Home / ಕವನ / ಕವಿತೆ / ಬುಡುಬುಡಿಕ್ಯಾ

ಬುಡುಬುಡಿಕ್ಯಾ

ಓಂ ದೇವದೇವರ ದೇವರ ಮಗನ
ದೇವಲೋಕದ ಬುಡುಬುಡಿಕ್ಯಾ ನಾ
ಭಾವಶುದ್ಧವಾಗಿ ಕೇಳಿರಿ ಸುಮ್ಮನ
ದೇವಲೋಕದ ಸತ್ವಾಧೀನ ||೧||

ಪಡುವಣ ದಿಕ್ಕಿನ ಬುಡುಬುಡಿಕ್ಯಾ ನಾ
ಮೂಡಣ ದೇಶವ ನೋಡುತ ಬಂದೆ
ಬೇಡಿ ಬೇಡಿದ್ದನು ಹೇಳುವ ಕೇಳೆ
ರೂಢಿಯೊಳಗೆ ನಾ ನುಡಿಯುಪವೆ ತಾಯಿ ||೨||

ದೇಹದ ಮರ್ಮವನೆಲ್ಲವ ಬಲ್ಲೆ
ಕಾಯದೊಳಗೆ ಒಂದು ದೇವರುಂಟು
ಮೋಹ ಮಾಯಗಳು ತೊಲಗಲು ತಾಯಿ
ಶ್ರೇಯಸ ಸಾಧನ ತಿಳಿವದು ಕೇಳೆ ||೩||

ಹತ್ತು ಮಂದಿ ದಿಕ್‍ಪಾಲಕರಮ್ಮ
ಹಂತೇಲೆ ಇರುವರು ನೋಡಮ್ಮ
ಚಿತ್ತಶುದ್ಧವಾಗಿ ಕೇಳವ್ವ ತಂಗಿ
ಸತ್ಯವಾಗಿ ನಾ ನುಡಿಯುವೆ ತಾಯಿ ||೪||

ಸ್ಥೂಲ ಸೂಕ್ಷ್ಮ ಕಾರಣ ದೇಹ
ಮೂಲ ಪ್ರಣಮವು ನಿನದವ್ವ ಮಗಳೆ
ಮೂಲೋಂಕಾರದ ನೆಲೆಯನು ತಿಳಿಯೆ
ಕೀಲ ತಿಳಿದುಕೂಂಡಿರಬೇಕಮ್ಮ ||೫||

ಉಪಾಯ ನಿನಗೊಂದು ಹೇಳುವೆನಮ್ಮ
ಜಪ ಶಪದಾಚಾರ ಸಾಧಿಸಲಮ್ಮ
ಭಕ್ತಿ ಮೆಚ್ಚಲು ಶಿಶುನಾಳೇಶ
ಮುಕ್ತಿಯ ಸಂಪದ ಕೊಡುವನು ಈಶ ||೬||

ಜಾಗ್ರ ಸುಷುಪ್ತಿ ಸ್ವಪ್ನದೊಳಗೆ
ಶೀಘ್ರದಿಂದ ಶಿವಾ ಇರುತಾನ ತಂಗಿ
ಜಾಗ್ರತಿಯಿಂದ ತಿಳಕೋಳವ್ವ
ಮಹಾಜ್ಞಾನಿ ಗುರು ಬಂದಿರುವನು ||೭||

ತೈಲವಿಲ್ಲದೊಂದು ಜ್ಯೋತಿಯು ಉಂಟು
ತೆಲಿಯೊಳಗೆ ತಾ ಬೆಳಗುತದವ್ವಾ
ನಯನ ಹಿಡಿದು ನೀ ನೋಡದ್ವ ತಂಗಿ
ಬೈಲಿಗೆ ಬಯಲಾಗಿ ಹೋಯಿತು ಮಗಳೆ ||೮||

ಸಾಂಖ್ಯ ತಾರಕಾ ಮನಸುಗಳು ಕೂಡಿ
ಬಹು ಕಿಂಕರ ವೃತ್ತಿಯೊಳು ಇರಬೇಕಮ್ಮ
ಅಹಂಕಾರ ಗುಣಗಳು ಅಳಿಬೇಕಮ್ಮ
ಶಂಕರ ಮಗಳು ನೀನಾಗಿರಬೇಕಮ್ಮ ||೯||

