ಓ ಮುಗಿಲ ದೇವತೆಯೆ ಓ ಕಡಲ ರೂಪಸಿಯೆ
ಓ ಹೇಳಿ ಕಿಟ್ಟಣ್ಣನೆಂದು ಬರುವ
ಹೂವಿಗಿಂತಲು ಹೂವು ಮುದ್ದಿಗಿಂತಲು ಮುದ್ದು
ಕೆನೆಹಾಲ ಸವಿಗಲ್ಲ ಎಂದು ತರುವ

ಓ ಗಗನ ಮಲ್ಲಿಗೆಯೆ ಓ ಸಿಡಿಲ ಸಂಪಿಗೆಯೆ
ಆ ನಗೆಯ ಕಂದಯ್ಯನೆಂದು ಬರುವ
ಚನ್ನಯ್ಯ ಚಲುವಯ್ಯ ಚಿನ್ನಯ್ಯ ಚಿಕ್ಕಯ್ಯ
ಓ ಹೇಳಿ ಮಗುವಾಗಿ ಎಂದು ನಗುವ

ಓ ನೋಡು ಪುಟ್ಟಣ್ಣ ಕೆಂಜೆಡೆಯ ಕಿಟ್ಟಣ್ಣ
ನೋಡಿಲ್ಲಿ ಈ ವಿಶ್ವವೇನಾಗಿದೆ
ಗುಡಿಯಲ್ಲಿ ದೇವರಾ ಮಾರಾಟ ಮಾಡಿಹರು
ನೋಡಿಲ್ಲಿ ಕಲಿಕಾಲವೇನಾಗಿದೆ

ಗಿಡಮಂಗ ನಾಚಿಹವು ಮನೆಮಂಗರಾಟಕ್ಕೆ
ಹಾಲೆಂದು ಬಿಳಿಸುಣ್ಣ ಉಣಿಸಾಗಿದೆ
ಧರ್ಮದಾ ಹೆಸರಲ್ಲಿ ಲಂಪಟರ ಕರ್ಮಾಂಡ
ಚರ್ಮದಾ ಚಟಚೀಲ ತುಳಿತುಂಬಿದೆ

ಓ ಸಾಕು ಛೀಸಾಕು ಛೀಯುಗದ ಛೀಪಾಡು
ಚನ್ನ ಸುಂದರ ಚಲುವ ಕಾಲ ಬರಲಿ
ನೀ ಬರಲಿ ಕಾಲ್ಗೆಜ್ಜೆ ಘಲ್ಘಿಲಿಸಿ ಯುಗ ತರಲಿ
ಶ್ರೀ ಸತ್ಯ ಶಿವಯುಗದ ಕಲ್ಬತರಲಿ.
*****