ಭುವನ ಸುಂದರಿ

ಎಲ್ಲರೂ ಬೆಚ್ಚಗೆ ಹೊದ್ದು ಮಲಗಿರಲು
ಇವಳು ಎದ್ದು ಜಿಮ್‌ನಲ್ಲಿ ಬೆವರು
ಸುರಿಸುತ್ತಾ ಕಸರತ್ತು ಮಾಡುವಳು

ಎಲ್ಲರೂ ಹಾಲು ತುಪ್ಪದಲ್ಲಿ
ಕೈತೊಳೆದರೆ-
ಇವಳು ಹಣ್ಣು-ತರಕಾರಿ
ಒಣಗಿದ ಚಪಾತಿಯ
ಮೇಲೆಯೇ ಜೀವಿಸುವಳು

ಎದುರಿಗೆ ಯಾರೂ ಇಲ್ಲ
ಆದರೂ ಕೈ ಬೀಸುವಳು
ಕಾರಣವೆ ಇಲ್ಲ
ಸುಮ್ಮನೆ ನಗುವಳು
ಬಳುಕಿ ಬಾಗಿ
ಬೆಕ್ಕಿನ ಹೆಜ್ಜೆಯನನುಸರಿಸಿ
ತಾಲೀಮು ನಡೆಸುವಳು

ತಲೆಯೊಳಗೆ ಏನೆಲ್ಲ ತುಂಬಿಕೊಂಡು
ಗಿಳಿಯಂತೆ ಒಪ್ಪವಾಗಿ
ಪಾಠ ಒಪ್ಪಿಸುವಳು
ಚಾಣದಿಂದ ಕಲ್ಲು ಕೆತ್ತಿದ ಹಾಗೆ
ಇವಳ ಅಂಗ ಅಂಗವನೂ
ಕತ್ತಿ ಸ್ಪರ್ಧೆಗೆ ಅಣಿ ಮಾಡುವರು
ಇಷ್ಟು ಮೊಲೆ, ಇಷ್ಟೇ ನಿತಂಬ
ಸುರಿದು-ಅಳೆಯುವರು

ಒಂದು ದಿನ-
ಕೋರೈಸುವ ಬೆಳಕಿನಂಗಳದಲ್ಲಿ
ಕಿರೀಟವಿರಿಸಿಕೊಂಡು
ಸಿಂಹಾಸನದಲಿ ಕೂತು
ಸುಂದರಿಯರ ನಡುವೆ
ಮಹಾಸುಂದರಿಯಾಗಿ
ಮರೆಯುವಳು

ಚಪ್ಪಾಳೆ, ಕೇಕೆ, ಶಿಳ್ಳೆ
ಹೇಳಿ ಎಷ್ಟು ಜನಕೆ
ಈ ಭಾಗ್ಯ ದೊರೆಯುವುದು?
ಅಲೆಯ ಮೇಲಣ ಗುಳ್ಳೆಯೋ
ಪದ್ಮ ಪತ್ರದ ಮೇಲಣ ಜಲಬಿಂದುವೋ
ಅದು ಆಮೇಲಿನ ಮಾತು

ಜಗತ್ತು ಒಂದು ಚಣವಾದರೂ
ಕಣ್ಣರಳಿಸಿ, ಇವಳತ್ತ ನೋಡುವುದು
ಮತ್ತೋಬ್ಬಳು ಬರುವ ತನಕ
ಇವಳತ್ತಲೇ ನೋಡುತ್ತಾ ಇರುವುದು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನವಿಲುಗರಿ – ೧೩
Next post ಗುಣ

ಸಣ್ಣ ಕತೆ