ಮಂಡೂಕಗಳಿಗವಸ್ಥೆ ಮೂರು: ನಿದ್ದೆ,
ಎಚ್ಚರ, ಮಧ್ಯಂತರ. ಮನುಷ್ಯರಿಗೆ ಕೂಡ
ಅಷ್ಟೆ. ನಿದ್ದೆಯಲಿ ಕನಸು ಕೀಟಗಳದ್ದೆ

ಎಚ್ಚರದಲವುಗಳ ಹಿಡಿಯಲು ಹುಡುಕಾಟ
ಸಿಕ್ಕಿದರೆ ಊಟ, ಇಲ್ಲದಿದ್ದರೆ ಉಪವಾಸ
ಮಧ್ಯಂತರಾವಸ್ಥೆಯಲಿ ಹೀಗೆಯೇ ಬೇಟ

ಹೊಸತೇನಲ್ಲ; ತಲಾಂತರದಿಂದ ಬಂದದ್ದೆ
ಕಣ್ಣಿಗೆ ಬೀಳದ ಕರ್ತಾರ ನಡೆಸಿದ ಪವಾಡ
ನೆನೆಸಿಕೊಂಡರೇನೆ ಕಣ್ಣುಗಳರಡೂ ಒದ್ದೆ

ಅದ್ದರಿಂದಲೆ ಆಗಾಗ ಪ್ರಾರ್ಥನಾ ಕೂಟ
ಪುಣ್ಯಭೂಮಿಗಳ ಕಡೆಗೆ ಪ್ರವಾಸ
ಮಂಡೂಕಗಳಿಗೆ ಮಾತ್ರ ಇಲ್ಲ ಇಂಥ ಚಟ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)