ಗದಲ ಗೋಜಲು ದೂಳು ದುಮ್ಮು
ದುರ್ವಾಸನೆ ಸಿಡಿಮದ್ದುಗಳ ಕಟುನಾತ
ಕೊಳಚೆ ಹರಿವ ಓಣಿ ಬೀದಿಗಳು
ದಾರಿಯಲ್ಲಿ ಬಿಡಾಡಿ ದನ-ಜನಗಳು
ಮುಂದೆ ಸಾಗಲು ಬಿಡದೆ ಅಡ್ಡಾದಿಡ್ಡಿ
ನಿಂತು ಮೆಲುಕು ಹಾಕುತ್ತಿವೆ
ಸರಭರ ವಾಹನಗಳು ಕಿವಿಕೊರೆಯುತ್ತಿವೆ
ಧೂಳೆಬ್ಬಿಸಿ ಮೂಗಿಗಡರಿಸಿ ಉಸಿರುಕಟ್ಟಿಸಿವೆ
ಕಣ್ಣಿಗಡರಿ ದಿಕ್ಕು ಕಾಣದ ಮಲಿನ ಪರಿಸರ
ವ್ಯಕ್ತಿ ವ್ಯಕ್ತಿಗಳ ಸ್ವಾರ್ಥ ನೀಚ ಕುತಂತ್ರಗಳು
ಜಾತಿಜಾತಿಗಳ ಕತ್ತಿ ಮಸೆತಗಳು
ಕುಹಕ ನೋಟಗಳು ಕಟುವಿಷ ಒಳಗೆ
ಮೇಲೆ ಸಿಹಿ ಬಣ್ಣ ಸವರಿದ ಮಾತುಗಳು
ನರಿಹದ್ದು ಗೂಗೆ ಕಾಗೆ ವಿಷ ಜಂತುಗಳ
ಒಳಗೆ ತುಂಬಿಕೊಂಡಿರುವ ಮನುಷ್ಯರ
ರೂಹುಗಳು ಕಾಗದದ ಹೂಗಳು

ನೋಟುಗಳ ಪ್ರತಿಷ್ಠೆಗಳ ಬುರುಗು ಜಾಲದ
ಗಗನ ದೇಣಿಗೆ ಜೋತುಬಿದ್ದ
ಒಬ್ಬರ ನೋಡಿ ಒಬ್ಬರು
ಒಬ್ಬರ ನೋಡಿ ಒಬ್ಬರು
ಸಾಲು ಸಾಲು ಜೋಲು ಜೋಲು
ಮೇಲೇರಲು ಹವಣಿಸುವ
ಜಾರುವ ಏರುವ ಬಡಾಯಿಗಳ
ಬರಡು ಪಂದ್ಯಾಟ ಪೈಪೋಟಿಗಳ
ಮಾನವತೆ ಕಳೆದು ಹೋಗಿ ದಾನವತೆಯೇ ತಾಂಡವಾಡುವ
ಈ ಜನಾರಣ್ಯದಿಂದ
ಕೀವು ನಾರು ಕೊಳೆ ತುಂಬಿದ ವ್ರಣಗಳ
ಮನೆ ಮನಗಳಿಂದ
ಎಲ್ಲಿಗೆ ಓಡುವುದು?
ಹೇಗೆ ಓಡುವುದು?
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)