ತೋರಿ ಬಾರೆ ತೂರಿ ಬಾರೆ
ತೋರ ಮುಡಿಯ ಚಂದ್ರಿಮೆ
ಬಳುಕಿ ಬಾರೆ ಉಳುಕಿ ಬಾರೆ
ಆಳುಕಿನಿಂದ ಸಂಭ್ರಮೆ ||೧||

ನೀನು ಇಲ್ಲ ನಾನು ಇಲ್ಲ
ಜೀವ ಎಲ್ಲ ಶೂನ್ಯಮೆ
ನೀನು ಬರಲಿ ಹೇಗೆ ಇರಲಿ
ಬಾಳು ಪೂರ್‍ಣ ಪೌರ್ಣಿಮೆ ||೨||

ಒಂದೆ ದಿನಾ ಒಂದೆ ಕ್ಷಣಾ
ಇದ್ದು ಇಲ್ಲವಾದರೆ
ಎದೆಯ ಕದಾ ಹೋತು ಹದಾ
ಬೀತು ಮುದಾ ತಾವರೆ ||೩||

ನಿನ್ನ ಕೊರಳು ಗಾನ ಕೊಳಲು
ಕಣ್ಣು ನವಿಲು ನರ್ತನಾ
ನಿನ್ನ ವಾಣಿ ಕೋಟಿ ವೀಣೆ
ಜಲತರಂಗ ತರ್ಪಣಾ ||೪||

ಅಹಾ ಮಿಲನ ಪ್ರೇಮ ಕವನ
ರಾತ್ರಿ ರಸದ ಔತಣಾ
ನಿನ್ನ ಭೋಗ ನನ್ನ ಯೋಗ
ಆತ್ಮ ದೀಪ ದರ್ಪಣಾ ||೫||
*****