ಜನ ಮೆಚ್ಚಿದ ಶಿಕ್ಷಕ

ಕಾರ್ಯಾಲಯದಲ್ಲಿ ಶಿಕ್ಷಣಾಧಿಕಾರಿಗಳು ಕಡತ ನೋಡುವಲ್ಲಿ ಮಗ್ನರಾಗಿದ್ದರು. ಹೊರಗೆ ಕೂಗಾಟ ಕೇಳಿಸಿತು. “ಧಿಕ್ಕಾರ…. ಧಿಕ್ಕಾರ…. ಹಲ್ಕಾ ಶಿಕ್ಷಕನಿಗೆ ಧಿಕ್ಕಾರ.” ಧ್ವನಿ ಜೋರಾಗಿತ್ತು. ಸಾಹೇಬರು ಎದ್ದು ಹೊರಗೆ ಬಂದರು. ಆವರಣದ ತುಂಬ ಜನ. ಸಾಹೇಬರನ್ನು ಮತ್ತು ಅವರ ಹಿಂದೆ ಬಂದ ಸಿಬ್ಬಂದಿಯನ್ನು ಕಂಡು ಜನರ ಕೂಗು ಇನ್ನೂ ಮುಗಿಲಿಗೇರಿತ್ತು.

ಬಂದವರೆಲ್ಲ ಗ್ರಾಮಸ್ಥರು, ಅವರಲ್ಲಿ ಕೆಲವರನ್ನು ಗುರುತಿಸಿದ ಸಾಹೇಬರು “ಏನ್ರಿ ಗೌಡರೆ ಇದೆಲ್ಲ?” ಎಂದು ಕೇಳಿದರು. ಹಳ್ಳಿಯ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿದ್ದ ಅವರು ಮತ್ತು ಉಳಿದ ಸದಸ್ಯರು ಮುಂದೆ ಬಂದರು. “ನಮ್ಮೂರಿನ ಸಾಲಿಗೆ ಆ ಬೆಂಕಿಮಠ ಮಾಸ್ತರ ಬ್ಯಾಡ ಸಾಹೇಬರ” ಗೌಡರು ಪ್ರತಿಭಟನೆಯ ಧ್ವನಿಯಲ್ಲಿ ಹೇಳಿದರು. ಪರಿಸ್ಥಿತಿ ಗಂಭೀರವಾಗಿದೆಯೆಂದು ಸೂಕ್ಷ್ಮವಾಗಿ ಗ್ರಹಿಸಿಕೊಂಡ ಸಾಹೇಬರು ಅವರನ್ನು ಒಳಗೆ ಕರೆದುಕೊಂಡು ಹೋದರು.

ಕುಳಿತುಕೊಳ್ಳುತ್ತಿದ್ದಂತೆ ಗೌಡರು “ಸಾಹೇಬರ ಈಗಿಂದೀಗ ಆ ಹಲ್ಕಾ ಮಾಸ್ತರನನ್ನ ಟ್ರಾನ್ಸ್‌ಫರ್‍ ಮಾಡ್ರಿ. ನಮ್ಮ ಸಾಲಿಗೆ ಬ್ಯಾರೆ ಮಾಸ್ತರನ್ನ ಕೊಡ್ರಿ” ಎಂದು ತೀವ್ರವಾಗಿ ಒತ್ತಾಯಿಸಿದರು. ಈಗವರು ಬೇಡವೆನ್ನುತ್ತಿರುವ ಶಿಕ್ಷಕರಿಗೆ ಇದೇ ಗೌಡರು ಕಳೆದ ವರ್ಷ `ಜನ ಮೆಚ್ಚಿದ ಶಿಕ್ಷಕ’ ಪ್ರಶಸ್ತಿ ಕೊಡಿಸಿಕೊಂಡು ಮೆರವಣಿಗೆ ಹೋಗಿದ್ದರ ದೃಶ್ಯ ಕಣ್ಮುಂದೆ ತೇಲಿ ಹೋಯಿತು. ಈಗವರೇ ಮೆರವಣಿಗೆಯಲ್ಲಿ ಬಂದು ಅವನ ಬಗ್ಗೆ ಧಿಕ್ಕಾರ ಹೇಳುತ್ತಿರುವುದು ಸೋಜಿಗವೆನಿಸಿ “ಏನ್ರಿ ಗೌಡ್ರೆ ಹಕೀಕತ್ತು?” ಎಂದು ಪ್ರಶ್ನಿಸಿದರು.

