ಕರೆದರೂ ತಿರುಗದೆ
ಜಿಗಿದು ಓಡಿದಳಲ್ಲ,
ಯಾರಿವಳು ಎರಳೆಮರಿ ಎಂದಿರೆ?
ಇವಳೆ ಊರ್ಮಿಳೆ, ತುಂಬುಜಂಬುನೇರಳೆ
ನಮ್ಮ ಮಲೆನಾಡ ಸಿಹಿಪೇರಲೆ.
ನನಗು ಇವಳಿಗು ಸ್ನೇಹ ತೀರ ಈಚೆಗೆ ಎನ್ನಿ
ನನ್ನ ಕಂಡರೆ ನಾಚಿಕೆ,
ಪ್ರೀತಿಯಲಿ ಬಾ ಎಂದು ರಮಿಸಿದರೆ ನಿಲ್ಲುವಳು
ನಾಲ್ಕಾರು ಮಾರಾಚೆಗೆ –
ಮತ್ತೊಮ್ಮೆ ಕರೆದಾನೆ ಎಂಬಾಸೆ ಮಿನುಗುವುದು
ಕಣ್ಣ ತಿಳಿತೆರೆಯಾಚೆಗೆ.
ನಮ್ಮ ನಡುವಿನ ಇಂಥ ಅಂತರಕೆ ನಾನಿಟ್ಟೆ
ಚಾಕಲೇಟಿನ ಸೇತುವೆ!

ಪುಟ್ಟ ಕಣ್ದೊಟ್ಟಿಲಲಿ
ಮಿಂಚರಸದಲಿ ನೆನೆದ ಎರಡು ಕರಿಗೋಲಿ,
ಬಾನು ಕಡಲರಿಯದದರಾಳದಲಿ ಬ್ರಹ್ಮಾಂಡ
ಹೊಡೆಯುವುದು ಜೋಲಿ,
ತುಟಿ ತೆರೆದರಿವಳು-
ಬಾನು ಬುವಿಯನು ತಬ್ಬಿ
ಹಗಲು ಇರುಳನು ದಬ್ಬಿ
ಮರಮರದಿ ಹಾಡುವುವು ಹಕ್ಕಿ ಕೊರಳುಬ್ಬಿ;
ಹೂ ಸುರಿದು ಹಣ್ ಬಿರಿದು
ದಡದಡನೆ ಹೊಳೆ ಹರಿದು
ಇಳೆಗೆ ಮಳೆ ತುಳುಕುವುದು ಹೂಬಿಸಿಲು ಹಬ್ಬಿ!

ಕಿಲಕಿಲನೆ ನಕ್ಕಳೆಂದರೆ ಇವಳು
ಜಡಕು ಕಚಗುಳಿಯನಿಟ್ಟಂತೆ,
ಹರಿದ ಕರಿಮುಗಿಲಲ್ಲಿ ಮಲಗಿರುವ ಬಾನಿಗೆ
ಹುಣ್ಣಿಮೆಯ ಹಾಲು ಹರಿದಂತೆ,
ಕರಿಯ ಕಿರುಜಡೆ ಬೆಣ್ಣೆಗನ್ನೆ ಮೇಲಿಳಿದಿರಲು
ಮಿಂಚು ಮುಗಿಲಾಟದಂತೆ,
ಹೂಗಾಲನಿಟ್ಟು ಜಿಗಿದರೆ ಅದರ ಸ್ಪರ್ಶಕೇ
ಪುಳಕ ನೆಲಕೆ!

ತುಂಬುಕಿತ್ತಲೆಗೆನ್ನೆ ಮಿಂಚುಗಣ್ಣಿನ ಹುಡುಗಿ
ಹೂಮೈಯ ಬೆಡಗಿ!
ತಿಂಗಳನೆ ನಾಚಿಸುವ ಬೆಣ್ಣೆಗೆನ್ನೆಯೊಳೊಂದು
ಕಪ್ಪು ಕಲೆ ಮಿರುಗಿ
ಮುದ್ದು ಮುಖದೊಳಗೊಮ್ಮೆ ತುಂಟನಗೆ ತುಳುಕಿಸಲು
ನಾ ಮೈಯ ಮರೆತು,
ಮುತ್ತಮಳೆ ಸುರಿಸುವೆನು ನೋಯುವುದೊ ಹೂಗೆನ್ನೆ
ಎಂಬುದನೂ ಮರೆತು.

ನಿನ್ನಂಥ ನೆರೆಯಿರಲು
ಯಾವ ಭಾಗ್ಯಕೆ ನನಗೆ ಕಡಮೆ ಹೇಳು?
ನೀ ನನ್ನ ಬಳಿಯಲಿರೆ
ಮುಕ್ತಿಯೂ ಬೇಡ ಸಾಕಿಂಥ ಬಾಳು!
*****