ಮಹಾನಗರ ರಸ್ತೆ – ಮರುಚೇತನ

ಮಹಾನಗರದ ಮುಖ್ಯ ರಸ್ತೆಯಾಗಿದ್ದು
ನನ್ನ ಅಸ್ತಿತ್ವಕ್ಕೆ ನಾನೇ ಶಪಿಸುತ್ತಾ
ತಲೆ ಎತ್ತುವ ಧನ್ಯತೆ ಕಳೆದಿತ್ತು.

ಬಾಯಾರಿದ ಭೂ ಒಡಲು ಹಸಿರಾಗಿಸಲು
ಧಾರಾಕಾರ ವರುಣನ ವಿಜಯೋತ್ಸವ
ತಗ್ಗು-ಗುಂಡಿಗಳಲಿ ನನ್ನ ದೇಹದ ವಸ್ತ್ರಾಪಹರಣ

ಮಾನ ಬಿಟ್ಟವರು ನನ್ನ ಮಾನ ಮುಚ್ಚಲು
ಬರಿ ಉಸುಕು-ಮಣ್ಣು ಚೆಲ್ಲುತ ಗುಳಂವಾಗಿಸುವರು
ಆಡಳಿತ-ಅಧಿಕಾರಿಗಳು ನೂರು ಸಾವಿರ ಲಕ್ಷ ಲಕ್ಷ

ಸ್ವಾಭಿಮಾನ ಮರೆತ ನಗರವಾಸಿಗಳು
ನನ್ನ ಮೈಮೇಲೆ ನಡೆದಾಡುವಾಗೊಮ್ಮೆ
ಏಳುತ್ತ-ಬೀಳುತ ಹಾಕುವರು ಶಾಪ-ತಾಪ

ತಮಗಾದ ಅನ್ಯಾಯ ಪ್ರತಿಭಟಿಸದಿರುವ
ನಗರವಾಸಿ ನಾಗರಿಕ ವರ್ಗದ
ಭವಿಷ್ಯ ಮೆಲುಕಾಡಿಸುತ್ತಾ ಮೈಚಾಚಿ ಮಲಗಿರುವೆ

ಸ್ವಾತಂತ್ರ್‍ಯ ಸಿಕ್ಕು ಅರ್ಧಶತಕವಾದರೂ
ನಡೆದಿರುವವು ನನ್ನಿಹ ಮೈಮೇಲೆ
ಅತ್ಯಾಚಾರ ಭಾಷೆ-ಕೋಮು ದ್ವೇಷದ ಇರಿತಗಳು

ಕಾರ್ಮಿಕರ ಮೌನ ಹೋರಾಟ – ಮುಷ್ಕರ
ಅಬಲೆಯರ ಆರ್ತನಾದ ಅಪಘಾತ ಗಲಭೆಗಳ
ರಕ್ತದ ಮಡುವಿನಲ್ಲಿ ನರಳಾಟ ಕೇಳುತ ಮೌನವಾಗಿರುವೆ.

ಹುಸಿ ಭರವಸೆ ನೊಂದವರ ನಿಟ್ಟುಸಿರು
ಕೇಳುತ ನೋಡುತ ಬೇಸತ್ತು ಮಲಗಿದ್ದೆ
ಪುಳಕಿತಗೊಂಡೆ ಈ ದಿನ ವೀರಯೋಧರ ಶವಯಾತ್ರೆ ತಿಳಿದು

ದಶ ದಶಕಗಳಿಂದ ಬರಿ ಡಂಬಾಚಾರದ
ನಯ – ವಂಚಕರಿಂದ ತುಳಿಸಿಕೊಂಡು ಸಾಕಾಗಿದ್ದ
ಮೈಮನ ಕಾತರಿಸುತ್ತಿದೆ ವೀರಯೋಧನ ಸ್ಪರ್ಶಕ್ಕಾಗಿ

ಮಾತೃ-ಭೂಮಿಯ ಗಡಿ-ಶಿಖರಗಳಲಿ
ಮಡಿದ-ಮಕ್ಕಳು ಮನೆ ಎನ್ನದೆ
ರಾಷ್ಟ್ರಪ್ರೇಮದ ದೃಢತೆಯಲಿ ಶತ್ರುಗಳ ಸದ್ದಡಗಿಸಿ
ಜೀವ ನೀಡಿದ ವೀರ ಆ ಧೀರ ಸೈನಿಕರು

ನಗರ-ನಾಗರಿಕ ಸನ್ಮಾನ-ಹೆಮ್ಮೆಯ ದುಃಖದಿ ಕಣ್ಣೀರು
ಶವಪೆಟ್ಟಿಗೆಯಡಿ ವೀರ ಜವಾನರು
ಕೊನೆ ಮೆರವಣಿಗೆ ಮೈಮೇಲೆ ಸಾಗುವ ಕ್ಷಣ
ರೋಮಾಂಚನದಿ ದೇಹದ ಕಣ ಕಣವೂ ಧನ್ಯ ಧನ್ಯ

ಹೊತ್ತವರು-ಹೆತ್ತವರೆಲ್ಲಾ ಅತ್ತರು ಹೆಮ್ಮೆಯಲಿ
ಸಾಗಿತ್ತು ರಸ್ತೆಯುದ್ದಕ್ಕೂ ಅಂತಿಮ ಶವ ಯಾತ್ರೆ-ಜಾತ್ರೆ
`ಜವಾನ-ಅಮರ ರಹೇ’ ಮುಗಿಲು ಮುಟ್ಟಿದ ಘೋಷಣೆ

ತಾಯಿನಾಡಿಗಾಗಿ ಮಡಿದ ವೀರ ಜವಾನರ ಸ್ಪರ್ಶ
ನನ್ನ ಅಸ್ತಿತ್ವದ ಸಾರ್ಥಕತೆಗೆ ಜೀವ ತುಂಬಿತು
ಮರು ಚೇತನದಿ ಈ ತನುವು ಧನ್ಯತೆ ಪಡೆದಿತ್ತು.

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಟೆ
Next post ಕರುಣೆಯೇ ಇಲ್ಲ

ಸಣ್ಣ ಕತೆ

 • ಗುಲ್ಬಾಯಿ

  ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

 • ಆ ರಾಮ!

  ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

 • ಇನ್ನೊಬ್ಬ

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

 • ಮೇಷ್ಟ್ರು ರಂಗಪ್ಪ

  ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

 • ಬೂಬೂನ ಬಾಳು

  ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…