“ಅಂವಾ ಮಾಸ್ತರ ಆಗಾಕ ಅಯೋಗ್ಯದಾನ ಸಹೇಬರ” ಎಂದು ಬೆಂಕಿಮಠನ ಬಗ್ಗೆ ವಿವರ ನೀಡಿದರು ಗೌಡರು. ಶಾಲೆಗೆ ಗೈರು ಆಗುವುದು, ಶಿಕ್ಷಕಿಯೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವುದು. ಪುಸ್ತಕ ಮಾರಿಕೊಳ್ಳುವುದು, ಶಾಲೆಯಲ್ಲಿ ವಾಸ್ತವ್ಯ ಹೂಡಿ ಇಸ್ಪೀಟ್ ಆಡುವುದು, ಕುಡಿಯುವುದು, ತಿನ್ನುವುದು, ಎಂಟು ದಿನಗಳ ಹಿಂದೆ ಏಳನೆಯ ತರಗತಿಯ ಹುಡುಗಿಯೊಬ್ಬಳ ಮೇಲೆ ಬಲಾತ್ಕರಿಸಲು ಯತ್ನಿಸಿದ್ದರ ಬಗ್ಗೆ ಹೇಳಿ “ಆ ನಾಲಾಯಕ ಮಾಸ್ತರ ನಮ್ಮ ಕೈಯಾಗ ಸಿಗಲಿಲ್ಲ. ಇಷ್ಟು ದಿನಾತು ಅವನ ಪತ್ತಾನೂ ಇಲ್ಲ. ಅಂವಾ ಶಿಕ್ಷಣ ಇಲಾಕೆಯಾಗ ಇರ್ಲಿಕ್ಕೆ ಅಯೋಗ್ಯ ಅದಾನ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಗೌಡರೆ, ಕಳೆದ ವರ್ಷ ಆ ಶಿಕ್ಷಕ ಛಲೋ ಸಜ್ಜನ ಮನುಷ್ಯ ಅದಾನ, ನೀವು ಅವನಿಗೆ ಪ್ರಶಸ್ತಿ ಕೊಡದಿದ್ರ ಇಲಾಖೆ ಎದುರು ಉಪವಾಸ ಕುಂದ್ರಿತೀನಿ ಅಂದ್ರಿ. ರಾಜಕೀಯ ಮಂದಿಯ ಒತ್ತಡ ತಂದ್ರಿ. ಅವನ ವರ್ತನೆ ನಿಮ್ಮ ಗಮನಕ್ಕೆ ಬಂದಿದ್ದಲೇನ್ರಿ?” ಸಾಹೇಬರು ಕೇಳಿದರು.

“ಹುತ್ತಿನ್ಯಾಗಿಂದ ಹೊರಗ ಬಂದಾಗ ಗೊತ್ತಾಗೊದಲ್ರಿ ಯಾವ ಹಾವು ಅಂತ!”

ಗೌಡರ ಮಾತು ಕೇಳುತ್ತಲೇ ಸಂಬಂಧಿಸಿದ ಕಾರಕೂನರನ್ನು ಕರೆಯಿಸಿದ ಸಾಹೇಬರು “ಈಗಿಂದೀಗ ಆ ಬೆಂಕಿಮಠ ಶಿಕ್ಷಕರನ್ನ ಸಸ್ಪೆಂಡ್ ಮಾಡಿದ ಕಾಗದ ಟೈಪ್ ಮಾಡಿಸ್ಗಂಡು ಬರ್‍ರಿ” ಎಂದರು.

“ಸಸ್ಪೆಂಡ್ ಮಾಡಿದ್ರ ಮತ್ತ ಆ ಮಾಸ್ತರಗ ಬಲ ಹೆಚ್ಚಿಗ ಬರ್ತೈತಿ ಸಾಹೇಬರ. ದೊಡ್ಡ ದೊಡ್ಡವರ ಕೈಗಳು ಸಸ್ಪೆಂಡ್ ಆದವರನ್ನು ಉಳಿಸಿಕೊಳ್ಳಾಕ ನೋಡ್ತಾವು. ಆ ಮಾಸ್ತರನ ಡಿಸ್ಮಿಸ್ ಮಾಡಬೇಕು. ಒಂದು ಹುಳಾ ನೂರು ಹುಳಾನ್ನ ಹುಟ್ಟುಸ್ತಾವು!” ಗೌಡರು ಒತ್ತಾಯಿಸಿದರು.

“ಗೌಡರೆ ನನ್ನ ಅಧಿಕಾರದ ಮಿತಿಯಾಗ ನಾನು ಕೆಲಸ ಮಾಡಬೇಕು. ನೀವು ಅದರ ಬಗ್ಗೆ ಕಾಗದ ಕೊಡ್ರಿ. ನಾನು ಮೇಲಿನ ಸಾಹೇಬರಿಗೆ ಕಳಿಸ್ತೀನಿ” ಹೀಗೆ ಹೇಳಿ ಕುಳಿತರು ಸಾಹೇಬರು.

ಹೊರಗೆ ಬೆಂಕಿಮಠ ಮಾಸ್ತರನ ವಿರುದ್ಧದ ಕೂಗು ಕೇಳಿಸುತ್ತಲೇ ಇತ್ತು.

*****

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆ ರಾತ್ರೆಯ ಮೊರೆತ
Next post ಸಿದ್ಧಾಂತ

ಸಣ್ಣ ಕತೆ

 • ಕಂಬದಹಳ್ಳಿಗೆ ಭೇಟಿ

  ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

 • ಆವರ್ತನೆ

  ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…