ನನಗೆ ನೀನು ಇಂದಿಗೂ ಒಗಟು
ಬಿಡಿಸಲಾಗದ ಕಗ್ಗಂಟು
ಯಾಕೆ ನಲ್ಲ? ನನ್ನಲ್ಲಿ ಬಯಲಾಗದ ಹಠ
ಒಳಗೆ ತುಡಿತ ಮಿಡಿತ
ತೋರಿಕೆಗೆ ಯಾಕೆ ಹಿಂದೆಗೆತ?
ಮನಬೆರೆತರೂ ಬೆರೆಯದಂತೆ
ಒಲಿದರೂ ಒಲಿಯದಂತೆ
ನೀನೆಕೆ ಪದ್ಮಪತ್ರದಂತೆ?
ಹಸಿವು ನನಗೂ ನಿನಗೂ ಇಬ್ಬರಿಗೂ
ಉಸಿರು ನಿಲ್ಲುವವರೆಗೂ
ಗೋಡೆ ಬೇಡ, ಒಣ ಜಂಭ ಹಿತವಲ್ಲ
ತುಂಬು ಬಿಂದಿಗೆಯಂತೆ ಹಬ್ಬಿ
ನಿಂತಿದೆ ಪ್ರೀತಿ
ನಿನ್ನ ಕಣ್ಣಲಿ ನಾನು ಬಿಂಬ
ಆಗುವ ಬಯಕೆ
ಒಂದೇ ಸೂರಡಿ ಬದುಕ
ಚಿಗುರಿಸುವ ಹರಕೆ
ಭಾನು ಬುವಿಗಳ ಮಿಲನ
ಮಧ್ಯದೊಳು ಎಂತು?
ಕ್ಷಿತಿಜದೊಳು ಐಕ್ಯತೆಗೆ ಭಂಗವೆಂತು?
ನಲ್ಲ ನನ್ನ ನಿನ್ನ ನಂಟು
ಜನ್ಮಜನ್ಮದ ಗಂಟು
ಅರಿತು ನಡೆದರೆ ಬಾಳು
ಬೆಲ್ಲದಾ ಅಂಟು.
*****