ನವಿಲುಗರಿ – ೧೭

ನವಿಲುಗರಿ – ೧೭

ರಂಗನಿಗೆ ತಂಗಿ ಮದುವೆ ಮಾಡಲು ಹಣದ ಅವಶ್ಯಕತೆಯಿದೆ ಎಂದೂ ಅದಕ್ಕಾಗಿ ಅವನೇನು ಮಾಡಲೂ ಸಿದ್ದನೆಂದು ಈ ಪ್ಲಾನ್ ಪಾಳೆಗಾರರ ತಲೆಗೆ ತುಂಬಿದವರೇ ರಂಗನ ಒಡಹುಟ್ಟಿದವರು. ದಿನವೂ ರಂಗನಿಗಾಗಿ ಪರಿತಪಿಸಿ ಬಾಡಿ ಹೋದ ಹೂವಿನ ಮಾಲೆಯಂತಾದ ಕೂಸು ಚಿನ್ನುವನ್ನು ನೋಡಿದಾಗಲೆಲ್ಲಾ ರಂಗನನ್ನು ಕತ್ತರಿಸಿ ಹಾಕುವಷ್ಟು ಕ್ರೌರ್ಯ ನರನರಗಳಲ್ಲೂ ಚಿಗುರೊಡೆವಾಗ ಉಗ್ರಪ್ಪನೂ ಊಟನಿದ್ದೆ ಬಿಟ್ಟು ಒಳಗೇ ಕೊತ ಕೊತನೆ ಕುದಿಯುತ್ತಿದ್ದ. ರಂಗ ಯಾವತ್ತಿದ್ದರೂ ತಮ್ಮ ಕುಟುಂಬಕ್ಕೆ ತಲೆಬ್ಯಾನೆ. ಈ ಬ್ಯಾನೆ ಬಲಿತರೆ ಬ್ರೇನ್ ಟ್ಯೂಮರ್ ಆದೀತು ಬಲಿಯುವ ಮೊದಲೇ ಹೆಂಗಾದ್ರೂ ಕತ್ತರಿಸಬೇಕೆಂಬ ಚಿಂತೆ ಹಗಲೂ ರಾತ್ರಿ ಉಗ್ರಪ್ಪನನ್ನು ಸುಡುತ್ತಿತ್ತು. ಇದೇ ಸಮಯಕ್ಕೆ ಜಾತ್ರೆ, ಎಕ್ಸಿಬಿಶನ್ನೂ ಬಂತು. ತಲೆಯಲ್ಲಿ ಐಡಿಯಾ ಮಾತ್ರ ಬಂದದ್ದು ರಂಗನ ಸೋದರರಿಗೆ, ಈ ಐಡಿಯಾ ಕೊಟ್ಟಾಗ ರಂಗ ಇದರಲ್ಲಿ ಭಾಗವಹಿಸಿಯಾನಾ ಎಂಬ ಅನುಮಾನ. ಬೇರೆಯವರು ಭಾಗವಹಿಸಿದರೆ ವೃಥಾ ರಿಸ್ಕ್, ಹಣವೂ ವೇಸ್ಟ್ ಎಂಬ ಉಗ್ರಪ್ಪನ ಆತಂಕವನ್ನು ನಿವಾರಿಸಿದವರೂ ರಂಗನ ಹುಟ್ಟಾ ಬ್ರದರ್‍ಸೆ! ಅವರ ಪುಣ್ಯವೋ ರಂಗನ ಗ್ರಹಚಾರವೋ ಎಲ್ಲವೂ ಇವರು ಅಂದುಕೊಂಡಂತೆಯೇ ನಡೆದಿತ್ತು. ರಂಗ ಅಗ್ರಿಮೆಂಟಿಗೆ ರುಜು ಮಾಡಿದ ದಿನವಂತೂ ಉಗ್ರಪ್ಪ ಕುರಿ ಕಡಿಸಿ ರಂಗನ ಸೋದರರಿಗೂ ಬಾಡೂಟ ಹಾಕಿಸಿ ಸಂತೋಷವನ್ನು ಹಂಚಿಕೊಂಡಿದ್ದ. ಮೈಲಾರಿಗೂ ಎಂತದೋ ಅವರ್ಣನೀಯ ಅಮೂರ್ತ ಆನಂದ, ಭರಮಪ್ಪನವರಿಗೆ ಸುದ್ದಿ ಮುಟ್ಟದಂತೆ ಅಣ್ಣ ತಮ್ಮ ಎಚ್ಚರ ವಹಿಸಿದ್ದರು. ಮನೆಯ ಹೆಂಗಸರನ್ನಂತೂ ನಂಬುವಂತೆಯೇ ಇಲ್ಲವಲ್ಲ. ಹೆಂಗಸರ ಬಳಿ ಗುಟ್ಟು ಗುಟ್ಟಾಗಿ ಉಳಿದೀತೆ ಎಂದು ನಂಬಿದ್ದ ಅವರು ನಿದ್ದೆಯಲ್ಲಿ ಎಲ್ಲಾದರೂ ಕನವರಿಸಿಬಿಟ್ಟೆವೆಂದು ಹರಕೆಯ ಕುರಿ ಬಲಿಯಾಗುವವರೆಗೂ ಹೆಂಡಂದಿರ ಮಗ್ಗುಲಲಿ ಮಲಗಲೇಬಾರದೆಂದು ನಿರ್ಧರಿಸಿದ್ದರು. ಅದರಂತೆಯೇ ನಡೆದೂ ಕೊಂಡರು. ರಂಗ ಇಂತಹ ಡೇಂಜರಸ್‌ ಗೇಮ್‌ನಲ್ಲಿ ಭಾಗವಹಿಸುತ್ತಿರುವ ಬಗ್ಗೆ ತಿಳಿದ ಚಿನ್ನು ಭಯಗೊಂಡು ತಹತಹಿಸುವುದನ್ನು ನೋಡಿ ಉಗ್ರರಾದರೂ ಇದೆಲ್ಲಾ ಎಷ್ಟು ದಿನ, ಅವನು ಗೇಮ್‌ನಲ್ಲಿ ನೆಗೆದುಬಿದ್ದು ಹೋದರೆ ನಾಲ್ಕು ದಿನ ಅಳ್ತಾಳೆ ಆಮೇಲೆ ಮರೀತಾಳೆ. ಕಾಲ ಎಲ್ಲವನ್ನೂ ಮರೆಸುತ್ತದೆ ಎಂದು ಒಳಗೇ ಖುಷಿಪಟ್ಟರು. ಸ್ಪರ್ಧಾದಿನ ಹತ್ತಿರವಾದಂತೆಲ್ಲಾ ಬೀಗಿದರು. ಎಂತಹ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದಾನಲ್ಲ ಎಂದು ಮಮ್ಮಲಮರುಗುತ್ತಾ ಚಿನ್ನು, ಹರಕೆ ಹೊತ್ತಳು ದೇವರ ಸೇವೆಗೂ ತನ್ನ ದಿನದಲ್ಲಿ ಅರ್ಧ ದಿನವನ್ನು ಮುಡಿಪಾಗಿಟ್ಟಳು.

