ಎಲ್ಲರಂತಿರಲಿಲ್ಲ ನನ್ನ ತಂದೆ
ಹೆಣ್ಣ ಕರುಳ ಗಂಡು ಜೀವ
ಮಕ್ಕಳೆಂದರೆ ಅವಗೆ
ಮರಳು ಮಾಯೆ

ಗುರಿಯ ತತ್ವದ ತಿಳಿಸಿ
ದಿಟ್ಟತನವನು ಕಲಿಸಿ
ಬದುಕು ಚಾತುರ್ಯ
ಬೆರೆಸಿ ಬೆಳಸಿದನು

ಪುಟ್ಟ ಕೈಗಳ ಹಿಡಿದು
ಭರವಸೆಯ ಒತ್ತಿದನು
ಬಾಳ ಹಾದಿಯ ಸವಿಸೋ
ಧೈರ್ಯವನು ತುಂಬಿ

ಆ ಹೊತ್ತು ಮುಂಜಾನೆ ನೀ ಅಗಲಿದೆ ದಿನ
ಕೈಯ ಚಾಲೋಟ ತುಟಿಯೇರುವ
ಮುನ್ನ ಹೇಳದೆ ನಡೆದೆ
ಹಂಗು ತೊರೆದು

‘ಬಾ ಮಗನೇ’ ಎನ್ನಲು
ನೀನಿಲ್ಲವೆಂದಾಗ ಅನಿಸಿದ್ದು
ಮರೀಚಿಕೆ ಈ ಬದುಕು
ಮರಳು ಮಾಯೆ

ಅತ್ತು ಉರುಳಾಡಿ
ಗುಣಗಾನಗೈಯುತಿರೆ
ನೆಂಟರಿಷ್ಟರು ಕೂಡಿ
ಮತ್ತು ಸಂತೈಕೆ ಮಾಡಿ

ತಂದೆ ಇಲ್ಲದ ಮನೆಯು
ಗುರುವು ಇಲ್ಲದ ಮಠವು
ಕೊನೆಯಿಲ್ಲದಾಯ್ತು
ನಮ್ಮ ನೋವು
*****