ಕಲ್ಯಾಣದಲಿ ಹುಟ್ಟಿದ ಮಗಳೆ
ಕಲ್ಲದೇವರನು ಕಟ್ಟುತ ಬಂದಿ
ಎಲ್ಲ ಶಾಸ್ತ್ರವ ಕಟ್ಟಿಡು ತಂಗಿ
ಅಲ್ಲಮದೇವರ ದೇವರ ಮಗ ನಾನು ||೧೦||

ಆಕಾಶದೊಳು ಇದ್ದೆನು ತಂಗಿ
ಯಶದೆಸೆಗೆ ನಿಂತಿಹ ತಾಯಿ
ನೂಕ್ಯಾಡಿದರೆ ದಿನವಿಲ್ಲವ್ವಾ
ಯಾಕಬೇಕು ಸಂಸಾರ ತಾಯಿ ||೧೧||

ಎಡಮುರಿ ಶಾಸ್ರವ ತಂದೇನಿ ಮಗಳ
ಡೃಢದಿಂದ ಲಾಲಿಸಿ ಕೇಳವ್ವ ತಂಗಿ
ಸೆಡಗರದೊಡಯ ಕೊಡು ಬಂದಿಹನು
ಮೃಡನ ಮಗನು ನಾನು ಬುಡುಬುಡಿಕ್ಯಾನು ||೧೨||

ಬ್ರಹ್ಮ ವಿಷ್ಣು ರುದ್ರ ಸದಾಶಿವರ
ಮರ್ಮವ ನಾ ಹೇಳುವೆನಮ್ಮ
ಕರ್ಮದೇಹಗಳು ಅಮರೇ ತಾಯಿ
ಧರ್ಮದ ಮರ್ಮವ ಅರಿಯರು ಮಗಳೆ ||೧೩||

ಮರಣದ ಬಾಗಿಲ ತರದಿಹ ಮಗಳೆ
ಪ್ರಮಾಣ ಇತ್ತೋ ನಿನಗವ್ವ ತಾಯಿ
ಪರಕಾಯ ಇದನೆಳೆದೊಯ್ಯುವರು ತಾಯಿ
ತಿರಗಿ ತಿರಗಿ ನೀ ಬರಬೇಕಮ್ಮ ||೧೪||

ಹದಿಮೂರು ಮುತ್ತು ನಿನ್ನೊಳಗವ್ವ
ಅದರೊಳಗೊಂದು ರತ್ನ ಇರುವುದವ್ವ
ಕದಲದೆ ಮನದೊಳು ನೋಡವ್ವ ತಂಗಿ
ಚದುರತನದಿ ನೀ ಧರಿಸವ್ವ ತಾಯಿ ||೧೫||

ಯಾವ ದೇವರು ದೇವರಲ್ಲ
ವಾಯುದೇವನೇ ದೇವನಮ್ಮ
ಜೀವ ಅದರೊಳು ಇರುವದು ತಂಗಿ
ಸಾವು ಇಲ್ಲದೊಂದು ಗಿಡ ಉಂಟಮ್ಮ ||೧೬||

ಹುಟ್ಟು ಮಾರ್ಗದಲಿ ಹೋಗುವಿ ತಂಗಿ
ಹುಟ್ಟಿನ ಗಿಡದಲಿ ಮಲಗುವಿ ಮಗಳೆ
ಬೆಟ್ಟದ ಎಲೆ ಆರಿಸಿ ತರಬೇಕಮ್ಮ
ಮುಟ್ಟಿದ ಲಿಂಗಕೆ ನೀಡಬೇಕಮ್ಮ ||೧೭||

ಲೋಕದಂಥ ಬುಡುಬುಡಿಕ್ಯಾನಲ್ಲ
ಏಕಾಂಗಿ ನಾ ಬುಡುಬುಡಿಕ್ಯಾ ನಾ
ಜೋಕಿಲೆ ತಿಳಿಸಿ ಕೊಡುವೆನು ಬಾರವ್ವ
ಮೂಕಳಾಗಿ ನೀನಿರಬೇಕಮ್ಮ ||೧೮||