ಸಂಗ್ರಾಮ್ ಸಿಂಹನೂ ರಂಗನಿಗೆ ಸಿಗುತ್ತಿರುವ ಅಪಾರ ಪಬ್ಲಿಸಿಟಿ ಕಂಡು ಅಸೂಯೆಯಿಂದ ತಂದೆಯ ಬಳಿ ಬುಸುಗುಟ್ಟಿದ. ಅಕಸ್ಮಾತ್ ರಂಗ ಗೇಮ್‌ನಲ್ಲಿ ಗೆದ್ದು ತಂಗಿಯ ಮದುವೆಯೊಂದು ಮಾಡಿದನೆಂದರೆ ಅವನ ಎರಡನೆ ಗೇಮ್ ಚಿನ್ನುವನ್ನು ಗೆಲ್ಲುವುದೆ. ತಮಗೆ ಅಪಮಾನ ಮಾಡಿದ ಅವಳನ್ನು ಹಾಗೆ ಬಿಡಬಾರದು. ನೀವು ಏನಾದರೂ ಮಾಡಿ ಡ್ಯಾಡಿ ಎಂದು ತಂದೆಯ ಬಳಿ ಗೋಗರೆದ. ತೇಜೋಭಂಗವಾಗಿದ್ದ ದುರ್ಗಸಿಂಹನಿಗೂ ಪಾಳೇಗಾರರ ಮನೆಮಾನ ಹೇಗಾದರೂ ಬೀದಿಗೆ ತರಬೇಕೆಂಬ ಕೆಟ್ಟ ಕೋಪವಿತ್ತು. ಸವಾಲೂ ಹಾಕಿ ಬಂದಿದ್ದರು, ಮಗನ ಮೋರೆ ಸಣ್ಣದಾದರೆ ಸಹಿಸದಷ್ಟು ಮುದ್ದು ಮಾಡಿ ಬೆಳೆಸಿದ ತಂದೆ ಆತ, ‘ನಿನಗೆ ಚಿನ್ನು ಬೇಕು ತಾನೆ?’ ಮಗನ ಗಲ್ಲ ಸವರಿದರು. ತಲೆಯಾಡಿಸಿದ ಸಂಗ್ರಾಮ.

‘ಅಷ್ಟೇ ಅಲ್ಲ ಡ್ಯಾಡ್, ನಮಗಾದ ಅಪಮಾನಕ್ಕೆ ಸೇಡೂ ತೀರಿಸ್ಕೋಬೇಕು’ ಆಕ್ರೋಶಗೊಂಡ. ‘ಓಕೆ ಮೈ ಸನ್… ಡನ್’ ಎಂದು ಹೆಬ್ಬೆರಳು ತೋರಿದ ದುರ್ಗಸಿಂಹ. ‘ಇನ್ನು ಡಿಲೇ ಮಾಡಬಾರ್‍ದು ಡ್ಯಾಡ್, ಬೈಚಾನ್ಸ್ ರಂಗ ಆ ಗೇಮಲ್ಲಿ ಗೆದ್ದರೆ? ಅವನು ಗೆಲ್ಲಬಾರದು… ಐ ಕಾಂಟ್’ ಎಂದು ಅವುಡುಗಚ್ಚಿದ. ‘ಓಕೆ. ಅವನು ಗೆಲ್ಲೋಲ್ಲ’ ಮೃತ್ಯುವನ್ನು ಎದುರು ಹಾಕಿಕೊಂಡವನು ಯಾವನೂ ಗೆಲ್ಲೋಲ್ಲ. ಮೀಸೆ ಅಡಿಯಲ್ಲಿ ನಕ್ಕ ದುರ್ಗಸಿಂಹನ ನಗೆಯಲ್ಲಿ ನಂಜಿತ್ತು. ‘ನೀವೇನ್ ಹೇಳ್ತೀರೋ ನನಗೆ ಸ್ವಲ್ಪ
ಆರ್ಥವಾಗೋ ಹಾಗೆ ಹೇಳಿ ಡ್ಯಾಡ್’ ತುಯ್ದಾಡಿದ ಸಂಗ್ರಾಮ.

