ನೀಗಿ… ನೀಗಿ… ನೀಗಿ…
ನನ್ನ ನೀನು, ನಿನ್ನ ನಾನು
ಕಂಡರಾಗದಂತ
ಸಣ್ಣತನವ ನೀಗಿ.
ನಿನ್ನ ಕೈಯ ನಾನು ಹಿಡಿವೆ
ನೀನು ಹಿಡಿ ಇನ್ನೊಬ್ಬರ
ಹೀಗೆ ಮುಂದೆ ಸಾಗುವ
ಬದುಕಿನಲ್ಲಿ ಪ್ರೀತಿ ಕಾಣುವ.
ಏನೇ ಎಡರು ತೊಡರು ಬರಲಿ
ಕೂಡಿ ಬದುಕುವ
ನನ್ನ ನಿನ್ನ ಬುದ್ಧಿ ಶಕ್ತಿ ಒಳ್ಳೆ ರೀತಿ ಬಳಸಿ
ಪರಿಹಾರ ಕಂಡುಕೊಳ್ಳುವ.
ನೀನು ದುಡಿ, ನಾನು ದುಡಿವೆ
ಕೂಡಿ ಉಣ್ಣುವ
ನಗುವ, ನಲಿವ
ನ್ಯಾಯ ರೀತಿ ಬಾಳುವ.
ನನ್ನ ನೀನು, ನಿನ್ನ ನಾನು ಗೌರವಿಸಿ
ಬಣ್ಣ, ಬಗೆ, ದೇಶ, ಭಾಷೆ ಯಾವುದೂ
ನಮ್ಮ ಸರಸ ಬದುಕಿಗೆ
ಅಡ್ಡವಾಗದಂತೆ ನೋಡಿಕೊಳ್ಳುವ.
ಎಂತ ವೇಳೆ ಬಂದರೂ
ನನ್ನ ಮೇಲೆ ನೀನು, ನಿನ್ನ ಮೇಲೆ ನಾನು
ಕೈಯ ಮಾಡದಿರುವ
ಅಸಹನೆಯ ಹೇಯ ಬೇರು ಕಿತ್ತು ಹಾಕುವ.
ನಾನು ನೀನು ಯಾರೇ ಆಗಲಿ
ಬದುಕಲೆಂದೆ ಬಂದವರು
ಯಾರೂ ಯಾರ ಬದುಕನು
ಕಿತ್ತುಕೊಳ್ಳಬಾರದು.
ಕಲಹವೆಂದೂ ನಗು ನಲಿವು ತಂದುದಿಲ್ಲ
ಎಂದೆಂದಿಗೂ ಅದು ಒಂದು
ಯಾರಿಗೂ… ಯಾವುದಕ್ಕೂ
ಪರಿಹಾರವಲ್ಲ; ಅವಿವೇಕ ಸಲ್ಲ!
*****