ಬಾರೆ ನೀರೆ ತಾರೆ ತಂಗಿ
ಚಂಚಂದುಂಡಿ ಕಟ್ಟೋಣ
ಚಂದಾ ಮಾಮಾ ಪಂಚ್ಮೀ ಮಾಮಾ
ಆತ್ಮಾರಾಮಾರಾಗೋಣ ||

ತುರುಬಾ ತುಂಬಾ ತುಂಬೀ ಹೂವಾ
ತೌರಿಗೆ ತುಂಬಿ ಬಾರವ್ವಾ
ಪಂಚ್ಮೀ ಹಬ್ಬಾ ಬಂತೌ ತಂಗಿ
ಬ್ಯಾಸರ ಸಾಕೌ ಬಾರವ್ವಾ ||

ನಾಗರಹಾವು ನಾಗರ ನಾವು
ಸಕ್ಕರೆ ಪಾಕಾ ಆಗೋಣ
ದುಂದುಂಡಾಗಿ ಕಂಕಂಪಾಗಿ
ಬೇಸನ್ನುಂಡಿ ಕಟ್ಟೋಣ

ಹಾವಿಗೆ ಹಾವು ಬುಸುಬುಸು ಬೇಡಾ
ತಂಬಿಗಿ ಹಾಲು ಎರಿಯೋಣ
ಹಾವು ಹೋಗಿ ಗೋವು ಆಗಿ
ಜೋಕಾಲ್ಜೀಕಿ ಆಡೋಣ ||

ಸಾಕೌ ಸಂತಿ ಬೇಡೌ ಚಿಂತಿ
ಅಪ್ಪನ ಅಂಗ್ಳಾ ತುಂಬೋಣ
ತೂಗಿ ತೂಗಿ ಜೋಕಾಲ್ತೂಗಿ
ಚಿತ್ತಿನ ಮಂಗ್ಳಾ ಮಾಡೋಣ
*****