‘ಅರ್ಥ ಅನರ್ಥ ಕಟ್ಕೊಂಡು ನೀನ್ಯಾಕೋ ಸೊರಗ್ತಿ ಮಗನೆ… ಐ ವಿಲ್ ಡು ಇಟ್’ ಎಂದ ದುರ್ಗಸಿಂಹನ ಮೋರೆಯಲ್ಲಿ ತಾನೆಂಥದ್ದನ್ನು ಬೇಕಾದರೂ ಸಾಧಿಸಿ ಜಯಿಸಬಲ್ಲೆ ಸಾವನ್ನೂ ಗೆಲ್ಲಬಲ್ಲೆನೆಂಬ ಅಹಂ ಕ್ಷಣ ಸುಳಿದಾಡಿತು.

ಮೃತ್ಯುಪಂಜರದಲ್ಲಿ ರಂಗ ಬೈಕ್ ಓಡಿಸುವ ಸ್ಪರ್ಧಾ ದಿನ ಬಂದೇ ಬಿಟ್ಟಿತು. ಎಕ್ಸಿಬಿಶನ್ ಸಭಾಂಗಣ ಹೊರಗೂ ಒಳಗೂ ವಿದ್ಯುತ್ ದೀಪಗಳಿಂದ ಝಗಮಗಿಸಿತು. ಬಣ್ಣ ಬಣ್ಣದ ಸೀರಿಯಲ್ ಲೈಟ್ಗಳು ರನ್ನಿಂಗ್ ಕಾಂಪಿಟೇಶನ್ಗೆ ಬಿದ್ದಂತೆ ಓಡಿದವು. ಸೋಡಿಯಂ ಲೈಟ್‌ಗಳೂ ಹತ್ತಿಕೊಂಡವು. ರಾತ್ರಿಯಲ್ಲೂ ಬೆಳದಿಂಗಳ ವಾತಾವರಣ. ಜನ ಅದೆಲ್ಲಿದ್ದರೋ ಮುಗಿಬಿದ್ದು ಬಂದರು. ಟಿವಿ ಮಾಧ್ಯಮದವರು ಆಡ್ಕ್ಂಪನಿ ಜನ ಪತ್ರಕರ್ತರ ದಂಡೇ ವ್ಯಾನ್‌ಗಳಲ್ಲಿ ಸಂಪಿಗೆಹಳ್ಳಿಗೆ ಬಂದಿಳಿದರು. ಪಂಜರದಲ್ಲಿ ಐದು ನಿಮಿಷವೂ ಬೈಕ್ ಓಡಿಸುವುದೇ ತ್ರಾಸು. ಅಂಥದ್ದರಲ್ಲಿ ಹತ್ತು ನಿಮಿಷವೆಂದರೆ ಸಾಮಾನ್ಯ ಮಾತೇ. ಸರ್ಕಾರ ಹೇಗೆ ಇಂತದ್ದಕ್ಕೆಲ್ಲಾ ಪರ್ಮಿಶನ್ ಕೊಡಬೇಕು. ಪ್ರಾಣಕ್ಕಿಂತ ಲಕ್ಷವೇ ಹೆಚ್ಚೆ, ಪ್ರತಿಷ್ಠೆಯ ವಿಷಯ ಬಂದು ಪಣಕ್ಕೆ ನಿಂತರೂ ಪ್ರಾಣಾಪಾಯವೆ. ಹರೆಯ ಹುಡುಗರು ದುಡ್ಡಿನ ಆಮಿಷದಿಂದಲ್ಲದಿದ್ದರೂ ಸಾಧಿಸಬೇಕೆಂಬ ಛಲದಿಂದ ಸ್ಪರ್ಧೆಗಿಳಿಯಬಹುದು. ಏನೇ ಇರಲಿ ತಾವು ಲಾಭ ಮಾಡಿಕೊಳ್ಳಲೋಸುಗ ಪರರ ಪ್ರಾಣವನ್ನು ಪಣಕೊಡುವುದು ಅಪರಾಧವೆಂದೆಲ್ಲಾ ಮಾತಾಡಿ ಸಿಗರೇಟು ಸುಟ ಬೂದಿ ಮಾಡಿದರು. ಅದೇ ಸಮಯಕ್ಕೆ ಕಂಟೆಸ್ಸಾದಲ್ಲಿ ಬಂದ ದುರ್ಗಸಿಂಹ ಊರ ಹೊರಗೆ ಕಾರನ್ನು ನಿಲ್ಲಿಸಿ ತಾನಿದ್ದಲ್ಲಿಗೇ ಆಂಟನಿಯನ್ನು ಗುಪ್ತವಾಗಿ ಕರೆಸಿಕೊಂಡ. ಆಂಟನಿಗೆ ಮೊಬೈಲ್ ಕರೆ ಬಂದಾಗ ವಿಸ್ಮಯ. ಆದರೂ ಹೋಗಿ ಭೇಟಿ ಮಾಡಲೇಬೇಕಿತ್ತು. ಕರೆದಿರುವವರು ದೇಶದ ನಾಯಕರು, ಭಾವಿ ಮುಖ್ಯಮಂತ್ರಿ. ಹೋಗದಿರುವ ಧೈರ್‍ಯ ಎಲ್ಲಿಂದ ಬಂದೀತು? ಆಂಟನಿಯೂ ಯಾರಿಗೂ ತಿಳಿಯದಂತೆ ಹೋಗಿ ದುರ್ಗಸಿಂಹರನ್ನು ಭೆಟ್ಟಿಯಾದ. ಅವರು ಅವನ ಕೈಗೆ ಐವತ್ತು ಸಾವಿರ ಕೊಟ್ಟರ ಅವನಿಗೋ ದಿಗ್ರಮೆ. ‘ನನ್ನ ಆಟ ನೋಡಿ ಮೆಚ್ಚಿ ಕೊಡ್ತಾ ಇದಿರಾ ಸಾರ್. ಇದನ್ನೇ ಪ್ರೇಕ್ಷಕರ ಎದುರು ಕೊಡಬಹುದಲ್ಲ. ನಿಮಗೂ ಪ್ರಚಾರ ನನಗೂ ಗೌರವ’ ಅಂದುಕರ ಜೋಡಿಸಿದ.