ತಂದಿಲೆ ಹತ್ತು ತಾಯಿಲೆ ಹನ್ನೊಂದು
ಬಂಧು ಬಳಗ ಮತ್ತಿಪ್ಪತ್ತೊಂದು
ಸಂದೇಹವಿಲ್ಲದೆ ಕೊಡಲಿಕೆ ಬಂದೇನಿ
ಕಂದುಗೊರಳಿನ ಕರುಣವೇ ತಾಯಿ ||೧೯||

ನೂರೊಂದು ಸ್ಥಳದವ ಬಂದೇನಿ ಮಗಳೆ
ಮೂರು ಲಿಂಗದ ನೆಲಿಯೇನು ಬಲ್ಲೆ
ಮೀರಿದುನ್ಮನಿ ಇರಬೇಕಮ್ಮ
ಸೂರ್ಯ ಚಂದ್ರರ ಹಾದಿಯ ಹಿಡಿದು ||೨೦||

ಸಾಧುರ ಸಂಗವ ಮಾಡಬೇಕು ಮಗಳೆ
ದೇವಪ್ರಪಂಚ ಹಿಡಿಬೇಕು ತಂಗಿ
ನಾದ ಬ್ರಹ್ಮವ ಕೂಡಬೇಕಮ್ಮ
ಸಾಧಿಸಿ ಕೂಡಿಕೋ ಸಾಂಬನ ತಾಯಿ ||೨೧||

ಜೀವಪ್ರಪಂಚ ಬಿಡಬೇಕು ಮಗಳೆ
ದೇವಪ್ರಪಂಚ ಹಿಡೀಬೇಕು ತಂಗಿ
ಸಾವಪ್ರಪಂಚ ಸಡಿಲೀತಮ್ಮ
ಭಾವಪ್ರಪಂಚ ದೃಢವಿರಲೆಮ್ಮ ||೨೨||

ಸಿದ್ಧಾರೂಢನ ಮಗನವ್ವ
ನಿದ್ರೆಗೆ ಸಾಕ್ಷ್ಯಾಗಿರುವೆನು ತಾಯಿ
ಚಿದ್‍ರೂಪನ ಸಂದನ ಹೇಳಲಿಕ್ಕೆ ಬಂದೇನಿ
ತದ್‍ರೂಪಳು ನೀನಾಗಿರಬೇಕವ್ವ ||೨೩||

ವಿರಾಟ ಸ್ವರಾಟ ವೀರಾಟ ಕೂಡಿ
ಭರಾಟೆಲಿಂದ ಬಂದೇನಿ ಮಗಳ
ನರರಾಟಿಕೆನೆಲ್ಲ ಮುರಿಲಿಕೆ ತಂಗಿ
ಮರುಳಾಟಿಕೆನೆಲ್ಲ ಮರೀಬೇಕಮ್ಮ ||೨೪||

ಸ್ರ ದಳ ಕಮಲದೊಳು ಶಿವನು ತಾನು
ಹಾರೈಸಿರುವನು ನೋಡವ್ವ ಮಗಳೆ
ಕಾಶಿ ರಾಮೇಶ್ವರನಲ್ಲಿರುವನು
ಮೀಸಲದಡಗಿ ನೀನುಣಬೇಕಮ್ಮ ||೨೫||

ಷಣ್ಮುಖ ಪಾಷಾಣ ಮಾಡಬೇಕು ಮಗಳೆ
ಷಣ್ಮುಖಾದ್ರಿಗಳ ಹಿಡಿಬೇಕು ತಂಗಿ
ಕಣ್ಣು ಮೂಗು ಕಿವಿ ಮುಚ್ಚಿರಬೇಕಮ್ಮ
ಷಣ್ಮುಖಿಚಾರಿಸಿ ನೋಡಬೇಕಮ್ಮ ||೨೬||

ಪಂಚಯೋಗ ಮಾಡಬೇಕು ಮಗಳ
ಪಂಚಲಕ್ಷಣದಿ ನಡಿಬೇಕಮ್ಮ
ಪಂಚಮುದ್ರಿಯ ಬಲಿಬೇಕಮ್ಮ
ಪಂಚಾಕ್ಷರಿ ನುಡಿಬೇಕು ತಾಯಿ ||೨೭||

