ನನ್ನ ನೆನಪಿನ ಯಾತ್ರೆ ನಿನ್ನದರ ಥರವಲ್ಲ
ಅದಕ್ಕಿಲ್ಲ ಸರಳಗತಿ ದಾರಿನೆರಳು ;
ಮೊಸಳೆ ಹಲ್ಲಿನ ಕಲ್ಲುದಾರಿ, ಕನ್ನಡಿ ಚೂರು
ಮಂಡೆ ಮೇಲೇ ಬಾಯಿಮಸೆವ ಬಿಸಿಲು.

ಮಡಿದ ನಿನ್ನೆಗಳೆಲ್ಲ ಒಡೆದ ದೊನ್ನೆಗಳಲ್ಲಿ

ಸುರಿದ ಮರುಧರೆಯ ಅಮೂಲ್ಯ ನೀರು ;
ಕೊಲ್ಲಲೆಳಸುವ ನೂರು ಹೊಂಚುಗಳ ಹೆಡೆ ಕಡಿದು
ಸಾಗಿರುವೆ, ನಾನಲ್ಲ ಯುದ್ದಭೀರು.

ಸಮೃದ್ಧ ಬೆಳೆದ ಹೊಲ ಕೊಯಿಲಾಗಿ ಬರಿ ಬಯಲು
ಕಣ್ಣು ಚುಚ್ಚುವ ಮೂಳೆ ಕೊಳೆಗದ್ದೆ ;
ಅವಶೇಷಗಳು ಇಡಿದ ಗತವೈಭವದ ಮೇಲೆ
ಹಿಂದು ಮುಂದಿಲ್ಲದ ಭಿಕಾರಿ ಎದ್ದೆ.

ಕತ್ತಲಲ್ಲಿ ಬಚ್ಚಿಟ್ಟು ಗುಟ್ಟು ತೆರೆಸುವ ಮಣ್ಣು
ನೀರು ಗೊಬ್ಬರ ಇರದ ಬಂಜೆಭೂಮಿ ;
ತುಳಿವ ಕಾಲಿನ ಕೆಳಗೆ ಅಳಿಯಲೊಲ್ಲದ ಛಲದ
ಫಲದ ಕನಸನು ಹೊತ್ತ ಜೀವಕಾಮಿ.

ಕಾಲು ಹೊರಳಿದೆ ಕಡೆಗೆ ನಡೆದೆ, ಎರಡೂ ಬದಿಗೆ
ಭಯ ಉಗಿವ ವಕ್ರಮುಖ ಭಿತ್ತಿಚಿತ್ರ ;
ನೂರು ಮೀಟರಿಗೊಮ್ಮೆ ದಾರಿಬದಿ ಅತ್ತಿತ್ತ
ಬಿರುಗಣ್ಣು ಬಿಟ್ಟ ಗೋಪುರದ ಹುತ್ತ.

ತಿಳಿಯದಿದ್ದರು ದಾರಿ ನಡೆದೆ ಏನೋ ತೋರಿ
ದೈವವೋ ದೆವ್ವವೋ ಬೆನ್ನದೂಡಿ ;
ಕಡಲ ತಳಮನೆಗಿಳಿದು ಬೆಟ್ಟದಟ್ಟವ ಏರಿ
ತಲುಪಿರುವೆ ಸಮತಟ್ಟು ನೆಲದ ದಾರಿ.

ಚಾಣ ಸುತ್ತಿಗೆ ಕೈಯ ಕೌಶಲವ ಹಾಡುತ್ತ
ಮೈ ಪಡೆಯದೇ ಶಿಲ್ಪ ಬಂಡೆಯಿಂದ ?
ಪಡೆದ ಬಲ ಕೊಡುವ ಛಲ ಜೊತೆಗೂಡಿ ಎತ್ತಿರಲು
ಭಾರಿ ಮರ ಏಳದೇ ಕಾಳಿನಿಂದ ?
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)