‘ಮೆಚ್ಚಿಯೂ ಕೊಡೋಣವಂತೆ ಮಿಸ್ಟರ್ ಆಂಟನಿ. ಈಗ ಕೊಟ್ಟದ್ದು ಅದಕ್ಕೆ ನಿನ್ನಿಂದ ಒಂದು ಕೆಲಸವಾಗಬೇಕು…. ಆದೀತೆ?’ ಅವನನ್ನೇ ಅಳೆಯುವ ಪರಿ ನೋಡಿ ದುರ್ಗಸಿಂಹ. ‘ಹೇಳಿ ಸಾರ್… ಪ್ಲೀಸ್’ ಆಂಟನಿ ವಿನೀತ.

‘ಈವತ್ತು ಗೇಮ್ ನಡೆಯುತ್ತಲ್ಲವೆ? ಬೈಕ್ನ ಬ್ರೇಕ್ ನೀನು ತೆಗಿಬೇಕು’. ನಡುಗಿಹೋದ ಆಂಟನಿ. ‘ಹಾಗೇನಾದ್ರೂ ಮಾಡಿದ್ರೆ ಹಿ ವಿಲ್ ಡೈ’ ದನಿವರಿಸಿದ.

‘ನೀನು ಬ್ರೇಕ್ ತೆಗೀದಿದ್ದರೂ ಅವನು ಸಾಯೋದು ಶತಸಿದ್ಧ… ಯಾಕೆಂದರೆ ಅವನೇನೂ ಎಕ್ಸ್‍ಪರ್ಟ್ ಅಲ್ಲ. ಅಲ್ಲಿಗೂ ಬದುಕಿದರೆ ಎಂಬ ಕೇವಲ ಊಹೆಯ ಮೇಲೆ ಈ ಹಣ ಕೊಡ್ತಾ ಇದೀನಿ… ಬ್ರೇಕ್ ತೆಗೀತಿಯಾ ಇಲ್ವಾ? ಹಣ ಬೇಕಾ ಬೇಡ್ವಾ? ಅಷ್ಟು ಹೇಳಿ ನೀನು ಹೋಗಬಹುದು…’

‘ಅವನಿಗೆ ಅನುಮಾನ ಬಂದ್ರೆ… ನನ್ನ ಗತಿ?’ ಹೌಹಾರಿದ

‘ಹೋಪ್‌ಲೆಸ್ ಫೆಲೋ, ಯಾರೂ ಬೈಕ್ ಮೇಲೆ ಕೂತಾಗ ಬ್ರೇಕ್ ಚೆಕ್ ಮಾಡೋದಿಲ್ಲ… ಅದು ಸಾಮಾನ್ಯ ಜ್ಞಾನ, ಓಡಿಸುವಾಗ ಚೆಕ್ ಮಾಡುತ್ತಾರೆ ವಾಟ್ ಡು ಯು ಸೆ?’ ಎಂದು ಹಣಕ್ಕೆ ಕೈ ಹಾಕಲು ಮುಂದಾದ ದುರ್ಗಸಿಂಹ. ತಾನು ಬಯಸದೆ ಬಂದ ಭಾಗ್ಯವಿದು. ಇಷ್ಟೊಂದು ಹಣವನ್ನು ಅವನು ಒಟ್ಟಿಗೆ ನೋಡಿಯೇ ಇರಲಿಲ್ಲ. ಮಗಳ ಮದುವೆ ಮಗನ ಓದು ಏನೆಲ್ಲಾ ತಲೆಯಲ್ಲಿ ಗಿರ್‍ಕಿ ಹೊಡೆದವು. ‘ಸರಿ ಸಾರ್… ನೀವು ಹೇಳಿದ್ಹಾಗೆ ಮಾಡ್ತೀನಿ… ತೊದಲ್ನುಡಿದ. ‘ತಗೋ ಈ ಭ್ರ್‍ಈಫ್‌ಕೇಸ್‌ನಲ್ಲಿ ಇಟ್ಕೊಂಡು ಹೋಗು.. ಯಾರಿಗೂ ಡೌಟು ಬರಬಾರದು. ನನ್ನ ಹೆಸರು ಬಯಲಿಗೆ ಬರಬಾರದು. ಸ್ವಲ್ಪ ಹೆಚ್ಚು ಕಡಿಮೆಯಾದರೂ ರಂಗನ ಹೆಣದ ಜೊತೆಗೆ ನಿನ್ನ ಹೆಣವೂ ಬೀಳುತ್ತೆ… ಬಿ ಕೇರ್ ಫುಲ್’ ಅಂದ ದುರ್ಗಸಿಂಹ ಇವನ ಪ್ರತಿಕ್ರಿಯೆಗೂ ಕಾಯದೆ ಕಾರನ್ನು ಸರಕ್ಕನೆ ತಿರುಗಿಸಿಕೊಂಡು ಕತ್ತಲಲ್ಲಿ ಕಾಣೆಯಾದ.

