ಗಂಡನೆಂದರೆ ಪ್ರಾಣ ಗಂಡ-ಹೆಣ್ಣೆ ನೀ ಗಂಡನ ಕೂಡಿಕೊಂಡ್ಯ
ನೋಡು ಮಂಡೂಕ ಸರ್ಪದ ನೆಳಲಿಗೆ ಹೋದಂತೆ
ಬಂಡೀಗೆ ಬಸವನು ಶಿರಬಾಗಿಕೊಂಡಂತೆ!

ಹೆಸರಿಗೆ ಗಂಡ ಬಹುಚೆಂದ-ನಿನ್ನ ಸರ್ವಸ್ವವೇ ಅದುವೊಂದು
ನೋಡು ಹಸನಾದ ಪುರುಷನು ದೊರೆತರೆ ಆನಂದ
ಇಲ್ಲದಿದ್ದರೆ ಸದಾ ಸ್ವಾಮಿ ಗೋವಿಂದ!

ಗಂಡನ ಮನೆ ಸಗ್ಗ ನಿನಗೆ-ಮುನಿಯೆ ಗಂಡನೆ ಯಮರಾಯ ಕೊನೆಗೆ
ನಿನ್ನ ಮುಳುಗಿಪ ತೇಲಿಪ ಶಕ್ತಿಯುಂಟಾತಗೆ
ನೀನೊಂದು ವಿಕ್ರಯದೊಸ್ತುವು ಪುರುಷಗೆ!

ಮಲ್ಲಿಗೆ ಹರಳಂತೆ ನೀನು-ಬಳುಕಿ ಉಲ್ಲಾಸ ಪುಟ್ಟಿಸಲೇನು
ಭಳ್ಳಿರೆ ಭಾಪ್ಪುರೆ ಸಮರಿಲ್ಲವೆಂಬೋನು
ನಲ್ಲೆ ಬಾ ಮುತ್ತಿಡು ಧನ್ಯ ನಾನೆಂಬೋನು!

ಅಧಿಕಾರಿ ನಿನಗವನೊಬ್ಬ-ನಿರುತ ದುಡಿದರೆ ಅಶನದ ಹಬ್ಬ
ತಪ್ಪಿ ಬೇನೆ ಬೇಸರವಾಗಿ ಉಶ್ಶೆನ್ನಲಬ್ಬಬ್ಬ
ಏನಾಯ್ತ ಎಂದು ಗಂಟ್ಹಾಕುವ ಹುಬ್ಬ!

ಯುಕ್ತಿಯಿಂದಲಿ ಬಾಳು ನೀನು-ಸರ್ವಶಕ್ತನು ಪುರುಷನು
ತಪ್ಪಿದೆಯೆಂದರೆ ಕತ್ತನೆ ಮುರಿವೋನು (ತಾನವನು)
ಶಿಕಷ ರಕ್ಷಕ ನಿನ್ನ ದೈವವೆ ನಾಥನು!

ಎಚ್ಚರದಿಂದಿರು ಹೆಣ್ಣೆ-ಇಂತು ಬರೆದಿಹನು ಬ್ರಹ್ಮಣ್ಣ
ತಪ್ಪಿಸಲಳವುಂಟೆ ಸ್ತ್ರೀಪುರುಷರೊಡನಾಟ
ಲೀಲಾಮಾನುಷ ಭಕ್ತವತ್ಸಲನ ಆಟ!

ನಿರ್ಮಲವಾಗಿರಲಿ ಮನಸು-ಪತಿಯ ಚಿತ್ತವ ನೀನನುಸರಿಸು
ಕರ್ಮಾನುಸಾರದಿ ಫಲವುಂಟು ಈ ಜಗದಿ
ಧರ್ಮವ ಬಿಡದಿರು ಎಂಬಳು ಜನಕಜೆ!
*****

Latest posts by ಜನಕಜೆ (see all)