ಭಾಗ-೧

ಒಮ್ಮೆ ಒಂದು ಮರಿಪಿಶಾಚಿ
ಊರ ಸುತ್ತಲದಕೆ ತೋಚಿ

ಪೊಟರೆಯಿಂದ ಇಳಿಯಿತು
ಧೈರ್ಯದಿಂದ ನಡೆಯಿತು

ನಡೆದು ನಡೆದು ಬರಲು ಕೊನೆ
ಬಿತ್ತು ಕಣ್ಣಿಗೊಂದು ಮನೆ

ಬಾಗಿಲಿಗೆ ಬೀಗವಿತ್ತು
ಕಿಟಕಿ ಮಾತ್ರ ತೆರದೆ ಇತ್ತು

ಅರೆ! ಎಂದು ಮರಿಪಿಶಾಚಿ
ಇಣುಕಿತಲ್ಲಿ ಕತ್ತು ಚಾಚಿ

ಯಾರು ಇಲ್ಲ ಮನೆಯ ಒಳಗೆ
ಹೋಗಿರುವರು ಎಲ್ಲೋ ಹೊರಗೆ

ಎಷ್ಟಾದರೂ ಪಿಶಾಚಿ ತಾನೆ
ಹಾರಿಯೇ ಬಿಟ್ಟಿತು ಧುಡುಕ್ಕನೆ

ಕುರ್ಚಿ ಮೇಜು ತೂಗುಯ್ಯಾಲೆ
ಕುಣಿದಾಡಿತು ಕೆಳಗೆ ಮೇಲೆ

ಮೂಗಿಗೆ ಬಡಿಯಲು ಏನೋ ವಾಸನೆ
ಹೊಕ್ಕು ನೋಡಿತು ಅಡುಗೆ ಕೋಣೆ

ಮೂಲೆಯಲೊಂದು ಒಂಟೆ ಡುಬ್ಬ
ಕವಚಿದ ಹಾಗೆ ಬೆಲ್ಲದ ಡಬ್ಬ

ಅರೆ! ಎಂದು ಮರಿಪಿಶಾಚಿ
ಇಣುಕಿತಲ್ಲಿ ಕತ್ತು ಚಾಚಿ

ಬೆಲ್ಲದ ಪಸೆ ಮೈ ಕೈ ಸವರಿ
ಬಿದ್ದೇಬಿಟ್ಟಿತು ಒಳಕ್ಕೆ ಜಾರಿ

ಮೇಲೆ ನೆಗೆಯೋಕಾಗೋದಿಲ್ಲ
ಉಂಡೆ ಬೆಲ್ಲ ಸುತ್ತಲೆಲ್ಲ

ಸರಿ! ಎಂದು ಮರಿಪಿಶಾಚಿ
ಮೆಲ್ಲತೊಡಗಿತು ಬಾಚಿ ಬಾಚಿ

ಮೆದ್ದು ಕೈ ಕಾಲು ಮಂಡೆ
ಆಯಿತೊಂದು ಬೆಲ್ಲದುಂಡೆ

ಅಷ್ಟರಲಿ ಸದ್ದು ಹೊರಗೆ
ಬಾಗಿಲು ಕಿರ್ರನೆ ತೆರೆದ ಹಾಗೆ

ಮನುಷ್ಯರ ಕಾಲ ಸಪ್ಪಳ
ಮುರಿದ ಹಾಗೆ ಹಪ್ಪಳ

ಮರಿ ಪಿಶಾಚಿ ಡಬ್ಬದೊಳಗೆ
ಬೆವರತೊಡಗಿತು ಮೆಲ್ಲಗೆ

ಭಾಗ-೨

ಅಡುಗೆ ಭಟ್ಟ ಸುಬ್ಬಾಭಟ್ಟ
ಒಲೆಯ ಮೇಲೆ ಎಸರನಿಟ್ಟ

ಅಂದು ರಾಮನವಮಿ ದಿವಸ
ಆದ್ದರಿಂದ ಪಾಯಸ

ಎಸರು ಕುದಿಯಿತು ತಳಮಳ
ಪಿಶಾಚಿಗೇಕೊ ಕಳವಳ

ಸುಬ್ಬಾಭಟ್ಟ ಹುಡುಕಿದ
ಬೆಲ್ಲದ ಡಬ್ಬ ತಡಕಿದ

ಕೈಗೆ ಸಿಕ್ಕ ದೊಡ್ಡ ಉಂಡೆ
ಸೇರಿತು ಪಾಯಸದ ಹಂಡೆ

ನೋಡಲೇನು! ಮರಿಪಿಶಾಚಿ
ಕುಂಯ್ಯೋ ಮುರ್ರೋ ಎಂದು ಕಿರುಚಿ

ಕಿಟಕಿಯಿಂದ ಒಂದೇ ನೆಗೆತ
ಬೇಡಿ ತಿನುವೆನೆನ್ನುತ

ಕೆಳಗೆ ಬಿದ್ದ ಸುಬ್ಬಾಭಟ್ಟ
ಒಂದು ವಾರ ಮಲಗಿಬಿಟ್ಟ

ಆಗಿದ್ದಾನೆ ಸಣಕಲು
ಹೇಳುತ್ತಾನೆ ಈಗಲೂ

ಇಂಥ ವಿಚಿತ್ರ ಕಂಡದ್ದಿಲ್ಲ
ಹಾರುವಂಥ ಉಂಡೆ ಬೆಲ್ಲ
*****