ರಾತ್ರಿ ಒಂಭತ್ತು ಗಂಟೆ ‘ಷೋ’ಗೆ ಜನರಾಗಲೇ ಟಿಕೆಟ್ಕೊಂಡು ಕುರ್ಚಿಗಳಲ್ಲಿ ಅಲಂಕೃತರಾಗಿದ್ದರು. ಸೋಹನ್‌ಲಾಲ್ ದಿಲ್ಖುಷ್. ರಂಗನ ತಾಯಿ ತಂಗಿಯದು ಬೆಳಗಿನಿಂದಲೇ ಪೂಜೆ ಪ್ರಾರ್ಥನೆ ನಡೆದಿತ್ತು. ದೇವರಿಗೆ ಮೊರೆ ಹೋದ ಮತ್ತೊಂದು ಜೀವ-ಚಿನ್ನು. ಅವಳಿಗೂ ಸ್ಪರ್ಧೆ ನೋಡುವ ಕುತೂಹಲಕ್ಕಿಂತ ಎಂತದ್ದೇ ಸಮಯದಲ್ಲಿ ತಾನು ಅಲ್ಲಿರಬೇಕು ಎಂಬ ಹಂಬಲ. ರಂಗನಿಗೇನಾದರೂ ಆದರೆ ಎಂಬ ಎದೆಗುದಿ. ಮನೆಯವರೆಲ್ಲಾ ಖಂಡಿತ ಹೊರಡುತ್ತಾರೆ. ನನ್ನನ್ನು ಕರೆಯದಿದ್ದರೂ ತಾನಾಗಿಯೇ ಹೊರಟರಾಯಿತೆಂದು ಅವಳು ಹಾಸಿಗೆಯಿಂದೇಳುತ್ತಲೇ ನಿರ್ಧರಿಸಿದ್ದಳು. ಎಂಟೂವರೆಯಾದರೂ ಹೊರಡದ ಮನೆಯವರು ಊಟಕ್ಕೆ ಅಣಿಯಾಗುವ ಸಿದ್ಧತೆಯಲ್ಲಿದ್ದುದನ್ನು ಕಂಡು ಪೆಚ್ಚಾದಳು. ಕೆಂಚಮ್ಮನ ಬಳಿ ತನ್ನ ಚಡಪಡಿಕೆಯನ್ನು ತೆರೆವಿಟ್ಟಳು. ಕೆಂಚಮ್ಮನೇ ಧೈರ್ಯಮಾಡಿ ಎಗಿಬಿಶನ್ ಸಂಗತಿ ಮನೆಯವರೆದುರು ಎತ್ತಿದಳು.

‘ನಾವು ಯಾಕೆ ಅಲ್ಲಿಗೆ ಹೋಗ್ಬೇಕು? ರಂಗ ಸಾಯೋದನ್ನು ನೋಡೋಕಾ?’ ಮೈಲಾರಿ ಹೆಂಡತಿಯ ಮೇಲೆ ಹರಿಹಾಯ್ದ.

