ಸೊಗಸುಗಾರ ಸರದಾರ
ಹಗಲುಗನಸುಗಾರ
ಎಲ್ಲರಂತಲ್ಲ ಅವನು
ಭಾರಿ ಮೋಜುಗಾರ

ಗಾಳಿಕುದುರಿ ಏರುತಾನೆ
ಏಳು ಕಡಲು ಮೀರುತಾನೆ
ಇವನ ಕನಸಿಗೆಷ್ಟೊ ದಾರ
ಸಾಗಿದಷ್ಟೂ ದೂರ

ಗಾಳಿಗಿರಣಿ ಮಂತ್ರಭರಣಿ
ತಲೆಗೆ ಕವಚಿ ಬೋಗುಣಿ
ಸೆಣಸಿದರೂ ಎಲ್ಲರೊಡನೆ
ಗೆಲುವನೀತನೊಬ್ಬನೆ

ಬಿಸಿಲ ಬೇಗೆ ಬೀಳದಲ್ಲಿ
ಯಾವ ಹೂದೋಟದಲ್ಲಿ
ಅಮೃತಮತಿಯ ಕೂಡೆ ಸಂಗ
ಎಂಥ ಘಳಿಗೆಯಲ್ಲಿ ಭಂಗ

ಮಂಚದಿಂದ ಬಿದ್ದನೇ
ಮೈ ತಡವಿ ಎದ್ದನೇ
ಬಾಗಿಲಾಚೆ ಹೋಗಲಾರ
ಕಿಟಕಿ ಕೂಡ ತೆರೆಯಲಾರ

ಹಗಲುಗನಸಿಗದುವೆ ಮುಸುಕು
ತಾಳುವುದೆ ನಿಜದ ಬೆಳಕು
ಚಿಪ್ಪಿಯೊಳಗೆ ಕುಳಿತು ಹುಳ
ಆಳುವುದೆ ಲೋಕಗಳ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)