ಅಷ್ಟಾಂಗಯೋಗ ಮಾಡಬೇಕು ಮಗಳ
ಅಷ್ಟಸಿದ್ಧಿ ಪಡಿಬೇಕು ತಂಗಿ
ಅಷ್ಟಮೂರುತಿ ಆಗಿರಬೇಕಮ್ಮ
ಅಷ್ಟೈಶ್ವರ್ಯದೊಳು ಕೂಡಬೇಕು ತಾಯಿ ||೨೮||

ತಾರಕ ಮಂತ್ರ ಹೇಳುವೆ ಮಗಳೆ
ಸಾರಿದ ಸರ್ವಾತ್ಮನು ತಾಯಿ ಬೇರಿಲ್ಲವ್ವ
ಪರಮಾನ್ ಪರ ಆನಂದಕೆ
ನೀ ಮೀರಿದ ಮಗಳೆ ||೨೯||

ದರ್ಪಣಮುಖ ಸ್ವರೂಪದಿ ನೋಡವ್ವ
ಕಪ್ಪುಗೊರಳಿನಲ್ಲಿರುವನು ತಂಗಿ
ಸರ್ಪಭೂಷಣನ ಕೂಡಬೇಕವ್ವ
ಕರ್ಪೂರದಾರತಿ ಬೆಳಗವ್ವ ಮಗಳೆ ||೩೦||

ಸ್ವರ್ಗದ ಹಾದಿ ಬೇಡಬೇಕು ಮಗಳೆ
ಭಾರ್ಗವದೇವನ ನೆನಿಬೇಕು ತಂಗಿ
ನಿರ್ಗುಣ ಸಮಾಧಿ ಮಾಡಬೇಕವ್ವ
ದುರಗವ್ವನ ಗುಡಿಗೆ ಹೋಗಬೇಕು ಮಗಳೆ ||೩೧||

ತಿರುಗುತಲೈವತ್ತೆರಡಕ್ಷರ ತಾಯಿ
ಬರಿವರು ಬ್ರಹ್ಮಾಂಡದ ಜನರವ್ವ
ಕರಿವರು ನಾಮರೂಪದೊಳು ತಂಗಿ
ಪರಿ ಪರಿ ಷಟ್‍ಕರ್ಮಸ್ಥರು ತಾಯಿ ||೩೨||

ಸತ್ಯ ಎಂಬುದು ಇರುವದು ಮಗಳೆ
ಚಿತ್ತ ಎಂಬುದು ಅರುವಿದೆ ತಂಗಿ
ಮತ್ತಾನಂದದಿ ಬಹುಸುಖವವ್ವಾ
ನಿತ್ಯಪೂರ್ಣಂಭರಿತಯ್ಯನ ಮಗಳೆ ||೩೩||

ಭವ ಭವದಲಿ ತಿರುಗುತ ಬಂದೇನಿ
ಭವಣಿಯಿತ್ತಲವ್ವ ನಿನಗವ್ವ ಮಗಳೆ
ಶುಭಮೂರ್ತದಲಿ ಬಂದಿಹೆ ತಾಯಿ
ಅಯನ ತೋ‌ರಿಸಿ ಕೊಡುವೆನು ಬಾರೆ ||೩೪||

ಕೋಟಿ ಎಲವು ನಿನಗುಂಟವ್ವ ಮಗಳೆ
ನಾಟಕ ಒಂದು ತರಬೇಡವ್ವ ತಂಗಿ
ಚಾಟ ವಿದ್ಯ ನಾ ಹೇಳುವವನಲ್ಲ
ಕೂಟಸ್ಥ ಬ್ರಹ್ಮದೊಳು ಐಕ್ಯಾಗಮ್ಮ ||೩೫||

ಕಾಲಜ್ಞಾನದ ಪುರುಷನು ನಾನು
ಮೇಲುಜ್ಞಾನವನು ಹೇಳಲು ಬಂದೆ
ಕಾಲ ಸೂಚನೆಗಳು ಬಂದಾವಮ್ಮಾ
ಹಾಲುಹಕ್ಕಿ ಒಂದು ನುಡಿತೈತಿ ತಾಯಿ ||೩೬||

ಹಸಿ ಹುಸಿ ಮಾತುಗಳ ಆಡಬೇಡಮ್ಮ
ದಶದಿಕ್ಕು ಹಸನುಮಾಡುತ ಬಂದಿಹನೇ
ಕುಶಲಗಾರ ಕುಂಪನಿಯರಮ್ಮ
ವಾಸುದೇವನ ಅವತಾರ ಜನಿಸಿದರಮ್ಮ
ಹುಶ್ಶಾರಿಕಿರಲಿ ಮನದೊಳು ತಾಯಿ ||೩೭||