‘ಆ ಲೋಫರ್ ನನ್ಮಗ ಸಾಯೋದನ್ನು ನೋಡೋಕೆ ನನಗಿಷ್ಟಿಲ್ಲ ಕಣವ್ವ’ ಉಗ್ರಪ್ಪ ಸಣ್ಣ ದನಿಯಲ್ಲಿ ಅಂದ. ಮಾತಿನಲ್ಲಿ ಅನುಕಂಪವಿರುವ ಬದಲು ಹಾರೈಕೆಯಿದ್ದಂತಿದೆಯೇ! ಕೆಂಚಮ್ಮನಿಗೆ ಅನ್ನಿಸಿತು. ಭರಮಪ್ಪನವರಲ್ಲಿ ಈವರೆಗೆ ಇಲ್ಲದ ಅನುಮಾನದ ಬೀಜವೊಂದು ಮೊಳಕೆಯೊಡೆಯಿತು. ಮಕ್ಕಳ ಮುಖದತ್ತ ಚಿಕಿತ್ಸಕ ನೋಟ ಬೀರಿದರು. ಅವರಿಬ್ಬರೂ ಮಾತು ಬೆಳೆಸದೆ ‘ಅಡಿಗೆ ಆಯ್ತೇನೆ… ಎಷ್ಟು ಹೊತ್ತು ಮಾಡ್ತೀಯೇ?’ ಎಂದು ಅನಾವಶ್ಯಕವಾಗಿ ಅಡಿಗೆ ಕೋಣೆಯಾಚೆಗೂ ಕೇಳುವಂತೆ ಕೂಗಿಕೊಂಡ. ಇವರೆಲ್ಲಾ ಊಟಕ್ಕೆ ಕೂರುವ ಸಡಗರದಲ್ಲಿರುವುದನ್ನು ಕಂಡು ಬಾಣತಾಗಿದ ಪಾರಿವಾಳದಂತಾದಳು
ಚಿನ್ನು. ‘ಸರಿ ಸರಿ… ನೀನೂ ಬಾ ಊಟಕ್ಕೆ’ ಉಗ್ರಪ್ಪ ಚಿನ್ನು ಕಡೆ ಕ್ರೂರವಾಗಿ ನೋಡಿ ಮಾವಿಸಿದ. ‘ರಂಗ ಸಾಯ್ತಾನೆ ಅಂತ ನೀವು ಹೇಳ್ತಿರೋವಾಗ ನಾನು ಊಟ ಮಾಡ್ಲೆ? ನನಗೆ ಹಸಿವಿಲ್ಲ’ ಎದುರಾಡಿದಳು ಚಿನ್ನು ಅಷ್ಟಕ್ಕೆ ಸುಮ್ಮನಾಗದೆ ‘ಅವನು ಸತ್ತ ಕ್ಷಣವೆ ನಾನೂ ಸಾಯ್ತಿನಿ’ ಅಂದಳು. ಈಗ ಭರಮಪ್ಪ ಮಾತನಾಡಿದರು. ‘ಹಂಗೆಲ್ಲಾ ಅಪಶಕುನ ನುಡಿಬಾರ್ದು ಕೂಸೆ… ಯಾರು ಏನೇ ಮಾಡಿದರು ತಿಪ್ಪರಲಾಗ ಹೊಡೆದರೂ ದೇವರ ಆಟಾನೇ ಬೇರೆ ಇರ್ತೇತೆ ನಡೆಯೋದು ಅವಂದೇ ಆಟ. ನಮ್ಮದೆಲ್ಲಾ ಬರೀ
ಮಂಗಾಟ’ ಅವರ ಮಾತು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿತ್ತು. ಮುಂದೇನಾಗುವುದೋ ಎಂಬುದರ ಬಗ್ಗೆ ಭಯ ಸಂಕಟ ಅಸಹಾಯತೆ ಅಧೀರತೆ ಅಪಮಾನ ಎಲ್ಲವೂ ಅವಳನ್ನಾವರಿಸಿದಾಗ ನೋವಿನ ಮೂಟೆಯಂತಾದ ಅವಳು ಮುಂದಿನ ದಾರಿ ಕಾಣದಂತಾಗಿ ಅಳುತ್ತಾ ತನ್ನ ಕೋಣೆ ಸೇರಿಕೊಂಡಳು. ಒಂಬತ್ತು ಸಮೀಪಿಸಿದಾಗ ಮನೆಯಲ್ಲಿರದೆ ತಾಳ್ಮೆಗೆಟ್ಟಳು. ಹೇಗೂ ಊಟದ ಗಡಿಬಿಡಿಯಲ್ಲಿದ್ದಾರೆ ಇಲ್ಲಿಂದ ಓಡಬೇಕು ಎಕ್ಸಿಬಿಶನ್‌ನಲ್ಲಿ ರಂಗನನ್ನು ಭೇಟಿ ಮಾಡಬೇಕು ತನ್ನ ಜೀವ ಹೋದರೂ ಸರಿ ಎಂಬ ನಿರ್ಧಾರಕ್ಕೆ ಬರುತ್ತಲೇ ಅವಳ ಬಾಡಿದ ಮೋರೆ ಅರಳಿತು, ಮೈಮನದಲ್ಲಿ ಬತ್ತಿ ಹೋಗಿದ್ದ ಚೈತನ್ಯ ಪುನಃ ಚಿಮ್ಮಿದಂತಾಯಿತು. ದಿಡ್ಡಿ ಬಾಗಿಲು ನೆರವಿಗೆ ಬಂತು.

