಲ್ಲಿ ಸೊಗಲದಲ್ಲಿ
ಸೊಬಗು ಸೋಗೆ ಕುಣಿದಳು
ಇಕಾ ಇಲ್ಲಿ ಸಹಜದಲ್ಲಿ
ಆತ್ಮ ರಾಣಿ ತಣಿದಳು ||೪||
*****