ನಮಿಸುವೆನು ತಾಯೆ
ನಿನ್ನಡಿಗೆ
ಮುನ್ನಡೆಸು ನನ್ನೀ
ಜಗದೊಳಗೆ

ಬೆಟ್ಟವಾಗಿಸು ಎಂದು
ನಾನು ಬೇಡುವುದಿಲ್ಲ
ಚಿಟ್ಟೆಯಾಗಿಸು ನನ್ನ
ನಿನ್ನ ತೋಟದೊಳಗೆ

ಚುಕ್ಕಿಯಾಗಿಸು ಎಂದು
ನಾನು ಬೇಡುವುದಿಲ್ಲ
ಹಕ್ಕಿಯಾಗಿಸು ನನ್ನ
ಹಾರಿಕೊಂಡಿರುವೆ
ನೀಲ ಗಗನದೊಳಗೆ

ಸೂರ್ಯನಾಗಿಸು ಎಂದು
ನಾನು ಬೇಡುವುದಿಲ್ಲ
ದೀಪವಾಗಿಸು ನನ್ನ
ಉರಿದುಕೊಂಡಿರುವೆ
ಊರ ಗುಡಿಯೊಳಗೆ

ಕಡಲಾಗಿಸು ಎಂದು
ನಾನು ಬೇಡುವುದಿಲ್ಲ
ಮೀನಾಗಿಸು ನನ್ನ
ಈಜಿಕೊಂಡಿರುವೆ
ಕಣ್ಣ ಕೊಳದೊಳಗೆ

ದೇವನಾಗಿಸು ಎಂದು
ನಾನು ಬೇಡುವುದಿಲ್ಲ
ದಾಸನಾಗಿಸು ನನ್ನ
ಹಾಡಿಕೊಂಡಿರುವೆ
ಈ ಲೋಕದೊಳಗೆ

ಘನವಾಗಿಸು ಎಂದು
ನಾನು ಬೇಡುವುದಿಲ್ಲ
ಕಣವಾಗಿಸು ನನ್ನ
ಲಯವಾಗುವೆ ನಿನ್ನೊಳಗೆ.
*****