ನಾಲ್ಕು ವರುಷಗಳ ಶಾಸ್ತ್ರ ಪಂಡಿತ ಶಾಸ್ತ್ರಿ
ಮೂರು ನಿಮಿಷದ ಶೂನ್ಯ ನೀ ಬಲ್ಲೆಯಾ
ಅದ್ವೈತ ತರ್ಕದಲಿ ಗಣಿತಜ್ಞ ನೀನಾಗಿ.
ನಿಶ್ಯಬ್ದದಲಿನಿಂದು ನಗಬಲ್ಲೆಯಾ
ಶೂನ್ಯ ಹೇಳಲು ಹೋಗಿ ಸೊನ್ನೆ ಯಾದೆಯ ಜಾಣ
ಕಾಜಾಣ ಕೋಗಿಲೆಯ ಮಾಜಾಣರು
ನಿನ್ನ ಕಣಜದ ಒಳಗೆ ಹಣಜಲಿಯ ಒಟ್ಟುತ್ತ
ರತ್ನದೀಪ್ತಿಯ ಲಾಭ ನೀ ಮರತೆಯ
ನಾನು ಸುಂದರ ಆತ್ಮಶಿವನ ಬಂಧುರ ಪದ್ಮ
ಓ ಅವನೆ ತಾಯ್ತಂದಿ ಬಂಧುಬಳಗ
ಈ ಪ್ರೀತಿ ಮೌನಕ್ಕೆ ಈ ಪ್ರೇಮದೂಟಕ್ಕೆ
ಅದ್ವೈತವಿವೇಕ ಯಾಕೆ ಬೇಕು
ನಾನೆ ಬ್ರಹ್ಮನನು ಎಂದು ಬ್ರಹ್ಮನನ್ನು ಕೊಂದವನೆ
ಮರಳಿ ಬಾ ಈ ಪ್ರೀತಿ ಕಾರಂಜಿಗೆ
ಸರ್ವಾತ್ಮ ಶಿವನೆಂದು ಉಬ್ಬುಬ್ಬಿ ಉಲಿದವನೆ
ಬಾಲಲೀಲಾಯೋಗಿಯಾಗು ಇಳೆಗೆ
ಹೂವಾಗು ಹಣ್ಣಾಗು ಹೊಳೆಯಾಗು ಬೆಳಗಾಗು
ಆತ್ಮಸಂಪುಟವೊಡೆದು ಕಮಲವಾಗು
ಚಲ್ಲಿ ಬಾ ಶಾಸ್ತ್ರಗಳ ಚಲ್ಲಿ ಬಾ ಶಸ್ತ್ರಗಳ
ಇಲ್ಲಿಬಾ ಗರಿಬಿಚ್ಚಿ ಹಂಸೆಯಾಗು
*****
Latest posts by ಹನ್ನೆರಡುಮಠ ಜಿ ಹೆಚ್ (see all)
- ಸಾಕ್ಮಾಡೊ ಗಂಡಾ ಸಾಕ್ಮಾಡೊ - February 23, 2021
- ಮೆಲ್ಲ ಮೆಲ್ಲ ಬರುವ ನಲ್ಲ - February 16, 2021
- ಹಿಂಗ್ಯಾಕ ಮಾಡ್ತಾನ ಮಠದಯ್ಯಾ - February 9, 2021