ಸ್ಪರ್ಧೆ ಶುರುವಾದಾಗ ರಂಗನ ಮನೆಯವರೆಲ್ಲರೂ ಸ್ಥಳದಲ್ಲಿದ್ದರು. ರಂಗನ ಗೆಳೆಯರು ಪೈಲ್ವಾನ್‌ ಚಮನ್ ಸಾಬು, ರಾಜಯ್ಯ ಮೇಷ್ಟ್ರು ರಂಗನ ಕಾಲೇಜಿನ ಗೆಳೆಯರ ದೊಡ್ಡ ಗುಂಪೇ ಸೇರಿತ್ತು. ರೋಮಾಂಚನಕಾರಿ ಆಟ ನೋಡಲು ಸುತ್ತು ಹಳ್ಳಿ ಜನ ನದಿಯಂತೆ ಹರಿದು ಬಂದಿದ್ದರು. ಅದರಲ್ಲೂ ಬೈಕ್ ಓಡಿಸೋನು ನಮ್ಮ ಹುಡುಗ ಎಂಬ ಅಭಿಮಾನ, ಅವನು ಜಯಶಾಲಿಯಾಗಲಿ ಎಂಬ ಅಂತಃಕರಣ. ರಂಗ ತಾಯಿಯ ಪಾದಮುಟ್ಟಿ ನಮಸ್ಕರಿಸಿದ ನಂತರ ಚಮನಸಾಬು, ರಾಜಯ್ಯನಿಗೂ ನಮಸ್ಕರಿಸಿದ. ಕಾವೇರಿಯ ಗಲ್ಲ ಹಿಡಿದು ‘ನಗಬೇಕು ಕಾವೇರಿ, ನಾನೇನು ಯುದ್ಧಕ್ಕಾ ಹೋಗ್ತಾ ಇದೀನಿ ಹತ್ತು ನಿಮಿಷ ಅಷ್ಟೆ… ಹೆದರ್‍ಬೇಡ’ ಧೈರ್ಯಹೇಳಿ ನಗಿಸಿದ. ಅವನು ವೇದಿಕೆ ಏರಿದಾಗ ಎಲ್ಲೆಲ್ಲೂ ಶೀಟಿ ಚಪ್ಪಾಳೆಗಳ ಮೊರೆತ, ಟಿವಿ ಮಾಧ್ಯಮದವರ, ಆಡ್ ಕಂಪನಿಯವರ ಕ್ಯಾಮರಾಗಳು ಕಣ್ಣ ತೆರೆದವು. ರಂಗ ಮನದಲ್ಲೇ ಉಡುಮರಡಿ ರಂಗನನ್ನು ನೆನೆದು ಜೈ ಹನುಮಾನ್ ಎಂದವನೆ ಪಂಜರದಲ್ಲಿ ಅಡಿಯಿಟ್ಟು ಬೈಕ್ ಏರಿದ ಪಂಜರದ ಬಾಗಿಲನ್ನು ಭದ್ರಪಡಿಸಲಾಯಿತು. ನೂರಾರು ದೀಪಗಳು ಪಂಜರದತ್ತ ಫೋಕಸ್ ಆದವು ಬೈಕ್‌ ಕಿಕ್ ಹೊಡೆದಾಗ ಆಂಟನಿ ಎದೆ ಝಲ್ ಎಂದಿತು. ಸೋಹನ್‌ಲಾಲ್‌ಗೂ ಸಂತೋಷವೆನ್ನಿಸಲಿಲ್ಲ. ‘ವಯಸ್ಸಿಗೆ ಬಂದ ಚೋಕ್ರಾ… ಭಗವಾನ್ ಇವನ್ಗೆ ಬೆನ್ನಿಗೆ ಇರ್‍ಲಿ’ ಎಂದೇ ಬೇಡಿದ. ಬೈಕ್ ಕಿವಿಗಡಚಿಕ್ಕುವಂತೆ ಶಬ್ದ ಮಾಡುತ್ತಾ ಪಂಜರದ ಮೇಲೆ ಕೆಳಗೆ ಅಕ್ಕಪಕ್ಕ ಸುತ್ತು ಹೊಡೆಯುವಾಗ ಎಳ್ಳುಬಿದ್ದರೂ ಕೇಳುವಷ್ಟು ನಿಶಬ್ದ ಎಲ್ಲೆಡೆ ಆವರಿಸಿಕೊಂಡಿತು. ದೇವರೇ ಎಂದು ಕಣ್ಣು ಮುಚ್ಚಿ ಧ್ಯಾನಾಸಕ್ತಳಾದ ಕಾವೇರಿ ಆ ರೋಮಾಂಚನಕಾರಿ ಸಾಹಸವನ್ನು ನೋಡುವ ಧೈರ್ಯ ಮಾಡಲೇಯಿಲ್ಲ. ತಾಯಿ ಬಿಟ್ಟ ಕಣ್ಣು ತೆರೆದ ಬಾಯಿ ಮುಚ್ಚಲಿಲ್ಲ. ಚಮನ್ ‘ಅಲ್ಲಾಹು’ ಎಂದು ಪ್ರೇಯರ್‌ಗಿಳಿದ. ರಂಗನ ಅಣ್ಣಂದಿರು ಅತ್ತಿಗೆಯವರೀಗ ಅದೆಷ್ಟೋಂದು ಅಪಾಯಕಾರಿ ಆಟವೆಂಬುದರ ಅರಿವಾಗಿತ್ತು. ಅವರ ಕಲ್ಲು ಹೃದಯಗಳೂ ಕರಗಿದವು, ರಂಗನಿಗೆ ಏನೂ ಆಗದಿರಲೀ ಎಂದೇ ಬೇಡಿದವು. ಒಂದೊಂದು ನಿಮಿಷವೂ ಯುಗದಂತೆ ತೆವಳಿತು. ರಂಗನಲ್ಲಿ ಅದೇನು ಆವೇಶವೋ ಯಾರ ಮೇಲಿನ ಹಠವೋ ತಮ್ಮನ್ನು ಈ ಸ್ಥಿತಿಗೆ ತಂದ ದೇವರ ಮೇಲಿನ ಕೋಪವೋ ಗೆಲ್ಲಲೇಬೇಕೆಂಬ ಛಲವೋ ಆಥವಾ ಇವೆಲ್ಲವೋ, ಮನಬಂದಂತೆ ಬೈಕನ್ನು ಸುತ್ತಿಸಿದ. ಅವನ ಚಮತ್ಕಾರಕ್ಕೆ ಅಸಲಿ ಬೈಕ್ ಸವಾರ ಆಂಟನಿಯೇ ಬೆರಗಾದ. ಬೆವತು ಬೆವರಿನ ಮುದ್ದೆಯಾದ, ನಿಮಿಷಗಳು ಉರುಳಿದವು. ರಂಗನ ಗೆಲುವನ್ನು ಯಾರಿಂದಲೂ ಕಸಿಯಲು ಅಸಾಧ್ಯವೆನ್ನಿಸಿತು. ಹಲವರ ಮೋರೆಯಲ್ಲಾಗಲೆ ಹಿಗ್ಗು ನುಸುಳಲು ಹಾತೊರೆದಿತ್ತು. ಹತ್ತು ನಿಮಿಷದ ಅವಧಿ ಸಮೀಪಿಸುವಾಗ ಆಂಟನಿಯ ಎದೆ ಬಡಿತ ದ್ವಿಗುಣಿಸಿತು. ಆ ವೇಗದಲ್ಲಿ ‘ಬ್ರೇಕ್’ ಬೀಳದಿದ್ದರೆ ರಂಗನ ಬೈಕ್ ಸಮೇತ ಪಂಜರದಲ್ಲಿ ಲೆಕ್ಕಕ್ಕೆ ಸಿಗದಷ್ಟು ಪಲ್ಟಿ ಹೊಡೆದು ಅಸುನೀಗುವ ದೃಶ್ಯವನ್ನು ಕಲ್ಪಿಸಿಕೊಂಡೇ ‘ಜೀಸಸ್’ ಎಂದು ಕೊರಳಲ್ಲಿದ್ದ ಕ್ರಾಸನ್ನೆತ್ತಿ ಮುತ್ತಿಟ್ಟ. ತಾನೆಂತಹ ಕೆಲಸ ಮಾಡಿದೆನೆಂದು ಗಡ ಗಡನೆ ನಡುಗಿದ. ಎಷ್ಟು ಹಣಕ್ಕೆ ಒಂದು ಪ್ರಾಣ ತಂದುಕೊಡುವ ಶಕ್ತಿ ಇದೆ ಎಂದನ್ನಿಸಿದಾಗ ಅಶಕ್ತನಾದ. ಹತ್ತು ನಿಮಿಷವಾಗುತ್ತಲೆ ಪಂಜರದಲ್ಲಿನ ಕೆಂಪು ದೀಪ ಮಾಯವಾಗಿ ಬೆಳ್ಳನೆ ಬೆಳಕಾಯಿತು. ಎಲ್ಲಾ ದೀಪಗಳು ಅತ್ತ ಬೆಳಕು ಚೆಲ್ಲಿದವು. ಎಲ್ಲೆಲ್ಲೂ ಕರತಾಡನ ಶೀಟಿ ಕೇಕೆಯ ಅಬ್ಬರ ಸಡಗರ ಸಂಭ್ರಮ ಎಲ್ಲೆ ಮೀರಿತ್ತು. ಆದರೆ ಬೈಕ್ ನಿಲ್ಲದೆ ಸುತ್ತುತ್ತಲೇ ಇದೆ! ಸಿಗ್ನಲ್ ಕೊಟ್ಟಾಯಿತು. ‘ವಿನ್’ ಆದ ಬಗ್ಗೆ ಅನೌನ್ಸ್‌ಮೆಂಟ್‌ಗಳಾದರೂ ಬೈಕ್‌ನ ವೇಗ ಕಡಿಮೆಯಾಗಲಿಲ್ಲ! ಹೊರಗಿನ ಜನ ಗಾಭರಿಗೊಂಡರು. ಗೆಲುವಾಗಿದ್ದ ತಾಯಿ ತಂಗಿಯರ ಹೃದಯ ನಡುಗಿತು. ‘ಏನ್ರಿ ಇದು…?’ ಎಲ್ಲರೂ ಸೋಹನಲಾಲನನ್ನು ತುಡರಿಕೊಂಡರು. ರಂಗನೂ ಭೀತನಾಗಿದ್ದ. ಬೈಕ್ನ ಬ್ರೇಕ್ ಕೈಕೊಟ್ಟಾಗ ಗೆಲುವಿನ ಖುಷಿ ಕ್ಷಣದಲ್ಲಿ ಸಾವಿನ ಸ್ಥಿತಿಯ ದರುಶನ ಮಾಡಿಸಿತ್ತು. ದೇವರೆ ಹೀಗೇಕಾಯಿತು ಬೋನಿನಲ್ಲಿ ಬಿದ್ದ ಇಲಿಯಂತಾದ ರಂಗ, ಸುತ್ತಿ ಸುತ್ತಿ ತಲೆ ಧಿಮಿಗುಟ್ಟಿತು. ಕಣ್ಣೂ ಕತ್ತಲುಗೂಡಿತು. ಎಲ್ಲಿಂದಲೋ ಉರುಳುತ್ತಿದ್ದೇನೆ ಎಂಬುದಷ್ಟೇ ಗೊತ್ತಾಯಿತವನಿಗೆ. ಮೈಕೈ ಹೆಲ್ಮೆಟ್ ಹಾಕಿದ ತಲೆ, ದೇಹ ಎಲ್ಲೆಲ್ಲಿಗೋ ಬಡಿಯುತ್ತಿದೆ ಉರುಳುತ್ತಿದೆ. ನೆರೆದವರು ಮೂಕವಿಸ್ಮಿತರಾದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾತ್ರೆ
Next post ಬೆಕ್ಕು ಅಡ್ಡ ಹೋಯಿತು

ಸಣ್ಣ ಕತೆ

 • ಗಿಣಿಯ ಸಾಕ್ಷಿ

  ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

 • ದೇವರು ಮತ್ತು ಅಪಘಾತ

  ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

 • ಹೃದಯ ವೀಣೆ ಮಿಡಿಯೆ….

  ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…