ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ. ಮೇಲಾಗಿ ಇದು “ವನ ರಾಜ”. ಇದು ಬೆಕ್ಕಿನ ವರ್‍ಗಕ್ಕೆ ಸೇರಿದೆ. ಇದರ ಮೈ ಬಣ್ಣ ಕಂದು. ಅದರ ಮೇಲೆ ಕಪ್ಪು ಪಟ್ಟೆಗಳು. ಇದು ಬಲಯುತವೂ, ಚುರುಕೂ ಆದ ಸ್ನಾಯುಖಂಡಗಳನ್ನು ಹೊಂದಿದೆ. ಇದರ ಹಿಂಗಾಲು ಮುಂಗಾಲುಗಳು ದೇಹಕ್ಕೆ ತಕ್ಕಂತೆ ಬಲಿಷ್ಠವಾಗಿವೆ. ಇದು ತನ್ನ ದೇಹದ ಭಾರವನ್ನು ಹೆಚ್ಚಾಗಿ ಮುಂಗಾಲುಗಳ ಮೇಲೆಯೇ ಹಾಕಿ ನಡೆಯುತ್ತದೆ. ಸದ್ದಿಲ್ಲದೆ ನಡೆಯಬೇಕಾದಾಗ ಇದು ತನ್ನ ವಕ್ರವಾದ ಉಗುರುಗಳನ್ನು ಒಳಗೆ ಎಳೆದುಕೊಳ್ಳುತ್ತದೆ.

ಹೆಣ್ಣು ಹುಲಿ ತನ್ನ ಮರಿಗಳನ್ನು ಬಹಳ ಪ್ರೀತಿಯಿಂದ ಸಾಕುತ್ತದೆ. ಹುಲಿ ಧೈರ್‍ಯ ಮತ್ತು ಸ್ಥೈರ್‍ಯಕ್ಕೆ ಹೆಸರಾದ ಪ್ರಾಣಿ. ಹುಲಿಗಳು ಸರಾಗವಾಗಿ ನೀರಿನಲ್ಲಿ ಈಜಬಲ್ಲವು ಮತ್ತು ಮರವನ್ನು ಹತ್ತಬಲ್ಲವು. ಸಾಮಾನ್ಯವಾಗಿ ಹುಲಿಗಳು ೧೬ ರಿಂದ ೨೦ ವರ್‍ಷಗಳವರೆಗೆ ಜೀವಿಸುತ್ತವೆ.

ತುಲನೆ ಮಾಡಿ ನೋಡಿದರೆ ಸಿಂಹಕ್ಕಿಂತ ಹುಲಿಯೇ ಬಲಿಷ್ಠ. ಹುಲಿಗೂ ಸಿಂಹಕ್ಕೂ ಕಾದಾಟವಾದರೆ ಹುಲಿಯೇ ಗೆಲ್ಲುತ್ತದೆ.

ಹುಲಿಗಳು ಹೆಚ್ಚಾಗಿ ಏಷಿಯಾ ಖಂಡದ ಮಂಚೋರಿಯಾ ದೇಶದಿಂದ ಹಿಡಿದು ಚೀನಾ, ಭಾರತ, ಜಾವಾ ಮತ್ತು ಬೋರ್‍ನಿಯಾ ದೇಶಗಳ ಕಾಡುಗಳಲ್ಲಿ ವಾಸಿಸುತ್ತವೆ. ಭಾರತದಲ್ಲಿ ಹುಲಿಗಳು ಹೆಚ್ಚಾಗಿ ಬಂಗಾಲ, ಬಿಹಾರ, ಪಶ್ಚಿಮ ಘಟ್ಟದ ಮಲೆನಾಡಿನ ಕಾಡು, ನೇಪಾಳ ಮತ್ತು ಹಿಮಾಲಯದ ತೆರಾಂ ಮುಂತಾದ ಸ್ಥಳಗಳಲ್ಲಿ ವಾಸಿಸುತ್ತವೆ. ಮಂಚೋರಿಯಾ ದೇಶದ ಹುಲಿಗಳು ನಮ್ಮ ದೇಶದ ಹುಳಿಗಳಿಗಿಂತಲೂ ದೊಡ್ಡದಾಗಿವೆ. ಅವುಗಳ ಮೈ ಬಣ್ಣ ಕಂದು ಮತ್ತು ಕಿತ್ತಳೆ.

ವಿನಾಶದ ಅಂಚಿನಲ್ಲಿ

ಭಾರತದಲ್ಲಿರುವಷ್ಟು ಹುಲಿಗಳು ಬೇರೆಲ್ಲೂ ಇಲ್ಲ. ನಮ್ಮಲ್ಲಿರುವ ಹುಲಿಗಳ ಸಂಖ್ಯೆ ಸುಮಾರು ೪,೦೦೦. ಚೀನಾದಲ್ಲಿ ಹುಲಿಗಳ ಮೂಳೆಗಳನ್ನು ಉಪಯೋಗಿಸಿ ಅದ್ಭುತ ಗುಣಗಳಿರುವ “ಟೈಗರ್‍ ವೈನ್” ತಯಾರಿಸುತ್ತಿದ್ದಾರೆ. ಆದ್ದರಿಂದ ಚೀನಾದ ೧೧೦ ಕಾರ್‍ಖಾನೆಗಳಿಗೆ ಕಳ್ಳತನದಿಂದ ಭಾರತದ ಹುಲಿಗಳ ಮೂಳೆ ಸರಬರಾಜು. ೧ ಕಿಲೋ ಮೂಳೆಯ ಬೆಲೆ ೨,೪೦೦ ರೂಪಾಯಿ. ಒಂದು ಹುಲಿಯಲ್ಲಿರುವ ಮೂಳೆ ತೂಕ ೧೮ ಕಿಲೋ. ಹಾಗಾಗಿ ಒಂದು ಹುಲಿಯನ್ನು ಕೊಂದರೆ ೪೨,೦೦೦ ರೂಪಾಯಿ ಸಂಪಾದನೆ! ಅದರ ಚರ್‍ಮಕ್ಕೆ ೨ ಲಕ್ಷಕ್ಕೂ ಮೀರಿ ಬೆಲೆಯಿದೆ. ಹೀಗಾಗಿ ಒಂದು ಸತ್ತ ಹುಲಿಯಿಂದ ಒಟ್ಟು ಸುಮಾರು ೩ ಲಕ್ಷ ರೂಪಾಯಿ ಆದಾಯವಿದೆ.

ಹೀಗೆಯೇ ಈ ಬೇಟೆಯು ಮುಂದುವರಿದರೆ ನಾಳಿನ ಜನಾಂಗ ಹುಲಿಗಳನ್ನು ಕೇವಲ ಕಥೆಗಳಲ್ಲಿ ಅಥವಾ ಚಿತ್ರಗಳಲ್ಲಿ ಕಾಣಬೇಕಾಗುತ್ತದೆ. ರಾಷ್ಟ್ರೀಯ ಪ್ರಾಣಿ ಹುಲಿಯನ್ನು ರಕ್ಷಿಸುವುದು ಇಂದು ಅಗತ್ಯವಾಗಿದೆ.
*****