ಮುಂಜಾನೆ ಅರುಣೋದಯಕ್ಕೆ ಮುಂಚೆ ಸಾವಿರಾರು ಇಬ್ಬನಿಗಳು ಹುಲ್ಲ ಮೇಲೆ, ಹೂವಿನ ಮೇಲೆ, ಗಿಡದ ಎಲೆಯ ಮೇಲೆ, ಬಳ್ಳಿಯ ಮೇಲೆ ತೂಗಿ ಬಾಗಿ ಆಟವಾಡುತ್ತಾ ಸಂತಸವಾಗಿದ್ದವು. ನಮ್ಮ ಬಾಳದೆಷ್ಟು ಸುಂದರ, ನಾವು ವಜ್ರದಂತೆ ಹೊಳೆಯಬಲ್ಲೆವು. ನಮ್ಮ ಸರಿಸಮಾನ ಯಾರೂ ಇಲ್ಲ” ಎಂದು ಕೊಂಡವು. ಈ ಮನೋಹರ ಮುಂಜಾವಿನಲ್ಲಿ ನಮ್ಮದು “ಪೂರ್ಣತೆಯ ಬಾಳು” ಎಂದು ಹೆಮ್ಮೆ ಪಟ್ಟುಕೊಂಡವು. ಮಧ್ಯಾಹ್ನವಾಗಲು ಸೂರ್ಯನ ಪ್ರಖರ ಕಿರಣದಲ್ಲಿ ಎಲ್ಲಾ ಇಬ್ಬನಿಗಳೂ ಮಾಯವಾದವು. ಮರದ ನೆರಳಲ್ಲಿ ಅಡಗಿದ್ದ ಒಂದೇ ಒಂದು ಇಬ್ಬನಿ, ತನ್ನ ಪರಿವಾರದವರು ಎಲ್ಲಿ ಹೋದರು ಎಂದು ಯೋಚಿಸಿತು. ಸಂಜೆ ಬರುವವರಿಗಾದರು ನನ್ನ ಒಂಟಿ ಪಯಣ ಸಾಗಬಹುದೇ? ಎಂದು ಯೋಚಿಸಿತು. ಬೆಳಕು ಹರಿದರೆ ಮತ್ತೆ ತನ್ನ ಪರಿವಾರದೊಂದಿಗೆ ಮಿಲನವಾಗಬಹುದೆಂಬ ಕ್ಷಣದ ಕನಸು ಬತ್ತಿ ಹೋಯಿತು.
*****