ಒಳಹೊರದಾರಿ ಸುಳಿವ ಸೂಕ್ಷ್ಮದಾರಿ
ಪರಿಮಾದಲಿ ಮಾಡುವನಮ್ಮಾ
ದೊರಿಗಳನೆಲ್ಲಾ ಮುರಿವನು ತಂಗಿ
ಪರಮಪುರುಷ ಪರಂಗಿಯವರು ||೩೮||

ಉತ್ತರ ದಿಕ್ಕಿನ ಸತ್ಯವಂತರು
ಮರ್ತ್ಯಕೆ ದಾಳಿ ತರುವರು ತಂಗಿ
ಎತ್ತ ಹೋದರೂ ಬಿಡುವಿಲ್ಲವ್ವಾ
ಮುತ್ತಗಿಹಾಕುತ ಬರುವರು ತಾಯಿ ||೩೯||

ಕೈಲಾಸ ಹಾಳ್‍ಬಿದ್ದು ಹೋದೀತು ತಾಯಿ
ಭೂ ಕೈಲಾಸಾಯಿತು ಮಗಳೆ
ಬಾಲಚನ್ನಬಸವಣ್ಣವರಿಗೆ ಪಟ್ಟ
ದೇವದುರ್ಗದಲಿ ಕಟ್ಟುವರಮ್ಮ ||೪೦||

ಗುರುಪುತ್ರಾಂಶ ಹೊಳಿಗಳನೆಲ್ಲ
ದೊರಕಿಸಿಕೊಡಬೇಕು ಭೂದೇವಿ ತಾಯಿ
ಸ್ಥಿರಕಾಯವನು ಮಾಡುತ
ತಿರಕರ ಆಳಿಕೆ ಅಳಿವರು ತಂಗಿ ||೪೧||

ಬುಡುಬುಡಿಕ್ಯಾನ ಮಾತು ಬುಡತನ ಸುಳ್ಳು
ಬುಡನೋಡ ಕೊಡನೋಡ ಬಧ್ರನೀಗೊಳ್ಳೆ
ಹಿಡಕೊಡುವೆನು ಬಿಡಬೇಡ ಮಗಳ
ಕಡಿವೆನು ಕರ್ಮದ ನೋವನು ತಾಯಿ ||೪೨||

ಸಾಮದೇವ ನೋಡಬೇಕು ಮಗಳೆ
ರಾಮನಾಮವ ನೆನಿಬೇಕು ತಂಗಿ
ತಾಮಸ ಗುಣಗಳು ಅಳಿಬೇಕಮ್ಮ
ಪ್ರೇಮಾಬ್ಧಿಬಾಲೆನೊಡಗೂಡುವೆನು ತಾಯೆ ||೪೩||

ಅರಿತುಕೋ ಶಿಶುನಾಳಧೀಶನಿಂದಲಿ
ವರವನು ಹೊಂದಿ ಬಂದಿಹೆನಮ್ಮ
ಮರುಳಮಾಡುವದೊಂದು ಪುರವುಂಟು
ದೊರಕಿಸಿಕೊಡುವೆ ನಿಜಸುಖ ತಾಯಿ ||೪೪||

ಶರೀಫಸಾಹೇಬ ಬುಡುಬುಡುಕ್ಯಾನ
ಗುರುವಿನ ವರವಿಲೆ ನುಡಿಯುವೆ ಇದನ
ಪರಶಿವ ಬಸವನು ಬರುವನು ಮಗಳೆ
ತ್ವರಿತದಿ ಗುರುವಿನ ಅರಿತುಕೋ ತಾಯಿ ||೪೫||

ದೇವದೇವರ ದೇವರ ಮಗನ
ದೇವಲೋಕದ ಬುಡುಬುಡಿಕ್ಯಾನ
ದೇವಗೋವಿಂದನ ಭಕ್ತಾನಮ್ಮ
ಸಂತರಸೇವಿಗೆ ನಿಂತಿಹನಮ್ಮ
ಓಂ ಜಯ ಜಯವಾಗಲೆಮ್ಮ ||೪೬||

****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...