ಬಾರೋ ವಸಂತ ಬಾರೋ ಬಾ
ಹೊಸ ಹೊಸ ಹರುಷದ ಹರಿಕಾರ
ಹೊಸ ಭಾವನೆಗಳ ಹೊಸ ಕಾಮನೆಗಳ
ಎದೆಯಲಿ ಬರೆಯುವ ನುಡಿಕಾರ

ಬಾರೋ ಸಂಕಲೆಗಳ ಕಳಚಿ
ಹೆಜ್ಜೆಗಳಿಗೆ ತ್ರಾಣವನುಣಿಸಿ
ದಣಿದ ಮೈಗೆ ತಂಗಾಳಿಯ, ಮನಸಿಗೆ
ನಾಳೆಯ ಸುಖದೃಶ್ಯವ ಸಲಿಸಿ

ಮಗುಚುತ ನಿನ್ನೆಯ ದುಃಖಗಳ
ತೆರೆಯುತ ಹೊಸ ಅಧ್ಯಾಯಗಳ
ಹರಸುತ ಎಲ್ಲರ ಮೇಲು ಕೀಳಿರದೆ
ಸಲಿಸುತ ಭವಿಷ್ಯದಾಸೆಗಳ

ಎಳೆಕಂದನ ದನಿಗೆಜ್ಜೆಯಲಿ
ಇನಿಯಳ ಮಲ್ಲಿಗೆ ಲಜ್ಜೆಯಲಿ
ಬೋಳುಬಾಳಿನಲಿ ಹಸಿರ ಚಿಮ್ಮಿಸುವ
ಸೃಷ್ಟಿಶೀಲ ಹೊಸಹೆಜ್ಜೆಯಲಿ.
*****