ಹೆತ್ತ ತಾಯಿಯೆ ನಿನ್ನ ಸೇವೆಗೆ
ಮುಡಿಪು ನನ್ನೀ ಬಾಳುವೆ,
ನಿನ್ನ ಮಗ ನಾ ಎನುವ ಹೆಮ್ಮೆಯ
ಹೊತ್ತು ಹರಿದಿದೆ ಕಾಲುವೆ.

ನಿನ್ನ ಸ್ಮರಣೆಯೆ ಇಂಥ ಭೀಕರ
ಯುದ್ಧ ರಂಗದ ನಡುವೆಯೂ,
ಸಹಜವಲ್ಲದ ಬಿರುಸು ಬಾಳಿನ
ಮೃತ್ಯು ಸನ್ನಿಧಿಯಲ್ಲಿಯೂ.

ನೆಮ್ಮದಿಯೊಳಿದೆ ಇಡಿಯ ದೇಶವೆ
ನಮ್ಮ ನಿಷ್ಠೆಯ ನೆಚ್ಚಿಯೆ,
ಇಂಥ ಭಾವನೆ ಬೆಚ್ಚಗಿಟ್ಟಿದೆ
ಬಲವ ಕೊಟ್ಟಿದೆ ತೋಳಿಗೆ.

ಶಿಖಿರವೇರುತ ಏರಿ ಹೋರುತ
ಕೊರವ ಈ ಹಿಮದಲ್ಲಿಯೂ
ಹೊಟ್ಟೆ ಹಸಿದೂ ನಿದ್ದೆ ಇರದೆಯು
ತೇಗಿ ನಲಿಯಿತು ಬಾಳಿದು

ನನ್ನ ಭೂಮಿಯ ನನ್ನ ತಾಯಿಯ
ದಿವ್ಯಪಾದದ ಧೂಳಿಯ
ನೆತ್ತಿಯಲಿ ನಾ ಹೊತ್ತು ತೋರುವೆ
ನನ್ನ ಕ್ಷಾತ್ರದ ರೀತಿಯ.
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)